ಟಿಪ್ಪು ಸುಲ್ತಾನ್ ಓರ್ವ ಮಹತ್ವಾಕಾಂಕ್ಷಿ ದೊರೆ. ಆತನಿಗೆ ತನ್ನ ಆಡಳಿತದ ಎಲ್ಲೆಗಳನ್ನು ವಿಸ್ತರಿಸುವ ಮತ್ತು ತನ್ನಗಿದ್ದ ಸೀಮೆಯನ್ನು ಜತನವಾಗಿ ಕಾಯ್ದುಕೊಳ್ಳುವ ಬಗ್ಗೆ ಭಾರಿ ಆಸಕ್ತಿ ಇತ್ತು. ಈ ಹಿನ್ನೆಲೆಯಲ್ಲಿ ಆತ ತನ್ನ  ಸೈನ್ಯವನ್ನು ಭದ್ರಪಡಿಸಿದ. ಕೋಟೆ ಕೊತ್ತಲಗಳನ್ನು ಕಟ್ಟಿದ. ಆತ ನಿರ್ಮಿಸಿದ ಕೋಟೆಗಳಲ್ಲಿಯೇ ಏಕೆ, ಇಡೀ ಭಾರತದಲ್ಲಿಯೇ ವಿಶಿಷ್ಟ ವಾಸ್ತುಶಿಲ್ಪವೆಂದು ಮಂಜಿರಾಬಾದ್ ಕೋಟೆ ಹೆಸರಾಗಿದೆ

ಮಂಜಿರಾಬಾದ್, ಮಂಜರಾಬಾದ್ ಮತ್ತು ಮಂಜ್ರಾಬಾದ್ ಹೀಗೆಲ್ಲ ಕರೆಸಿಕೊಳ್ಳುವ ಈ ಕೋಟೆ ಮಿಲಿಟರಿ ಉದ್ದೇಶಗಳಿಗಾಗಿಯೇ ಕಟ್ಟಲ್ಪಟ್ಟಿದ್ದು. ಏಕಕಾಲದಲ್ಲಿ ಮರಾಠರು ಮತ್ತು ಬ್ರಿಟಿಷ್ ದಾಳಿಗಳನ್ನು ಎದುರಿಸಬೇಕಿದ್ದ ಟಿಪ್ಪು, ಈ ನಿಟ್ಟಿನಲ್ಲಿ ಶತ್ರುಸೈನ್ಯವನ್ನು ಹಿಮ್ಮೆಟ್ಟಿಸಲು ಕೋಟೆಗಳನ್ನು ಕಟ್ಟಿಸಿದ. ಕರಾವಳಿ ಪ್ರದೇಶದಿಂದ ಘಟ್ಟ ಹತ್ತಿ ಬರಬಹುದಾದ ಶತ್ರು ಪಾಳೆಯದ ಸೈನ್ಯ ಎದರಿಸಲು ಆತ ಕಟ್ಟಿದ ಕೋಟೆಯೇ ಮಂಜಿರಾಬಾದ್.

ಬೆಂಗಳೂರು ಮತ್ತು ಮಂಗಳೂರು ಹೆದ್ದಾರಿಯಲ್ಲಿ ಸಕಲೇಶಪುರ ಹಾದು ಆರು ಕಿಲೋ ಮೀಟರ್ ಮುಂದೆ ಸಾಗಿದ ನಂತರ ಎಡಕ್ಕೆ ಮಂಜಿರಾಬಾದ್ ಕೋಟೆ ಎಂಬ ಫಲಕ ಕಾಣುತ್ತದೆ. ಅದರ ಪಕ್ಕದಲ್ಲಿಯೇ ಕಚ್ಚಾರಸ್ತೆಯಲ್ಲಿ ತುಸು ದೂರ ನಡೆದರೆ ಬೆಟ್ಟಕ್ಕೆ ಹೋಗುವ ಮೆಟ್ಟಿಲುಗಳು ಕಾಣುತ್ತವೆ. 250ಕ್ಕಿಂತಲೂ ಹೆಚ್ಚಿರುವ ಮೆಟ್ಟಿಲುಗಳನ್ನು ಹತ್ತಿ ಹೋದ ನಂತರವೇ ಅಲ್ಲೊಂದು ಕೋಟೆಯಿದೆ ಎಂಬ ಸಂಗತಿ ತಿಳಿಯುತ್ತದೆ. ಸಮುದ್ರ ಮಟ್ಟದಿಂದ 3241 ಅಡಿ ಎತ್ತರದ ಬೆಟ್ಟದ ಮೇಲೆ ಕಟ್ಟಲ್ಪಟ್ಟಿದ್ದರೂ ಇದು ಮರೆಯಾಗಿಯೇ ಇದೆ. ಇದು ಕೂಡ ಒಂದು ಇಂಜಿನಿಯರಿಂಗ್ ಕೌಶಲ್ಯ

ಮಂಜಿರಾಬಾದ್ ಕೋಟೆ ವಾಸ್ತುಶಿಲ್ಪಿ ಸೆಬಾಸ್ಟಿಯನ್ ಲೆ ಪೆಸ್ಟ್ರೆ ಡೆ ವಾಬನ್. ಈತ ಫ್ರೆಂಚ್ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ನುರಿತ ಇಂಜಿನಿಯರ್. ತುರ್ತು ಪರಿಸ್ಥಿತಿಗಳಲ್ಲಿ ಅಗತ್ಯವಿದ್ದ ಸೇತುವೆ, ಕಟ್ಟಡಗಳನ್ನು ನಿರ್ಮಿಸುವುದರಲ್ಲಿ ಸಿದ್ಧಹಸ್ತ. ಫ್ರೆಂಚರಿಗೂ ಬ್ರಿಟಿಷರು ಶತ್ರುಗಳೆನ್ನಿಸಿದರು. ಶತ್ರುವಿನ ಶತ್ರು ತನ್ನ ಮಿತ್ರ ಎನ್ನುವ ಮಾತಿನಂತೆ ಟಿಪ್ಪು, ಫ್ರೆಂಚರ ಸ್ನೇಹ ಗಳಿಸಿದ್ದ. ಫ್ರೆಂಚರಿಗೂ ಇದು ಅಗತ್ಯವಿತ್ತು.

ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ಸೈನ್ಯ, ಟಿಪ್ಪು ಮೇಲೆ ಮುಗಿಬೀಳಲು ಸಮಯ ಸಾಧಿಸುತ್ತಲೇ ಇತ್ತು. ಈ ಕಾರ್ಯಕ್ಕೆ ಮರಾಠರು ಮತ್ತು ಹೈದ್ರಾಬಾದಿನ ನಿಜಾಮರ ಸಹಕಾರವೂ ಇತ್ತು. ಇಷ್ಟೆಲ್ಲ ದೊಡ್ಡ ಶತ್ರುಪಡೆಯನ್ನು ಎದುರಿಸಲು ಟಿಪ್ಪು ಸಕಲ ರೀತಿಯಲ್ಲಿಯೂ ಸನ್ನದ್ಧನಾಗಿರಬೇಕಿತ್ತು. ಆದ್ದರಿಂದ ಮಂಗಳೂರು ಭಾಗದಿಂದ ಘಟ್ಟ ಹತ್ತಿ ಬರಬಹುದಾಗಿದ್ದ ಸೈನ್ಯದ ಮೇಲೆ ಕಣ್ಣಿಡಲು ಮತ್ತು ಅವರನ್ನು ಹಿಮ್ಮೆಟ್ಟಿಸಲು ತನ್ನ ಸೈನ್ಯವನ್ನು ಇರಿಸಬೇಕಿತ್ತು. ಇದಕ್ಕಾಗಿಯೇ ಘಟ್ಟ ಹತ್ತಿ ಬಂದೊಡನೆ ಸಿಗುವ ತಾಣದಲ್ಲಿ ಬೆಟ್ಟದ ಮೇಲೆ ಕೋಟೆ ಕಟ್ಟಿಸಿದ.

ಕೋಟೆ ಕಟ್ಟುವ ಕಾರ್ಯಕ್ಕೆ ಸಹಕರಿಸಲು ಫ್ರೆಂಚ್ ಸೈನ್ಯದ ಮುಖ್ಯಸ್ಥರನ್ನು ಕೇಳಿದಾಗ ಅವರು ಇದಕ್ಕಾಗಿ ವಾಸ್ತುಶಿಲ್ಪಿ ಸೆಬಾಸ್ಟಿಯನ್ ಲೆ ಪೆಸ್ಟ್ರೆ ಡೆ ವೌಬನ್ ನನ್ನು ನಿಯೋಜಿಸಿದರು. ಈತ, ಟಿಪ್ಪು ಜೊತೆ ಸುದೀರ್ಘವಾಗಿ ಚರ್ಚಿಸಿದ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ. ಬಹು ಆಯಕಟ್ಟಿನ ಜಾಗವನ್ನು ಆಯ್ಕೆ ಮಾಡಿದ. ಕೋಟೆ ಕಟ್ಟುವ ಕೆಲಸದ ಮುಂದಾಳತ್ವ ವಹಿಸಿದ. 1792ರಲ್ಲಿ ಕೋಟೆ ನಿರ್ಮಾಣ ಕಾರ್ಯ ಪೂರ್ಣವಾಯಿತು.

ಕೋಟೆ ಪೂರ್ಣವಾದ ನಂತರ ಟಿಪ್ಪು ಇಲ್ಲಿಗೆ ಭೇಟಿ ನೀಡಿದ. ಆಗ ಕೋಟೆಯನ್ನು ಸಂಪೂರ್ಣವಾಗಿ ಮಂಜು ಆವರಿಸಿತ್ತು. ಇದನ್ನು ಕಂಡ ಟಿಪ್ಪು, ಮಂಜಿರಾಬಾದ್ ಎಂದು ಉದ್ಗರಿಸಿದನಂತೆ. ಅದಕ್ಕಾಗಯೇ ಮಂಜಿರಾಬಾದ್ ಎಂಬ ಹೆಸರು ಬಂತು ಎಂದು ಪ್ರತೀತಿ. ವರ್ಷದ ಮುನ್ನೂರ ಅರವತ್ತೈದು ದಿನವೂ ಕೋಟೆ ಪ್ರದೇಶದಲ್ಲಿ ತಂಪು ವಾತಾವರಣ ಇರುತ್ತದೆ. ಬೆಳಗ್ಗಿನ ಸಮಯದಲ್ಲಿ ದಟ್ಟ ಮಂಜು ಆವರಿಸಿರುವುದು ಸಾಮಾನ್ಯ .

ಕೋಟೆಯನ್ನು ನಿರ್ಮಿಸಲು ವಾಸ್ತುಶಿಲ್ಪಿ ಸೆಬಾಸ್ಟಿಯನ್ ಲೆ ಪೆಸ್ಟ್ರೆ ಡೆ ವೌಬನ್ ಅಪಾರ ಆಸಕ್ತ ವಹಿಸಿದ್ದರು. ಕೋಟೆಯಲ್ಲಿ ರಣತಂತ್ರದ ಅಂಶಗಳು ಒಳಗೊಂಡರಬೇಕು ಮತ್ತು ಅದೊಂದು ಚೇತೋಹಾರಿ ತಂಗುದಾಣವೂ ಆಗಿರಬೇಕೆಂದು ಈತ ಬಯಸಿದ್ದ. ಅದರಂತೆಯೇ ಕೋಟೆ ಕಟ್ಟಿದ. ಇದನ್ನು ನಕ್ಷತ್ರಾಕಾರದಲ್ಲಿ ನಿರ್ಮಿಸಲಾಗಿದೆ. ಒಟ್ಟು ಎಂಟು ಮೂಲೆಗಳಿದ್ದು ಅಲ್ಲೆಲ್ಲ ಪುಟ್ಟಪುಟ್ಟ ಗೋಪುರಗಳಿವೆ. ಇದರ ಕೆಳಗೆ ಮೂರ್ನಾಲ್ಕು ಮಂದಿ ಸೈನಿಕರು ಆರಾಮವಾಗಿ ಕುಳಿತುಕೊಳ್ಳಲು ಮತ್ತು ಮಲಗಲು ವ್ಯವಸ್ಥೆ ಇದೆ. ಇಲ್ಲಿಂದಲೇ ಹೊರಗೆ ಕಣ್ಣಿಡಲು ಕಿಂಡಿಗಳನ್ನು ಮಾಡಲಾಗಿದೆ.

