ಕರ್ನಾಟಕ ( Karnataka )ದ 16ನೇ ವಿಧಾನಸಭೆ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಅದು ಅಧಿಕೃತ ವಿರೋಧಪಕ್ಷ ( Official Opposition Party )ಕ್ಕೆ ನಾಯಕ ( Leader ) ನೇ ಇಲ್ಲದಿರುವುದು. ಈ ಹಿಂದೆ ಇಲ್ಲಿನ ವಿಧಾನಸಭೆ ಇಂಥ ಕ್ಷಣಗಳಿಗೆ ಸಾಕ್ಷಿಯಾಗಿರಲಿಲ್ಲ. ಬಹುಶಃ ದೇಶದ ಯಾವುದೇ ವಿಧಾನಸಭೆಯು ಶಾಸಕಾಂಗ ಪಕ್ಷದ ನಾಯಕನೇ ಇಲ್ಲದ ವಿರೋಧಪಕ್ಷವನ್ನು ಕಂಡಿರಲಿಲ್ಲ.
ಮೇ 13, 2023ಕ್ಕೆ ಕರ್ನಾಟಕ ವಿಧಾನಸಭೆಯ ಫಲಿತಾಂಶ ಬಂದಿದೆ. ಐದು ದಿನಗಳ ಒಳಗೆ 135 + 1 ಸ್ಥಾನ ಗಳಿಸಿದ ಕಾಂಗ್ರೆಸ್ (Congress) ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಿದೆ. 40 ದಿನಗಳು ಉರುಳಿದರೂ ಅಧಿಕೃತ ವಿರೋಧಪಕ್ಷ ಭಾರತೀಯ ಜನತಾ ಪಾರ್ಟಿ (BJP) ಇನ್ನೂ ತನ್ನ ಶಾಸಕಾಂಗದ ನಾಯಕನ ಆಯ್ಕೆ ನಡೆಸಿಲ್ಲ.ಇದೊಂದೇ ಅಂಶ ರಾಜ್ಯ ಬಿಜೆಪಿ ಘಟಕದ ಆಂತರಿಕ ತಳಮಳಗಳಿಗೆ ಸಾಕ್ಷಿ ನುಡಿಯುತ್ತದೆ.
ಕರ್ನಾಟಕದಲ್ಲಿ ಮೇಲ್ಮನೆ, ಕೆಳಮನೆ ಇವೆ. ವಿಧಾನಸಭೆ ಎಂದರೆ ಕೆಳಮನೆ. ಇಲ್ಲಿ ವಿರೋಧಪಕ್ಷದ ಅಧಿಕೃತ ಸ್ಥಾನ ಪಡೆಯಲು ಒಟ್ಟು ಸ್ಥಾನದ ಕನಿಷ್ಟ ಶೇಕಡ 10ರಷ್ಟು ಸ್ಥಾನವನ್ನಾದರೂ ಪಡೆದಿರಬೇಕು. ಸ್ಪಷ್ಟ ಬಹುಮತ ರಚನೆಗೆ ಬೇರೆಬೇರೆ ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡಿದಂತೆ ವಿರೋಧ ಪಕ್ಷಕ್ಕೂ ಮಾಡಲು ಆಗುವುದಿಲ್ಲ. ಇಂಥದ್ದೊಂದು ಸನ್ನಿವೇಶ ಕರ್ನಾಟಕ ವಿಧಾನಸಭೆಯಲ್ಲಿ ಸೃಷ್ಟಿಯಾಗಿಲ್ಲ.
ಇಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆದಿದೆ. ಆದರೂ ಶಾಸಕಾಂಗದ ನಾಯಕನ ಆಯ್ಕೆ ಏಕೆ ನಡೆದಿಲ್ಲ. ಚುನಾವಣಾ ಫಲಿತಾಂಶ ಬಂದ ನಂತರ ಅಲ್ಲಿನ ಹಲವು ನಾಯಕರು ಒಬ್ಬೊಬ್ಬರಾಗಿ ಮಾತನಾಡಲು ಶುರು ಮಾಡಿದ್ದಾರೆ. ಪಕ್ಷ ಸೋಲಿಗೆ ತಮ್ಮತಮ್ಮದೇ ಕಾರಣ, ವಿಶ್ಲೇಷಣೆ ಮುಂದಿಡುತ್ತಿದ್ದಾರೆ.
ಈ ಭಿನ್ನಮತದ ಶಮನಕ್ಕೂ ಅಲ್ಲಿ ಪ್ರಯತ್ನಗಳು ಆಗಿವೆ. ಆದರೆ ಯಶಸ್ಸಂತೂ ಆಗಿಲ್ಲ. ನೋಟೀಸ್ ಕೊಟ್ಟರೂ ಅಂಜುವುದಿಲ್ಲ ಎಂಬ ಹೇಳಿಕೆಗಳು ಬಂದಿವೆ. ಇವೆಲ್ಲದರ ನಡುವೆ ಶಾಸಕಾಂಗ ಘಟಕದ ನಾಯಕನ ಆಯ್ಕೆಗೆ ತೀವ್ರ ಕಸರತ್ತು ನಡೆದಿದೆ.
