ಬಿಜೆಪಿಯಿಂದ ಹೆಚ್ಚುಮಂದಿ ಶಾಸಕರು ಆರಿಸಿಬಂದಿದ್ದಾರೆ. ಆದರೂ ಕಾಂಗ್ರೆಸ್ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್, ಯಡಿಯೂರಪ್ಪ ಮತ್ತಿತರ ಬಿಜೆಪಿ ನಾಯಕರು ಹೇಳಿದ್ದಾರೆ. ಇವರ ಮಾತು ಕೇಳಿದರೆ ವಿಚಿತ್ರವೆನ್ನಿಸುತ್ತದೆ. ಏಕೆಂದರೆ ಹಿಂಬಾಗಿಲಿನಿಂದ ಅಧಿಕಾರಕ್ಕೇರುವುದರಲ್ಲಿ ನಿಪುಣ ಪಕ್ಷ ಎಂಬುದನ್ನು ಬಿಜೆಪಿ ಈಗಾಗಲೇ ಸಾಬೀತುಪಡಿಸಿದೆ.
ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಆರ್.ಜೆ.ಡಿ. 80 ಸ್ಥಾನ, ಜೆಡಿಯು 71 ಸ್ಥಾನ ಗಳಿಸಿದ್ದವು. ಬಿಜೆಪಿ ತೆಗೆದುಕೊಂಡಿದ್ದು ಕೇವಲ 53 ಸ್ಥಾನ. ಬಹುಮತ ಇದ್ದಿದ್ದು ಲಾಲೂ ಪ್ರಸಾದ್ ಯಾದವ್ ಅವರ ಆರ್.ಜೆ.ಡಿಗೆ. ಆದರೆ ಈಗ ಬಹುಮತದ ಮಂತ್ರ ಜಪಿಸುತ್ತಿರುವ ಬಿಜೆಪಿ ಆಗ ಜೆಡಿಯು ಹೈಜಾಕ್ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂತು.
ನಾಗಲ್ಯಾಂಡಿನಲ್ಲಿ ಎನ್.ಪಿ.ಎಫ್ 27, ಎನ್.ಡಿ.ಪಿ.ಪಿ. 17, ಬಿಜೆಪಿ 12 ಸ್ಥಾನ ಗಳಿಸಿತ್ತು. ಆದರೂ 27 ಸ್ಥಾನ ಪಡೆದ ಎನ್.ಪಿ.ಎಫ್ ಕಡೆಗಾಣಿಸಿದ ಬಿಜೆಪಿ ಎನ್.ಡಿ.ಪಿ.ಪಿ. ಜೊತೆ ಸರ್ಕಾರ ರಚಿಸಿತು. ಮೇಘಾಲಯದಲ್ಲಿಯೂ ಬಿಜೆಪಿ ಹೀಗೆ ಮಾಡಿದೆ. ಅಲ್ಲಿ ಕಾಂಗ್ರೆಸ್ 21 ಸ್ಥಾನ ಪಡೆದಿತ್ತು. ಆದರೂ ಕಡಿಮೆ ಸ್ಥಾನ ಪಡೆದಿದ್ದ ಬಿಜೆಪಿ ಎನ್.ಪಿ.ಎಫ್ ಜೊತೆ ಸೇರಿ ಸರ್ಕಾರ ರಚನೆ ಮಾಡಿತು. ಗೋವಾದಲ್ಲಿಯಂತೂ ಈ ವಿಷಯದಲ್ಲಿ ಬಿಜೆಪಿ ತಾನೀಗ ಪ್ರತಿಪಾದಿಸುತ್ತಿರುವ ಬಹುಮತಕ್ಕೆ ಬೆಲೆ ಕೊಡಿ ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿ ವರ್ತಿಸಿತು. ಅಲ್ಲಿ ಕಾಂಗ್ರೆಸ್ 17 ಸ್ಥಾನ ಪಡೆದಿದ್ದರೆ ಬಿಜೆಪಿ ಪಡೆದಿದ್ದು ಕೇವಲ 13. ಆದರೂ 3 ಸ್ಥಾನ ಪಡೆದಿದ್ದ ಎಂ.ಜಿ.ಪಿ. ಮತ್ತು ಮೂವರು ಪಕ್ಷೇತರರೊಂದಿಗೆ ಸರ್ಕಾರ ರಚಿಸಿತು. ಇದಕ್ಕೆ ಬಿಜೆಪಿ ನಾಯಕರು ತೋರಿದ ಅವಸರ ಅಪಾರ.
