ಮೈಸೂರು ಜಯದೇವ ಆಸ್ಪತ್ರೆ. ಸಮಯ ಬೆಳಗ್ಗಿನ ಜಾವ 8. ಮೊದಲನೇ ಮಹಡಿಯ ಐಸಿಯುದಲ್ಲಿದ್ದ ತಾಯಿಯನ್ನು ಮಾತನಾಡಿಸಿ ಕೆಳಗಿಳಿದು ಬಂದೆ. ಆಗ ನೆಲಮಹಡಿಯಲ್ಲಿ ನಿಂತಿದ್ದವರನ್ನು ನೋಡಿ ಗಾಬರಿಯಾದೆ. ಏಕೆಂದರೆ ಅಕ್ಷರಶಃ ನೂರಾರು ಮಂದಿ ಅಲ್ಲಿನ ಕೌಂಟರ್ ಗಳ ಮುಂದೆ ವೈದ್ಯಕೀಯ ತಪಾಸಣೆ ಸಲುವಾಗಿ ಟೋಕನ್ ಪಡೆಯಲು ಸಾಲು ನಿಂತಿದ್ದರು. ಆಗಲೇ ಟೋಕನ್ ಪಡೆದ ನೂರಾರು ಮಂದಿ ಕುಳಿತು ಕಾಯುತ್ತಿದ್ದರು.
ಬೆಳಗ್ಗಿನ ಜಾವ ಐದಕ್ಕೆಲ್ಲ ಬಂದು ಟೋಕನ್ ಗಾಗಿ‌ ಸರತಿ ನಿಲ್ಲುತ್ತಾರಂತೆ ! ಮೂರನೇ ಮಹಡಿಯ ತನಕ ರ್ಯಾಂಪ್ ನಲ್ಲಿ ಹತ್ತಿ ಹೋದೆ. ನೆಲ‌ಮಹಡಿಯ ಜೊತೆಗೆ ಒಂದನೇ ಮತ್ತು ಎರಡನೇ ಮಹಡಿಗಳಲ್ಲಿಯೂ ಕ್ಯಾಥ್ ಲ್ಯಾಬ್ (ಹೃದ್ರೋಗ ಚಿಕಿತ್ಸಾ ಘಟಕ) ಗಳಿವೆ. ಅಲ್ಲಿಯ ನಿರೀಕ್ಷಣಾ ಸ್ಥಳಗಳಲ್ಲಿಯೂ ಹಲವರು ಕಾಯುತ್ತಿದ್ದರು. ಪ್ರತಿದಿನ ಅಪಾರ ಸಂಖ್ಯೆಯಲ್ಲಿ ಹೃದ್ರೋಗಿಗಳು ತಪಾಸಣೆಗೆ ಬರುತ್ತಾರೆ.
ಒಂದು ಆಸ್ಪತ್ರೆಗೆ ಒಂದೇ ದಿನ ಇಷ್ಟು ಅಪಾರ ಸಂಖ್ಯೆಯಲ್ಲಿ ಹೃದ್ರೋಗಿಗಳು ಬಂದರೆ ರಾಜ್ಯದಲ್ಲಿ ಹೃದ್ರೋಗ ಚಿಕಿತ್ಸೆ ನೀಡುವ ಸರ್ಕಾರಿ – ಖಾಸಗಿ ಆಸ್ಪತ್ರೆಗಳಿಗೆ ಹೋಗುವವರ ಸಂಖ್ಯೆ ಎಷ್ಟಿರಬಹುದು ? ನೆನಸಿಕೊಂಡೇ ಮತ್ತೆ ದಿಗಿಲಾಯ್ತು. ಕೊರೊನಾ ಕಾಲಘಟ್ಟದ ನಂತರವೇ ಇಂಥವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದರಲ್ಲಿ ಯಾವುದೇ ಅನುಮಾನವೂ ಇಲ್ಲ ! ಶ್ರಮದಾಯಕ ಕೆಲಸಗಳನ್ನು ಮಾಡುವ ಗ್ರಾಮೀಣ ನಿವಾಸಿಗಳಲ್ಲಿಯೂ ಹೃದ್ರೋಗ ಸಮಸ್ಯೆಗಳು ಇರುವವರ ಸಂಖ್ಯೆ ಹೆಚ್ಚಾಗುತ್ತಿದೆ !
ಇಂಥ ತೊಂದರೆಗಳನ್ನು ಹೊಂದಿದ್ದ ಮಹಿಳೆಯರ ಸಂಖ್ಯೆ ತೀರಾ ಕಡಿಮೆ ಇತ್ತು ! ಈಗ ಅವರ ಸಂಖ್ಯೆಯೂ ಏರುತ್ತಿದೆ. ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಂಡರು. ಇನ್ನು ನಗರವಾಸಿಗಳಲ್ಲಿ ಹ್ರದ್ರೋಗ ಇಲ್ಲದೇ ಇರುವವರನ್ನು ಹುಡುಕುವ ದುಸ್ಥಿತಿ ನಿರ್ಮಾಣವಾಗಿದೆ. ಏಕೆ ಹೃದ್ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಕೊರೊನಾ ಕಾಲದ ನಂತರವೇ ಏಕೆ ಹೆಚ್ಚಾಗಿದೆ, ಹೆಚ್ಚಾಗುತ್ತಿದೆ ? ಈ ಸಂಖ್ಯೆ ಹೀಗೆ ಹೆಚ್ಚಳವಾಗುತ್ತಿದ್ದರೆ ಗತಿಯೇನು ? ದುಡಿಯುವವರ ಸ್ಥಿತಿಯೇನು ?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮತ್ತು ಪರಿಹಾರ ಹುಡುಕುವ ವೈದ್ಯಕೀಯ ಸಂಶೋಧನೆಗಳು ಭಾರತದಲ್ಲಿ ನಡೆಯುತ್ತಿದೆಯೇ ? ಅಂದ‌ ಹಾಗೆ ಈ ಬಾರಿಯ ಕೇಂದ್ರ ಸರ್ಕಾರದ ಬಜೆಟಿನಲ್ಲಿ ಹೃದ್ರೋಗ ಸಮಸ್ಯೆಗಳು‌ ಸೇರಿದಂತೆ ಇತರ ರೋಗಗಳ ಕಾರಣಗಳು‌ ಮತ್ತು ಪರಿಹಾರ ಹುಡುಕುವ ವೈದ್ಯಕೀಯ ಸಂಶೋಧನೆಗೆ ಮೀಸಲಿಟ್ಟ ಹಣ ಎಷ್ಟು ?
ಕುಮಾರ ರೈತ
Similar Posts

Leave a Reply

Your email address will not be published. Required fields are marked *