ಕೋಟೆ ಕಾಯುವ ಸೈನಿಕರು ವಿಶ್ರಾಂತಿ ಪಡೆಯಲು ಸೂಕ್ತ ವ್ಯವಸ್ಥೆ ಇರಬೇಕು. ಇಲ್ಲದಿದ್ದರೆ ಬಿಸಿಲು-ಗಾಳಿ-ಮಳೆಗೆ ಅವರು ಹೈರಾಣಾಗಿ ಬಿಡುತ್ತಾರೆ. ಇದನ್ನು ಮನಗಂಡಿದ್ದ ವೌಬನ್, ಕೋಟೆ ಪ್ರವೇಶದ್ವಾರವಲ್ಲದೇ ಕೋಟೆ ದಾಟಿ ವಿಶಾಲ ಮೈದಾನ ಪ್ರವೇಶಿಸುವ ಹಂತದಲ್ಲಿಯೂ ತಂಗುದಾಣಗಳನ್ನು ನಿರ್ಮಿಸಿದ್ದಾನೆ. ಇಲ್ಲಿ ತಂಗಿದ್ದರೆ ಬಿರು ಬಿಸಿಲಿನಲ್ಲಿಯೂ ತಂಪಾಗಿರುತ್ತದೆ. ಮಳೆಯ ಹನಿಗಳು ಸಹ ಒಳಗೆ ಸಿಡಿಯುವುದಿಲ್ಲ.

ಸಹ್ಯಾದ್ರಿ ಪರ್ವತಗಳ ಸಾಲಿನಲ್ಲಿ ನಡುವಿನ ಬೆಟ್ಟದಲ್ಲಿ ಕೋಟೆ ನಿರ್ಮಾಣವಾಗಿರುವುದರಿಂದ ಹೊರಗಿನಿಂದ ಇದು ಕಾಣುವುದಿಲ್ಲ. ಇದು ಕೂಡ ಬಹು ಮಹತ್ವದ ಅಂಶ. ಆದರೆ ಕೋಟೆಯ ಎಂಟು ದಿಕ್ಕುಗಳಲ್ಲಿಯೂ ಇರುವ ಗೋಪುರಗಳ ಒಳಗಿನಿಂದ ಬಹು ದೂರದವರೆಗೂ ಕಣ್ಣಾಡಿಸಬಹುದು. ಆಕಾಶ ನಿಚ್ಚಳವಾಗಿರುವ ಸಂದರ್ಭದಲ್ಲಿ ಇಲ್ಲಿಂದ ದೂರದ ಅರಬ್ಬಿ ಸಮುದ್ರ ಕಾಣುತ್ತದೆ ಎಂದು ಹೇಳಲಾಗುತ್ತದೆ.  ಸಮುದ್ರ ಕಾಣದಿರಲಿ ಅಥವಾ ಕಾಣಲಿ… ಇದಕ್ಕಿಂತಲೂ ಬಹು ಮುಖ್ಯ ಸಂಗತಿ ಎಂದರೆ ಶತ್ರು ಸೈನಿಕರ ಆಗಮನವನ್ನು ಬಹು ಮುಂಚಿತವಾಗಿ ಇಲ್ಲಿಂದ ಕಾಣಬಹುದಾಗಿತ್ತು. ತಕ್ಷಣವೇ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿತ್ತು.

ಮಂಜಿರಾಬಾದ್ ಕೋಟೆ ವೈಶಿಷ್ಟ ಕಾಣವೇಕೆಂದರೆ ಆಕಾಶ ಮಾರ್ಗವಾಗಿ ದಿಟ್ಟಿಸಬೇಕು. ಇದಕ್ಕಾಗಿ ಅಂದು ಯಾವುದೇ ಹಾರಾಟ ಮಾಡುವ ಉಪಕರಣಗಳಿಲ್ಲ. ಕೋಟೆ ಇರುವ ಬೆಟ್ಟಕ್ಕಿಂತಲೂ ಎತ್ತರವಾದ ಪ್ರದೇಶದಲ್ಲಿ ನಿಂತು ವೀಕ್ಷಿಸಬೇಕಿತ್ತು. ಪ್ರಸ್ತುತ ದಿನಗಳಲ್ಲಿ ಕೋಟೆ ಮೇಲ್ಮೆಯಿಂದ ಇದರ ಚಿತ್ರಣ ನೋಡಿದಾಗ ನಿರ್ಮಿಸಿದವರ ವಾಸ್ತು ಪ್ರಜ್ಞೆಗೆ ಮನಸು ಬೆರಗಾಗುತ್ತದೆ. ಕೋಟೆಯ ಪ್ರತಿಯೊಂದು ಹಂತವನ್ನೂ ವೈಶಿಷ್ಟಪೂರ್ಣವಾಗಿ ನಿರ್ಮಿಸಲಾಗಿದೆ.

