ಕೃಷ್ಣೇಗೌಡರು ಗೋಕರ್ಣದಲ್ಲಿರುವ  ರೆಸಾರ್ಟ್ ಲೋಕೇಶನ್ ಮ್ಯಾಪ್ ವಾಟ್ಸಪ್ ಮಾಡಿದ್ದರು.. ಅಲ್ಲಿಗೆ ಹೋಗಿ ಬೈಕ್ ನಿಲ್ಲಿಸಿದಾಗ ಸಮಯ ಮಧ್ಯಾಹ್ನ 1.45 ಗಂಟೆ. ಇಲ್ಲೇ ಮೊದಲ ಅಚ್ಚರಿ ಕಾದಿತ್ತು. ಗೋಕರ್ಣಕ್ಕೆ ಪ್ರಾಥಮಿಕ ಶಾಲಾ ಹಂತದಿಂದಲೂ ಕೌಟುಂಬಿಕ ಪ್ರವಾಸ, ಶಾಲಾ ಪ್ರವಾಸಗಳು, ಕಾಲೇಜು ಪ್ರವಾಸ ಎಂದೆಲ್ಲ ಹೋಗಿದ್ದೇನೆ. ಅದರಲ್ಲಿಯೂ ಉದ್ಯೋಗಕ್ಕೆ ಸೇರಿದ ನಂತರ  ಇಲ್ಲಿಯ ಅಜ್ಞಾತ ಕಡಲಕಿನಾರೆಗಳಲ್ಲಿ ಅಕ್ಷರಶಃ ನೂರಾರು ಕಿಲೋ ಮೀಟರ್ ನಡೆದಿದ್ದೇನೆ.  ಹೀಗಾಗಿ ಈ ಹಿಂದೆ ಹೇಗಿತ್ತು ; ಈಗ ಹೇಗಿದೆ ಎಂಬುದೆಲ್ಲ ವಿವರವಾಗಿ ಗೊ್ತು !

ಬೀಚ್ ಸೈಡಿನಲ್ಲಿ ಹೆಜ್ಜೆಗೊಂದು ರೆಸಾರ್ಟು ಇಲ್ಲಿ ಸಿಗುತ್ತವೆ. ಹೆಚ್ಚಿನವು ಹೆಸರಿಗಷ್ಟೆ ರೆಸಾರ್ಟು. ಸ್ವಚ್ಛತೆ, ಶಾಂತತೆ ಮಾಯ. ದರಗಳು ಸಹ ಮಧ್ಯಮ ವರ್ಗದವರ ಕೈಗೆ ಎಟುಕದಷ್ಟು ದೂರ. ಜೊತೆಗೆ ವಾಹನವನ್ನು ಎಲ್ಲಿಯೋ ನಿಲ್ಲಿಸಿ ತೆರಳಬೇಕಾದಂಥವು ಸಾಕಷ್ಟು. ಹೀಗಾದಾಗ ದೇಹ ರೆಸಾರ್ಟಿನಲ್ಲಿ  ಮನಸು ವಾಹನದಲ್ಲಿ ಎನ್ನುವಂತಾಗಿ ನೆಮ್ಮದಿ ಕಳೆದು ಹೋಗುತ್ತದೆ. ಕೃಷ್ನೇಗೌರು ತಮ್ಮ ಸಹೋದರನ ಮಾಲಿಕತ್ವದ ರೆಸಾರ್ಟ್ ಬಗ್ಗೆ ಹೇಳಿದಾಗ ಇಂಥದ್ದೇ ಒಂದಿರಬೇಕು ಎಂಬ ಪೂರ್ವಾಗ್ರಹವಿತ್ತು

 

ರಾಷ್ಟ್ರೀಯ ಹೆದ್ದಾರಿ 66 ರಿಂದ ಪಿಕೆ ಬೀಚ್ ಸ್ಟೇ ರೆಸಾರ್ಟ್ ಹೆಬ್ಬಾಗಿಲ ತನಕ ಉತ್ತಮ ಸ್ಥಿತಿಯ ಕಾಂಕ್ರೀಟ್ ರಸ್ತೆಯಿದೆ. ರೆಸಾರ್ಟ್ ಒಳಗೆ ಅಡಿಯಿರಿಸುತ್ತಿದ್ದಂತೆ ಮೊದಲು ನನ್ನ ಗಮನಕ್ಕೆ ಬಂದಿದ್ದು ವಿಶಾಲವಾದ ಆವರಣದಲ್ಲಿರುವ ನಿಶಬ್ಧತೆ, ಸ್ವಚ್ಚತೆ.

