ಮುಖ್ಯಮಂತ್ರಿ ವಿಜಯ್ ನೋಡಿ ಸಿಎಂ ಸಿದ್ದರಾಮಯ್ಯ ಪಾಠ ಕಲಿಯಬೇಕಾಗಿದೆ ಅಲ್ಲವೇ ?
ಕಾಂಗ್ರೆಸ್ ಸರ್ಕಾರ ಮದ್ಯದ ಮೇಲೆ ಅತ್ಯಧಿಕ ತೆರಿಗೆ ವಿಧಿಸುತ್ತಿದೆ. ಎಗ್ಗಿಲ್ಲದೇ ಹೊಸಹೊಸ ಮದ್ಯದಂಗಡಿ ತೆರೆಯಲು ಲೈಸನ್ಸ್ ನೀಡುತ್ತಿದೆ. ಮೇ 11ರ ರಾತ್ರಿಯಿಂದಲೇ ಕರ್ನಾಟಕದಲ್ಲಿ ಹೊಸ ಅಬಕಾರಿ ನೀತಿ ಜಾರಿಗೆ ಬಂದಿದೆ. ಆದರೆ ತಮಿಳುನಾಡಿನಲ್ಲಿ ವ್ಯತಿರಿಕ್ತ ಬೆಳವಣಿಗೆಯಾಗಿದೆ. ನಿಮ್ಮ ಮುಂದೆ ವಿವರವಿದೆ.
ತಮಿಳುನಾಡು ಮುಖ್ಯಮಂತ್ರಿ ದಳಪತಿ ಜೋಸೆಫ್ ವಿಜಯ್ ಅವರು ಅಧಿಕಾರ ವಹಿಸಿಕೊಂಡ ಆರಂಭದಿಂದಲೇ ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದೆಲ್ಲವೂ ಜನತೆಯ ಅದರಲ್ಲಿಯೂ ಆರ್ಥಿಕ ದುರ್ಬಲರ ಹಿತದೃಷ್ಟಿಯಿಂದ ಬಹು ಮುಖ್ಯವಾದ ನಿರ್ಧಾರಗಳು ಎಂಬುದು ಗಮನಾರ್ಹ
ಪ್ರಸ್ತುತ ರಾಜ್ಯದಾದ್ಯಂತ ಶಿಕ್ಷಣ ಸಂಸ್ಥೆಗಳು ಮತ್ತು ದೇವಾಲಯಗಳಿಂದ 500 ಮೀಟರ್ ಒಳಗಿರುವ (ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೊರೇಷನ್ – TASMAC ಅಧೀನದ 717 ರಷ್ಟು ಮದ್ಯದ ಅಂಗಡಿಗಳನ್ನು ಎರಡು ವಾರಗಳೊಳಗೆ ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ.
ಇದಕ್ಕೆ ಗಮನಾರ್ಹ ಕಾರಣಗಳೂ ಇವೆ. ದೇವಾಲಯಗಳಿಂದ 500 ಮೀಟರ್ ಒಳಗೆ ಇರುವ 276 ಮದ್ಯ ಮಾರಾಟದ ಅಂಗಡಿಗಳು, ಶಿಕ್ಷಣ ಸಂಸ್ಥೆಗಳ ಸಮೀಪ ಇರುವ 186 ಮದ್ಯದ ಅಂಗಡಿಗಳು, ಬಸ್ ನಿಲ್ದಾಣಗಳ ಸನಿಹ ಇರುವ 255 ಅಂಗಡಿಗಳು. ಇದರಿಂದ ತಮಿಳುನಾಡು ರಾಜ್ಯದಲ್ಲಿರುವ ಓಟ್ಟು ಮದ್ಯದಂಗಡಿಗಳಲ್ಲಿ ಶೇಕಡ 15 ರಷ್ಟು (4,765 TASMAC ಅಧೀನದ ಮದ್ಯದ ಅಂಗಡಿಗಳಿವೆ) ಅಂಗಡಿಗಳು ಮುಚ್ಚಲ್ಪಡುತ್ತವೆ.
