ಗ್ರಾಮೀಣ ಬದುಕು ಎಂದರೆ ದೈನಂದಿನ ಕೆಸರಿನ ಒಡನಾಟ. “ಕೈ ಕೆಸರಾದರೆ ಬಾಯಿ ಮೊಸರು” ಎಂಬ ತತ್ವದಡಿಯೇ ಗ್ರಾಮೀಣರು ಬದುಕುತ್ತಿದ್ದಾರೆ. ಪಟ್ಟಣ, ನಗರವಾಸಿಗಳು ತಮ್ಮತಮ್ಮ ಉದ್ಯೋಗ, ವಿದ್ಯಾಭ್ಯಾಸಗಳ ದೆಶೆಯಿಂದ ಮಣ್ಣಿನ ಒಡನಾಟದಿಂದ ದೂರ. ಇವರಲ್ಲಿಯೂ ಅನೇಕರಿಗೆ ಮಣ್ಣಿನೊಂದಿಗೆ, ಕೆಸರಿನೊಂದಿಗೆ ಒಡನಾಟ ಮಾಡಬೇಕೆಂಬ ಅಪೇಕ್ಷೆ ಇರುತ್ತದೆ.
ಇಂಥವರ ಅಪೇಕ್ಷೆಯನ್ನು “ಕೆಸರುಗದ್ದೆ” ಆಟೋಟದ ಮೂಲಕವಾದರೂ ಈಡೇರಿಸಲು ಅಪರೂಪಕ್ಕಾದರೂ ಅವಕಾಶಗಳು ದೊರೆಯುತ್ತಿರುತ್ತವೆ. ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯ ಯುವ ಬಳಗ ಕಟ್ಟಿರುವ “ಪಬ್ಲಿಕ್ ಇಂಫಾಕ್ಟ್” ಟಿವಿ ವಾಹಿನಿ ಆಸಕ್ತರಿಗಾಗಿ ಇದೇ ಜುಲೈ 30ರಂದು ಮೂಡಿಗೆರೆ ಸಮೀಪ, ಪಶ್ಚಿಮಘಟ್ಟಗಳ ತೊಟ್ಟಿಲಿನಲ್ಲಿ ತೂಗುತ್ತಿರುವ ಕೊಟ್ಟಿಗೆಹಾರದಲ್ಲಿ ಆಯೋಜಿಸಿದೆ.
ಇಲ್ಲಿ ಮಹಿಳೆಯರು, ಪುರುಷರು, ಮಕ್ಕಳಿಗಾಗಿ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಿರುವುದು ಗಮನಾರ್ಹ. 60 ವರ್ಷ ದಾಟಿದವರು ವಯೋಮಾನದ ಹಂಗಿಲ್ಲದೇ ಭಾಗವಹಿಸುವ ಅವಕಾಶವೂ ಇದೆ.
ಆಟೋಟ
ಪುರುಷರ ಹಗ್ಗ ಜಗ್ಗಾಟ, ಮಹಿಳೆಯರ ಹಗ್ಗ ಜಗ್ಗಾಟ, ಪುರುಷರ ವಾಲಿಬಾಲ್, ಮಹಿಳೆಯರ ಥ್ರೋ ಬಾಲ್, ಇವರಿಬ್ಬರಿಗೂ ಪ್ರತ್ಯೇಕವಾಗಿ ನೂರು ಮೀಟರ್ ಓಟದ ಸ್ಪರ್ಧೆ ಇದೆ. ಇದಲ್ಲದೇ ಮಕ್ಕಳಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಇನ್ನೂ ಸಾಕಷ್ಟು ಆಟೋಟಗಳಿವೆ. ಮೂರು ಕಾಲಿನ ಓಟ, ಲಿಂಬೆ ಚಮಚ ಓಟ, ನಿಧಿ ಹುಡುಕಾಟದಂಥ ಮುದ ನೀಡುವ ಆಟಗಳಿವೆ.
