ಅರೇ ಏನಿದು ಶೀರ್ಷಿಕೆ ವಿಚಿತ್ರವಾಗಿದೆ ಅಂದ್ಕೊಂಡ್ರಾ ! ಈ ಸಲದ ಮುಂಗಾರು ತೃಪ್ತಿದಾಯಕವಾಗಿರಲಿಲ್ಲ. ಆದ್ದರಿಂದ ಹೇಗಾದ್ರೂ ಸರಿ; ಮುಂಗಾರು ಮೋಡಗಳನ್ನು ಚೇಸ್ ಮಾಡ್ಬೇಕು, ಮನಸಾರೆ ಮಳೆಯಲ್ಲಿ ನೆನೆಯಬೇಕು ಅಂದ್ಕೊಂಡೆ. ಮನಸಿನಲ್ಲಿ ಈ ಯೋಚನೆಯ ಮಂಥನ ನಡೆಯುತ್ತಿರುವಾಗಲೇ ಮೊಬೈಲ್ ಟಣ್ ಎಂದು ಸದ್ದು ಮಾಡಿತು ! ತೆರೆದು ನೋಡಿದರೆ ಹೊಂಡ ಬೈಕ್ ಗ್ರೂಪ್ ಮೆಸೇಜ್. “ಸೆಪ್ಟೆಂಬರ್ 23, 24 ಚಿಕ್ಕಮಗಳೂರು ಜಿಲ್ಲೆಗೆ ರೈಡ್ ಇದೆ. ಆಸಕ್ತರು ನೋಂದಾಯಿಸಿಕೊಳ್ಳಿ”
ತಕ್ಷಣ ಮಾರ್ಷಲ್ ( ಬೈಕ್ ಗ್ರೂಪ್ ಅನ್ನು ಮುನ್ನೆಡೆಸುವವವರು) ಕಿಶೋರ್ ಅವರಿಗೆ ಮೆಸೇಜ್ ಹಾಕಿದೆ. “ಬರ್ತೀನಿ” ಚಿಕ್ಕಮಗಳೂರಿಗೆ ಹೋಗಿ ಬಂದರೆ ಸಾಕೇ ? ಅಲ್ಲಿಂದಲೇ ಆರಂಭವಾಗುವ ಪಶ್ಚಿಮಘಟ್ಟಗಳ ಹಾದಿ ಹಿಡಿದು ಹೋಗೋಣ ಅಂತ ಸಿದ್ಧತೆ ಮಾಡಿಕೊಂಡೆ.
ಸೆಪ್ಟೆಂಬರ್ 23, 2023, ಬೆಂಗಳೂರು ಇಂದಿರಾನಗರದ ಹೊಂಡ ಬಿಗ್ ವಿಂಗ್ ಶೋ ರೂಮಿನ ಮುಂದೆ 30 ಮಂದಿ ಬೈಕರ್ಸ್ ಜಮಾಯಿಸಿದ್ರು. ಗ್ರೂಪ್ ರೈಡ್ ಮಾಡುವಾಗ ಯಾವಯಾವ ಕ್ರಮಗಳನ್ನು ಅನುಸರಿಸ್ಬೇಕು; ಸುರಕ್ಷತೆಗೆ ಹೇಗೆ ಆದ್ಯತೆ ನೀಡಬೇಕು ಎಂದೆಲ್ಲ ಮಾರ್ಷಲ್ ಅಜೀಶ್ ಹೇಳಿದ್ರು. ಕರಾರುವಾಕ್ಕಾಗಿ 7 ಗಂಟೆಗೆ ಚಿಕ್ಕಮಗಳೂರಿನತ್ತ ರೈಡ್ ಶುರುವಾಯ್ತು.
ಹೊಂಡಾ ಹೈನೆಶ್ 350 ಸಿಸಿ ಬೈಕ್ ಎಕ್ಸಾಟ್ ಸೌಂಡ್ ನೀವು ಕೇಳಿರ್ತೀರಿ. ಅದೊಂದು ರಿದಂ… ಬೈಕ್ ಲವರ್ಸ್ ಗಳಿಗೆ ಅದರ ಬಗ್ಗೆ ಮೋಹಕತೆ. ಎಲ್ರದ್ದೂ ಹೊಂಡಾ ಬೈಕ್. ಒಟ್ಟಿಗೆ ಹೋಗ್ತಿರುವಾಗ ಅಷ್ಟು ಬೈಕ್ ಗಳಿಂದ ಹೊಮ್ಮುವ ಸೌಂಡ್ ಕೇಳಿ ಹಾದಿಯಲ್ಲಿ ಹೋಗುವವರು ತಿರುಗಿ ನೋಡ್ತಾ ಇದ್ರು. ಬೈಕ್ ಕೂಡ ನೋಡಲು ಆಕರ್ಷಕ !
