ಸೈನಿಕರು ಬಹು ವಿಷಮ ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ತಮ್ಮ ಜೀವವನ್ನು ಪಣವಾಗಿಟ್ಟು ಹೋರಾಡುತ್ತಾರೆ. ಪದೇಪದೇ ಉಗ್ರಗಾಮಿಗಳೊಂದಿಗೆ ಮುಖಾಮುಖಿಯಾಗುವ ಸಂದರ್ಭಗಳು ಬರುತ್ತಲೇ ಇರುತ್ತವೆ. ಇಂಥ ಸಂದರ್ಭದಲ್ಲಿ ಸೈನಿಕರ ಅಮೂಲ್ಯ ಜೀವಗಳನ್ನು ರಕ್ಷಿಸುವ ಬುಲೆಟ್ ಪ್ರೂಫ್ ಜಾಕೆಟ್ ಗಳು ಸ್ವದೇಶಿ ತಂತ್ರಜ್ಞಾನದಲ್ಲಿ ತಯಾರಾಗಿವೆ.
ಸೈನಿಕರು ಮತ್ತು ಪೊಲೀಸರ ಕಾರ್ಯ ಕಠಿಣ. ಇಂದು ಸಮಾಜಘಾತುಕ ಶಕ್ತಿಗಳು ಅಕ್ರಮ ಶಸ್ತ್ರಾಸ್ತ್ರ ಹೊಂದಿರುತ್ತಾರೆ. ಇಂಥವರನ್ನು ಬಂಧಿಸಲು ತೆರಳುವಾಗ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ರೌಡಿಗಳು ಅನಿರೀಕ್ಷಿತ ಗುಂಡಿನ ದಾಳಿ ಎಸಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪೊಲೀಸರು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿರುವುದು ಸೂಕ್ತ. ಇದರಿಂದ ಅಮೂಲ್ಯ ಪ್ರಾಣ ರಕ್ಷಿಸುವ ಸಾಧ್ಯತೆ ಅಪಾರ.
ದೇಶದ ಗಡಿ ಕಾಯುವ ಯೋಧರು ಅಡಿಗಡಿಗೆ ಸಾವಿನೊಂದಿಗೆ ಮುಖಾಮುಖಿಯಾಗುತ್ತಿರುತ್ತಾರೆ. ಇದೇ ರೀತಿ ಉಗ್ರಗಾಮಿಗಳನ್ನು ಮಟ್ಟ ಹಾಕಬೇಕಾದ ಯೋಧರು ಸಹ ಪದೇಪದೇ ಗುಂಡುಗಳಿಗೆ ಎದುರಾಗುತ್ತಿರುತ್ತಾರೆ. ಅನಿರೀಕ್ಷಿತ ದಾಳಿಗಳು ಸರ್ವೇ ಸಾಮಾನ್ಯ. ಇಂಥ ಸಂದರ್ಭದಲ್ಲಿ ರಭಸದಿಂದ ಬರುವ ಗುಂಡುಗಳಿಗೆ ಎದೆಯೊಡ್ಡಿ ಮುನ್ನಡೆಯುವಂಥ ಸನ್ನಿವೇಶಗಳು ಇರುತ್ತವೆ. ಇಂಥಲ್ಲಿ ಬುಲೆಟ್ ಪ್ರೂಫ್ ಜಾಕೆಟ್ ಅವಶ್ಯಕತೆ ಅಪಾರ.
ಸೈನಿಕರು ಮತ್ತು ಪೊಲೀಸರಿಗೆ ವಿದೇಶಗಳಿಂದ ಆಮದು ಮಾಡಿಕೊಂಡ ಬುಲೆಟ್ ಪ್ರೂಫ್ ಗಳನ್ನು ವಿತರಿಸಲಾಗುತ್ತಿದೆ. ಇದಕ್ಕೆ ಕಾರಣ ಸ್ವದೇಶದಲ್ಲಿ ಇವುಗಳನ್ನು ತಯಾರಿಸುವ ತಂತ್ರಜ್ಞಾನ ಇಲ್ಲದೇ ಇದ್ದಿದ್ದು. ವಿದೇಶದ ರಕ್ಷಣಾ ಮಾರುಕಟ್ಟೆಗಳಲ್ಲಿ ಬುಲೆಟ್ ಪ್ರೂಫ್ ಜಾಕೆಟ್ ಬೆಲೆ ಅಪಾರ. ಆದ್ದರಿಂದ ಅಗತ್ಯ ಸಂಖ್ಯೆಯಲ್ಲಿ ಅವುಗಳನ್ನು ಆಮದು ಮಾಡಿಕೊಳ್ಳುವಾಗ ಅಪಾರ ಹಣ ಖರ್ಚಾಗುತ್ತಿತ್ತು.