ಒಳ ಹೋಗುತ್ತಿದ್ದಂತೆ ಅಲ್ಲಿಯ ಕಿಚನ್ ನಿರ್ವಹಣೆ ಮಾಡುವ ಬಸವರಾಜ್, ದೇವೇಂದ್ರೇಗೌಡ ಪರಿಚಯವಾದರು. ಒಳಗಿದ್ದ ಪ್ರವೀಣ್ ಕುಮಾರ್ ಅವರಿಗೆ ವಿಷಯ ತಿಳಿಸಿದರು. ಹಿಂದೊಮ್ಮೆ ಕೃಷ್ಣೇಗೌಡರ ಜೊತೆ ಇವರನ್ನು ಭೇಟಿಯಾಗಿದ್ದೆ.  ವಿವರವಾದ ಪರಿಚಯವೇನೂ ಆಗಿರಲಿಲ್ಲ. ಕಂಡವರೇ “ಊಟ ಆಯಿತೇ” ಎಂದು ಕೇಳಿದರು. ನನಗೇನೂ ಹಸಿವಾಗಿರಲಿಲ್ಲ. “ಕಾಫಿ ಸಾಕು” ಎಂದೆ. ಕೆಲವೇ ಕ್ಷಣಗಳಲ್ಲಿ ಟೇಬಲ್ ಮೇಲೆ ಹಬೆಯಾಡುವ ಫಿಲ್ಟರ್ ಕಾಫಿ ಬಂತು. ಮಟಮಟ ಮಧ್ಯಾಹ್ನ ಬಿಸಿಬಿಸಿ ಕಾಫಿ ಕುಡಿಯುವುದನ್ನು ಕಂಡು ಅಲ್ಲಿದ್ದವರಿಗೆ ಅಚ್ಚರಿ !. ಕಾಫಿ ಒಳ ಹೋಗುತ್ತಿದ್ದಂತೆ ಮತ್ತೆ ಎನರ್ಜಿ ಹೆಚ್ಚಾಯಿತು.

“ದೂರದಿಂದ ಬೈಕ್ ನಲ್ಲಿ ಬಂದಿದ್ದೀರಿ, ರೆಸ್ಟ್ ತೆಗೆದುಕೊಳ್ಳಿ” ಎಂದು ಪ್ರವೀಣ್ ಕುಮಾರ್ ಹೇಳಿದಾಗ “ಸದ್ಯ ಅದರ ಅವಶ್ಯಕತೆ ಇಲ್ಲ” ಎಂದೆ. “ಬನ್ನಿ ರೂಮುಗಳನ್ನು ತೋರಿಸುತ್ತೇನೆ” ಎಂದರು. ಹಿಂಬಾಲಿಸಿದೆ. “ವಾರಾಂತ್ಯ, ಸಾರ್ವತ್ರಿಕ ರಜಾದಿನಗಳು, ಶಾಲಾ ಕಾಲೇಜು ಬೇಸಿಗೆ ರಜೆ, ದಸರಾ ರಜೆಗಳಲ್ಲಿ ರೆಸಾರ್ಟ್ ವಾರಗಳಿಗೂ ಮುಂಚೆ ಬುಕ್ ಆಗಿರುತ್ತದೆ. ವಾರದ ದಿನಗಳಲ್ಲಿ ದೇಸಿಯರ ಸಂಖ್ಯೆಗಿಂತ ವಿದೇಶಿ ಪ್ರವಾಸಿಗರು ಹೆಚ್ಚಿರುತ್ತಾರೆ” ಎಂದರು.