ಟಿಪ್ಪು ಸುಲ್ತಾನ್ ಕಟ್ಟಿಸಿದ ಮಂಜಿರಾಬಾದ್ ಕೋಟೆಯ ವಾಸ್ತುಶಿಲ್ಪದ ಖ್ಯಾತಿ ಬಹು ದೂರದವರೆಗೂ ಹರಡಿತ್ತು. ಇದು ಕ್ಲಿಷ್ಟಕರ ಮಿಲಿಟರಿ ಕಾರ್ಯಾಚರಣೆಗೆ ಹೇಳಿ ಮಾಡಿಸಿದ್ದಾಗಿತ್ತು. ಕೋಟೆಯ ಮೇಲಿದ್ದ ಸೈನಿಕರ ಕಣ್ತಪ್ಪಿಸಿ ಯಾರೊಬ್ಬರೂ ಒಳಗೆ ನುಸುಳಲು ಸಾಧ್ಯವಾಗದಂತೆ ಇದನ್ನು ರೂಪಿಸಲಾಗಿದೆ. ಇದಕ್ಕಾಗಿಯೇ ಎಲ್ಲ ದಿಕ್ಕುಗಳಲ್ಲಿಯೂ ವೀಕ್ಷಣಾ ಗೋಪುರಗಳನ್ನು ಮಾಡಲಾಗಿದೆ.

ಶತ್ರು ಸೈನಿಕರು ಮುತ್ತಿಗೆ ಹಾಕಿದರೂ ಬಹು ದೀರ್ಘಕಾಲ ಕಾದಾಡಲು ಬೇಕಾದ ಸಕಲ ಸಿದ್ಧತೆಗಳನ್ನು ಮಂಜಿರಾಬಾದ್ ಕೋಟೆ ಹೊಂದಿತ್ತು. ಅಪಾರ ಪ್ರಮಾಣದ ಮದ್ದುಗುಂಡುಗಳನ್ನು, ಸೈನಿಕರಿಗೆ, ಕುದುರೆಗಳು, ಬೇಟೆನಾಯಿಗಳಿಗೆ ಬೇಕಾದ ಆಹಾರ ಧಾನ್ಯಗಳನ್ನು ಹೆಚ್ಚು ಪ್ರಮಾಣದಲ್ಲಿ ಶೇಖರಿಸಿಡುವ ವ್ಯವಸ್ಥೆಯೂ ಇದೆ. ಅತಿಮುಖ್ಯವಾಗಿ ಬೇಕಾದ ಕುಡಿಯುವ ನೀರಿನ ವಿಷಯದಲ್ಲಿಯೂ ಕೋಟೆ ಸ್ವಾವಲಂಬನೆ ಹೊಂದಿತ್ತು. ಸುತ್ತಲೂ ಬೆಟ್ಟಗಳಿರುವುದು ಸಹ ಕೋಟೆ ರಕ್ಷಣೆಗೆ ಪೂರಕವಾಗಿ ಪರಿಣಮಿಸಿದೆ. ಶತ್ರುಸೈನಿಕರ ಆಗಮನವಾಗುತ್ತಿದೆ ಎಂಬ ಸುಳಿವು ದೊರೆತೊಡನೆ ಈ ಬೆಟ್ಟಗಳಲ್ಲಿಯೂ ಅಡಗಿ ಕುಳಿತುಕೊಳ್ಳುತ್ತಿದ್ದ ಸೈನಿಕರು ಗೆರಿಲ್ಲಾ ಮಾದರಿ ಯುದ್ಧದ ಮೂಲಕ ಶತ್ರುಪಡೆಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿದ್ದರು.

ಸಾಮಾನ್ಯವಾಗಿ ಕೋಟೆಕೊತ್ತಲಗಳಲ್ಲಿ ಕುಸುರಿ ವಿನ್ಯಾಸಗಳನ್ನು ಕಾಣುವುದಿಲ್ಲ. ಆದರೆ ಮಂಜಿರಾಬಾದ್ ಕೋಟೆಯ ವೈಶಿಷ್ಟವೇ ಬೇರೆ. ಮಿಲಿಟರಿ ವಾಸ್ತುಶಿಲ್ಪ ಆಧರಿಸಿ ಕಟ್ಟಲ್ಪಟ್ಟಿದ್ದರೂ ಇದು ಕುಸುರಿ ವಿನ್ಯಾಸಗಳನ್ನು ಹೊಂದಿದೆ. ಇದು ವಾಸ್ತುಶಿಲ್ಪಿಯ ಕಲಾತ್ಮಕ ಅಭಿರುಚಿಯನ್ನು ವ್ಯಕ್ತಪಡಿಸುತ್ತದೆ. ಮುಖ್ಯದ್ವಾರದ ಸುತ್ತಲೂ ಚಿತ್ತಾರಗಳನ್ನು ಮೂಡಿಸಲಾಗಿದೆ. ಇದನ್ನೆಲ್ಲ ವಿವರವಾಗಿಯೇ ಗಮನಿಸಿ ಒಳಗಡಿಯಿಡಬೇಕು.

ಮಿಲಿಟರಿ ವಾಸ್ತುಶಿಲ್ಪವನ್ನೇ ಆಧರಿಸಿದ್ದರೂ ಕೋಟೆ ನಿರ್ಮಾಣದಲ್ಲಿ ಫ್ರೆಂಚ್ ಮತ್ತು ಇಸ್ಲಾಮಿಕ್ ಶೈಲಿಯ ಪ್ರಭಾವವೂ ಇದೆ ಎನ್ನಲಾಗುತ್ತದೆ. ಆದರೆ ಇದರ ಖಚಿತತೆ ಬಗ್ಗೆ ಬೇರೆಬೇರೆ ಶೈಲಿಯ ವಾಸ್ತುಶಿಲ್ಪಗಳನ್ನು ಅಧ್ಯಯನ ಮಾಡಿರುವ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಬೇಕಷ್ಟೆ. ಆದರೆ ಕೋಟೆಯನ್ನು ಶುಷ್ಕವಾಗಿ ನಿರ್ಮಿಸಿಲ್ಲ. ಕಲಾತ್ಮಕ ಅಭಿರುಚಿಯನ್ನು ಹೊಂದಿಯೇ ಕಟ್ಟಲಾಗಿದೆ ಎಂಬುದು ಪ್ರತಿಯೊಂದು ಹಂತದಲ್ಲಿಯೂ ಸ್ಪಷ್ಟವಾಗುತ್ತದೆ.