ಬೆಂಗಳೂರು – ಮಂಗಳೂರು ಹೆದ್ದಾರಿಯಲ್ಲಿ ಯಡಿಯೂರು ಸಮೀಪ ಇರುವ “ಹೋಟೆಲ್ ಧ್ರವತಾರೆ” ಯಲ್ಲಿ ಬೆಳಗ್ಗಿನ ಉಪಹಾರ ಭರ್ಜರಿಯಾಗಿಯೇ ಇತ್ತು. ಅಲ್ಲಿಂದ ಸೀದಾ ಬೇಲೂರು ನಂತರ ಚಿಕ್ಕಮಗಳೂರು. ಮೊದಲೇ ಬುಕ್ ಆಗಿದ್ದ ಚಿಕ್ಕಮಗಳೂರು ನಗರದ ಹೊರ ವಲಯದಲ್ಲಿ ಇರುವ ರೆಸಾರ್ಟ್ ಗೆ ಹೋದೆವು.
ಅಂದು ಸಂಜೆ ನಾಲ್ಕು ಗಂಟೆಗೆ ಮುಳ್ಳಯ್ಯನಗಿರಿಯತ್ತ ಹೋಗುವುದೆಂದು ತೀರ್ಮಾನವಾಯ್ತು. ಬೈಕುಗಳು ಕಡಿದಾದ ಬೆಟ್ಟ ಹತ್ತುತ್ತಿದ್ದ ಹಾಗೆ ಧಾರಕಾರ ಮಳೆ ಹಿಡಿಯಿತು ! ಕೆಲವರು ಬೆಟ್ಟದ ಹಾದಿಯಲ್ಲಿ ಎಡ ತಿರುವಿದರೆ ಮೊದಲೇ ಸಿಗುವ ಮುಳ್ಳಯ್ಯಗಿರಿಗೆ ಹೋದರೆ ಇನ್ನೂ ಕೆಲವರು ಸೀದಾ ಅದೇ ಮಾರ್ಗದಲ್ಲಿ ಹೋಗಿ ಬಾಬಾ ಬುಡನ್ ಗಿರಿ ತಲುಪಿದ್ದರು.
ನಾನು, ಬ್ಯಾಕ್ ಗಾರ್ಡ್ಸ್ ( ಎಲ್ಲ ಬೈಕರ್ಸ್ ಹಿಂದೆ ಬರುವವರು) ರಾಮ್, ಅಮಿತ್, ಇನ್ನು ಮೂವರು ಮಾತ್ರ ಮುಳ್ಳಯ್ಯನಗಿರಿ ತಲುಪಿದ್ದೆವು. ಇನ್ನೂ ಸಂಜೆ ಐದು ಕಳೆದಿರಲಿಲ್ಲ. ಮಳೆಮಳೆಮಳೆ… ಮಳೆ ನಿಲ್ಲುತ್ತಿದ್ದ ಹಾಗೆ ದಟ್ಟನೆ ಮಂಜು ಕವಿಯಿತು. ಕೇವಲ ಎರಡಡಿ ಅಂತರದಲ್ಲಿದ್ದವರು ಕಾಣದಿರುವಷ್ಟು ಮಂಜು ! ಅದೊಂದು ಮನ ಮೋಹಕ ಲೋಕ !
ಅಲ್ಲಿಂದ ಹಿಂದಿರುಗುವಾಗ 7 ಗಂಟೆ. ಸಂಪೂರ್ಣ ಕತ್ತಲು, ಜೊತೆಗೆ ಮಂಜಿನ ಲೋಕ. ಏನೇನೂ ಕಾಣುತ್ತಿರಲಿಲ್ಲ. ಈ ಸ್ಥಿತಿಯಲ್ಲಿ ಬೈಕ್ ಹೆಡ್ ಲೈಟ್ ಬೆಳಕು ಪ್ರಯೋಜನಕ್ಕೆ ಬರುವುದಿಲ್ಲ. ಫ್ಹಾಗ್ ಲೈಟ್ ಬೇಕೇಬೇಕು ! ನನ್ನ ಬೈಕಿಗೆ ಎರಡು ಜೊತೆ ಫ್ಹಾಗ್ ಲೈಟ್ ಅಳವಡಿಸಿದ್ದೇನೆ. ಅವುಗಳನ್ನು ಆನ್ ಮಾಡುತ್ತಿದ್ದಂತೆ ಮುಂದಿನ ದಾರಿ ನಿಚ್ಚಳವಾಗಿ ಕಾಣತೊಡಗಿತು. ಉಳಿದವರೆಲ್ಲ ಅನುಸರಿಸಿದರು.
