ಹೊಸ ಎತ್ತಿನಗಾಡಿ ಅಥವಾ ಹೊಸ ನೊಗ ತಂದ ತಕ್ಷಣ ಎತ್ತುಗಳ ಹೆಗಲಿಗೆ ಹಾಕುವುದಿಲ್ಲ. ನೊಗವನ್ನು ಎಣ್ಣೆ ಸವರಿ ಸವರಿ ಮತ್ತಷ್ಟೂ ನಯ ಮಾಡ್ತಿದ್ದೆವು. ಕನಿಷ್ಟ ಹತ್ತದಿನೈದು ದಿನ ಹೀಗೆ ಸವರುವುದರಿಂದ ಅನುಕೂಲಗಳಿದ್ದವು. ಎತ್ತಿನ ಭುಜವನ್ನು ಒರಟು ನೊಗ ಉಜ್ಜಿ ಗಾಯವಾಗುವುದು ತಪ್ಪುತ್ತಿತ್ತು. ಇನ್ನೊಂದು ಅನುಕೂಲ ಎಂದರೆ ಬಿಸಿಲಿಗೆ ಒಣಗಿ ಚಕ್ಕೆಯೇಳುವುದು ತಪ್ಪುತ್ತಿತ್ತು. ಚಕ್ಕೆ ಚುಚ್ಚಿದರೆ ಮೂಕ ಬಸವಗಳು ತಮ್ಮ ವೇದನೆ ಹೇಗೆ ಹೇಳಿಕೊಂಡವು ? ಎತ್ತುಗಳು , ಅವುಗಳ ಸ್ವಭಾವ, ಅವುಗಳಿಗೆ ಸಂಬಂಧಿಸಿದ ಬಂಡಿ – ನೊಗಗಳ ಬಗ್ಗೆ ಬರೆದರೆ ಅದೇ ದೊಡ್ಡ ಸಾಹಿತ್ಯವಾಗುತ್ತದೆ.
ಇರಲಿ, ಈ ಮಾತು ಏಕೆ ಪ್ರಸ್ತಾಪಿಸಿದೆ ಎಂದರೆ ಈಗ ನಗರಗಳಲ್ಲಿಯೂ ರಾಗಿಮುದ್ದೆ ಉಣ್ಣವುದು ಜನಪ್ರಿಯ. ಉತ್ತರ ಕರ್ನಾಟಕ, ಉತ್ತರ ಭಾರತದಿಂದ ಮೈಸೂರು ಸೀಮೆ ಅಂದರೆ ಬೆಂಗಳೂರು, ಮಂಡ್ಯ, ಹಾಸನ, ತುಮಕೂರು ಚಾಮರಾಜನಗರ ಈ ಭಾಗಗಳಿಗೆ ಬಂದು ನೆಲಸಿದವರಿಗೂ ಪ್ರಿಯವಾದ ಆಹಾರ. ಮನೆಯಲ್ಲಿಯೇ ಮಾಡಿಕೊಳ್ಳುವ ರೂಢಿಯೂ ಆಗಿದೆ.
ಈಗಂತೂ ರಾಗಿಮುದ್ದೆ ಮಾಡಲು ಅನುಕೂಲಕರವಾದ ಕುಕ್ಕರ್ ಗಳು ಬಂದಿವೆ. ಅವುಗಳನ್ನು ಬಳಸುವವರು ಕಡಿಮೆ. ಸಾಂಪ್ರದಾಯಿಕವಾಗಿ ಮಾಡುವವರು ಹಿಟ್ಟು ನಾದಲು ತುಂಡು ದೊಣ್ಣೆ ಬಳಸುತ್ಥಾರೆ. ಇವೆಲ್ಲ ಈಗ ಎಲ್ಲೆಡೆ ಸಿಗುತ್ತವೆ. ಅಂದ ಹಾಗೆ ರಾಗಿಹಿಟ್ಟನ್ನು ಕಲಕುವುದಿಲ್ಲ. ನಾದಲಾಗುತ್ತದೆ. ವಾದ್ಯದ ಹದದಿಂದ ಹೇಗೆ ನಾದ ಹೊಮ್ಮುವುದು ಹಾಗೆ ನಯವಾಗಿ ನಾದುವುದರಿಂದ ಗಂಟುಗಳಿಲ್ಲದ ನುಣ್ಣನೆಯ ರಾಗಿಮುದ್ದೆ ಸಿದ್ಧವಾಗುತ್ತದೆ.
