ಭಾರತೀಯ ಪತ್ರಿಕೋದ್ಯಮದಲ್ಲಿ (ಟಿವಿ ಹೊರತುಪಡಿಸಿ) ಜರ್ನಲಿಸ್ಟುಗಳ ಸಂಖ್ಯೆಗೆ ಹೋಲಿಸಿದರೆ ಪೋಟೋ ಜರ್ನಲಿಸ್ಟ್ಗಳ, ಕಾಮನ್ ಭಾಚೆಯಲ್ಲಿ ಹೇಳುವುದಾದರೆ ಪೋಟೋಗ್ರಾಫರ್ ಗಳ ಸಂಖ್ಯೆ ತೀರಾ ಕಡಿಮೆ. ಎಷ್ಟು ಎಂದರೆ ಒಂದು ಪತ್ರಿಕಾ ಕಚೇರಿಗೆ ಒಬ್ಬರು, ತುಸು ದೊಡ್ಡ ಪತ್ರಿಕೆಯಾದರೆ ಮೂರರಿಂದ ನಾಲ್ವರು ಅಷ್ಟೆ. ಇವರ ಸಂಖ್ಯೆ ಕಡಿಮೆಯಾದರೂ ದೈನಂದಿನ ಅಸೈನ್ ಮೆಂಟುಗಳು ಅಧಿಕ, ಕೆಲವೊಮ್ಮೆ ಅತ್ಯಧಿಕ. ಧಾವಂತದಿಂದ ಒಂದೆಡೆಯಿಂದ ಇನ್ನೊಂದೆಡೆಗೆ ಧಾವಿಸುತ್ತಲೇ ಇರಬೇಕಾಗುತ್ತದೆ. ಇಂಥ ಒತ್ತಡದಲ್ಲಿ ಸೃಜನಶೀಲತೆ ಉಳಿಸಿಕೊಳ್ಳುವುದು ಕಷ್ಟ. ಇಂಥ ಕಷ್ಟವನ್ನು ನಷ್ಟ ಮಾಡಿಕೊಳ್ಳದೇ ಎದೆಯೊಳಗೊಂದು ಸೃಜನಾತ್ಮಕ ಹೊಳೆಯನ್ನೇ ಇಟ್ಟುಕೊಂಡವರು ಕಂದಾವರ ವೆಂಕಟೇಶ್ !


ಇವರು ಸಾಕಷ್ಟು ಅಂದರೆ ಲೆಕ್ಕವೇ ಇಡಲಾರದಷ್ಟು ಪೋಟೋಗಳನ್ನು ತೆಗೆದಿರಬಹುದು. ಆದರೆ ನಿತ್ಯ ಪತ್ರಿಕೆಗಳನ್ನು ಓದುವ, ಅಲ್ಲಿ ಬರುವ ಪೋಟೋಗಳನ್ನು ನೋಡುವ ಅಭ್ಯಾಸವಿರಿಸಿಕೊಂಡವರು ಖಂಡಿತ ಕಂದಾವರ ವೆಂಕಟೇಶ್ ಅವರು ಕ್ಲಿಕ್ಕಿಸಿದ ಚಿತ್ರಗಳನ್ನು ಗುರುತಿಸಬಲ್ಲರು. ಏಕೆಂದರೆ ಆ ಚಿತ್ರದಲ್ಲೊಂದು ಅಪರೂಪದ ವೈಶಿಷ್ಟತೆ ಇರುತ್ತದೆ. ಅದು ನಮ್ಮನ್ನು ಯೋಚನೆಗೆ ಹಚ್ಚುತ್ತದೆ !


ಡಿಸೆಂಬರ್, 2018ರ ಎರಡನೇ ವಾರದಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ವೆಂಕಟೇಶ್ ಅವರು ಕ್ಲಿಕ್ಕಿಸಿದ ಛಾಯಾಚಿತ್ರಗಳ ಪ್ರದರ್ಶನವಿತ್ತು. ಅದರ ಹೆಸರು “ಕೆ.ಆರ್. ಮಾರುಕಟ್ಟೆಯ ಕತ್ತಲಿನೊಡನೆ ಬೆಳಕಿನಾಟ” (Ply of lights in darkness @ K.R Market) ಹೆಸರೇ ಕುತೂಹಲವನ್ನು ಮೂಡಿಸುತ್ತದೆ. ಇನ್ನು ಚಿತ್ರಗಳು ಹೇಗಿದ್ದಿರಬಹುದು ಎಂಬ ಕುತೂಹಲ ಮೂಡಿತು. ಆ ಕುತೂಹಲದ ಒತ್ತಡ ಹೆಚ್ಚುತ್ತಾ ಹೋದಾಗ ನಾನು ಚಿತ್ರಕಲಾ ಪರಿಷತ್ತಿನಲ್ಲಿದ್ದೆ.