ಮುಖ್ಯದ್ವಾರದ ಒಳಗೆ ಅಡಿಯಿಟ್ಟು ಸೀದಾ ಮುಂದೆ ಹೋಗಬಾರದು. ಮಧ್ಯದಲ್ಲಿ ನಿಂತು ಕತ್ತೆತ್ತಿ ಮೇಲೆ ನೋಡಿದರೆ ಮೇಲ್ಬಾಗದಲ್ಲಿ ಮೂಡಿಸಿರುವ ರಚನೆಯೊಂದು ಗಮನ ಸೆಳೆಯುತ್ತದೆ. ಇದು ಕೋಟೆ ಹೇಗಿದೆ ಎಂಬುದರ ಚಿತ್ರಣವನ್ನು ನೀಡುತ್ತದೆ. ನಕ್ಷತ್ರಾಕಾರದ ಈ ಚಿತ್ರ ಕೋಟೆಯ ನಕ್ಷೆಯೂ ಆಗಿದೆ. ಶತಮಾನಗಳು ಉರುಳಿದರೂ ಈ ಉಬ್ಬು ಮಾದರಿ ನಕ್ಷೆ ಇನ್ನೂ ಸುಸ್ಪಷ್ಟವಾಗಿಯೇ ಇದೆ. ಒಳಗೆ ಹೋಗಿ ನೋಡಿದರೆ ಛಾವಣಿಯಲ್ಲಿರುವ ಚಿತ್ರಕ್ಕೂ ಕೋಟೆಗೂ ಕಿಂಚಿತ್ತೂ ವ್ಯತ್ಯಾಸ ಇಲ್ಲ ಎಂಬುವುದು ತಿಳಿಯುತ್ತದೆ.

ಮುಖ್ಯದ್ವಾರದ ಎರಡು ಬದಿಯಲ್ಲಿಯೂ ಕಮಾನಿನಾಕರದ ರಚನೆಗಳಿವೆ. ಇಲ್ಲಿ ಪಹರೆ ನಡೆಸುವ ಸೈನಿಕರು ಸರದಿ ಮೇಲೆ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಮಾಡಲಾಗಿದೆ. ಕಮಾನಿನ ರಚನೆ ಗಿಡ್ಡವಾಗಿ ಕಂಡರೂ ಒಳಗಿನ ಭಾಗ ಎತ್ತರವಾಗಿ, ವಿಶಾಲವಾಗಿದೆ. ಕೋಟೆಗೆ ಇದು ಮೊದಲ ದ್ವಾರವಾದರೂ ಇಲ್ಲಿಗೆ ಬರುವುದಕ್ಕಿಂತ ಮುಂಚೆ ನಾಲ್ಕು ಹಂತಗಳಲ್ಲಿ ಸೈನಿಕ ತಪಾಸಣೆಗೆ ಒಳಪಡಬೇಕಿತ್ತು. ಪರಿಚಿತ ಸೈನಿಕರಿಗೂ ಇದು ಅನ್ವಯವಾಗುತ್ತಿತ್ತು. ಅಪರಿಚಿತರಿಗಂತೂ ಹತ್ತಿರವೂ ಸುಳಿಯಲು ಸಾಧ್ಯವಾಗುತ್ತಿರಲಿಲ್ಲ.

ಕಮಾನಿನ ಆಕಾರದ ಮುಖ್ಯದ್ವಾರ ದಾಟಿ ಒಳಗೆ ಹೋಗುತ್ತಿದ್ದಂತೆ ಬಲಗಡೆ ಮತ್ತೆ ಸಣ್ಣಸಣ್ಣ ಕಮಾನಿನ ಆಕಾರದ ರಚನೆಗಳು ಕಾಣುತ್ತವೆ. ಇದು ಕೂಡ ಸೈನಿಕರು ತಂಗಲು ಮಾಡಿದ ವ್ಯವಸ್ಥೆ. ಇದರ ರಚನೆಗಳು ಇಂದಿಗೂ ಸುಭದ್ರವಾಗಿಯೇ ಇದೆ. ದ್ವಾರ ದಾಟಿ ಮುಂದಡಿಯಿಟ್ಟರೆ ಎಡಭಾಗದಲ್ಲಿ ಮತ್ತಷ್ಟು ತೆರೆದ ಕೊಠಡಿಗಳಿರುವುದು ಗಮನ ಸೆಳೆಯುತ್ತದೆ. ಇಲ್ಲಿನ ಮಧ್ಯಭಾಗ ಮನೆಯ ಹಜಾರಗಳಂತಿದೆ. ಸುತ್ತಲೂ ಎತ್ತರವಾದ ಗೋಡೆಗಳಿವೆ.

ಮುಂದೆ ಬಲಕ್ಕೆ ತಿರುಗಿ ಮುನ್ನಡೆದರೆ ಮತ್ತೊಂದು ದ್ವಾರ ಎದುರಾಗುತ್ತದೆ. ಬಂದವರು ಇಲ್ಲಿಯೂ ಸೈನಿಕ ತಪಾಸಣೆಗೆ ಒಳಪಡಬೇಕಿತ್ತು. ಇದನ್ನು ಗಮನಿಸಿದಾಗ ಆಂತರಿಕ ಭದ್ರತೆಗೆ ಅಂದಿನ ಆಡಳಿತಗಾರರು ನೀಡಿದ್ದ ಮಹತ್ವ ಅರಿವಾಗುತ್ತದೆ. ಈ ದ್ವಾರದ ಒಳಗಡೆಯ ಎರಡು ಬದಿಯಲ್ಲಿಯೂ ಪಹರೆ ಪಡೆ ತಂಗಲು ವ್ಯವಸ್ಥೆ ಇದೆ. ಇದನ್ನು ದಾಟಿ ಮುಂದಡಿಯಿಟ್ಟರೆ ವಿಶಾಲವಾದ ತೆರೆದ ಸ್ಥಳ ಮತ್ತು ಅಲ್ಲಿನ ಕೆಲವೊಂದು ರಚನೆಗಳು ಗಮನ ಸೆಳೆಯುತ್ತವೆ. ಮಧ್ಯಭಾಗದಲ್ಲಿ ನಿಂತು ಸುತ್ತಲೂ ನೋಡಿದಾಗ ಎಂಟು ಮೂಲೆಗಳಿಯೂ ಇರುವ ಸಣ್ಣಸಣ್ಣ ಗೋಪುರಗಳು ಕಾಣುತ್ತವೆ.

