ಕರ್ನಾಟಕ ರಾಜ್ಯದ ಮಹಿಳೆಯರಿಗೆ ಸಾರಿಗೆ ನಿಗಮದ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶ ನೀಡಿರುವುದಕ್ಕೆ ಪ್ರಶಂಸೆಗಿಂತಲೂ ಟೀಕೆಗಳೇ ಹೆಚ್ಚು ವ್ಯಕ್ತವಾಗುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆ ಎಂದು ಟೀಕಾಕಾರರು ಹೇಳುತ್ತಿದ್ದಾರೆ. ಮೇಲ್ನೋಟಕ್ಕೆ ಇವರ ಮಾತು ನಿಜವೆಂದು ತೋರಿದರೂ ವಾಸ್ತವ ಬೇರೇಯೇ ಇದೆ… ಅವುಗಳೇನು ?
ಅಪಾರ ಹಣ ಹರಿದು ಬರುವ ಅವಕಾಶ
ಕಳೆದ ಎರಡು ದಶಕಗಳಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸದ ಅಭಿರುಚಿ ಹೆಚ್ಚಾಗಿದೆ. ಇಲ್ಲಿಯ ಮಹಿಳಾ ಗುಂಪುಗಳು ಚೀಟಿ ಹಾಕಿಕೊಂಡು ಅಥವಾ ಪಯಣಕ್ಕೆ ತಗುಲುವ ವೆಚ್ಚವನ್ನು ಸಮಾನವಾಗಿ ಹಂಚಿಕೊಂಡು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ದೀರ್ಘ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ. ಕೊರೊನಾ ಕಾಲಘಟ್ಟದಲ್ಲಿ ಇದಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಈಗ ಆ ದುಸ್ವಪ್ನ ಕಳೆದಿದೆ. ಈಗ ರಾಜ್ಯದ ಕಾಂಗ್ರೆಸ್ ಸರ್ಕಾರ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ತಯಾಣ ಎಂದು ತೀರ್ಮಾನಿಸಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅಪಾರ ಹಣ ಹರಿದು ಬರುವ ಅವಕಾಶಗಳಿವೆ.
ಪ್ರವಾಸದ ದಿನಗಳ ವ್ಯಾಪ್ತಿಯೂ ಹೆಚ್ಚಳ
ಸಣ್ಣ ಅಥವಾ ದೊಡ್ಡ ಗುಂಪಾಗಿ ಟೆಂಪೋ ಟ್ರಾವೆಲರ್, ಮಿನಿ ಬಸ್, ಬಸ್ ಗಳಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದ ಗ್ರಾಮೀಣ, ನಗರ ಪ್ರದೇಶಗಳ ಮಹಿಳೆಯರು ಇನ್ನು ಮುಂದೆ ರಾಜ್ಯ ಸಾರಿಗೆ ಬಸ್ ಗಳಲ್ಲಿ ಪ್ರವಾಸ ಕೈಗೊಳ್ಳುತ್ತಾರೆ. ಬಸ್ ಛಾರ್ಜ್ ಕೊಡಬೇಕಾದ ಹೊರೆ ಇಲ್ಲದ ಕಾರಣ ಇವರ ಪ್ರವಾಸದ ದಿನಗಳ ವ್ಯಾಪ್ತಿಯೂ ಹೆಚ್ಚಳವಾಗಬಹುದು. ಬಸ್ ಪ್ರಯಾಣ ಉಚಿತವಾದರೂ ಉಳಿದ ಸೌಲಭ್ಯಗಳು ಉಚಿತವೇ ?
ಕಾಯ್ದಿರಿಸುವ ಸೀಟುಗಳಿಗೆ ಶುಲ್ಕ
ಒಂದು ಬಸ್ಸಿನಲ್ಲಿ ಇರುವ ಒಟ್ಟು ಸೀಟುಗಳ 50ರಷ್ಟು ಮಹಿಳೆಯರಿಗೆ ಮೀಸಲು ಎಂದು ಸರ್ಕಾರ ಹೇಳಿದೆ. ಉಚಿತ ಬಸ್ ಪ್ರಯಾಣದ ಸಂದರ್ಭದಲ್ಲಿ ಸೀಟುಗಳನ್ನು ಕಾಯ್ದಿರಿಸುವ ಅನುಕೂಲ ನೀಡುವುದಿಲ್ಲ. ಇದರಿಂದ ರಾತ್ರಿ ವೇಳೆ ದೂರದ ಊರುಗಳಿಗೆ ಪ್ರಯಾಣ ಮಾಡುವ ಮಹಿಳೆಯರಿಗೆ ಅನಾನುಕೂಲ. ಅವರು ಬಸ್ ನಿಲ್ದಾಣಕ್ಕೆ ಬಂದಾಗ ನಿಗದಿ ಮಾಡಿರುವ ಸೀಟುಗಳು ಭರ್ತಿಯಾಗಿರಬಹುದು. ಹಗಲಿನ ವೇಳೆ ಆದರೆ ಮುಂದಿನ ಬಸ್ಸಿಗೆ ಹೋಗೋಣ ಎಂದು ಯೋಚಿಸಬಹುದು. ಆದರೆ ರಾತ್ರಿ ವೇಳೆ ಬಸ್ ಗಳ ಸಂಖ್ಯೆ ಕಡಿಮೆ ಇರುತ್ತದೆ. ಈ ದೃಷ್ಟಿಯಿಂದ ರಾಜ್ಯದ ಮಹಿಳೆಯರಿಗೆ ಬಸ್ಸಿನಲ್ಲಿ ಕಾಯ್ದಿರಿಸುವ ವ್ಯವಸ್ಥೆ ನೀಡಬೇಕು. ಇದಕ್ಕೆ ನಿಗದಿತ ಶುಲ್ಕ ವಿಧಿಸಬಹುದು. ಪ್ರಯಾಣ ದರವೇ ಉಚಿತವಿರುವಾಗ ಈ ಶುಲ್ಕ ನೀಡಲು ಯಾರೂ ಬೇಸರ ಮಾಡಿಕೊಳ್ಳುವುದಿಲ್ಲ !