ಬೆಟ್ಟದ ಕೆಳಗಿಳಿದರೆ ಮಳೆಯ ಸುಳಿವೇ ಇಲ್ಲ. ಸೀದಾ ರೇಸಾರ್ಟ್. ಕ್ಯಾಂಪ್ ಫೈರ್ ಮುಂದೆಯೇ ಊಟ. ಬೈಕರ್ಸ್ ಗಳ ಮಾತುಮಾತು. ಎಲ್ಲವೂ ಬೈಕ್ ರೈಡಿಂಗ್ ನತ್ತಲೇ ಸುತ್ತುತ್ತಿದ್ದವು. ಮಲಗಿದಾಗ ರಾತ್ರಿ 1 ಗಂಟೆ ! ಬೆಳಗ್ಗೆ 7 ಗಂಟೆಗೆ ಅಯ್ಯನ ಕೆರೆಗೆ ಹೋಗುವುದೆಂದು ತೀರ್ಮಾನವಾಗಿತ್ತು.
ಬೆಳಗ್ಗೆ ನಾನು ಮತ್ತು ರೂಮ್ ಮೆಟ್ ಸಂದೇಶ್ ಅವರು ಹೊರಗಡೆ ಬಂದಾಗ ಕೆಲವು ಬೈಕರ್ಸ್ ಅಷ್ಟೆ ಇದ್ದರು. ಉಳಿದವರು ಸುಖ ನಿದ್ರೆಯಲ್ಲಿದ್ದರು. ಬೈಕುಗಳು ಕಡೂರು ರಸ್ತೆಯಲ್ಲಿ ಇರುವ ಅಯ್ಯನಕೆರೆಯತ್ತ ಧಾವಿಸತೊಡಗಿದವು. ಚಿಕ್ಕಮಗಳೂರು ಹೊರ ವಲಯ ಬಿಡುತ್ತಿದ್ದಂತೆ ಮತ್ತೆ ಮಳೆ ಹಿಡಿಯಿತು ! ಹಾದಿಯುದ್ದಕ್ಕೂ ಮಳೆ, ತುಂತುರು ಮಳೆ !
ಅಯ್ಯನಕೆರೆ ಬಹು ವಿಶಾಲ. ಸುತ್ತಲೂ ಆವರಿಸಿರುವ ಬೆಟ್ಟಗುಡ್ಡ ಕಣಿವೆಗಳ ನೀರು ಸೀದಾ ಇಲ್ಲಿಗೆ. ಅದೊಂದು ರಮಣೀಯ ಕೆರೆ. ನೋಡುತ್ತಿದ್ದರೆ ಮಂತ್ರಮುಗ್ದಗೊಳಿಸುತ್ತದೆ. ಅಲ್ಲಿ ಪೋಟೋ ಸೆಶನ್ ಗಳಾದವು. ಮತ್ತೆ ಅಲ್ಲಿಂದ ಆರು ಕಿಲೋ ಮೀಟರ್ ದೂರವಿರುವ ಡೈಮಂಡ್ ಫಾಲ್ಸ್ ನತ್ತ ಬೈಕುಗಳು ಶರವೇಗದಲ್ಲಿ ಸಾಗತೊಡಗಿದವು. ಹಾದಿ ಪಕ್ಕದಲ್ಲಿಯೇ ಬೈಕ್ ಗಳನ್ನು ನಿಲ್ಲಿಸಿದೆವು. ಅಲ್ಲಿಂದ 1 ಕಿಲೋ ಮೀಟರ್ ನಡಿಗೆ. ಮಾರ್ಗ ಕಡಿದಾಗಿದೆ. ಹತ್ತಿರ ಸಾಗುತ್ತಿದ್ದಂತೆ ಜಲಪಾತ ಧುಮ್ಮಿಕ್ಕುವ ಸದ್ದು ಕೇಳತೊಡಗಿತು.
ನಾವು ಹೋಗುವ ಹಾದಿ ಜಲಪಾತದ ನೆತ್ತಿಗೆ ಕರೆದುಕೊಂಡು ಹೋಗುತ್ತದೆ. ಜಲಪಾತವನ್ನು ಮುಂಭಾಗದಿಂದ ನೋಡಬೇಕಾದರೆ ಮತ್ತಷ್ಟೂ ಕಡಿದಾದ ಮಾರ್ಗದಲ್ಲಿ ಕೆಳಗೆ ಇಳಿಯಬೇಕು. ಸುಮಾರು ಒಂದು ತಾಸು ಅಲ್ಲಿಯೇ ಇದ್ದೆವು. ನೀರಿನ ಹರಿವು ಹೊರತುಪಡಿಸಿದರೆ ಸಾವಿರಾರು ಪಕ್ಷಿಗಳ ಕಲರವ. ಮನಸನ್ನು ಪ್ರಶಾಂತಗೊಳಿಸುವ ವಾತಾವರಣ.