ಚಿತ್ರಪ್ರದರ್ಶನವಿರುವ ಒಳಾಂಗಣಕ್ಕೆ ಹೋದೊಡನೆ ಕಣ್ಣಿಗೆ ಬಿದ್ದಿದ್ದು ದೊಡ್ಡದೊಡ್ಡ ಅಳತೆಯ ಬ್ರೌನ್ ಚೌಕಟ್ಟಿನಲ್ಲಿರುವ ಕಪ್ಪು-ಬಿಳುಪು ಚಿತ್ರಗಳು. ಅರೇ ಬಣ್ಣದ ಯುಗದಲ್ಲಿ ಕಪ್ಪುಬಿಳುಪು ಚಿತ್ರಗಳೇ ಎಂದು ನೋಡಿದವರಿಗೆ ಅಚ್ಚರಿಯಾಗಬಹುದು. ಹೀಗೆ ನೋಡುಗನನ್ನು ತಮ್ಮ ಚಿತ್ರಗಳ ಮೂಲಕ ಅಚ್ಚರಿಗೆ ಕೆಡುವುವುದು ವೆಂಕಟೇಶ್ ವೈಶಿಷ್ಟ.


ಅವೆಲ್ಲವೂ ಒಂದೇ ಒಂದು ಸ್ಥಳದಲ್ಲಿ ಒಂದೇ ಒಂದು ಪರಿಕಲ್ಪನೆಯಡಿ ಕ್ಲಿಕ್ಕಿಸಿದ ಚಿತ್ರಗಳು. ಸ್ಥಳ; ಬೆಂಗಳೂರಿನ ಕೆ,ಆರ್. ಮಾರ್ಕೇಟ್. ವಿಷಯ ಮೊದಲೇ ಹೇಳಿದ ಹಾಗೆ “ಕೆ.ಆರ್. ಮಾರುಕಟ್ಟೆಯ ಕತ್ತಲಿನಲ್ಲಿ ಬೆಳಕು ಆಡುವ ಆಟ” ಈ ಬೆಳಕಿನ ಮೂಡು ವಿಚಿತ್ರ. ಮನುಷ್ಯನ ಮೂಡನ್ನೇ ಬಂಧಿಸುವುದು ಕಷ್ಟವಿರುವಾಗ ಬೆಳಕಿನ ಮೂಡನ್ನು ಬಂಧಿಸುವುದಂತೂ ಸವಾಲಿನ ಕೆಲಸ. ಏನಾದರೊಂದು ಹೊಸತನ್ನು ಮಾಡುವ ತುಡಿತದ ವೆಂಕಟೇಶ್ ಈ ಸವಾಲು ಸ್ವೀಕರಿಸುವ ಕೆಲಸಕ್ಕೆ ತೊಡಗಿಸಿಕೊಂಡರು. ಅದು ಒಂದಲ್ಲ ಎರಡಲ್ಲ ಸತತ ಹದಿನೈದು ದಿನ. ಅದೂ ಹಗಲು ಹೊತ್ತಿನಲಲ್ಲ. ಕತ್ತಲು ಕವಿದ ವೇಳೆಯಲ್ಲಿ !


“ಅರೇ ಇಂಥ ಪರಿಕಲ್ಪನೆಯಾದರೂ ನಿಮಗೆ ಹೇಗೆ ಬಂತು ವೆಂಕಟೇಶ್” ಎಂದು ನಾನು ಕೇಳಿದೆ. “ದಶಕಗಳಿಂದ ಹಬ್ಬಹರಿದಿನ ಇತ್ಯಾದಿಇತ್ಯಾದಿ ವಿಶೇಷ ದಿನಗಳಂದು ಪತ್ರಿಕೆಗಳಿಗಾಗಿ ಪೋಟೋ ಕ್ಲಿಕ್ಕಿಸಲು ಕೆ,ಆರ್. ಮಾರುಕಟ್ಟೆಗೆ ಬರುತ್ತಲೇ ಇದ್ದೇನೆ. ಇತ್ತೀಚೆಗೆ ಹೀಗೆ ಬಂದು ಹೋಗುವಾಗ ರಾತ್ರಿಯ ವೇಳೆ ಈ ಸ್ಥಳದ ಬೆಳಕು ಮತ್ತು ಅದರಡಿಯಲ್ಲಿ ಚಲಿಸುವ ಆಬ್ಜೆಕ್ಟ್ ಗಳ ಚಿತ್ರಗಳನ್ನು ಕ್ಲಿಕ್ಕಿಸಿದರೆ ಹೇಗೆ ಎಂಬ ಐಡಿಯಾ ಬಂತು. ತಡಮಾಡಲಿಲ್ಲ. ಅದನ್ನು ಕಾರ್ಯರೂಪಕ್ಕೆ ತರಲು ಮುಂದಾದೆ” ಎಂದರು.

