ರಜನೀಶ್ ಅವರನ್ನು ಸೆಕ್ಸ್ ಗುರು, ರೋಲ್ಸಾರಾಯ್ ಗುರು, ದಾರ್ಶನಿಕ, ಚಿಂತನಾಶೀಲ, ಪರಂಪರೆಗಳಿಗೆ ಮುಖಮುಖಿಯಾದವನು ಹೀಗೆಲ್ಲ ಕರೆಯಲಾಗುತ್ತದೆ. ಅವರವರು ತಮಗೆ ಕಂಡಂತೆ ಇವರನ್ನು ಬಣ್ಣಿಸುತ್ತಾರೆ. ಹೀಗಾಗಿ ಬೇರೆಬೇರೆ ಗ್ರಹಿಕೆಗಳ ಹಿನ್ನೆಲೆಯಲ್ಲಿ ಓಶೋ ಭಿನ್ನಭಿನ್ನವಾಗಿ ಕಾಣುತ್ತಾರೆ. ಇಂಥ ರಜನೀಶರನ್ನು ಅವರ ಅನುಯಾಯಿಗಳು ಕಂಡ ರೀತಿ ಹೇಗಿರಬಹುದು. ಅವರ ಕಾಲಘಟ್ಟದಲ್ಲಿ ಅವರನ್ನು ನೇರ ಕಂಡಿದ್ದ, ಒಡನಾಡಿದವರೆಲ್ಲರೂ ತಮ್ಮತಮ್ಮ ಅನುಭವ ಬರೆದಿಲ್ಲ. ತಾವು ಕಂಡ ರಜನೀಶ್ ಎಂದು ಬರೆದವರ ಸಂಖ್ಯೆ ವಿರಳ. ಇಂಥವರಲ್ಲಿ ಹ್ಯೂಮಿಲೇನ್ ಒಬ್ಬರು.
ಇಂಗ್ಲೆಡಿನ ಎಡಿನ್ ಬರ್ಗ್ ನಲ್ಲಿ ನೆಲಸಿದ್ದ ಮಧ್ಯಮವರ್ಗದ ಕುಟುಂಬ ಸದಸ್ಯ ಹ್ಯೂಮಿಲೇನ್. ಇವರ ಬಾಲ್ಯದ ಬದುಕು ಕೆಲವಾರು ಕಾರಣಗಳಿಂದ ಅಷ್ಟೇನೂ ಹಿತಕರವಾಗಿರಲಿಲ್ಲ. ಬಹಳ ಕಷ್ಟಪಟ್ಟು ತನ್ನ ಕಾಲಮೇಲೆ ತಾನು ನಿಂತುಕೊಂಡ ನಂತರ ಸ್ನೇಹಿತನೋರ್ವನ ಕಾರಣದಿಂದ ಅಧ್ಯಾತ್ಮದತ್ತ ಒಲವು ಮೂಡುತ್ತದೆ. ರಜನೀಶ್ ಚಿಂತನೆಗಳ ಬಗ್ಗೆ ಒಲವು ಮೂಡುತ್ತದೆ. ಭಾರತಕ್ಕೆ/ಮುಂಬೈಗೆ ಭೇಟಿ ನೀಡುತ್ತಾರೆ. ರಜನೀಶರನ್ನೂ ಭೇಟಿಯಾಗುತ್ತಾರೆ. ಮೊದಲ ಭೇಟಿಯಲ್ಲಿಯೇ ಭಾರಿ ಪ್ರಭಾವಿತರಾಗುತ್ತಾರೆ. ಅನುಯಾಯಿಯಾಗಲು ನಿರ್ಧರಿಸುತ್ತಾರೆ. ರಜನೀಶರಿಂದಲೇ ಇವರಿಗೆ ಸ್ವಾಮಿ ಶಿವಮೂರ್ತಿ ಎಂಬ ನಾಮಕರಣವೂ ಆಗುತ್ತದೆ.
ಇಲ್ಲಿಂದ ಮುಂದೆ ಹ್ಯೂಮಿಲೇನ್ ತೊಳಲಾಟಗಳಲ್ಲಿಯೇ ಸಾಗುತ್ತಾರೆ. ಆಗ ಆಚಾರ್ಯ ರಜನೀಶ್ ಎಂದೇ ಕರೆಸಿಕೊಳ್ಳುತ್ತಿದ್ದ ತನ್ನ ಗುರುವಿನ ಬಗ್ಗೆ ಒಮ್ಮೆ ನಂಬಿಕೆ ಮತ್ತೊಮ್ಮೆ ಅರೆನಂಬಿಕೆ ಮಗದೊಮ್ಮೆ ಅಪನಂಬಿಕೆ. ಎಲ್ಲಿಯೂ ಪೂರ್ಣನಂಬಿಕೆ ಇಟ್ಟುಕೊಂಡು ಇವರು ರಜನೀಶ್ ಅವರನ್ನು ಹಿಂಬಾಲಿಸಿದಂತೆ ಕಾಣುವುದಿಲ್ಲ. ಆಶ್ರಮ ಬಿಟ್ಟುಹೋಗಲು ನಿರ್ಧರಿಸುವುದು ಮತ್ತೆ ನಿರ್ಧಾರ ಬದಲಾಯಿಸುವುದು ಮಾಡುತ್ತಲೇ ಇರುತ್ತಾರೆ.
