ಕಾಸರಗೋಡಿನಲ್ಲಿ ಕನ್ನಡ – ತುಳು ಸ್ಥಳನಾಮಗಳ ಬದಲಾವಣೆ ಬಗ್ಗೆ ಆಕ್ರೋಶ ಉಂಟಾಗಿದೆ. ಇದರಿಂದ ಕೇರಳ ಸರಕಾರ ವಿಚಲಿತವಾಗಿದೆ. “ಕಾಸರಗೋಡಿನ ಹಳ್ಳಿಗಳ ಕನ್ನಡ ಹೆಸರುಗಳನ್ನು ಬದಲಿಸುವ ನಿರ್ಧಾರವನ್ನು ಕೇರಳ ಸರಕಾರ ಕೈಗೊಂಡಿಲ್ಲ” ಎಂದು ಅಲ್ಲಿನ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ. ಇನ್ನು ಮಂಜೇಶ್ವರದ ಕನ್ನಡ ಶಾಸಕ ಎಕೆಎಂ ಅಶ್ರಫ್ ಅವರಿಗೆ ಜಿಲ್ಲಾಧಿಕಾರಿ ನೀಡಿರುವ ಸಮಜಾಯಿಷಿ ಮುಂದಿದೆ.
“ಕಾಸರಗೋಡಿನ ಸ್ಥಳನಾಮ ಬದಲಾವಣೆ ಬಗ್ಗೆ ಕೇರಳ ಸರಕಾರ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಅಂತಹ ಯಾವುದೇ ಯೋಚನೆಯೂ ಸರಕಾರದ ಮುಂದಿಲ್ಲ. ಈ ನಡುವೆ ರೇಶನ್ ಕಾರ್ಡಿನಲ್ಲಿ ತಾಂತ್ರಿಕ ಕಾರಣದಿಂದ ಕೆಲವು ಹೆಸರುಗಳಲ್ಲಿ ಬದಲಾವಣೆ ಆಗಿರುವುದು ನಿಜ. ಆದರೆ ಇದು ತಾಂತ್ರಿಕ ಕಾರಣದಿಂರ ಉಂಟಾದ ದೋಷ”
ಎಂಥಾ ಜಾಣ ಉತ್ತರ ಗಮನಿಸಿ. ಬದಲಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಕನ್ನಡಿಗರು ಪ್ರತಿಭಟಿಸುತ್ತಿಲ್ಲ. ಬದಲಾಯಿಸಲಾಗಿದೆ ಎಂದು ಪ್ರತಿಭಟಿಸುತ್ತಿದ್ದೇವೆ. ಈಗಾಗಲೇ ಕೇರಳ ಸರಕಾರದ ಗೆಜೆಟ್ ನೋಟಿಫಿಕೇಶನ್ ನಲ್ಲಿ ಮಂಜೇಶ್ವರ – ಮಂಜೇಶ್ವರಂ ಆಗಿದೆ.ಯಾವುದೇ ಸುತ್ತೋಲೆ ಹೊರಡಿಸದೇ ಹಲವು ಗ್ರಾಮಗಳ ಸ್ಥಳನಾಮಗಳು ಸರಕಾರಿ ದಾಖಲೆ – ಪತ್ರ ವ್ಯವಹಾರಗಳಲ್ಲಿ ಮಲೆಯಾಳೀಕರಣಗೊಂಡಿವೆ.