ಬಹುಮಾನಗಳು ಉಂಟು
ಕ್ರೀಡೆ ಇರುವುದು ಭಾಗವಹಿಸಲು, ಗೆಲ್ಲುವ ಗುರಿಯೊಂದಿಗೆ ಆಡಬೇಕು, ಸೋತರು ಅದು ಸೋಲಲ್ಲ, ಅದು ಗೆಲ್ಲುವೇ ಎಂದು ಹಿರಿಯರು ಹೇಳುತ್ತಿರುತ್ತಾರೆ. ಕ್ರೀಡಾ ಮನೋಭಾವ ಇರಬೇಕು ಎಂಬುದು ಇದರ ತಾತ್ಪರ್ಯ. ಆದರೂ ಕೆಸರುಗದ್ದೆ ಕ್ರೀಡೆಗಳಲ್ಲಿ ಭಾಗವಹಿಸುವವರ ಉತ್ಸಾಹ ಹೆಚ್ಚಿಸಲು ಆಯೋಜಕರು ಆಕರ್ಷಕ ಬಹುಮಾನಗಳನ್ನು ಇಟ್ಟಿದ್ದಾರೆ.
ಪುರುಷರ ಹಗ್ಗ ಜಗ್ಗಾಟದಲ್ಲಿ ಜಯ ಗಳಿಸಿದ ತಂಡಕ್ಕೆ ಪ್ರಥಮ ಬಹುಮಾನವಾಗಿ 10, 000 ( ಹತ್ತು ಸಾವಿರ ರೂಪಾಯಿ) ರೂ., ದ್ವೀತಿಯ ಬಹಮಾನ 5000 (ಐದು ಸಾವಿರ ರೂಪಾಯಿ ) ರೂ., ತೃತೀಯ ಬಹುಮಾನ 3000 (ಮೂರು ಸಾವಿರ ರೂಪಾಯಿ) ರೂ., ಇದೆ. ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಪ್ರಥಮ, ದ್ವೀತಿಯ ಮತ್ತು ತೃತೀಯ ಸ್ಥಾನಗಳನ್ನು ಗಳಿಸಿದವರಿಗೂ ಇಷ್ಟೇ ಮೊತ್ತದ ಪ್ರತ್ಯೇಕ ಬಹುಮಾನಗಳಿವೆ.
ಪುರುಷರ ವಾಲಿಬಾಲ್, ಮಹಿಳೆಯರಿಗಾಗಿ ಆಯೋಜಿಸಿರುವ ಥ್ರೋ ಬಾಲ್ ಸ್ಪರ್ಧೆಗಳಿಗೆ ಪ್ರತ್ಯೇಕವಾಗಿ ಪ್ರಥಮ ಬಹುಮಾನ 5000 ( ಐದು ಸಾವಿರ ), ದ್ವೀತಿಯ 3000 (ಮೂರು ಸಾವಿರ ರೂಪಾಯಿ) ರೂ., ತೃತೀಯ 2000 (ಎರಡು ಸಾವಿರ ರೂಪಾಯಿ ) ರೂ. ಇದೆ.
ಪುರುಷರು, ಮಹಿಳೆಯರಿಗೆ ಏರ್ಪಡಿಸಿರುವ ನೂರು ಮೀಟರ್ ಓಟದ ಸ್ಪರ್ಧೆಗಳಲ್ಲಿ ಪ್ರಥಮ, ದ್ವೀತಿಯ ಮತ್ತು ತೃತೀಯ ಸ್ಥಾನ ಗಳಿಸಿದವರಿಗೆ ಪ್ರತ್ಯೇಕವಾಗಿ, ಅನುಕ್ರಮವಾಗಿ 1000 (ಒಂದು ಸಾವಿರ ರೂಪಾಯಿ) ರೂ., 500 (ಐದು ನೂರು ರೂಪಾಯಿ) ರೂ., 300 (ಮುನ್ನೂರು ರೂಪಾಯಿ ) ರೂ. ಬಹುಮಾನಗಳಿವೆ.