ಈ ಮದ್ಯದ ಅಂಗಡಿಗಳ ಮುಚ್ಚುವಿಕೆಯು ದಳಪತಿ ವಿಜಯ್ ಅವರ ಸಾಮಾಜಿಕ ಕಾಳಜಿಯನ್ನು ಬಿಂಬಿಸುತ್ತದೆ. ಶಿಕ್ಷಣ ಸಂಸ್ಥೆಗಳ ಸಮೀಪ ಮದ್ಯದ ಅಂಗಡಿಗಳಿದ್ದರೆ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಬಹುದು. ಈ ಆತಂಕವನ್ನು ಈ ಆದೇಶ ನಿವಾರಿಸುತ್ತದೆ. ದೇವಾಲಯಗಳ ಸುತ್ತಲೂ ಇರುವ ಮದ್ಯದಂಗಡಿಗಳನ್ನು ಮುಚ್ಚಿಸುವುದು ಧಾರ್ಮಿಕ ಭಾವನೆಗಳನ್ನು ಗೌರವಿಸುವ ಕಾರ್ಯ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ನಿರ್ಧಾರಕ್ಕೆ ಬೆಂಬಲವೇ ಹೆಚ್ಚಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಯುವಕರು ಭಾರೀ ಬೆಂಬಲ ನೀಡುತ್ತಿದ್ದಾರೆ. ಹೀಗೆ ಮಾಡುವುದರಿಂದ ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಮದ್ಯಪಾನ ಕಡಿಮೆಯಾಗುವ ಸಾಧ್ಯತೆ ಇರುತ್ತದೆ, ಕುಟುಂಬಗಳಲ್ಲಿ ಸಾಮಾಜಿಕ ಸಮಸ್ಯೆಗಳು ಕಡಿಮೆಯಾಗುತ್ತವೆ. ವಿಶೇಷವಾಗಿ ಮಹಿಳೆಯರ ಭದ್ರತೆ ಹೆಚ್ಚಳವಾಗುತ್ತದೆ. ಮದ್ಯಪಾನ ಸಂಬಂಧಿತ ರಸ್ತೆ ಅಪಘಾತಗಳು ಕಡಿಮೆಯಾಗುತ್ತವೆ.
ಇಂಥ ಆದೇಶದಿಂದ ರಾಜ್ಯಕ್ಕೆ ಅಬಕಾರಿ ಬಾಬ್ತಿನಿಂದ ಬರುವ ಆದಾಯದ ನಷ್ಟವಾಗುತ್ತದೆ (TASMAC ತಮಿಳುನಾಡು ರಾಜ್ಯದ ದೊಡ್ಡ ಆದಾಯ ಮೂಲಗಳಲ್ಲಿ ಒಂದು), ಮದ್ಯದಂಗಡಿಗಳಲ್ಲಿ ಕೆಲಸ ಮಾಡುವವರಿಗೆ ಉದ್ಯೋಗ ನಷ್ಟವಾಗುತ್ತದೆ, ಕಪ್ಪು ಮಾರುಕಟ್ಟೆಯ ಸಾಧ್ಯತೆ ಇರುತ್ತದೆ ಎಂಬುದನ್ನು ವಿಜಯ್ ಗಮನಿಸಿದ್ದರೂ ಜನತೆ ಹಿತದೃಷ್ಟಿಯಿಂದ ಅವುಗಳನ್ನು ಕಡೆಗಾಣಿಸಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ ಮಾಡಿದ ಆದೇಶಗಳಾದ ಮಹಿಳಾ ಸುರಕ್ಷತಾ ಪಡೆ ಮತ್ತು ನಾರ್ಕೋಟಿಕ್ಸ್ ವಿರೋಧಿ ಘಟಕ ಸ್ಥಾಪನೆಯಿಂದ ಬ್ಲಾಕ್ ಮಾರುಕಟ್ಟೆ, ಕಳ್ಳಭಟ್ಟಿ ಹಾವಳಿ ತಡೆಯಬಹುದು ಎಂದು ಭಾವಿಸಿದ್ದಾರೆ.
ದಳಪತಿ ವಿಜಯ್ ನೇತೃತ್ವದ ಟಿವಿಕೆ ಜನತೆಗೆ ಅಪಾರ ಭರವಸೆ ನೀಡಿದೆ. ಇದನ್ನು ಈಡೇರಿಸಲು ಅಪಾರ ಹಣ ಬೇಕಾಗುತ್ತದೆ. ಹೀಗಿರುವಾಗ ರಾಜ್ಯ ಸರ್ಕಾರದ ಆದಾಯದ ಪ್ರಮುಖ ಮೂಲಗಳಲ್ಲಿ ಒಂದಾದ ಅಬಕಾರಿ ತೆರಿಗೆಯಲ್ಲಿ ನಷ್ಟವಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಸಮಾಜವಾದಿ ಎಂದು ಹೇಳಿಕೊಳ್ಳುವ, ಕರ್ನಾಟಕದಲ್ಲಿ ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಮಾಡುತ್ತಿರುವುದಾದರೂ ಏನು ?