ಇಲ್ಲಿ ವಿಶಾಲವಾದ ಹತ್ತು ರೂಮುಗಳಿವೆ. ಐದರಿಂದ ಹತ್ತು ಮಂದಿ ಆರಾಮವಾಗಿ ಇರುವಷ್ಟು ವಿಶಾಲ ಸುಸಜ್ಜಿತ ಕೊಠಡಿಗಳು, ಎಸಿ, ನಾನ್ ಎಸಿ ವ್ಯವಸ್ಥೆಯೂ ಇದೆ. ಆಯ್ಕೆ ಪ್ರವಾಸಿಗರದು. ಕೌಟುಂಬಿಕ ಪ್ರವಾಸ, ಚಾರಣಿಗರು, ಕಾರ್ಪೋರೆಟ್ ಮೀಟಿಂಗ್ ಗಳಿಗೆ ಹೇಳಿ ಮಾಡಿಸಿದ ತಾಣ. ಎಲ್ಲದಕ್ಕಿಂತ ಹೆಚ್ಚಾಗಿ ಗಮನ ಸೆಳೆದಿದ್ದು ಪ್ರತಿ ರೂಮಿಗೂ ಸುವಿಶಾಲ ಗಾಜಿನ ತೆರೆಗಳು. ಕರ್ಟನ್ ಸರಿಸಿದರೆ ಸುಮಾರು 30 ಹೆಜ್ಜೆ ಅಂತರದಲ್ಲಿ ಕಾಣುವ ಕಡಲು. ಬಿಸಿಲಿನ ದಿನಗಳಲ್ಲಿ ರೂಮಿನಲ್ಲೇ ಕುಳಿತೇ ಕಡಲನ್ನು ಕಣ್ತುಂಬಿಕೊಳ್ಳಬಹುದು !

ರೆಸಾರ್ಟ್ ಆವರಣದಲ್ಲಿ ತೆಂಗಿನ ಮರಗಳಿವೆ. ಅವುಗಳ ನೆರಳಿನಲ್ಲಿ ಟೆಂಟುಗಳನ್ನು ಹಾಕಿದ್ದಾರೆ. ಇಬ್ಬರಿಂದ 8 ಮಂದಿ ಇರಬಹುದಾದ ಬೇರೆಬೇರೆ ಅಳತೆಯ ಟೆಂಟುಗಳಿವೆ. ನಾನು ಪುಟ್ಟ ಟೆಂಟು ಆಯ್ಕೆ ಮಾಡಿಕೊಂಡೆ. ಆಗ ಪ್ರವೀಣ್ ಕುಮಾರ್ “ ಯಾವುದಾದರೊಂದು ರೂಮಿನಲ್ಲಿಯೇ ಇರಿ. ಎಸಿ ಇರುತ್ತದೆ” ಎಂದರು. “ನನಗೊಬ್ಬನಿಗೆ ಅಷ್ಟು ದೊಡ್ಡ ರೂಮ್ ಬೇಡ ; ಜೊತೆಗೆ ಎಸಿಯ ಅವಶ್ಯಕತೆ ಕೂಡ ಇಲ್ಲ. ನಾನೋರ್ವ ಸರಳ ಪ್ರವಾಸಿಗ” ಎಂದಾಗ ಅವರಿಂದ ಮುಗುಳ್ನಗುವಿನ ಪ್ರತಿಕ್ರಿಯೆ.

ಕಡಲಿಗೆ ರಂಗು ತಂದ ಸೂರ್ಯ

ಸಂಜೆ ಐದು ಕಳೆಯುತ್ತಿದ್ದಂತೆ ಸೂರ್ಯನ ತಾಪದ ಅಬ್ಬರ ಇಳಿಮುಖವಾಗು್ತ್ತದೆ. ಆವರಣದಲ್ಲಿರುವ ವಿಶಾಲ ಚಪ್ಪರಗಳಡಿ ಹಾಕಿರುವ ರೆಸ್ಟಿಂಗ್ ಚೇರ್ ಗಳಿವೆ. ಇಲ್ಲಿ ಕಾಲು ಚಾಚಿ ಕಡಲಿನಲ್ಲಿ ತೇಲುತ್ತಿರುವ ಬೋಟ್ ಗಳು, ಹಡಗುಗಳನ್ನು ನೋಡುತ್ತಾ ಕುಳಿತವನು ಚಡ್ಡಿ, ಟೀ ಶರ್ಟ್, ಕಾಲಿಗೆ ಹವಾಯ್ ಸ್ಲಿಪರ್  ಧರಿಸಿದೆ.  “ವಾಕಿಂಗ್ ಹೋಗಿ ಬರುತ್ತೇನೆ” ಎಂದು ಹೇಳಿ ಹೊರ ಬಿದ್ದೆ.

