ನಮ್ಮದು ಶೈವ ಮನೆತನ ಅಂದರೆ ಶಿವನ ಅರಾಧಕರು. ಆದರೆ ನನ್ನ ಅಕ್ಕ ಮತ್ತು ಅಣ್ಣ (ನಮ್ಮ ತಾಯಿತಂದೆಯನ್ನು ಹೀಗೆ ಕರೆಯೋದು) ವೈಷ್ಣವ ದೇವರ ಭಕ್ತರೂ ಹೌದು. ಇದರ ಪರಿಣಾಮವಾಗಿ ಅವರಿಗೆ ಸಮಯಾವಕಾಶ ಒದಗಿದಾಗಲೆಲ್ಲ ತಿರುಪತಿಗೆ ಹೋಗ್ತಾ ಇದ್ರು. ನಂದಿಯ ಹಿಂದೆ ಬಾಲದ ಹಾಗೆ ನಾನೂ. ಆಗ ಅಲ್ಲಿನ ಕೊಳಗಳಲ್ಲಿ ಸ್ನಾನ ಮಾಡಲು – ಈಜು ಹೊಡೆಯಲು ಅವಕಾಶ ಇತ್ತು. ಮೈಗೆ ಹಚ್ಚಿಕೊಳ್ಳುತ್ತಿದ್ದ ಮೈಸೂರು ಸ್ಯಾಂಡಲ್ ಸಾಬೂನು ಕೈಜಾರಿದಾಗ ಅಪ್ಪ ಮುಳುಗಿ ಮೇಲೆ ತಂದಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಬಹುಶಃ ನಾನಾಗ ಎರಡನೇ ಇಯತ್ತೆಯಲ್ಲಿದ್ದೆ ಅನ್ಸುತ್ತೆ…
ಧರ್ಮದರ್ಶನ, ಸ್ಪೆಷಲ್ ದರ್ಶನ ಎಂದು ಎರಡು ವಿಭಾಗಗಳು. ಯಾವಾಗಲೂ ಎರಡನೇಯ ಆಯ್ಕೆ. ಹೀಗೆ ಹೋದಾಗೊಮ್ಮೆ ನನ್ನ ಅಕ್ಕ ಮೈಮೈಲಿದ್ದ ಅಷ್ಟೂ ಚಿನ್ನಾಭರಣಗಳನ್ನ ಹಿಂದಿರುಗಿ ನೋಡದೇ ಹುಂಡಿಗೆ ಹಾಕಿದ್ದು ಆಗ ಸೋಜಿಗ ಎನಿಸಿರಲಿಲ್ಲ.
ಈ ಪೂಜೆ – ಪುನಸ್ಕಾರ ಎಲ್ಲ ದೊಡ್ಡವರ ಕಥೆ. ನನಗೆ ಪ್ರಸಾದತ್ತಲೇ ಯೋಚನೆ. ಆಗೆಲ್ಲ ಕರಿವಡೆ, ಖಾಲಿ ದೋಸೆ ಮಾದರಿಯ ದೋಸೆಯನ್ನು ಪ್ರಸಾದವಾಗಿ ಕೊಡ್ತಾ ಇದ್ರು. ನನಗೇನೂ ಅವು ರುಚಿ ಎನಿಸ್ತಿರಲಿಲ್ಲ. ದರ್ಶನದ ನಂತರ ಹಿಂದಿರುಗಿ ಬರುವಾಗ ಉಚಿತವಾಗಿ ಸಣ್ಣಸಣ್ಣ ಲಾಡುಗಳನ್ನು ಪ್ರಸಾದರೂಪದಲ್ಲಿ ಕೊಡ್ತಾ ಇದ್ರು.ಆವರಣ ದಾಟುವುದರೊಳಗೆ ಅದು ಖಾಲಿ…ಪ್ರಸಾದದ ದೊಡ್ಡ ಲಾಡುಗಳನ್ನು ತೆಗೆದುಕೊಳ್ಳುವುದಕ್ಕೆ ಲಿಮಿಟ್ ಇರಲಿಲ್ಲ.ಅವರವರು ಶಕ್ತ್ಯಾನುಸಾರ ಎಷ್ಟಿದ್ರೂ ತೆಗದುಕೊಳ್ಳಬಹುದಿತ್ತು.