ತಾಂತ್ರಿಕ ದೋಷದಿಂದ ಕೆಲವು ಗ್ರಾಮಗಳ ಹೆಸರು ಬದಲಾವಣೆಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಹಾಗಿದ್ದರೆ ಅದನ್ನು ಸರಿಪಡಿಸಲು ಎಷ್ಟು ದಿನ ಬೇಕು. ಕಾಂಗ್ರೆಸ್ಸಿನ ಉಮ್ಮನ್ ಚಾಂಡಿ ಅವರ ನೇತೃತ್ವದ ಸರಕಾರವಿದ್ದಾಗ ಸ್ಥಳೀಯರು ಈ ಬಗ್ಗೆ ಮನವಿ ಸಲ್ಲಿಸಿದ್ದರು. ಪಿಣರಾಯಿ ವಿಜಯನ್ ಸರಕಾರ ಎರಡನೇ ಬಾರಿಗೆ ಗೆದ್ದು ಬಂದಿದೆ. ಅಂದರೆ ಎಷ್ಟೊಂದು ವರ್ಷಗಳಾಯಿತು. ಇನ್ನೂ ಏಕೆ ಸರಿಪಡಿಸಿಲ್ಲ.
ಗ್ರಾಮ ಪಂಚಾಯತ್ ಕಚೇರಿಗಳಿಂದ ಆರಂಭಿಸಿ ಜಿಲ್ಲಾ ಪಂಚಾಯತ್, ಹೋಬಳಿಮಟ್ಟದ ಕಂದಾಯ ಇಲಾಖೆ ಕಚೇರಿಯಿಂದ ಆರಂಭಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಕಡತ, ಪತ್ರ ವ್ಯವಹಾರಗಳೆಲ್ಲೆಲ್ಲ ಮಲೆಯಾಳೀಕರಣಗೊಂಡ ಸ್ಥಳನಾಮಗಳು ಇರುವುದು ಸುಳ್ಳೆ ?
ಮೈರೆ – ಶೇಣಿ, ಕುಂಬಳೆ – ಕುಂಬಳ, ಕೊರತ್ತಿ ಗುಳಿ -ಕೊರತ್ತಿ ಕುಂಡು, ಬದಿಯಡ್ಕ- ಬದಿಯಡುಕ್ಕ, ಪಿಲಿಕುಂಜೆ – ಪಿಲಿಕುನ್ನು, ಪಳ್ಳ – ಪಳ್ಳಂ, ಕಾರಡ್ಕ – ಕಾಡಗಂ, ಬೇಡಡ್ಕ – ಬೇಡಗಂ ಆಗಿರುವುದೆಲ್ಲ ಸುಳ್ಳೆ ? ಇವೆಲ್ಲ ಕೆಲವೇ ಉದಾಹರಣೆ ಮಾತ್ರ. ಹೀಗೆ ಬದಲಾಗಿರುವುದು ಸಾಕಷ್ಟಿದೆ. ಇಷ್ಟೇ ಅಲ್ಲ, ಕಾಡಗಂ ಸರ್ವೀಸ್ ಕೋ ಆಪರೇಟಿವ್ ಬ್ಯಾಂಕ್, ಬೇಡಗಂ ಪೊಲೀಸ್ ಸ್ಟೇಶನ್ ಹೀಗೆ ನಾಮಫಲಕಗಳೇ ಇವೆ. ಕಾರಡ್ಕ, ಬೇಡಡ್ಕ ಅಧಿಕೃತವಾಗಿ ಉಳಿದಿದ್ದರೆ ಕನಿಷ್ಠಪಕ್ಷ ನಾಮಫಲಕಗಳಲ್ಲಾದರೂ ಆ ಹೆಸರುಗಳನ್ನು ಉಳಿಸಬೇಕಿತ್ತಲ್ಲವೆ?