ಎರಡನೇಯ ಅಚ್ಚರಿ ಎಂದರೆ ಕಡಲ ಅಂಚಿನಲ್ಲಿ ನೀರಿನಲ್ಲಿ ಕಾಲು ತೋಯಿಸಿಕೊಳ್ಳುತ್ತಾ ಬರೀಗಾಲಿನಲ್ಲಿ ನಡೆದವನಿಗೆ ಸುಮಾರು ಎರಡು ಕಿಲೋ ಮೀಟರ್ ತನಕ ವಾಕಿಂಗ್ ಹೊರಟ ಅಲ್ಲೊಬ್ಬರು ಇಲ್ಲೊಬ್ಬರು ಪ್ರವಾಸಿಗರು ಕಂಡರು. ಆಗ “ಪಿಕೆ ಬೀಚ್ ಸ್ಟೇ” ಕಡಲಿನ ಮುಂದೆ ಕಳೆದು ಹೋಗಿ ಪ್ರಶಾಂತತೆ ಅನುಭವಿಸಬೇಕು ಎನ್ನುವವರಿಗೆ ಸೂಕ್ತತಾಣ ಎನ್ನುವುದು ಮನದಟ್ಟಾಯಿತು. ಇಂಥ ಅಪರೂಪದ ತಂಗುದಾಣಕ್ಕೆ ಬಂದಿದ್ದಕ್ಕೆ ಖುಷಿಯೂ ಆಯಿತು.

ರೆಸಾರ್ಟ್ ನಿಂದ ಎರಡು ಕಿಲೋ ಮೀಟರ್ ಮುಂದೆ ಗೋಕರ್ಣ ಪಟ್ಟಣ.  ದೇಗುಲ ಸಮೀಪದ ಕಡಲ ಕಿನಾರೆಯಲ್ಲಿ ಜನಜಾತ್ರೆ.  ಸಮೀಪದಲ್ಲಿ ದೇವಸ್ಥಾನವಿದೆ. ಭಕ್ತರು, ಪ್ರವಾಸಿಗರು ಸಹಜವಾಗಿ ಇಲ್ಲಿಗೆ ಬರುತ್ತಾರೆ. ಆದ್ದರಿಂದ ಇಲ್ಲಿ ಪ್ರವಾಸಿಗರನ್ನು ಒಂಟೆ, ಕುದುರೆ್ಗಳ ಮೇಲೆ ಕರೆದುಕೊಂಡು ಹೋಗುವವರು, ಬಟ್ಟೆಬರೆ, ಮಕ್ಕಳ ಆಟಿಕೆಗಳನ್ನು ಮಾರುವವರು, ಬೋಟಿಂಗ್ ಕರೆದುಕೊಂಡು ಹೋಗುವವರು ಕೇಂದ್ರೀಕೃತಗೊಂಡಿದ್ದಾರೆ. ಈ ಚಟುವಟಿಕೆಗಳೆಲ್ಲ ಅರ್ಥ ಕಿಲೋ ಮೀಟರ್ ಒಳಗೆ ಸೀಮಿತಗೊಂಡಿವೆ.

ದೇಗುಲ ಸಮೀಪ ರುದ್ರಾಕ್ಷಿಗಳನ್ನು ಮಾರುವ ಸಾಲುಸಾಲು ಅಂಗಡಿಗಳಿವೆ. ತಮಿಳುನಾಡು ಮೂಲದ ಮಹೇಶನ್ ಎನ್ನುವವರ ಅಂಗಡಿಯಲ್ಲಿ ಐದು ಮುಖದ ರುದ್ರಾಕ್ಷಿ ಖರೀದಿಸಿದೆ. ಆತ ಹೇಳಿದ ಬೆಲೆಗಿಂತ ಅರ್ಧ ಬೆಲೆಗೆ ಕೇಳಿದೆ. ಆಗುವುದಿಲ್ಲ ಎಂದುತ್ತರ ಸರಿ ಎಂದು ಹೊರಟವನಿಗೆ ನೀವು ಹೇಳಿದ ಬೆಲೆಯನ್ನೇ ಕೊಡಿ ಎಂದು ಕರೆದು  ರುದ್ರಾಕ್ಷಿ ಕೈಗಿತ್ತರು !!

