ಬೆಳಗ್ಗೆ ಪೇಪರ್ ಕೈಗೆತ್ತಿಕೊಂಡ ಕೂಡಲೇ ” ಖಾತೆ ತೆರೆದ ಭಿನ್ನಮತದ ಕಿಡಿ” ಎಂಬ ಸುದ್ದಿ. ಇದು ಅಷ್ಟು ಸುಲಭಕ್ಕೆ ತಣ್ಣಗಾಗುವಂಥದ್ದಲ್ಲ. ವರಿಷ್ಠರು ಎಚ್ಚರಿಕೆ ಕೊಟ್ಟಾಗ ಬೂದಿ ಮುಚ್ಚಿದ ಕೆಂಡದ ಹಾಗೆ ಇರ್ತಾರಷ್ಟೆ.
ಇಂಥವರು ಪತ್ರಕರ್ತರು ಎದುರಾದ ಕೂಡಲೇ ಸದಾನಂದ ಗೌಡ್ರ ಹಾಗೆ ನಗೆಬೀರ್ತಾರೆ. ಹಾಗಂತ ನಗುವವರಿಗೆಲ್ಲ ಹಲ್ಲುಬೀರ ಅಂತ ಬಿರುದು ಕೊಡೊಕಾಗೋಲ್ಲ. ಅದೇನಿದ್ರೂ ಸಗೌ ಅವರಿಗೆ ಮೀಸಲು. ಏಕಂದ್ರೆ ಅವರಷ್ಟು ಸಹಜವಾಗಿ ನಗೊ ರಾಜಕಾರಣಿ ಅಪರೂಪ. ಆದ್ದರಿಂದಲೇ ಅವರಿಗೆ ಸದಾ ± ಆನಂದ = ಸದಾನಂದ ಎಂಬ ಹೆಸರು ಅನ್ವರ್ಥಕ ನಾಮವಾಗಿದೆ. ಆಲ್ ರೈಟ್ ಮುಂದಕ್ಕೊಗೋಣ…
ಅಸಮಾಧಾನ ಅನ್ನೋದು ಬೂದಿ ಮುಚ್ಚಿದ ಕೆಂಡದ ಹಾಗೆ. ಒಳಗೆ ನಿಗಿನಿಗಿ ಅಂತ ಉರಿತಿರುತ್ತೆ. ಸಚಿವರಾದವ್ರಿಗೆ ಸಿಟ್ಟು, ಸಚಿವ ಪದವಿ ಸಿಗದೇ ಇರೋರಿಗೂ ಸಿಟ್ಟು. ಇವರ ಕೋಪದ ಕಾವಿನ ಎದುರು ಪಕ್ಷದ ಪ್ರತಿಷ್ಠೆ ಆವಿಯಾಗುತ್ತಿದ್ದರೂ ಅವ್ರಿಗೆ ಅವ್ರವ್ರ ಪ್ರತಿಷ್ಠೆಯದೇ ಚಿಂತೆ.
ಏಕಂದ್ರೆ ಮನೆಗೋದ ಕೂಡಲೇ ಹೆಂಡ್ತಿ ” ನಿಮ್ ಮುಸುಡಿಗೆ ಒಂದ್ ಒಳ್ಳೆ ಖಾತೆ ತಗೊಳೋಕೆ ಆಗಲಿಲ್ವಲ್ರಿ” ಅಂತಾರೆ. ಹೊರಗೆ ಬಂದ್ರೆ ಕಾರ್ಯಕರ್ತರು ” ಏನಣ್ಣಾ ನಿನ್ನ ಟೂರಿಸ್ಟ್ ಗೈಡ್ (ಪ್ರವಾಸೋದ್ಯಮ ಸಚಿವ) ಮಾಡ್ಬುಟ್ಟವ್ರೆ. ನಿನ್ ರೇಂಜಿಗೆ ಗೃಹ ಸಚಿವ ಆಗಬೇಕಿತ್ತು” ಅಂತಾರಾ. ಇದರಿಂದ ಉರಿ ಕಿತ್ಕಂಡು ಸೀಟಿ ಊದಿದ ಹಾಗೆ ಆಗುತ್ತೆ. ಸೀಟಿಯನ್ನು ಉದಾಹರಣೆಗೆ ಹೇಳ್ದೆ. ಬಹುತೇಕ ಸಚಿವರ ಗೋಳೋ ಇದೇನೆ.