ಆಚಾರ್ಯ ರಜನೀಶ್, ಭಗವಾನ್ ಎಂದು ತಮ್ಮನ್ನು ತಾವೇ ಕರೆದುಕೊಂಡಿದ್ದು, ಮುಂಬೈಯಲ್ಲಿಯ ಸಣ್ಣ ಪ್ಲಾಟಿನಿಂದ ಆರಂಭವಾದ ಇವರ ಬದುಕು ಪುಣೆಯ ರಜನೀಶ್ ಆಶ್ರಮದವರೆಗೆ ಬಂದಿದ್ದು, ಅಲ್ಲಿನ ಅತ್ಯಂತ ಶ್ರೀಮಂತ ಬದುಕು, ಸ್ಥಳೀಯರ ತಿರಸ್ಕಾರಕ್ಕೆ ಇವರ ಪಂಥ ಒಳಗಾಗಿದ್ದು ಅಲ್ಲಿಂದ ಅಮೆರಿಕಾದ ಒರೆಗಾನ್ ಗೆ. ಅಲ್ಲಿಯೂ ಗಡಿಪಾರಿಗೆ ಮತ್ತೆ ಪುಣೆಗೆ ಬಂದು ನೆಲೆಸುವವವರೆಗಿನ ತನಕದ ಚಿತ್ರಣ ನೀಡುತ್ತಾರೆ. ಆದರೆ ಎಲ್ಲಿಯೂ ಇವರು ರಜನೀಶ್ ಮಾರ್ಗದ ಬಗ್ಗೆ ವಸ್ತುನಿಷ್ಠ ವಿಶ್ಲೇಷಣೆ ಮಾಡುವುದಿಲ್ಲ. ಬದಲಾಗಿ ಬಹುತೇಕರ ಮೇಲೆ ದೂರುಗಳ ಸುರಿಮಳೆಯನ್ನೇ ಸುರಿಸುತ್ತಾ ಸಾಗುತ್ತಾರೆ.
ರಜನೀಶರ “ಮುಕ್ತಕಾಮ ಸಿದ್ಧಾಂತ” ದ ಬಗ್ಗೆಯೂ ನಂಬಿಕೆ, ಅಪನಂಬಿಕೆಗಳ ನಡುವೆ ತೊಳಲಾಡುತ್ತಾ ಸಾಗುವ ಹ್ಯೂಮಿಲೇನ್ ಅದರ ಗರಿಷ್ಠ ಪ್ರಯೋಜನವನ್ನು ಲೌಕಿಕ ಮಟ್ಟದಲ್ಲಿ ಪಡೆಯುವುದರಿಂದ ತಪ್ಪಿಸಿಕೊಳ್ಳುವುದಿಲ್ಲ. ರಜನೀಶ್ ಅವರ ಶಕ್ತಿಯನ್ನು ಒಮ್ಮೆ ಹೊಗಳುವ ಮತ್ತೆ ಅಷ್ಟೇ ತೀವ್ರವಾಗಿ ಸಂಶಯಿಸುವ ಇವರದು ವಸ್ತುನಿಷ್ಠ ಬರವಣಿಗೆ ಎನ್ನಿಸದೇ ಪೂರ್ವಾಗ್ರಹಪೀಡಿತ ಎನಿಸುತ್ತದೆ. ರಜನೀಶ್ ಅವರನ್ನು ಮುಂಬೈಯಿಂದ ಪುಣೆ ಅಲ್ಲಿಂದ ಒರೆಗಾನ್ ತನಕ ಹಿಂಬಾಲಿಸುವ ಈತ ಈ ಹಾದಿಯುದ್ದಕ್ಕೂ ತನ್ನನ್ನು ತಾನೂ ಅರಿತುಕೊಳ್ಳದೇ ರಜನೀಶ್ ಅವರನ್ನೂ ಅರಿತುಕೊಳ್ಳದೇ ಬರೇ ದೂರುಗಳನ್ನೇ ದಾಖಲಿಸುತ್ತಾ ಸಾಗುತ್ತಾರೆ. ಇವರ ದೂರುಗಳ ಪಟ್ಟಿಯಲ್ಲಿ ರಜನೀಶರಿಗೆ ಆಪ್ತರಾಗಿದ್ದ ಲಕ್ಷ್ಮಿ, ಶೀಲಾ, ವಿವೇಕ್ ಮತ್ತಿತರರೆಲ್ಲ ಬರುತ್ತಾರೆ.