ಮಧ್ಯಭಾಗದಲ್ಲಿ ಆಯತಕಾರದ ರಚನೆಯ ತೆರೆದ ಬಾವಿ ಇದೆ. ನಾಲ್ಕು ಕಡೆಯಿಂದಲೂ ಇದರ ಕೆಳಗೆ ಇಳಿಯುವಂತೆ ಪಾವಟಿಗೆಗಳನ್ನು ಮಾಡಲಾಗಿದೆ. ಬಾವಿಯನ್ನು ಸಹ ಕಲಾತ್ಮಕವಾಗಿ ನಿರ್ಮಿಸಿರುವುದು ಇದನ್ನು ಕಟ್ಟಿದವರ ಸದಭಿರುಚಿಯನ್ನು ಸಾರುತ್ತದೆ. ಪಾವಟಿಗೆಗಳು ಇಂದಿಗೂ ಸುಸ್ಥಿತಿಯಲ್ಲಿದೆ. ಮಧ್ಯಭಾಗದಲ್ಲಿ ಬಾವಿ ಇದೆ. ಅಲ್ಲಿ ತುಸು ನೀರು ನಿಂತಿದೆ. ಬಹುಶಃ ಜಲಮೂಲವನ್ನು ಸ್ವಚ್ಛ ಮಾಡದ ಕಾರಣ ಈ ಸ್ಥಿತಿ ಇದೆ. ಮೊದಲು ಆರಂಭಿಕ ಪಾವಟಿಗೆ ತನಕವೂ ನೀರು ತುಂಬಿರುತ್ತಿತ್ತು ಎಂದು ಹೇಳಲಾಗುತ್ತದೆ.

ತೆರೆದ ಬಾವಿಯ ಎರಡು ಬದಿಯಲ್ಲಿಯೂ ಎರಡು ಪುಟ್ಟ ಕಟ್ಟಡಗಳಿವೆ. ಹತ್ತಿರ ಹೋಗಿ ನೋಡಿದರೆ ಕೆಳಗಿಳಿಯಲು ಪಾವಟಿಗೆಗಳಿವೆ. ಇಳಿದು ಹೋದರೆ ಎಡಬದಿಯಲ್ಲಿ ಮತ್ತೊಂದು ದ್ವಾರ ಕಾಣುತ್ತದೆ. ಅಲ್ಲಿ ಸಂಪೂರ್ಣ ಕಗ್ಗತ್ತಲು. ನಂತರ ಮುಂದೆ ಹೋಗಲು ಸಾಧ್ಯವಿಲ್ಲದಂತೆ ಅದು ಮುಚ್ಚಲ್ಪಟ್ಟಿದೆ. ಮತ್ತೊಂದು ಕಟ್ಟಡವೂ ಹೀಗೆಯೇ ಇದೆ. ಕೆಲವರು ಇದನ್ನು ಸುರಂಗ ಮಾರ್ಗಗಳೆಂದು ಅದು ಬಹು ದೂರದವರೆಗೆ ಸಾಗಿ ತೆರೆದುಕೊಳ್ಳುತ್ತದೆ ಎನ್ನುತ್ತಾರೆ. ಇನ್ನು ಕೆಲವರು ಇದು ಸುರಂಗ ಮಾರ್ಗಗಳಲ್ಲ ಎನ್ನುತ್ತಾರೆ. ಬಹುಶಃ ಇದು ಸೂಕ್ಷ್ಮ ಸ್ಪೋಟಕಗಳನ್ನು ಇಡಲು ಮಾಡಿದ ಮದ್ದಿನ ಮನೆಗಳಿರಬಹುದು.

ಕೋಟೆ ಒಳಗೆ ಅಂಚಿನ ಗೋಡೆಗಳ ಪಕ್ಕ ನಡೆಯುತ್ತಾ ಹೋದರೆ ಹೊರಭಾಗದಲ್ಲಿ ಸುತ್ತಲೂ ಕಂದಕ ಇರುವುದು ತಿಳಿಯುತ್ತದೆ. ಶತ್ರುಪಡೆಗಳು ಕೋಟೆ ಗೋಡೆ ಸಮೀಪಕ್ಕೆ ಬಾರದಂತೆ ಇಂಥ ಕಂದಕಗಳನ್ನು ನಿರ್ಮಿಸುವುದು ಅಂದಿನ ದಿನಗಳಲ್ಲಿ ಸಾಮಾನ್ಯವಾಗಿತ್ತು. ಮೊದಲು ಆಳವಾಗಿದ್ದ ಕಂದಕ ಮಣ್ಣು, ಗಿಡಮರಬಳ್ಳಿಗಳಿಂದ ಮುಚ್ಚಿ ಹೋಗಿದೆ. ಕೋಟೆಯ ಗೋಡೆ ನಡುನಡುವೆ ಫಿರಂಗಿಗಳನ್ನು ಇಡಲು ಅಂತರ ನೀಡಲಾಗಿದೆ. ಇಲ್ಲಿನ ಹೊರಭಾಗಗಳು ಇಳಿಜಾರಾಗಿವೆ.

