ಆಗುಂಬೆ ಪುಟ್ಟ ಊರು. ಇದರ ಆಕರ್ಷಣೆ ಬಲು ಜೋರು. ಇದಕ್ಕೆ ಕಾರಣ ಇಲ್ಲಿ, ಸುತ್ತಮುತ್ತಲೂ ಸಾಕಷ್ಟು ಪ್ರೇಕ್ಷಣೀಯ ತಾಣಗಳಿರುವುದು.. ಇವುಗಳನ್ನೆಲ್ಲ ಒಂದೆರಡು ದಿನದಲ್ಲಿ ವಿವರವಾಗಿ ನೋಡಲು ಸಾಧ್ಯವಿಲ್ಲ. ಒಂದಷ್ಟು ಸಮಯಾವಕಾಶ ಬೇಕು. ಇವುಗಳಲ್ಲಿ ಸಾಕಷ್ಟು ತಾಣಗಳನ್ನು ವೀಕ್ಷಿಸಿದ್ದೆ. ಈ ಬಾರಿ ಜೋಗಿಗುಂಡಿಗೆ ಹೋಗಿ ಬಂದೆ. ಇದು ಅಲ್ಲಿಗೆ ಮೂರನೇ ಭೇಟಿ.
ಮರುದಿನ ಬೆಂಗಳೂರಿಗೆ ವಾಪಸ್ ತೆರಳುವುದೋ ಅಥವಾ ಮುಂದಕ್ಕೆ ಹೋಗುವುದೋ ಎಂದು ಯೋಚಿಸತೊಡಗಿದೆ. ಸಾಫ್ಟ್ ವೇರ್ ಇಂಜಿನಿಯರ್ ಕೃಷ್ನೇಗೌಡ ಎನ್.ಎಲ್. ಅವರು ಗೋರ್ಕಣದಲ್ಲಿ ತಮ್ಮ ಕಿರಿಯ ಸಹೋದರ ರೇಸಾರ್ಟ್ ಮಾಡಿರುವುದಾಗಿ ಹೇಳುತ್ತಿದ್ದರು. ಇಲ್ಲಿಗೆ ನಾವಿಬ್ಬರೂ ಬೈಕ್ ನಲ್ಲಿ ಹೋಗುವುದೆಂದು ನಿಶ್ಚಯಿಸಿಕೊಂಡಿದ್ದರೂ ಸಮಯಾವಕಾಶ ಒದಗಿ ಬಂದಿರಲಿಲ್ಲ.
ಕೃಷ್ನೇಗೌಡರಿಗೆ ಪೋನ್ ಮಾಡಿ ಆಗುಂಬೆಗೆ ಬಂದಿರುವುದಾಗಿ ತಿಳಿಸಿದೆ. “ನನ್ನನ್ನು ಬಿಟ್ಟು ನೀವೊಬ್ಬರೇ ಹೋಗಿದ್ದೀರಲ್ಲ” ಎಂದು ಆತ್ಮೀಯತೆಯಿಂದ ಆಕ್ಷೇಪ ವ್ಯಕ್ತಪಡಿಸಿದರು ಜೊತೆಗೆ ಸಾಧ್ಯವಾದರೆ ಗೋಕರ್ಣಕ್ಕೆ ಹೋಗಿ ಬನ್ನಿ ನನ್ನ ತಮ್ಮ ಪ್ರವೀಣ್ ಕುಮಾರ್ ಇಂದು ಅಲ್ಲಿಗೆ ಹೋಗುತ್ತಿದ್ದಾನೆ. ಅವನಿಗೆ ನೀವು ಬರುತ್ತಿರುವ ವಿಷಯ ತಿಳಿಸುತ್ತೇನೆ” ಎಂದರು. ಇಲ್ಲಿಗೆ ಗೋಕರ್ಣಕ್ಕೆ ಹೊರಡುವುದೆಂದು ಪಕ್ಕಾ ಆಯಿತು.
ಆಗುಂಬೆ ಘಾಟಿ ಆರಂಭವಾಗುವ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಬಂದಾಗ ಸಮಯ ಬೆಳಗ್ಗೆ 8.45. ಇಲ್ಲಿಂದ ಗೋಕರ್ಣಕ್ಕೆ 201 ಕಿಲೋ ಮೀಟರ್ ಅಂತರ. ಆಹ್ಲಾದಕರ ವಾತಾವರಣವಿತ್ತು. ಘಾಟಿರಸ್ತೆಯಲ್ಲಿ ವಾಹನ ದಟ್ಟಣೆಯೇನೂ ಇರಲಿಲ್ಲ. ಇಲ್ಲಿ ಬೈಕ್ ರೈಡ್ ಮಾಡುವುದು ರೋಮಾಂಚನಕಾರಿ ಅನುಭವ. ತೀವ್ರ ಹೇರ್ ಪಿನ್ ತಿರುವುಗಳು. ಜಾಗರೂಕತೆಯಿಂದ ರೈಡ್ ಮಾಡಬೇಕು.
ನನಗೇನೂ ಅವಸರವಿರಲಿಲ್ಲ. ನಿಧಾನವಾಗಿ ಬೈಕ್ ಚಲಾಯಿಸುತ್ತಾ ರಮಣೀಯ ಪ್ರಕೃತಿಯನ್ನು ನೋಡುತ್ತಾ ಕೆಳಗೆ ಬಂದೆ. ತಳದಲ್ಲಿ ಸೋಮೇಶ್ವರ, ಅಲ್ಲಿಂದ ಮುಂದೆ ಸೀತಾನದಿ ಊರಿದೆ. ಬಹಳ ಸುಂದರವಾದ ಪುಟ್ಟ ಊರಿದು.