ರಜನೀಶ್ ಎಡವಿದರೆ ಅಥವಾ ಅವರ ಶಿಷ್ಯರು ಎಡವಿದರೆ, ರಜನೀಶ್ ಮಾತುಗಳಲ್ಲಿ, ಗ್ರಹಿಕೆಗಳಲ್ಲಿ, ಆತ ಪ್ರತಿಪಾದಿಸಿದ ತತ್ವಗಳಲ್ಲಿ ಸತ್ವ ಇಲ್ಲದಿದ್ದರೆ ಆ ಪರಿಯ ಅನುಯಾಯಿಗಳು ಏಕೆ ಇದ್ದರು ಎಂಬುದಕ್ಕೆ ಇವರು ಸೂಕ್ತ ಕಾರಣಗಳನ್ನು ನೀಡುವುದಿಲ್ಲ. ಬರೀ ಸುಖಿಸುವುದಕ್ಕೆ, ದೂರುವುದಕ್ಕೆ ಸೀಮಿತರಾಗಿಬಿಟ್ಟರು ಎನಿಸುತ್ತದೆ. ಇದರಿಂದಾಗಿ ಇವರು ಬರೆದ ಪುಸ್ತಕ ರಜನೀಶ್ ಬಗ್ಗೆಯಾಗಲಿ, ಅವರ ತತ್ವಗಳ ಬಗೆಯಾಗಲಿ ಒಳನೋಟಗಳನ್ನು ನೀಡುವುದಿಲ್ಲ.
ಹ್ಯೂಮಿಲೇನ್ ಅವರ ಪುಸ್ತಕವನ್ನು ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಅವರು “ರಜನೀಶ್ ನಿಜರೂಪ” ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಇದನ್ನು ಸಾಧನಾ ಪ್ರಕಾಶನದವರು 1994ರಲ್ಲಿಯೇ ಪ್ರಕಟಿಸಿದ್ದಾರೆ. ಇದಕ್ಕೂ ಮೊದಲು ಇದು ‘ಪ್ರಜಾವಾಣಿ’ ಪತ್ರಿಕೆಯ ‘ಸಾಪ್ತಾಹಿಕ ಪುರವಣಿ’ಯಲ್ಲಿ ಧಾರವಾಯಿಯಾಗಿ ಪ್ರಕಟಗೊಂಡಿದೆ. ಹೀಗೆ ಸರಣಿಯಲ್ಲಿ ಪ್ರಕಟಗೊಂಡ ಲೇಖನಗಳನ್ನು ಪುಸ್ತಕ ರೂಪಕ್ಕೆ ತರುವಾಗ ಮತ್ತೆ ತಿದ್ದಿತೀಡಬೇಕಾಗುತ್ತದೆ. ಆದರೆ ಈ ಯಾವ ಕೆಲಸವನ್ನೂ ಬಿ.ಆರ್. ಲಕ್ಷ್ಮಣರಾವ್ ಮಾಡಿಲ್ಲ. ಅಧ್ಯಾಯ, ಅಧ್ಯಾಯಗಳೇ ಪುನಃರಾವರ್ತಿತವಾಗಿವೆ. ಹೀಗೆ ಆದಾಗ ಓದುಗರಿಗೆ ಬೇಸರವಾಗುವುದು ಸಹಜ. ಇತ್ತೀಚೆಗಷ್ಟೆ ಈ ಪುಸ್ತಕ ಓದಿದೆ. ಆ ಕಾರಣದಿಂದ ಅದರ ಪರಿಚಯವನ್ನೂ ನಿಮ್ಮ ಮುಂದೆ ಇಟ್ಟೆ…
ರಜನೀಶನನ್ನು ಆ ಕಾಲದ ಮಾಧ್ಯಮಗಳು ಸರಿಯಾಗಿ ಗುರುತಿಸಲಿಲ್ಲವೇನೋ, ಆತನ ಬರಹಗಳನ್ನ ಓದಿದ್ದೇನೆ ಅಧ್ಭುತವಾಗಿವೆ, ಮತ್ತೊಮ್ಮೆ ಭಾರತೀಯ ಮನಸ್ಥಿತಿಯ ವ್ಯಕ್ತಿ ರಜನೀಶನನ್ನು ಸರಿಯಾಗಿ ಭಾರತೀಯರಿಗೆ ಪರಿಚಯಿಸಬೇಕಾಗಿದೆ.
ನಿಮ್ಮ ಅಭಿಪ್ರಾಯ ಸೂಕ್ತವಾಗಿದೆ. ಇದಕ್ಕೆ ಮಾಧ್ಯಮಗಳು ರಜನೀಶರನ್ನು ಸೆಕ್ಸ್ ಗುರು ಎಂದು ಪ್ರಚಾರ ಮಾಡಿದ್ದು ಕಾರಣವಿರಬಹುದು. ಅಪೂರ್ವ ಚಿಂತನೆಗಳಿದ್ದ ಈ ವ್ಯಕ್ತಿ ಬಹುತೇಕ ಭಾರತೀಯರಿಗೆ ಇನ್ನೂ ಪರಿಚಿತವಾಗಿಲ್ಲ.