ಮುದ್ದೆಯಲ್ಲಿ ಒಂದೆರಡು ಗಂಟುಗಳು ಸಿಕ್ಕರೆ ತೆಗೆದುಣ್ಣಬಹುದು. ಆದರೆ ಮುದ್ದೆ ತುಂಬ ಗಂಟುಗಳೇ ಇದ್ದರೆ ಉಣ್ಣಲು ಸಾಧ್ಯವಾಗುವುದಿಲ್ಲ. ಒಬ್ಬಿಬ್ಬರಿಗಲ್ಲ. ಹತ್ತು ಹದಿನೈದು ಮಂದಿಗೆ ಭಾರಿಗಾತ್ರಕ್ಕೆ ಹಿಟ್ಟನ್ನು ವೋಣಿಸುವುದೆಂದರೆ ಸರಳ ಮಾತಲ್ಲ. ಬೆಟ್ಟಗುಡ್ಡಗಳಲ್ಲಿ ಶಿವನ ವಿಗ್ರಹ ನಿರ್ಮಿಸಿ ನಗರದವರನ್ನು ಸೆಳೆಯುವ ಮಾತಿನ ಮಲ್ಲರು ನನಗೆ ಆಧ್ಯಾತ್ಮದ ಗುರುಗಳೆಂದು ಅನಿಸುವುದಿಲ್ಲ. ಹೀಗೆ ತನ್ಮಯತೆಯಿಂದ ಗಂಟುಗಳಿಲ್ಲದೇ ಹದವಾಗಿ ರಾಗಿಮುದ್ದೆ ಮಾಡುವ ಮಹಿಳೆಯರು ಅಧ‍್ಯಾತ್ಮದ ಗುರುಗಳೆಂದೆನಿಸುತ್ತಾರೆ. ಅಡುಗೆಯೂ ಅಧ್ಯಾತ್ಮವೇ ಅಲ್ಲವೇ ?
ಹೀಗೆ ಉತ್ತಮವಾಗಿ ರಾಗಿಮುದ್ದೆ ಅಣಿಯಾಗಲು ಹಿಟ್ಟಿನ ದೊಣ್ಣೆ ಅತ್ಯವಶ್ಯಕ. ಈಗ ಪಟ್ಟಣ, ನಗರ ಪ್ರದೇಶಗಳಲ್ಲಿ ರಾಗಿದೊಣ್ಣೆ ಸಿಗುತ್ತದೆ. ಇವು ತುಂಡುದೊಣ್ಣೆ. ಇದನ್ನು ಮನೆಗೆ ತಂದು ತಕ್ಷಣ ಬಳಸಬೇಡಿ. ಬಳಸುವ ಮುನ್ನ ಕನಿ್ಷ್ಟ ಮೂರ್ನಾಲ್ಕು ದಿನ ಯಾವುದೇ ಎಣ್ಣೆಯನ್ನಾದರೂ ನಿತ್ಯ ಸವರಿ ಇಡಿ. ಇದರಿಂದ ಎಣ್ಣೆ ಇಳಿದು ದೊಣ್ಣೆ ನಯವಾಗುವುದಲ್ಲದೇ ಹಿಟ್ಟು ನಾದುವಾಗ ಸಿಬಿರುಗಳು ಏಳುವುದಿಲ್ಲ.
ಹೊಸದಾಗಿ ಮುದ್ದೆ ಉಣ್ಣುವವರಿಗೆ ಅದನ್ನು ಮುರಿಯುವ ಕ್ರಮವಾಗಲೀ, ಹೆಬ್ಬೆರಳು ಬಳಸಿ ನಾದುವುದಾಗಲಿ ಗೊತ್ತಿಲ್ಲ. ರಾಗಿಮುದ್ದೆಯನ್ನು ದೊಣ್ಣೆಯಿಂದಷ್ಟೇ ನಾದುವುದಿಲ್ಲ. ಹೆಬ್ಬೆರಳು ಬಳಸಿ ಮುದ್ದೆ ಮುರಿಯಲಾಗುತ್ತದೆ. ಬಳಿಕ ಹೆಬ್ಬೆರಳನ್ನೇ ಪ್ರಧಾನವಾಗಿ ನಾದಲಾಗುತ್ತದೆ. ಹೀಗೆ ಮಾಡಿದಾಗ ಒಂದುವೇಳೆ ಸಣ್ಣ ಸಿಬಿರುಗಳಿದ್ದರೆ, ಕಲ್ಲುಗಳಿದ್ದರೆ ಉಣ್ಣುವ ಮುನ್ನವೇ ಅದನ್ನು ಎತ್ತಿ ಪಕ್ಕಕ್ಕೆ ಇಡಬಹುದು. ಇಷ್ಟೇ ಅಲ್ಲ ಹೀಗೆ ಹೆಬ್ಬೆರಳಿನಲ್ಲಿ ನಾದುವುದರಿಂದ ಮುದ್ದೆಯ ತುತ್ತು, ಸಾರನ್ನು ಉತ್ತಮವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಬಾಯಲ್ಲಿ ಜಗಿದು ತಿನ್ನದೇ ಗುಳುಂ ಮಾಡುವುದರಿಂದ ಉದರದಲ್ಲಿ ಉತ್ತಮವಾಗಿ ಜೀರ್ಣವಾಗುತ್ತದೆ.
– ಕುಮಾರ ರೈತ