ಇವೆಲ್ಲ ನಿವಾರಿಸೋಕೆ ಒಂದ್ ಪ್ಲಾನ್ ಮಾಡಬಹುದು. ಜಿಲ್ಲೆಗಳಲ್ಲಿ ಪ್ರತಿ ಇಲಾಖೆಗೆ ಜಿಲ್ಲಾ ಮಟ್ಟದ ಅಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಇವ್ರ ಮೇಲೆ ಒಬ್ಬೊಬ್ಬ ಸಚಿವ್ರನ್ನ ನೇಮಿಸಿದ್ರೆ ಆಯ್ತು. ಚಿಕ್ಕಮಗಳೂರು ಜಿಲ್ಲಾ ಗೃಹ ಸಚಿವ, ಬೆಂಗಳೂರು ನಗರ ಜಿಲ್ಲಾ ಗೃಹ ಸಚಿವ, ಬೆಂಗಳೂರು ನಗರ ಜಿಲ್ಲಾ ಕಂದಾಯ ಸಚಿವ, ಬೆಳಗಾವಿ ಜಿಲ್ಲಾ ಗೃಹ ಸಚಿವ, ಬೀದರ್ ಜಿಲ್ಲಾ ಪ್ರವಾಸೋದ್ಯಮ ಸಚಿವ ಹೀಗೆ ಮಾಡ್ಬುಟ್ರೆ ಎಲ್ಲ ಶಾಸಕರನ್ನು ಮಂತ್ರಿ ಮಾಡಿದ ಹಾಗೆ ಆಗುತ್ತೆ.
ಅಧಿಕಾರ ಚಲಾವಣೆ ಮಾಡ್ಲಬೇಕು ಅಂತೇನಿಲ್ಲ ; ಒಂದೋ ಎರಡೋ ಕೆಂಪುದೀಪದ ಗೂಟದ ಕಾರು, ಒಂದಿಬ್ರು ಗನ್ ಮ್ಯಾನ್, ಮ್ಯಾಲ ಬೇಕೂಂದ್ರೆ ಒಂದು ಕ್ವಾಟರ್ಸ್ ಕೊಟ್ರೂ ಸಾಕು. ಭಿನ್ನಮತದ ಧ್ವನಿ ಗಣನೀಯವಾಗಿ ಶಮನವಾಗಬಹುದು. ಇದನ್ನು ಸಿಎಂ, ಹೈಕಮಾಂಡ್ ಟ್ರೈ ಮಾಡಬಹುದು.
ಇನ್ನೂ ಬೇಕು ಅಂದ್ರೆ ವಿರೋಧ ಪಕ್ಷದಲ್ಲಿದ್ದು ಒಳಗೊಳಗೆ ಸಪೋರ್ಟ್ ಮಾಡಿದ, ಮಾಡುವ ಶಾಸಕರನ್ನೂ ಕರೆದು ಕರೆದು ಪಕ್ಷಕ್ಕೆ ಸೇರಿಸಿಕೊಂಡು ಸಚಿವರನ್ನಾಗಿ ಮಾಡಬಹುದು. ಆಗ ಮುಖ್ಯಮಂತ್ರಿಗೂ, ಪಾರ್ಟಿ ಹೈ ಕಮಾಂಡಿಗೂ ತಲೆಬಿಸಿ ಇರೋಲ್ಲ … ನೀವು ಏನಂತೀರಾ
ವಿನಂತಿ ಸೂಚನೆ: ಇದು ನಾಲ್ಕು ವರ್ಷದ ಹಿಂದೆ ಬರೆದ ವಿಡಂಬನಾ ಲೇಖನ. ಭಿನ್ನಮತ ಅನ್ನೋದು ಸದಾ ಇರೋದ್ರಿಂದ ಈಗಲೂ ಪ್ರಸ್ತುತ.
– ಕುಮಾರ ರೈತ