ಅಮೂಲ್ಯ ಜೀವಗಳನ್ನು ರಕ್ಷಿಸಬೇಕಾದಾಗ ಹಣದ ಬಗ್ಗೆ ಯೋಚಿಸಲು ಆಗುವುದಿಲ್ಲ. ಆದರೆ ಇಲ್ಲಿ ಆರ್ಥಿಕ ವಿಚಾರಕ್ಕಿಂತ ಗುಣಮಟ್ಟದ ಪ್ರಶ್ನೆ ಮುಖ್ಯವಾಗಿದೆ. ವಿದೇಶಿ ನಿರ್ಮಿತ ಬುಲೆಟ್ ಪ್ರೂಫ್ ಜಾಕೆಟ್ ಗಳು ಎಲ್ಲ ರೀತಿಯ ಹವಾಮಾನಗಳಲ್ಲಿಯೂ ಧರಿಸಲು ಯೋಗ್ಯವಲ್ಲ. ಜೊತೆಗೆ ಅವು ತುಂಬ ಭಾರ. ಇವುಗಳನ್ನು ಧರಿಸುವ ಸೈನಿಕರು ಬಹುಬೇಗ ಬಳಲುವ ಪರಿಸ್ಥಿತಿ ಉಂಟಾಗುತ್ತಿತ್ತು.
ವಿಜ್ಞಾನಿ ಡಾ. ಶಂತನು ಭೌಮಿಕ್ ಅವರು ಈ ಬಗ್ಗೆ ವಿಚಾರ ಮಾಡುತ್ತಿದ್ದರು. ಮೂಲತಃ ಪಶ್ಚಿಮ ಬಂಗಾಳದವರಾದ ಶಂತನು ಅವರು ತಮಿಳುನಾಡಿನ ಅಮೃತಾ ವಿಶ್ವವಿದ್ಯಾಲಯದ ಏರೋಸ್ಪೇಸ್ ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಉತ್ತಮ ಗುಣಮಟ್ಟದ ಬುಲೆಟ್ ಪ್ರೂಫ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಇದಕ್ಕೆ ರಕ್ಷಣಾ ಸಚಿವಾಲಯ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಸಹಕಾರವೂ ಇತ್ತು. ಸತತ ಪರಿಶ್ರಮದ ಬಳಿಕ ಗುಣಮಟ್ಟದ ಬುಲೆಟ್ ಪ್ರೂಫ್ ಜಾಕೆಟ್ ರೆಡಿಯಾಗಿದೆ.