ದೇಗುಲಗಳ ಹುಂಡಿಗಳು ಭರ್ತಿ
ಸಾಮಾನ್ಯವಾಗಿ ಮಹಿಳೆಯರು ಧಾರ್ಮಿಕ ಕೇಂದ್ರಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಭಕ್ತಿಭಾವದಿಂದ ದೇವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ತಮ್ಮ ಶಕ್ತ್ಯಾನುಸಾರ ಹಣ ಹಾಕುತ್ತಾರೆ. ರಾಜ್ಯದ ಬಹುತೇಕ ಪ್ರಮುಖ ದೇವಸ್ಥಾನಗಳು ಸರ್ಕಾರದ ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿವೆ. ಹೀಗೆ ಹಾಕುವ ಕಾಣಿಕೆ ಹಣ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಲ್ಲುತ್ತದೆ. ಅತೀ ಹೆಚ್ಚಿನ ವರಮಾನವಿರುವ ಒಂದೆರಡು ದೇಗುಲಗಳು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿಲ್ಲ. ಉದಾಹರಣೆಗೆ ಹೇಳುವುದಾದರೆ ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನ ಖಾಸಗಿಯವರ ಆಡಳಿತದಲ್ಲಿವೆ. ಇಂಥ ದೇವಸ್ಥಾನಗಳನ್ನು ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಮುಂದಾಗಬೇಕು. ಈ ಸಂದರ್ಭದಲ್ಲಿ ಯಾವುದೇ ವಶೀಲಿ, ಮುಲಾಜಿಗೆ ಒಳಗಾಗಬಾರದು.
ತೆರಿಗೆ ಸಂಗ್ರಹಣೆ
ಪ್ರವಾಸಿ ಕೇಂದ್ರಗಳ ಹೋಟೆಲ್ ಗಳು, ವಸತಿ ಗೃಹಗಳು ವಹಿವಾಟು ಹೆಚ್ಚಾಗುತ್ತದೆ. ಇದರಲ್ಲಿ ತನ್ನ ಪಾಲಿಗೆ ಬರುವ ತೆರಿಗೆ ಸಂಗ್ರಹಣೆ ವಿಷಯದಲ್ಲಿ ರಾಜ್ಯ ಸರ್ಕಾರ ಬಿಗಿಕ್ರಮ ಅನುಕರಿಸಬೇಕು. ಜಿ.ಎಸ್.ಟಿ. ಮೂಲಕ ಸಂಗ್ರಹವಾಗುವ ತೆರಿಗೆಯಾದರೂ ಇದರಲ್ಲಿ ರಾಜ್ಯ ಸರ್ಕಾರದ ಪಾಲು ಸಹ ಇರುತ್ತದೆ.
ಹನಿಹನಿಗೂಡಿದರೆ ಹಳ್ಳ
ಇವುಗಳಲ್ಲದೇ ಪ್ರವಾಸಿ ಕೇಂದ್ರಗಳಲ್ಲಿ ಮಾರಾಟವಾಗುವ ಪಾತ್ರೆಪಡಗಗಳು, ಉಡುಪುಗಳು, ಅಲಂಕಾರಿಕಾ ಸಾಮಗ್ರಿಗಳು, ಸ್ಥಳೀಯ ಅಸ್ಮಿತೆಯ ಪದಾರ್ಥಗಳು, ತಿನಿಸುಗಳ ವ್ಯಾಪಾರದ ಭರಾಟೆಯೂ ಹೆಚ್ಚುತ್ತದೆ. ಇಂಥಲ್ಲಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಲ್ಲದೇ ತಪ್ಪಿಸಿಕೊಳ್ಳುವ ತೆರಿಗೆ ಪ್ರಮಾಣ ಅಧಿಕ. ಇದನ್ನು ಸಂಗ್ರಹಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಸಣ್ಣ ಪ್ರಮಾಣದ ತೆರಿಗೆ ಎಂದು ಉಢಾಪೆ ಮಾಡಬಾರದು. ಹನಿಹನಿಗೂಡಿದರೆ ಹಳ್ಳವಲ್ಲವೇ ?