ಕೋಟೆ ಗೋಡೆಯ ಸುತ್ತಲೂ ನಡೆಯುತ್ತಾ ಬಂದರೆ ಅಷ್ಟಮೂಲೆಗಳಲ್ಲಿಯೂ ಪುಟ್ಟಪುಟ್ಟ ಗುಮ್ಮಟಗಳಿವೆ. ಇದನ್ನು ಇಟ್ಟಿಗೆ, ಸುಣ್ಣದ ಗಾರೆ ನಿರ್ಮಿಸಿ ರೂಪಿಸಲಾಗಿದೆ. ಗುಮ್ಮಟದ ಕೆಳಭಾಗದಲ್ಲಿ ಪಹರೆಯವರು ಇರಲು ವ್ಯವಸ್ಥೆ ಮಾಡಲಾಗಿದೆ. ಒಳಭಾಗದಲ್ಲಿ ನಿಂತು ಬಹು ದೂರದವರೆಗೂ ಕಣ್ಣು ಹಾಯಿಸಬಹುದು. ತೀವ್ರ ಮಳೆ, ಬಿಸಿಲುಕಾಲದಲ್ಲಿ ಸೈನಿಕರು ಒಳಗಡೆಯೇ ಇದ್ದು ಹೊರಗೆ ಹದ್ದಿನ ಕಣ್ಣಿಡಲು ಇವುಗಳು ಸಹಾಯಕವಾಗಿದ್ದವು. ಹೊರಭಾಗದಿಂದ ಸುತ್ತಲೂ ನೋಡಿದಾಗ ಕೋಟೆ, ಸಹ್ಯಾದ್ರಿ ಸಾಲಿನಿಂದ ಆವೃತ್ತವಾಗಿರುವುದು ತಿಳಿಯುತ್ತದೆ.

ಇತಿಹಾಸದ ಮುಖ್ಯ ಘಟ್ಟಗಳನ್ನು ತಿಳಿಸುವ ಸ್ಮಾರಕಗಳನ್ನು ರಕ್ಷಿಸುವುದು ಆದ್ಯತೆಯ ಕರ್ತವ್ಯವಾಗಬೇಕು. ಇದರಿಂದ ಎಲ್ಲ ಪೀಳಿಗೆಗಳಿಗೂ ಅದರ ಮಹತ್ವ ಅರಿಯುವುದು ಸಾಧ್ಯವಾಗುತ್ತದೆ. ಮಂಜಿರಾಬಾದ್ ನಂಥ ಕೋಟೆಯನ್ನು ಸಂರಕ್ಷಿಸುವುದು ಅಂದಿನ ವಾಸ್ತುಶಿಲ್ಪದ ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯರು, ಸ್ಥಳೀಯ ಆಡಳಿತ ಸಂಸ್ಥೆಗಳು ಮುಖ್ಯವಾಗಿ ಸರ್ಕಾರಗಳು ಗಮನ ಹರಿಸಬೇಕು. ಆದರಿಲ್ಲಿ ಇದರ ಕೊರತೆ ಇದೆ.

ಕಾಸರಗೋಡಿನಲ್ಲಿರುವ ಬೇಕಲ್ ಕೋಟೆಯನ್ನು ಮಾದರಿಯಾಗಿ ಸಂರಕ್ಷಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ವಹಿಸಿದ ಆಸಕ್ತಿ ಕಾರಣವಾಗಿದೆ. ಆದರೆ ಬೇಕಲ್ ಕೋಟೆಯೊಂದಿಗೆ ಮಂಜಿರಾಬಾದ್ ಕೋಟೆ ಹೋಲಿಸಿ ನೋಡಿದಾಗ ನಿರ್ವಹಣೆಯ ವೆತ್ಯಾಸಗಳು ಎದ್ದು ಕಾಣುತ್ತವೆ. ಇದು ಒಂದು ಕಡೆಯಾದರೆ ಸ್ಮಾರಕಗಳನ್ನು ಸಂರಕ್ಷಿಸುವಲ್ಲಿ ಪ್ರವಾಸಿಗರ ಕರ್ತವ್ಯವಾದರೂ ಏನು ಎಂಬ ಪ್ರಶ್ನೆ ಎದುರಾಗುತ್ತದೆ.

ಮಂಜಿರಾಬಾದ್ ಕೋಟೆಯ ನಿರ್ಮಾಣಕ್ಕೆ ಗ್ರಾನೈಟ್ ಶಿಲೆಗಳನ್ನು ಬಳಸಲಾಗಿದೆ. ಮುಖ್ಯವಾಗಿ ಸ್ಥಳೀಯ ಪರಿಕರಗಳನ್ನು ಹೆಚ್ಚು ಬಳಸಿ ರೂಪಿಸಲಾಗಿದೆ. ಕರಾವಳಿ ಭಾಗದ ಕೋಟೆಗಳನ್ನು ಜಂಬಿಟ್ಟಿಗೆ ಬಳಸಿ ರೂಪಿಸಲಾಗಿದೆ. ಆದರೆ ಮಂಜಿರಾಬಾದ್ ಕೋಟೆಗೆ ಸ್ಥಳೀಯ ಸುಟ್ಟ ಇಟ್ಟಿಗೆ ಮತ್ತು ಸುಣ್ಣದ ಗಾರೆ ಬಳಸಲಾಗಿದೆ. ಕೋಟೆಯ ಕೆಲವೆಡೆ  ಸುಣ್ಣದ ಗಾರೆ ಸ್ಥಿತಿ ಉತ್ತಮವಾಗಿದೆ. ಆದರೆ ಬಹಳಷ್ಟು ಕಡೆ ಗಾರೆ ಕಿತ್ತು ಬಂದಿದೆ. ಇದರಿಂದಾಗಿ ಒಳಭಾಗಕ್ಕೆ ಸಲಿಸಾಗಿ ನೀರು ಇಳಿದು ಕಟ್ಟಡ ದಿನದಿಂದ ದಿನಕ್ಕೆ ಶಿಥಿಲವಾಗುತ್ತಿದೆ.