ಟೌನ್ ಹಾಲಿನ ಮುಂಭಾಗದಿಂದ ಮೈಸೂರು ರೋಡ್ ಫ್ಲೈ ಓವರ್ ಆರಂಭವಾಗುತ್ತದೆ. ಅದು ಕೆ,ಆರ್. ಮಾರುಕಟ್ಟೆಯನ್ನೂ ಸೀಳಿಕೊಂಡು ಹೋಗಿದೆ. ಹೀಗೆ ಸೀಳಿಕೊಂಡು ಹೋದ ಜಂಕ್ಷನ್ ನಲ್ಲಿ ಫ್ಲೈ ಓವರ್ ನಲ್ಲಿ ನಿಂತು ಚಿತ್ರ ತೆಗೆಯುವುದು ವೆಂಕಟೇಶ್ ಇರಾದೆ. ಆದರೆ ಇದು ಅಷ್ಟು ಸುಲಭವಲ್ಲ. ಬಿಡುವೇ ಇಲ್ಲದಂತೆ ವಾಹನಗಳು ಹಾದು ಹೋಗುತ್ತವೆ. ತುಸು ಭಾರಿ ವಾಹನ ಹಾದು ಹೋಗುವಾಗ ಫ್ಲೈ ಓವರ್ ತೂಗುಯ್ಯಾಲೆಯಂತೆ ಆಡುವ ಅನುಭವ ಆಗುತ್ತದೆ. ಸಂಜೆ 6.30 ರಿಂದ ರಾತ್ರಿ 11ರ ತನಕ ಹೀಗೆ ಅಲುಗುವ ಫ್ಲೈ ಓವರ್ ಮೇಲೆ ಸತತ ಹದಿನೈದು ದಿನ ನಿಂತು ಪೋಟೋ ತೆಗೆಯುವುದು ಖಂಡಿತ ಸರಳ ಮಾತಲ್ಲ. ಸೇತುವೆ ಅದುರಿದಾಗ ಕೈ ಶೇಕ್ ಆಗದ ಹಾಗೆ ನೋಡಿಕೊಳ್ಳಬೇಕು. ಕ್ಯಾಮೆರಾ ತುಸು ಅಲುಗಾಡಿದರೂ ತೆಗೆಯಬೇಕಿದಿದ್ದ ಚಿತ್ರದ ಬದಲು ಬ್ಲರ್ ಆದ ಮತ್ತೊಂದು ಚಿತ್ರ ಬರಬಹುದು. ಇಂಥ ಸವಾಲುಗಳನ್ನು ಎದುರಿಸುವುದು ಅನಿವಾರ್ಯವಾಗಿತ್ತು.

ಬಹುಶಃ ನಿರ್ಮಾಣವಾದ ದಿನದಿಂದ ಈ ಕ್ಷಣದ ತನಕವೂ ನಿದ್ದೆಯೆಂಬುದನ್ನೇ ಕಾಣದ ಕೆ,ಆರ್. ಮಾರುಕಟ್ಟೆ ಹಗಲಿನಲ್ಲಿ ಒಂದುಬಗೆ ಕಂಡರೆ ರಾತ್ರಿ ಹಲವು ಬಗೆಯಲ್ಲಿ ಕಾಣುತ್ತದೆ. ನಿತ್ಯವೂ ವ್ಯಾಪಾರದಲ್ಲಿ ತೊಡಗಿಸಿಕೊಂಡವರು, ಎಡೆಬಿಡದೆ ಬಂದು ಹೋಗುವ ಗ್ರಾಹಕರು. ಇಲ್ಲಿಯೂ ಪೇಟೆಮಂದಿ,ಹಳ್ಳಿಮಂದಿ ಎಂಬ ವೆತ್ಯಾಸಗಳು, ಬೆಳೆದ ಉತ್ಪನ್ನಗಳನ್ನು ನಿರೀಕ್ಷೆಗಣ್ಣಿನಿಂದ ದೂರದೂರಿನಿಂದ ತರುವ ರೈತರು, ಅವುಗಳನ್ನು ಇಳಿಸಲು ಸಹಾಯ ಮಾಡುವ ಕಾರ್ಮಿಕರು, ತಕ್ಷಣ ಸುಳಿಯುವ ದಳ್ಳಾಳಿಗಳು, ಈ ಸಂತೆಯ ಮಧ್ಯವೇ ನಿರ್ಭೀಡೆಯಿಂದ ಓಡಾಡುವ ಜಾನುವಾರುಗಳು, ಪುಸಕ್ಕನೇ ಅಡ್ಡವಾಗುವ ವಾಹನಗಳು, ಅವುಗಳ ಬೆಳಕಿನ ಕೋಲ್ಮಿಂಚುಗಳು. ಇವುಗಳ ನಡುವೆ ದರ್ಶನ ಅನಿಸುವ ಮಾದರಿಯ ಚಿತ್ರಗಳು.