ಬೇರೆಬೇರೆ ರಾಜ್ಯಗಳಲ್ಲಿ ಬಹುಮತ ಸಿದ್ಧಾಂತ ಗಾಳಿಗೆ ತೂರಿದ ಬಿಜೆಪಿ ಈಗ ಕರ್ನಾಟಕದಲ್ಲಿ ಬಹುಮತದ ಮಂತ್ರ ಪಠಿಸುತ್ತಿದೆ. ಕಾಂಗ್ರೆಸ್ 78, ಜೆಡಿಎಸ್ 38 ಸ್ಥಾನ ಪಡೆದಿವೆ. ಇಬ್ಬರು ಪಕ್ಷೇತರರು ಕಾಂಗ್ರೆಸಿಗೆ ಬೆಂಬಲ ಸೂಚಿಸಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ ಬೇರೆಬೇರೆ ಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸುವುದು ಸಾಮಾನ್ಯ ಪ್ರಕ್ರಿಯೆ. ಇಂಥ ಸಂದರ್ಭಗಳಲ್ಲಿ ರಾಜ್ಯಪಾಲರು ಬಹುಮತ ಖಚಿತಪಡಿಸಿಕೊಂಡು ಸರ್ಕಾರ ರಚಿಸಲು ಆಹ್ವಾನಿಸುವುದು ಸಾಮಾನ್ಯ ಪ್ರಕ್ರಿಯೆ.
ಹಿಂದೆ ಕಡಿಮೆ ಸ್ಥಾನ ಪಡೆದಿದ್ದರೂ ಇತರ ಪಕ್ಷಗಳೊಂದಿಗೆ ಸೇರಿ ಬಿಜೆಪಿ ಸರ್ಕಾರ ರಚಿಸಲು ಆಯಾ ರಾಜ್ಯಗಳ ರಾಜ್ಯಪಾಲರು ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಿದ್ದೂ ಕರ್ನಾಟಕದ ರಾಜ್ಯಪಾಲ ವಾಜೂಬಾಯಿ ಪಟೇಲರು ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಕೋರಿದರೂ ಮೀನಮೀಷ ಎಣಿಸುತ್ತಿರುವುದು ಅನುಮಾನ ಮೂಡಿಸುತ್ತಿದೆ.
ಬಿಜೆಪಿ 2008ರಲ್ಲಿ ಆಪರೇಷನ್ ಕಮಲ ಮಾಡಿ ಜನಾದೇಶ ಗಾಳಿಗೆ ತೂರಿತ್ತು. ಅಕ್ರಮಗಳ ಹೆಬ್ಬಾಗಿಲನ್ನೇ ತೆರೆದಿತ್ತು. ಈಗಲೂ ಬಹುಮತದ ಸರ್ಕಾರ ರಚಿಸಲು ಅಗತ್ಯ ಬಲದ ಕೊರತೆ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಮತ್ತೆ ಸರ್ಕಾರ ರಚಿಸುವಂತೆ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ನೀಡಿದೆ. ಇದರಿಂದ ಈ ಪಕ್ಷ ಮತ್ತೆ ಆಪರೇಷನ್ ಕಮಲಕ್ಕೆ ಮುಂದಾಗುತ್ತದೆ ಎಂಬುದು ನಿಚ್ಚಳ.
ಮೇಘಾಲಯ, ಗೋವಾ ರಾಜ್ಯಗಳಲ್ಲಿ ಮಂದಗತಿ ಅನುಸರಿಸಿದ್ದ ಕಾಂಗ್ರೆಸ್ ಕರ್ನಾಟಕದಲ್ಲಿ ಎಚ್ಚತ್ತುಕೊಂಡಿದೆ. ಈ ಪಕ್ಷದ ವರಿಷ್ಠ ನಾಯಕರು ಫಲಿತಾಂಶ ಪ್ರಕಟವಾಗುತ್ತಿದಂತೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೊಂದಿಗೆ ಮಾತುಕಥೆ ನಡೆಸುವ ಮೂಲಕ ವೇಗದ ಹೆಜ್ಜೆ ಇಟ್ಟಿದ್ದಾರೆ. ಬಿಜೆಪಿ ಅನುಸರಿಸಬಹುದಾದ ವಾಮಮಾರ್ಗಗಳಿಗೆ ಈಗ ಈ ಎರಡೂ ಪಕ್ಷಗಳು ಹೇಗೆ ಉತ್ತರ ನೀಡಲಿವೇ ಎಂಬುದು ಕುತೂಹಲಕಾರಿ