ಅಲ್ಲಿಂದ ರೆಸಾರ್ಟ್ ನತ್ತ ಪಯಣ. ಅಲ್ಲಿಯೇ ಬೆಳಗ್ಗಿನ ಉಪಹಾರ. ಮಧ್ಯಾಹ್ನ 12.30ಕ್ಕೆ ಸರಿಯಾಗಿ ಚೆಕ್ ಔಟ್ ಆಗಿ ಬೆಂಗಳೂರಿನತ್ತ ಹೊರಡಲು ಸಿದ್ದರಾಗಬೇಕು ಎಂದು ಮಾರ್ಷಲ್ ಸೂಚನೆ. ನಾನು ಇಲ್ಲಿಂದ ಕುದುರೆಮುಖದ ಕಡೆ ಹೋಗುತ್ತೇನೆ ಎಂದು ಹೇಳಿದ್ದೆ.
ಸೆಪ್ಟೆಂಬರ್ 24. ಎಲ್ಲರ ಬೈಕುಗಳು ಗುಡುಗುಡು ಸದ್ದು ಮಾಡುತ್ತಾ ರೆಸಾರ್ಟ್ ಗೇಟ್ ದಾಟಿದವು. ಅವರುಗಳು ಬಲಕ್ಕೆ ಹೊರಳಿ ಬೆಂಗಳೂರಿನತ್ತ ತೆರಳಿದರೆ ನಾನು ಎಡಕ್ಕೆ ಹೊರಳಿ ಕಳಸ ಹಾದಿ ಹಿಡಿದೆ. ಚಿಕ್ಕಮಗಳೂರಿನಿಂದ ಕಳಸ 90 ಕಿಲೋ ಮೀಟರ್. ಆಲ್ದೂರು ದಾಟುತ್ತಿದ್ದಂತೆ ಹಾವಿನಂತೆ ಸುತ್ತಿಬಳಸಿ ಸಾಗುವ ಹಾದಿ. ಬಾಳೆ ಹೊನ್ನೂರು ತಲುಪುತ್ತಿದ್ದಂತೆ ಮಳೆ ಹಿಡಿಯಿತು !
ಹೆದ್ದಾರಿ ಬದಿಯಲ್ಲಿ ಇರುವ ಕಾಫಿಶಾಪ್ ಮುಂದೆ ನಿಲ್ಲಿಸಿದೆ. ಅರ್ಧಗಂಟೆ ಬ್ರೇಕ್ ! ರೈನ್ ಜಾಕೇಟ್ ಧರಿಸಿದೆ. ಥಂಡಿ ಥಂಡಿ ವಾತಾವರಣ. ಎರಡು ಕಾಫಿ ಕುಡಿದೆ. ಮಧ್ಯಾಹ್ನ ಮೂರು ಗಂಟೆಗೆಲ್ಲ ಕಳಸದಲ್ಲಿ ಕುದುರೆಮುಖ ಹಾದಿಯಲ್ಲಿರುವ ಯಾತ್ರಿ ನಿವಾಸ್ ಮುಂದೆ ಸ್ಟಾಪ್ ಮಾಡಿದೆ. ಅಂದು ರಾತ್ರಿ ಎಂಟು ಗಂಟೆಗೆ ಮಳೆ ಶುರು. ರಾತ್ರಿ 12ರ ತನಕ ಲ್ಯಾಪ್ ಟಾಪ್ ತೆರೆದು ಮಳೆ ನಿನಾದ ಆಲಿಸುತ್ತಾ ಇಮೈಲ್ ಗಳನ್ನು ಚೆಕ್ ಮಾಡುತ್ತಾ ಕುಳಿತೆ. ಮಲಗಿದಾಗ ಅಜ್ಜಿಯ ಹಾಗೆ ಮಳೆ ಜೋಗುಳ ಹಾಡಿತು. ಅಂದು ಇಡೀ ರಾತ್ರಿ ಮಳೆ ಹಿಡಿಯಿತು !
ಮುಂದಿನ ಭಾಗದಲ್ಲಿ….
ಎಲ್ಲಿದ್ದವು ಅಷ್ಟೊಂದು ನವಿಲುಗಳು !