ಕೋಟೆ ನೋಡಲು ಬಂದ ಪ್ರವಾಸಿಗರು ಗೋಡೆಗಳ ಅಂಚಿನ ಮೇಲೆ ನಡೆಯುತ್ತಾ ಒಳಗಿನ ಮತ್ತು ಹೊರಗಿನ ದೃಶ್ಯಗಳನ್ನು ವೀಕ್ಷಿಸಬೇಕು. ಆದರೆ ಇಲ್ಲಿನ ಪರಿಸ್ಥಿತಿಯೇ ಬೇರೆ. ಬಂದವರಲ್ಲಿ ಅನೇಕರು ಗೋಡೆಗಳ ಮೇಲೆಯೇ ನಡೆಯುತ್ತಾ ಸಾಗುತ್ತಾರೆ. ಇದು ಅವರ ಸುರಕ್ಷತೆ ಮತ್ತು ಕೋಟೆ ಸಂರಕ್ಷಣೆ ಈ ಎರಡೂ ದೃಷ್ಟಿಯಿಂದಲೂ ಅಪಾಯಕಾರಿ. ತುಸು ಆಯ ತಪ್ಪಿದರೂ ಗೋಡೆ ಮೇಲೆ ನಡೆಯುವವರು ಕಂದಕದೊಳಗೆ ಬೀಳುವ ಅಪಾಯವಿದೆ. ಹೀಗೆ ನಡೆದಾಡುವುದರಿಂದ ಗೋಡೆಯ ಮೇಲಿನ ಗಾರೆ ಈಗಾಗಲೇ ಕಿತ್ತು ಹೋಗಿದೆ. ಇಟ್ಟಿಗೆಗಳು ಕಳಚಿಕೊಳ್ಳುತ್ತಿವೆ.

ಬಂದ ಪ್ರವಾಸಿಗರನೇಕರು ಗುಮ್ಮಟಗಳ ಮೇಲೆ ನಿಲ್ಲುವುದು, ಕೂರುವುದು ಮಾಡುತ್ತಾರೆ. ಒಟ್ಟೊಟ್ಟಿಗೆ ಮೂರ್ನಾಲ್ಕು ಮಂದಿ ನಿಂತು ಸುತ್ತಲೂ ನೋಡುತ್ತಿರುತ್ತಾರೆ. ಕೆಳಗೆ ನಿಂತು ನೋಡುವುದಕ್ಕೂ ಗುಮ್ಮಟದ ಮೇಲಿನಿಂದ ನಿಂತು ನೋಡುವುದಕ್ಕೂ ಕಿಂಚಿತ್ತೂ ವ್ಯತ್ಯಾಸವಿಲ್ಲ. ಹೀಗೆ ಮಾಡುತ್ತಿರುವುದರಿಂದ ಗುಮ್ಮಟಗಳು ಅವಸಾನದ ಅಂಚಿಗೆ ಬಂದಿವೆ. ಆದರೂ ಇದರ ಸ್ಥಿತಿಯ ಬಗ್ಗೆ ಮೇಲೆ ಹತ್ತಿ ನಿಲ್ಲುವವರು ಗಮನ ನೀಡುವುದಿಲ್ಲ. ಇದೊಂದು ಕಡೆಯಾದರೆ ಗುಮ್ಮಟದ ಒಳಭಾಗ ಅನಧಿಕೃತ ಶೌಚಾಲಯಗಳಾಗಿ ಪರಿಣಮಿಸಿ. ಒಳಗೆ ಹೋಗುವುದಿರಲಿ, ಸಮೀಪ ನಿಲ್ಲಲ್ಲೂ ಆಗದಷ್ಟು ಗಬ್ಬು ನಾರುತ್ತಿವೆ.

ಕೋಟೆ ನೋಡಲು ಬಂದ ಅನೇಕರಿಗೆ ತಮ್ಮ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಬೇಕೆಂಬ ಹಂಬಲ. ಹೀಗಾಗಿ ಕೋಟೆ ಗೋಡೆಗಳು, ಗುಮ್ಮಟಗಳ ಮೇಲೆ ತಮ್ಮ ಹೆಸರುಗಳನ್ನು ಆಳವಾಗಿ ಕೆತ್ತಿದ್ದಾರೆ. ಇದು ಕೂಡ ಕೋಟೆಗೆ ಕುತ್ತಾಗಿ ಪರಿಣಮಿಸಿದೆ. ದಪ್ಪವಾಗಿ ಲೇಪಿಸಲ್ಪಟ್ಟ ಗಾರೆ ಕಿತ್ತು ಹೋಗಿದೆ. ಇಲ್ಲೆಲ್ಲ ನೀರು ನುಗ್ಗುವುದರಿಂದ ಇಟ್ಟಿಗೆಗಳು ಶಿಥಿಲವಾಗಿ ಉದುರುತ್ತಿವೆ. ಅನೇಕ ಕಡೆ ಗೋಡೆಗಳ ಮೇಲ್ಮೆಯಲ್ಲಿ ಗಿಡ-ಗಂಟೆ ಹುಲ್ಲು ಬೆಳೆದು ನಿಂತಿವೆ.

ಕೋಟೆ ವೀಕ್ಷಣೆಗೆ ತೀವ್ರ ಪಾನಮತ್ತರಾಗಿ ಬರುವ ಗುಂಪುಗಳು ಇವೆ. ಇವರು ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಒಳಗೆ ಅಡ್ಡಾಡುವುದು ಅವರ ಸುರಕ್ಷತೆ ದೃಷ್ಟಿಯಿಂದಲೂ ಅಪಾಯಕಾರಿ. ಹೀಗೆ ಬರುವ ಹಲವರು ಜೋರಾಗಿ ಕಿರುಚಾಡುವುದು ಉಳಿದ ಪ್ರವಾಸಿಗರಿಗೂ ಕಿರಿಕಿರಿ ಉಂಟು ಮಾಡುತ್ತದೆ. ಹೀಗೆ ಆಗದಂತೆ ತಡೆಯಲು ಅಗತ್ಯವಾಗಿ ಬೇಕಾದ ಸಿಬ್ಬಂದಿ ಅಲ್ಲಿಲ್ಲ. ಯಾವಗಲೋ ಒಮ್ಮೊಮ್ಮೆ ದೋಣೆ ಹಿಡಿದು ಮಫ್ತಿಯಲ್ಲಿರುವ ಪ್ರವಾಸಿ ಪೊಲೀಸ್ ಒಬ್ಬರು ಕಾಣುತ್ತಾರೆ.

Similar Posts

Leave a Reply

Your email address will not be published. Required fields are marked *