ಇದೇ ಮೊಟ್ಟಮೊದಲ ಬಾರಿಗೆ ಅತ್ಯಂತ ಗುಣಮಟ್ಟದ, ಸ್ವದೇಶಿ ನಿರ್ಮಿತ ಬುಲೆಟ್ ಪ್ರೂಫ್ ಜಾಕೆಟ್ ಸಿದ್ಧವಾಗಿದೆ. ಇದರ ವಿಶೇಷತೆ ಹಲವು. ವಿದೇಶದ ಒಂದು ಬುಲೆಟ್ ಪ್ರೂಫ್ ಜಾಕೆಟ್ ಬೆಲೆ ಒಂದೂವರೆ ಲಕ್ಷ ರೂಪಾಯಿ. ಡಾ. ಶಂತನು ಭೌಮಿಕ್ ಅವರು ರೂಪಿಸಿರುವ ಒಂದು ಜಾಕೆಟ್ ಬೆಲೆ ಪ್ರಸ್ತುತ ಅಂದಾಜು ಬೆಲೆ ಐವತ್ತು ಸಾವಿರ ರೂಪಾಯಿ. ಇದಷ್ಟೆ ಅಲ್ಲ. ಯಾವುದೇ ಹವಾಮಾನದಲ್ಲಿಯೂ ಇವುಗಳನ್ನು ಧರಿಸಿ ಕಾರ್ಯಾಚರಣೆ ಮಾಡಬಹುದು. ಇದರ ತೂಕ ಕೂಡ ಭಾರಿ ಕಡಿಮೆ. ವಿದೇಶಿ ನಿರ್ಮಿತ ಒಂದು ಜಾಕೆಟ್ ತೂಕ ಸುಮಾರು 18 ಕೆಜಿ. ಆದರೆ ಭಾರತದಲ್ಲಿ ತಯಾರಾಗಿರುವ ಜಾಕೆಟ್ ತೂಕ ಕೇವಲ ಒಂದೂವರೆ ಕೆಜಿ ಮಾತ್ರ.
ಕಡಿಮೆ ತೂಕದ, ಎಂಥ ಹವಾಮಾನದಲ್ಲಿಯೂ ಧರಿಸಬಹುದಾದ ಜಾಕೆಟ್ ನಿಂದ ಆಗುವ ಅನುಕೂಲ ಅಪಾರ. ಸೈನಿಕರು ಅತ್ಯುತ್ತಮವಾಗಿ ಕಾರ್ಯಾಚರಣೆ ಮಾಡಬಹುದು. ಯಾವುದೇ ರೈಫಲ್ ಮತ್ತು ಗನ್ನುಗಳಿಂದ ಸಿಡಿಯುವ ಗುಂಡುಗಳನ್ನು ತಡೆಯುವ ಸಾಮರ್ಥ್ಯ ಇದಕ್ಕಿದೆ. ಇದಲ್ಲದೇ ಬೆಲೆ ಕಡಿಮೆ ಇರುವುದರಿಂದ ಅತ್ಯಧಿಕ ಸಂಖ್ಯೆಯಲ್ಲಿ ಜಾಕೆಟ್ ಗಳನ್ನು ತಯಾರಿಸಬಹುದು.
ಈಗಾಗಲೇ ರಕ್ಷಣಾ ಸಚಿವಾಲಯದ ಸಂಶೋಧನಾ ಪರಿಶೀಲನೆ ಸಮಿತಿ ಈ ಜಾಕೆಟ್ ಪರಿಶೀಲಿಸಿ ಒಪ್ಪಿಗೆ ಸೂಚಿಸಿದೆ. ಪ್ರಧಾನಿ ಮಂತ್ರಿ ಕಾರ್ಯಾಲಯ ಹಸಿರು ನಿಶಾನೆ ತೋರಿಸುವುದಷ್ಟೆ ಬಾಕಿ ಇದೆ. ಇದು ದೊರೆತ ಕೂಡಲೇ ದೊಡ್ಡ ಸಂಖ್ಯೆಯಲ್ಲಿ ಬುಲೆಟ್ ಪ್ರೂಫ್ ಜಾಕೆಟ್ ಗಳು ತಯಾರಾಗುತ್ತವೆ.
ನಮ್ಮ ಸೈನಿಕರಿಗೆ ಅಮೂಲ್ಯ ಜೀವ ಉಳಿಯಬೇಕು ಎಂಬ ಕಾರಣದಿಂದ ಡಾ. ಶಂತನು ಈ ಸಂಶೋಧನೆ ಮಾಡಿದ್ದಾರೆ. ತಾವು ಈ ಕಾರ್ಯ ಮಾಡಲು ಭೂ ಸೇನೆಯ ಉಪ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಸುಬ್ರತಾ ಶಾ ಅವರು ನೀಡಿದ ಪ್ರೋತ್ಸಾಹ-ಸಹಕಾರ ಅಪಾರ ಎನ್ನುತ್ತಾರೆ. ತಮ್ಮ ಈ ಅಮೂಲ್ಯ ಸಂಶೋಧನೆಯನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಮರ್ಪಿಸಿದ್ದಾರೆ.