ವೆಂಕಟೇಶ್ ಅವರು ಪ್ರತಿದಿನ ನಿರಂತರ ತಾಸುಗಟ್ಟಲೇ ನಿಂತು ಚಿತ್ರಗಳನ್ನು ಕ್ಲಿಕ್ಕಿಸತೊಡಗಿದರು. ಸಿಕ್ಕಸಿಕ್ಕ ಚಿತ್ರಗಳನ್ನು ಚಿತ್ರಗಳನ್ನು ಕ್ಲಿಕ್ಕಿಸುವುದು ಅವರ ಗುರಿಯಾಗಿರಲಿಲ್ಲ. ಅಪರೂಪದ ಚಿತ್ರ ಎಂದೆನಿಸುವುದತ್ತರ ಮಾತ್ರ ಗಮನವಿತ್ತು. ಅವರ ಮನದ ಕ್ಯಾನ್ವಾಸಿನಲ್ಲಿ ತೆಗೆಯಬೇಕಿದಿದ್ದ ಚಿತ್ರಗಳು ಮೂಡುತ್ತಿದ್ದವು. ಆದರೆ ಅಂಥ ಚಿತ್ರಗಳನ್ನು ಕ್ಲಿಕ್ಕಿಸಲು ಹೋದಾಗ ಯಾವೊದೋ ಆಬ್ಜೆಕ್ಟ್ ಅಡ್ಡಿಯಾಗುತ್ತಿತ್ತು. ಆ ಕ್ಷಣಕ್ಕೆ ನಿರಾಶೆ ಎನ್ನಿಸಿದರೂ ಕುಗ್ಗುತ್ತಿರಲಿಲ್ಲ. ಪ್ರಯತ್ನ ಮುಂದುವರಿಯುತ್ತಿತ್ತು. ಇಂಥ ಸತತ ಪ್ರಯತ್ನಗಳ ಮೂಲಕ ವೆಂಕಟೇಶ್, “ಕತ್ತಲೆಯ ಸಂತೆಯಲಿ ಮಿಂಚುವ ಬೆಳಕನ್ನು ಬಂಧಿಸುವಲ್ಲಿ ತುಸು ಸಮಾಧಾನ ಕಂಡರು” ಅಂಥ ಸಮಾಧಾನದ ಚಿತ್ರಗಳನ್ನು ನೋಡುವ ಅವಕಾಶವನ್ನು ಇತರರಿಗೂ ಕಲ್ಪಿಸಿದರು. ಅವರು ಕ್ಲಿಕ್ಕಿಸಿದ ಚಿತ್ರಗಳ ಒಂದಷ್ಟು ಮಿಂಚುಗಳು ಈ ಲೇಖನದ ಮಧ್ಯೆಮಧ್ಯೆ ಅಡಕವಾಗಿವೆ. ಮತ್ತೊಮ್ಮೆ ವೆಂಕಟೇಶ್ ಅವರು ಕ್ಲಿಕ್ಕಿಸಿದ ಛಾಯಾಚಿತ್ರಗಳ ಪ್ರದರ್ಶನ ಏರ್ಪಾಡಾದಾಗ ಆ ಮಿಂಚುಗಳನ್ನು ನೇರವಾಗಿ ನೋಡುವ ಅವಕಾಶ ಕಳೆದುಕೊಳ್ಳಬೇಡಿ…. ಅಂದಹಾಗೆ ಈ ಅಪರೂಪದ ಛಾಯಾಗ್ರಾಹಕರ ವೆಬ್ ಸೈಟ್ ಇದೆ… ಅದರ ಹೆಸರು; http://www.beyondfocus.in/

 

Similar Posts

Leave a Reply

Your email address will not be published. Required fields are marked *