ರಿಯಾಯತಿ ದರದ ಮಾರಾಟ
ವಿಮಾನಗಳಲ್ಲಿ ಆಕರ್ಷಕ ಸಾಮಗ್ರಿಗಳನ್ನು ಒಂದಕ್ಕೆ ಹತ್ತರಷ್ಟು ದರವಿಟ್ಟು ಮಾರಾಟ ಮಾಡುತ್ತಾರೆ. ರಾಜ್ಯ ಸರ್ಕಾರ ಈ ರೀತಿ ಸುಲಿಗೆ ಮಾಡುವ ಅವಶ್ಯಕತೆ ಇರುವುದಿಲ್ಲ.ಸರ್ಕಾರಿ ಅಧೀನದ ವಿವಿಧ ನಿಗಮಗಳ ಮೂಲಕ ಮಾರಾಟವಾಗುವ ಕರಕುಶಲ ವಸ್ತುಗಳು, ಖಾದಿ ಉಡುಪುಗಳು, ಪಾದರಕ್ಷೆಗಳು, ಅಗರಬತ್ತಿಗಳು , ಸಾಬೂನುಗಳು ಇತ್ಯಾದಿಗಳನ್ನು ದೂರ ಪ್ರಯಾಣದ ಹಾಗೂ ಪ್ರವಾಸಿ ಕೇಂದ್ರಗಳತ್ತ ತೆರಳುವ ಬಸ್ ಗಳಲ್ಲಿ ರಿಯಾಯತಿ ದರವಿಟ್ಟೇ ಮಾರಾಟ ಮಾಡಬಹುದು. ಇದರಿಂದ ನಿಗಮಗಳ ವಹಿವಾಟು ಹೆಚ್ಚುತ್ತದೆ.
ನಿರ್ವಾಹಕರು, ಚಾಲಕರಿಗೆ ಕಮೀಶನ್
ಸಾರಿಗೆ ನಿಗಮವೇ ಇಂಥ ಸಾಮಗ್ರಿಗಳನ್ನು ರಿಯಾಯತಿ ದರದಲ್ಲಿ ನೇರವಾಗಿ ಖರೀದಿಸಿ ತನ್ನ ಲಾಭಾಂಶವಿಟ್ಟುಕೊಂಡು ಮಾರಾಟ ಮಾಡಬಹುದು.ಇದರಿಂದ ಸಾಕಷ್ಟು ಅರ್ಥಿಕ ಲಾಭವಿದೆ. ಇವುಗಳನ್ನು ಮಾರಾಟ ಮಾಡುವ ಬಸ್ಸಿನ ನಿರ್ವಾಕರು, ಚಾಲಕರಿಗೂ ಮಾರಾಟದ ಲಾಭಾಂಶದಲ್ಲಿ ಕಮೀಶನ್ ನೀಡಬಹುದು. ಇದರಿಂದ ಅವರ ಉತ್ಸಾಹವೂ ಹೆಚ್ಚುತ್ತದೆ.
ರಾಜ್ಯದಲ್ಲಿ ಪ್ರವಾಸೋದ್ಯಮ ಇಲಾಖೆಯಿದೆ. ಆದರೆ ಅದು “ನಾಮ್ ಕಾ ವಾಸ್ತೆ” ಎನ್ನುವಂತಿದೆ. ಇದರಿಂದ ಪ್ರವಾಸಿ ಕೇಂದ್ರಗಳ ಹಣಕಾಸು ವಹಿವಾಟಿನ ಸಿಂಹಪಾಲು ಖಾಸಗಿಯವರ ಪಾಲಾಗುತ್ತಿದೆ. ಇದು ತಪ್ಪೇನಲ್ಲ. ಇವುಗಳಿಗೆ ಸರ್ಕಾರಿ ಇಲಾಖೆ ಪೈಪೋಟಿ ನೀಡಿದರೆ ಇದರ ಪ್ರಯೋಜನ ಪ್ರವಾಸಿಗರಿಗೆ ಸಲ್ಲುತ್ತದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ತನ್ನ ಅಧೀನದ ಪ್ರವಾಸೋದ್ಯಮ ಇಲಾಖೆಯನ್ನು ಬಲಪಡಿಸಬೇಕು, ಸಮರ್ಥರು, ದೂರದೃಷ್ಟಿ ಉಳ್ಳವರನ್ನು ಮುಖ್ಯಸ್ಥರನ್ನಾಗಿ ನೇಮಿಸಬೇಕು. ಆಗ ಉಚಿತವಾಗಿ ಕೊಟ್ಟಿದ್ದು ಖಚಿತವಾಗಿ ರಾಜ್ಯ ಸರ್ಕಾರಕ್ಕೆ ದುಪ್ಪಟ್ಟು ಹಿಂದಿರುಗುತ್ತದೆ.
– ಕುಮಾರ ರೈತ