ಮಕ್ಕಳಿಗೂ ಬಹುಮಾನ ನೀಡಿ ಪ್ರೋತ್ಸಾಹಿಸುವುದನ್ನು ಆಯೋಜಕರು ಮರೆತಿಲ್ಲ. ಮೂರು ಕಾಲಿನ ಓಟ, ಲಿಂಬೆ ಚಮಚ ಓಟ, ನಿಧಿ ಹುಡುಕಾಟದಲ್ಲಿ ಪ್ರಥಮ, ದ್ವಿತೀಯ ಸ್ಥಾನಗಳನ್ನು ಗಳಿಸಿದವರಿಗೆ ಅನುಕ್ರಮವಾಗಿ 1000 ( ಒಂದು ಸಾವಿರ ರೂಪಾಯಿ ) ರೂ., 500 ( ಐದು ನೂರು ರೂಪಾಯಿ) ರೂ., 300 ( ಮುನ್ನೂರು ರೂಪಾಯಿ ) ರೂ. ಬಹುಮಾನಗಳಿವೆ. ಈ ಆಟಗಳಲ್ಲಿ ಪುರುಷರು, ಮಹಿಳೆಯರು ಪ್ರತ್ಯೇಕವಾಗಿ ಪಾಲ್ಗೊಳ್ಳಲು ಅವಕಾಶಗಳಿವೆ. ಗೆದ್ದವರಿಗೂ ಅನುಕ್ರಮವಾಗಿ ಮತ್ತು ಪ್ರತ್ಯೇಕವಾಗಿ ಇಷ್ಟೇ ಮೊತ್ತದ ಬಹುಮಾನಗಳನ್ನು ಇಡಲಾಗಿದೆ.
“ಮಲೆನಾಡಿನಲ್ಲಿ ಕೆಸರುಗದ್ದೆ ಆಟೋಟ” ಎನ್ನುವುದು ಪಾರಂಪಾರಿಕವಾಗಿ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತೆರೆಮರೆಗೆ ಸರಿಯುತ್ತಿದೆ. ಇಂಥ ಕ್ರೀಡೆಗಳ ಹಿಂದಿನ ವೈಭವ ಮರುಕಳಿಸಬೇಕು, ಪಟ್ಟಣ, ನಗರವಾಸಿಗಳು ಇದರ ಅನನ್ಯ ಅನುಭವ ಪಡೆಯಬೇಕು ಎಂಬ ಉದ್ದೇಶದಿಂದ “ಕೆಸರುಗದ್ದೆ” ಆಯೋಜಿಸಲಾಗಿದೆ. ಇದರಲ್ಲಿ ಆಸಕ್ತಿ ಇರುವ ಎಲ್ಲರೂ ಭಾಗವಹಿಸಬಹುದು. ಭಾಗವಹಿಸಿದರೆ ಇದರ ಅಪೂರ್ವ ಅನುಭವ ಚಿರಕಾಲ ಉಳಿಯುತ್ತದೆ” ಎಂದು “ಪಬ್ಲಿಕ್ ಇಂಫಾಕ್ಟ್” ಪ್ರಧಾನ ಸಂಪಾದಕ ಹಾಗೂ “ಕೆಸರುಗದ್ದೆ” ಆಯೋಜಕ ಪ್ರಶಾಂತ್ ಮೂಡಿಗೆರೆ ಹೇಳುತ್ತಾರೆ.
ನೋಂದಣಿ
ಇನ್ನೇಕೆ ತಡ ; ಜುಲೈ 28 ರೊಳಗೆ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ. ಒಂದು ವೇಳೆ ನೀವು ಭಾಗವಹಿಸದಿದ್ದರೂ ಮಲೆನಾಡಿನ ಕಾಫಿ, ಶುಂಠಿ ಕಷಾಯ, ಬಿಸಿಬಿಸಿ ತಿಂಡಿಗಳನ್ನು ಸವಿಯುತ್ತಾ ಭಾಗವಹಿಸುವವರಿಗೆ ಪ್ರೋತ್ಸಾಹಿಸಿ. ಅವರ ಉತ್ಸಾಹದ ಕೂಗಾಟಕ್ಕೆ ನಿಮ್ಮ ಧ್ವನಿಯನ್ನೂ ಸೇರಿಸಿ !
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಮೊಬೈಲ್: 9148055429
9916917520