ಸೀತಾನದಿ ಊರಿನಿಂದ ಸ್ವಲ್ಪ ಮುಂದೆ ಇದೇ ಹೆಸರಿನ ಹೋಟೆಲ್ ಇದೆ. ಇಲ್ಲಿಯ ವಾತಾವರಣ ಸ್ವಚ್ಚ ಸುಂದರ. ನಿಸರ್ಗವನ್ನು ಆಹಾರವನ್ನು ಒಟ್ಟಿಗೆ ಸವಿಯುವ ಅವಕಾಶ. ಹೊರ ನೋಡುತ್ತಾ ಎರಡು ಫಿಲ್ಟರ್ ಕಾಫಿ ಕುಡಿದೆ. ಮಸ್ತ್ ಆಗಿತ್ತು.
ಬೈಕ್ ಹತ್ತಿದವನು ಉಡುಪಿಗೆ ಬಂದೆ. ಕೆ.ಎಸ್.ಆರ್.ಟಿಟಿ. ಬಸ್ ನಿಲ್ದಾಣದ ಸಮೀಪದ ಪೆಟ್ರೋಲ್ ಬಂಕಿನಲ್ಲಿ ಬೈಕಿಗೆ ಪೆಟ್ರೋಲ್ ಹಾಕಿಸಿದೆ. ಹೋಟೆಲಿನಿಂದ ತೆಗೆದುಕೊಂಡಿದ್ದ ತಿಂಡಿಯ ಪಾರ್ಸೆಲನ್ನು ಅಲ್ಲಿಯ ತಂಗುದಾಣದಲ್ಲಿ ಬಿಚ್ಚಿ ತಿಂದೆ.
ಉಡುಪಿಯಿಂದ ಗೋವಾಕ್ಕೆ ಕನೆಕ್ಟ್ ಆಗುವ ರಾಷ್ಟ್ರೀಯ ಹೆದ್ದಾರಿ 66 ಉತ್ತಮವಾಗಿದೆ. ಹಿಂದೆ ಬಳ್ಳಾರಿಯಲ್ಲಿ ಗಣಿಗಾರಿಕೆ ತೀವ್ರವಾಗಿದ್ದಾಗ ಇಲ್ಲಿಯ ಬಂದರುಗಳಿಗೆ ಹಡಗುಗಳ ಮೂಲಕ ಹೊರದೇಶಕ್ಕೆ ಕಬ್ಬಿಣದ ಅದಿರು ಸಾಗಿಸಲು ಬರುತ್ತಿದ್ದ ಲಾರಿಗಳಿಂದ ಇಡೀ ಹೆದ್ದಾರಿ ಗುಂಡಿಗಳ ಸರಣಿಯಾಗಿತ್ತು. ವಾಹನದಲ್ಲಿ ಸಂಚರಿಸುವುದರಿಲಿ, ನಡೆದುಕೊಂಡು ಓಡಾಡುವುದು ಸಹ ಕಷ್ಟವಾಗಿತ್ತು. ಯಾರೋ ಒಂದಷ್ಟು ಮಂದಿಯ ಜೇಬು ತುಂಬಲು ಸಾಮಾನ್ಯ ಜನ ನರಕ ಅನುಭವಿಸುವಂತಾಗಿತ್ತು. ಈಗ ಅಂಥ ವಾತಾರಣವಿಲ್ಲ. ಅಂಥ ದುಸ್ಥಿತಿ ಮತ್ತೆ ಬರಲು ಅವಕಾಶವನ್ನೂ ಕೊಡಬಾರದು.
ಸೌಪರ್ಣಿಕ ನದಿ ಮೈದುಂಬಿ ಹರಿಯುತ್ತಿತ್ತು. ಮರವಂತೆಯ ಕಡಲತೀರವನ್ನು ಸಮುದ್ರದೆಲೆಗಳು ಕೊರೆಯದಂತೆ ಬಂಡೆಗಲ್ಲುಗಳ ತಡೆಗೋಡೆ ಮಾಡಿದ್ದಾರೆ. ಈ ಸ್ಥಳ ಎಂದಿನಿಂದಲೂ ಪ್ರೇಕ್ಷಣಿಯ. ಕಡಲ ಕಿನಾರೆ ಸಮೀಪವೇ ಹೆದ್ದಾರಿ ಹಾದು ಹೋಗುತ್ತದೆ. ಅಲ್ಲಿ ಬೈಕ್ ನಿಲ್ಲಿಸಿದೆ. ಎಳನೀರು ಕುಡಿದೆ. ಅದರ ಗಂಜಿ ತಿಂದೆ. ತನುವಿಗೂ ಮನಕ್ಕೂ ತಂಪೆ್ನಿಸಿತು. ಮತ್ತೆ ಬೈಕ್ ಹತ್ತಿದವನು ನಿಲ್ಲಿಸಿದ್ದು ಗೋಕರ್ಣದಲ್ಲಿ. ಇಲ್ಲಿ ಅನಿರೀಕ್ಷಿತ ಅಚ್ಚರಿಗಳ ಸರಮಾಲೆಯೇ ನನಗಾಗಿ ಕಾದಿತ್ತು. ಅದೇನೆಂದು ಕುತೂಹಲವಾಯಿತೇ ? ಮುಂದಿನ ಭಾಗದಲ್ಲಿ ತಿಳಿಸುತ್ತೇನೆ