ಅಯ್ಯೋ ಉಪ್ಪಿಟ್ಟಾ … ಎಂದು ರಾಗ ಎಳೆಯುವವರು, ಅದು ಕಾಂಕ್ರೀಟ್ ಮಾರಾಯ ಎಂದು ಹೀಗಳೆಯುವವರು ಸಾಕಷ್ಟು ಮಂದಿ. ಆದರೆ ಬಾಲ್ಯದಿಂದಲೂ ನನಗೆ ಉಪ್ಪಿಟ್ಟು ಎಂದರೆ ಬರೀ ಇಷ್ಟವಲ್ಲ. ಭಾರಿಭಾರಿ ಇಷ್ಟ. ಅದಕ್ಕೆ ನಮ್ಮ ಅಕ್ಕ (ತಾಯಿ) ರೆಸಿಪಿಯೂ ಕಾರಣ ಇರಬಹುದು.
ಹಸುವಿನ ತುಪ್ಪು ( ಡಾಲ್ಡ್ ತುಪ್ಪವೂ ಇದೆ. ಅದಕ್ಕಾಗಿ ಹಸುವಿನ ತುಪ್ಪು ಎಂದಿದ್ದು) ಹಾಕಿ, ಧಾರಳವಾಗಿ ಈರುಳ್ಳಿ ಸುರಿದು, ಚಿನ್ನದ ಕಲರ್ ಬರುವ ತನಕ ಹುರಿದು, ಇದಕ್ಕೂ ಮೊದಲು ಬನ್ಸಿರವೆಯನ್ನು ಹದವಾಗಿ ಹುರಿದುಕೊಂಡು ತಯಾರು ಮಾಡ್ತಾರೆ.
ಅಕ್ಕಿ ಉಪ್ಪಿಟ್ಟು, ಸಣ್ಣರವೆ ಉಪ್ಪಿಟ್ಟು ಕೂಡ ಇಷ್ಟವೇ ಅದರೂ ಬನ್ಸಿರವೆಯಲ್ಲಿ ಮಾಡಿದ್ದು ತುಸು ಹೆಚ್ಚು ಇಷ್ಟ. ಏಕೆಂದರೆ ಇದು ಎಲ್ಲವುಗಳಿಗೂ ಹೊಂದಿಕೊಳ್ಳುತ್ತದೆ.ಅಂದರೆ ಎಲ್ಲ ಬಗೆಯ ತರಕಾರಿ, ನಾನ್ ವೆಜ್ ಹಾಕಿಯೂ ಮಾಡಬಹುದು… ಏನೂ ಹಾಕದಿದ್ದರೂ ಅದರ ರುಚಿಯೇನೂ ಕಮ್ಮಿ ಆಗುವುದಿಲ್ಲ.
ದಿಢೀರ್ ಮಾಡಬಹುದು ಎನ್ನುವ ಕಾರಣಕ್ಕೂ ಇಷ್ಟ. ನಾನು ಮಾಡಿದ ಬನ್ಸಿರವೆ ಉಪ್ಪಿಟ್ಟಿದು. ಈರುಳ್ಳಿಯನ್ನು ಸಣ್ಣದಾಗಿ ಹಚ್ಚುವುದರ ಬದಲು ಉದ್ದವಾಗಿ ಕೊಯ್ದು, ಟೊಮ್ಯಾಟೊವನ್ನು ದುಂಡಗೆ ಕತ್ತರಿಸಿ ಹಾಕುತ್ತೇನೆ. ಈ ಬಾರಿ ಮೊಟ್ಟೆಯನ್ನೂ ಹಾಕಿದ್ದೇನೆ. ಇದೇಗೆ ಎಂದರೆ ಮೊಟ್ಟೆಯ ಮೇಲ್ಭಾಗವನ್ನು ಚಿಕ್ಕದಾಗಿ ಒಡೆದು ಕುದಿಯುತ್ತಿರುವ ನೀರಿಗೆ ಚಕ್ಕುಲಿಯಂತೆ ಹಾಕಬೇಕು..ಇದು ಗಟ್ಟಿಯಾದ ನಂತರ ಬನ್ಸಿರವೆ ಹಾಕಿ ತಿರುವಿ ಮುಚ್ಚಿಡಬೇಕು. ನಂತರ ಬಿಸಿಯಿದ್ದಾಗಲೇ ತಿಂದರೆ ಅಹ್ಜಾ ಎನಿಸುವಂಥ ರುಚಿ