ಸ್ಥಳನಾಮಗಳು ಬದಲಾಗಿಲ್ಲ ಎಂದಮೇಲೆ ಸರ್ಕಾರಿ ಕಚೇರಿಗಳು, ಅವುಗಳ ಪತ್ರ ವ್ಯವಹಾರಗಳಲ್ಲಿ ಮೂಲ ಹೆಸರುಗಳು ಹೇಗೆ ಮಲೆಯಾಳೀಕರಣಗೊಂಡು ಬಳಕೆಯಾಗುತ್ತಿವೆ ? ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ವೆಬ್ ಸೈಟ್ kasrgod.nic.in ಎಂದಿದೆ. ಇದು ಹೇಗಾಯ್ತು. ಯಾರ ಅನುಮತಿ ಪಡೆದು ಅವರು a ತೆಗೆದರು ? ಈ ಜಾಲತಾಣದಲ್ಲಿಯೂ ಗ್ರಾಮಗಳ ಸ್ಥಳನಾಮಗಳು ಮಲೆಯಾಳೀಕರಣಗೊಂಡಿವೆ. ಹೋಬಳಿ ಹಂತದ, ತಾಲ್ಲೂಕು ಹಂತದ ಕಂದಾಯ ಕಚೇರಿಗಳಿಂದ ಬರುವ ಪತ್ರಗಳಲ್ಲಿ ಇರುವ ಮಲೆಯಾಳೀಕರಣಗೊಂಡ ಸ್ಥಳನಾಮಗಳು ಗಮನಕ್ಕೆ ಬಂದಿಲ್ಲವೆಂದರೆ ನಂಬುವ ಮಾತೇ ?
ಕಾಸರಗೋಡು ಜಿಲ್ಲೆಯ ಗ್ರಾಮ ಹಂತದ ಸರಕಾರಿ ಕಚೇರಿಗಳಿಂದ ಆನ್ ಲೈನ್ ಮೂಲಕ ನೀಡುವ ಪ್ರಮಾಣಪತ್ರಗಳಲ್ಲಿಯೂ ಮಲೆಯಾಳೀಕರಣಗೊಂಡ ಸ್ಥಳನಾಮಗಳೇ ಮೆರೆಯುತ್ತಿವೆ. ಹೀಗಿ ಆಗಲು ಶುರು ಮಾಡಿ ಸಾಕಷ್ಟು ವರ್ಷಗಳೇ ಸಂದಿದ್ದರೂ ಸರಿ ಮಾಡಲು ಆಗದ ಜಾಣ ಕುರುಡತನವೇಕೆ ?
ಕೇರಳದಲ್ಲಿನ ರಾಜ್ಯ ಹೆದ್ದಾರಿ ಬದಿಯ ಊರಿನ ನಾಮಫಲಕಗಳಲ್ಲಿ ಹೆಸರು ಬರೆಯುವ ಕೆಲಸವನ್ನು ಕಂಪ್ಯೂಟರ್ ಮಾಡುತ್ತದೆಯೇ ? ಇಲ್ಲ ತಾನೇ ಹಾಗಿದ್ದ ಮೇಲೆ ಅಲ್ಲಿನ ಹೆಸರುಗಳು ಹೇಗೆ ಮಲೆಯಾಳೀಕರಣಗೊಂಡವು ? ಈ ಲೇಖನದೊಂದಿಗೆ ಲಗತ್ತಿಸಿರುವ ಚಿತ್ರಗಳನ್ನು ನೋಡಿ. ಕೊರತ್ತಿಗುಳಿ – ಕೊರತ್ತಿ ಕುಂಡು, ಮಂಜೇಶ್ವರ – ಮಂಜೇಶ್ವರಂ ಆಗಿವೆ. ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಸ್ಥಳೀಯರು ಸಲ್ಲಿಸಿರುವ ಮನವಿ ಪತ್ರದ ಪೋಟೋಕಾಪಿಯನ್ನೂ ಲಗತ್ತಿಸಿದ್ದೇನೆ. ಗಮನಿಸಿ.ಹೀಗೆ ಎಷ್ಟೋ ಹೆಸರುಗಳು ಈಗಾಗಲೇ ಬದಲಾಗಿವೆ. ಇನ್ನು ಇದು ವದಂತಿ ಎಂಬ ಮಾತಿಗೆ ಅರ್ಥವೇನು? ಕನ್ನಡಿಗರ ಕಿವಿ ಮೇಲೆ ಹೂವಿಡುವ ಕೆಲಸ ಮಾಡಬೇಡಿ.