ತಿಂಡಿ ತಿನ್ನಬೇಕು ಎನಿಸಲಿಲ್ಲ. ಎರಡು ಎಳನೀರು ಕುಡಿದು ಅದರ ಗಂಜಿ ತಿಂದೆ. ವಾಪಸ್ಸು ಕಡಲಿನ ಅಂಚಿನಲ್ಲಿ ಪಾದಗಳನ್ನು ತೋಯಿಸಿಕೊಳ್ಳುತ್ತಾ, ಸೂರ್ಯಸ್ತದ ಪೋಟೋಗಳನ್ನು ತೆಗೆಯುತ್ತಾ ರೆಸಾರ್ಟ್ ಆವರಣದ ಒಳಗೆ ಕಾಲಿಸಿರಿಸಿದಾಗ ಸೂರ್ಯ ಪೂರ್ಣ ಕಂತಿದ್ದ. ಕತ್ತಲಾಗಿತ್ತು. ರೆಸಾರ್ಟ್ ದೀಪಗಳು ಬೆಳಗತೊಡಗಿದವು

 

“ರಾತ್ರಿಯೂಟಕ್ಕೆ ಸಸ್ಯಹಾರ ಅಥವಾ ಮಾಂಸಹಾರವೇ” ಎಂದು ಕಿಚನ್ ನವರು ಕೇಳಿದ್ದರು. ಫಿಶ್ ತವಾ ಫ್ರೈ ಮಾಡಿದರೆ ಸಾಕೆಂದು ಹೇಳಿದೆ. ರಾತ್ರಿ 9ರ ತನಕ ಪ್ರವೀಣ್ ಕುಮಾರ್ ಅವರ ಜೊತೆ ಮಾತನಾಡುತ್ತಾ ಕುಳಿತಿದ್ದು ಎದ್ದು ಬಂದೆ. ನಿದ್ರೆಯ ಒತ್ತಡವೇನೂ ಇರಲಿಲ್ಲ. ಅಲ್ಲೇ ಕಡಲಿಗೆ ಅಭಿಮುಖವಾಗಿ ಕಟ್ಟಿರುವ ದೊಡ್ಡ ಉಯ್ಯಾಲೆಯಲ್ಲಿ ಕುಳಿತು ಕಡಲಿನಲ್ಲಿ ಮಿಂಚುತ್ತಾ ಚಲಿಸುತ್ತಿದ್ದ  ದೊಡ್ಡ ಬೋಟ್ ಗಳು, ಹಡುಗುಗಳು,, ಪ್ರಜ್ವಲಿಸುತ್ತಿದ್ದ ನಕ್ಷತ್ರಗಳನ್ನು ನೋಡುತ್ತಾ ಕುಳಿತೆ.

ಟೆಂಟ್ ಒಳಹೊಕ್ಕು  ಮಲಗಿದಾಗ ರಾತ್ರಿ 12. ಮನುಷ್ಯರ ಮೆಲುವಾದ ಮಾತಿನ ಕಲರವ ಕೇಳಿ ಎಚ್ಚರವಾಯಿತು. ಸಮಯ ನೋಡಿದೆ. ಬೆಳಗ್ಗೆ ಐದಾಗಿತ್ತು. ತಲೆಗೆ ಹೆಡ್ ಲೈಟು ಕಟ್ಟಿಕೊಂಡ ಮೀನುಗಾರರು ಕಿರು ಬೋಟ್ ಗಳನ್ನು ಕಡಲಿಗಿಳಿಸುತ್ತಿದ್ದರು. ಮುಖಕ್ಕೆ ನೀರು ಎರಚಿಕೊಂಡು ಮೊಬೈಲ್ ಪೋನ್ ಟಾರ್ಚ್ ಆನ್ ಮಾಡಿಕೊಂಡು ಹತ್ತಿರ ಹೋದೆ. ಅಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು !

ಕಡಲು ಕಲಕಿದರೆ ಬೆಳಕು …. ! ಮುಂದುವರಿಯುತ್ತದೆ….

ಪಿಕೆ ಬೀಚ್ ಸ್ಟೇ ರೆಸಾರ್ಟ್ ಸಂಪರ್ಕ ಸಂಖ್ಯೆ: 99458 87476

Similar Posts

2 Comments

  1. ದೇವಸ್ಥಾನ ಮತ್ತು ಓಂ ಬೀಚ್ ನಿಂದ ಎಷ್ಟು ದೂರವಿದೆ ಸರ್

    1. ಸುಮಾರು 7 ಕಿಲೋ ಮೀಟರ್

Leave a Reply

Your email address will not be published. Required fields are marked *