ಇವೆಲ್ಲ ಬಿಜೆಪಿಯ ಆಂತರಿಕ ವಿದ್ಯಮಾನ. ಆದರೆ ವಿಪಕ್ಷ ನಾಯಕನ ಸ್ಥಾನವನ್ನು ವಿಧಾನಸಭೆ ಕಲಾಪ ಶುರುವಾದಗಲೂ ಶೂನ್ಯವಾಗಿಡುವುದು ಆಂತರಿಕ ವಿದ್ಯಮಾನ ಎನಿಸಿಕೊಳ್ಳುವುದಿಲ್ಲ. ಇದು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಸಂಬಂಧಿಸಿದ ವಿಷಯ. ನಾಳೆ ಮಾಡೋಣ ಬಿಡಿ, ನಾಳಿದ್ದು ಮಾಡೋಣ ಬಿಡಿ ಎನ್ನಲು ಆಗುವುದಿಲ್ಲ. ವಿಧಾನಸಭೆ ಕಲಾಪ ಆರಂಭಕ್ಕೂ ಬಹು ಮುಂಚಿತವಾಗಿ ವಿರೋಧಪಕ್ಷದ ನಾಯಕ ಸ್ಥಾನ ಭರ್ತಿಯಾಗಿರಬೇಕು. ಪ್ರಜಾಪ್ರಭುತ್ವದಲ್ಲಿ ವಿಧಾನಸಭೆ ನಾಯಕ ಸ್ಥಾನಕ್ಕೆ ಭಾರಿ ಘನತೆಯಿದೆ. ಸರ್ಕಾರ ಕೂಡ ವಿಶೇಷ ಮರ್ಯಾದೆ ನೀಡುತ್ತದೆ. ನೀಡಲೇಬೇಕು. ಇದರಲ್ಲಿ ಎರಡು ಮಾತಿಲ್ಲ.
ವಿಧಾನಸಭೆಯಲ್ಲಿ ಯಾವಯಾವ ವಿಷಯಗಳ ಬಗ್ಗೆ ಧ್ವನಿಯೆತ್ತಬೇಕು ; ಪಕ್ಷದ ಯಾವಯಾವ ಶಾಸಕರು ಯಾವಯಾವ ವಿಷಯಗಳನ್ನು ಎತ್ತಬೇಕು, ಯಾವರೀತಿ ಆಳುವ ಪಕ್ಷವನ್ನು, ಸರ್ಕಾರವನ್ನು ಇಕ್ಕಟ್ಟಿಗೆ, ಮುಜುಗರಕ್ಕೆ ಸಿಲುಕಿಸಬೇಕು ಎಂಬುದನ್ನೆಲ್ಲ ವಿಪಕ್ಷ ನಾಯಕರು ನಿರ್ಧರಿಸುತ್ತಾರೆ. ಇದಕ್ಕಾಗಿ ಸತತ ಹೋಮ್ ವರ್ಕ್ ನಡೆಯುತ್ತದೆ. ಈ ಬಾರಿ ಬಿಜೆಪಿ ಶಾಸಕಾಂಗ ಘಟಕದಲ್ಲಿ ಅಂಥ ಹೋಮ್ ವರ್ಕ್ ನಡೆದಂತೆ ಕಾಣುವುದಿಲ್ಲ.
ಶಾಸಕಾಂಗ ಘಟಕಕ್ಕೆ ನಾಯಕನೇ ಇಲ್ಲದೇ ಇರುವ ವಿರೋಧ ಪಕ್ಷ, ವಿಧಾನಸಭೆ ಕಲಾಪದಲ್ಲಿ ಪಾಳ್ಗೊಳ್ಳುವುದು ಜನತೆ ಮೇಲೂ ತನ್ನದೇ ಆದ ಪರಿಣಾಮಗಳನ್ನು ಬೀರುತ್ತದೆ. ಇದರಲ್ಲಿ ಸಂದೇಹವಿಲ್ಲ. ಏಕೆಂದರೆ ವಿರೋಧ ಪಕ್ಷದ ನಾಯಕ ಎಂದರೆ ಸಾರ್ವಜನಿಕ ಅಭಿಪ್ರಾಯವನ್ನು ಸಮರ್ಥವಾಗಿ ಸದನದಲ್ಲಿ ಮಂಡಿಸುವವರು. ಆ ಸ್ಥಾನವೇ ಪ್ರಸ್ತುತ ಶೂನ್ಯವಾಗಿದೆಯೆಂದರೆ ಇನ್ನು ಅಭಿವ್ಯಕ್ತಿ ಎಲ್ಲಿ ?