ಆವರಣದ ಒಳಗಡೆಯೇ ಕೌಂಟರ್. ಹೊರಗೆ ದೊಡ್ಡಮೆಟ್ಟಿಲುಗಳ ಮೇಲೆ ಕುಳಿತರೆ ತಂದಿದ್ದ ಲಾಡುಗಳು ಕೈಗೆ ಬರುತ್ತಿದ್ದವು. ಪುಟ್ಟಪುಟ್ಟ ಹಸ್ತಗಳಲ್ಲಿ ಹಿಡಿಯಲಾರದಷ್ಟು ದೊಡ್ಡ ಗಾತ್ರದ್ದು. ಒಮ್ಮೆ ಅದರ ಸುವಾಸನೆ ಆಘ್ರಾಣಿಸಿ ಸವಿಯತೊಡಗುವುದೇ ತಪ್ಪಸಿನ ಹಾಗೆ. ಯಾವುದರತ್ತಲೂ ಗಮನವಿರುತ್ತಿರಲಿಲ್ಲ. ತುಸು ತಿಳಿವಳಿಕೆ ಬಂದ ನಂತರವೂ ನನಗೆ ದರ್ಶನ ನೆಪಮಾತ್ರ. ಲಾಡಿನತ್ತಲೆ ಗಮನ…
ಡಾ. ರಾಜ್ ಕುಮಾರ್ ದೆಶೆಯಿಂದ ಅಪ್ಪ, ಇದಕ್ಕಿದ್ದ ಹಾಗೆ ರಾಘವೇಂದ್ರನ ಭಕ್ತರೂ ಆಗ್ಬಿಟ್ರು. ಮಂತ್ರಾಲಯಕ್ಕೂ ಸಮಯಾವಕಾಶ ದೊರೆತಾಗೆಲ್ಲ ಜೊತೆಯಲಿ ನಮ್ಮನ್ನೆಲ್ಲ ಕರೆದುಕೊಂಡು ಹೋಗ್ತಿದ್ರು. ಬಾಲ್ಯದಲ್ಲಿನ ತುಂಗೆಯ ತಟ ಈಗಲೂ ಕಣ್ಮುಂದೆ ಬರುತ್ತದೆ. ಪ್ರಶಾಂತ, ಶುಭ್ರ, ಸ್ವಚ್ಛ – ಶುದ್ಧನೀರು. ಮಿಂದು ಬೃಂದಾವನದ ದರ್ಶನ ಮಾಡಿದ ನಂತರ ಕೈಗೆ ಬರುತ್ತಿದ್ದ ಪ್ರಸಾದ ರೂಪದ ಕೇಸರಿವರ್ಣದ ಮಿಠಾಯಿ. ಮೆಲ್ಲುತ್ತಾ ಕಣ್ಮುಚ್ಚಿ ಆನಂದಿಸುತ್ತಿದ್ದೆ. ಮನೆಗೆ ಬಂದನಂತರವೂ ಬಹುಶಃ ನಾನೇ ಇವೆರಡೂ ದೇಗುಲಗಳ ಪ್ರಸಾದವನ್ನು ಹೆಚ್ಚು ಮೆಲ್ಲುತ್ತಿದ್ದೆ…
ವಾಸ್ತುಶಿಲ್ಪದ ದೃಷ್ಟಿಯಿಂದ ವಿಶೇಷವಾಗಿರುವ ರಾಜ್ಯ, ಪರರಾಜ್ಯಗಳ ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ. ತಮಿಳುನಾಡಿನ ಸಾಕಷ್ಟು ದೇವಸ್ಥಾನಗಳಲ್ಲಿ ರುಚಿಕರವಾದ ಹಯಗ್ರಿವವನ್ನು ಸಣ್ಣ ದೊನ್ನೆಯಲ್ಲಿ ಪ್ರಸಾದರೂಪದಲ್ಲಿ ಉಚಿತವಾಗಿ ಕೊಡ್ತಾರೆ. ಉಚಿತವಾಗಿ ಕೊಡುವುದಾದರೂ ಇದರ ಗುಣಮಟ್ಟದ ವಿಷಯದಲ್ಲಿ ತಯಾರಕರು ರಾಜಿ ಮಾಡಿಕೊಂಡಿರುವುದಿಲ್ಲ. ಗುಣಮಟ್ಟದ ಉತ್ಪನ್ನಗಳನ್ನೇ ಬಳಸಿರುತ್ತಾರೆ.
Interesting and emotional write up.was nice to read.yes it has a very distinguished aroma and olden days laadus tasted better 🙁