ಟೈಟಲ್ ಓದಿ, ಅರೇ ಬಿರ್ಯಾನಿ ತಿನ್ನೋದು ಗೊತ್ತಿರ್ಬೇಕಾ ಎಂದು ಮರುಪ್ರಶ್ನೆ ಮಾಡ್ತೀರಿ ಅಂತ ಗೊತ್ತು 😀 ತುಸು ತಾಳ್ಮೆ ಇರಲಿ…

ನಾನು ಪುಟ್ಟವನಾಗಿದ್ದಾಗ ಊಟಕ್ಕೆ ಅಜ್ಜನ ಪಕ್ಕದಲ್ಲೇ ಕುಳಿತ್ಕೊಳ್ತಿದ್ದೆ. ಆಗ ಅವರು ಮುದ್ದೆಯನ್ನು ಮುರಿಯೋದು ಹೇಗೆ ಅಂತ ಪ್ರಾಕ್ಟಿಕಲ್ ಸಹಿತ ಹೇಳಿಕೊಡ್ತಿದ್ರು… ಮಾಂಸ‌ ಹೇಗೆ ತಿನ್ಬೇಕು, ನಲ್ಲಿ ಮೂಳೆ ಹೇಗೆ ಕುಟ್ಟಿ ಚೀಪ್ಬೇಕು ಅಂತೆಲ್ಲ ಹೇಳಿಕೊಡೋರು.

ಕೋಳಿಮಾಂಸವನ್ನು ಮೂಳೆಸಹಿತ ಜಗಿದು ತಿನ್ಬೇಕಿತ್ತು ! ಇದೆಲ್ಲ ಹೇಳಿದ್ರೆ ಹಲವರಿಗೆ ಆಶ್ಚರ್ಯ ಆಗ್ಬೋದು. ಆದರವರು ಆಹಾರ ಸೇವನೆ ವಿಚಾರದಲ್ಲಿ ಸಾಕ್ಷರರನ್ನಾಗಿ ಮಾಡ್ತಿದ್ರು. ಹೋಟೆಲುಗಳಲ್ಲಿ ಹಲವರು ಮುದ್ದೆ ತಿನ್ನೋದನ್ನು ನೋಡ್ದಾಗ ಅವರು ಮುದ್ದೆ ಸಾಕ್ಷರರಲ್ಲ ಅಂತ ಗೊತ್ತಾಗಿ‌‌ ನಗು ಬರುತ್ತೆ…

ತಲಚೇರಿ ಬಿರ್ಯಾನಿ ಅಂದ್ರೆ ಅನೇಕರು ಹುಬ್ಬೇರಿಸಬಹುದು.‌ ದಮ್ ಬಿರ್ಯಾನಿ, ದೊನ್ನೆ ಬಿರ್ಯಾನಿ, ಹೈದ್ರಾಬಾದ್ ಬಿರ್ಯಾನಿ, ಬಂಬೂ ಬಿರ್ಯಾನಿ ಇತ್ಯಾದಿ ಇತ್ಯಾದಿ ಗೊತ್ತು…‌ಇದ್ಯಾವುದಿದು ಹೆಸರೇ ಕೇಳಿಲ್ವಲ್ಲ ಅಂದ್ಕೊಬಹುದು.

ಮಲಬಾರ್ ಚಿಕನ್ ಬಿರ್ಯಾನಿ ಅಂದ್ರೆ  ಗೊತ್ತಾಗುತ್ತೆ. ಇದನ್ನು ಮಾಡುವ ಕ್ರಮವೇ ಬೇರೆ. ಇದರ ಮೂಲ ಕೇರಳದ ಮಲಬಾರ್ ಪ್ರಾಂತ್ಯ. ನನ್ನ ಜೊತೆ ಇದನ್ನು ತಿಂದವರು ಚಿತ್ರಾನ್ನ ತಿಂದಂಗಾಯ್ತು ಗುರು ಎಂದಿದ್ದರು.  ನಗು ಬಂದಿತ್ತು.

ಮೊದಲೇ ತಿನ್ನುವ ಕ್ರಮ ಹೇಳಲು  ಹೋಗಿದ್ರೆ ನಮ್ ಮಂಡ್ಯ ಶೈಲಿಯಲ್ಲಿ ” ಮುಚ್ಕೊಂಡಿರ್ಲಾ, ಇವನೊಬ್ನೆ ಬಿರ್ಯಾನಿ ಕಂಡಿರೋನು, ನಾವೇನಾ ತಿಂದೇ ಇಲ್ಲ ! ಅನ್ನೋರು. ಅದಕ್ಕೆ‌ ಹಲವು ಟೈಮ್ ಗೊತ್ತಿದ್ರೂ ಬಾಯಿ ಮುಚ್ಕೊಂಡಿರ್ಬೇಕು !

ಮೇಲ್ನೋಟಕ್ಕೆ ತಲಚೇರಿ ಬಿರ್ಯಾನಿ, ಚಿತ್ರಾನ್ನದ ಹಾಗೆ ಕಾಣುತ್ತೆ… ಇದನ್ನು ಮಾಡುವಾಗ ಮಸಾಲೆಯನ್ನು ಗೊಟಾಯಿಸಿರುವುದಿಲ್ಲ.‌ಪದರ ಪದರವಾಗಿ ಹಾಕಿರ್ತಾರೆ. ಈ ಮಸಾಲೆ‌ ಮಾಡುವ ರೀತಿಯೂ ಭಿನ್ನ. ಚಿಕನ್ ಪೀಸುಗಳನ್ನು ತೆಗೆದು ಪಕ್ಕಕ್ಕಿರಿಸಿ ಮಸಾಲೆ‌ ಮತ್ತು ಬಿರ್ಯಾನಿ ರೈಸ್ ಅನ್ನು ಚೆನ್ನಾಗಿ ಮಿಕ್ಸ್ ಮಾಡ್ಕೋಬೇಕು. ಇದರ ಜೊತೆ ಟೊಮ್ಯಾಟೊ ಕರಿ, ಮೊಸರುಬಜ್ಜಿ, ಹಪ್ಪಳ‌ ಕೊಡ್ತಾರೆ. ಏನಣ್ಣ ಚಿಕನ್ ಕರಿ ಕೊಡೋದಿಲ್ವ ಅಂತ ಸಪ್ಲೈಯರ್ ಅನ್ನು ಗೆಳೆಯ ಒಮ್ಮೆ ಕೇಳಿದ್ದ !

ತಲಚೇರಿ ಬಿರ್ಯಾನಿಯ ವೈಶಿಷ್ಟದಲ್ಲಿ ಈ ಟೊಮ್ಯೊಟೋ ಕರಿಯೂ ಸೇರಿದೆ. ಇದನ್ನು ವಿಶಿಷ್ಟ ಮಸಾಲೆ ಸೇರಿಸಿ ಮಾಡಿರ್ತಾರೆ. ಅಂದ ಹಾಗೆ ಈ ಬಿರ್ಯಾನಿ ಮಾಡ್ತರಲ್ಲ ಅದಕ್ಕಾಗಿ ಅಲ್ಲಿನ ಸ್ಥಳೀಯ ಭತ್ತದ ತಳಿ ಅಕ್ಕಿ ಬಳಸ್ತಾರೆ. ನೀವು ಮಲಬಾರ್ ಪ್ರಾಂತ್ಯದವರು ನಡೆಸುವ ಹೋಟೆಲ್ಗೆ ಹೋದ್ರೆ ಒಮ್ಮೆ ಇದರ ಸವಿಯಬಹುದು.

Similar Posts

Leave a Reply

Your email address will not be published. Required fields are marked *