ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಅಡ್ಡಾಡಿದ್ದೇನೆ. ನೋಡದೇ ಇರುವ ತಾಲ್ಲೂಕುಗಳು, ರುಚಿ ನೋಡದೇ ಇರುವ ತಿನಿಸುಗಳು ಇಲ್ಲ ಎಂದರೆ ಉತ್ಪ್ರೇಕ್ಷೆ ಮಾತಲ್ಲ ! ಕೆಲವೊಂದು ಊರುಗಳ ಹೆಸರುಗಳು ಕೆಲವೊಂದು ತಿನಿಸುಗಳ ಜೊತೆಗೆ ಜಂಟಿ ಹಾಕಿಕೊಂಡಿರುತ್ತವೆ ! ದಾವಣಗೆರೆ ಬೆಣ್ಣೆದೋಸೆ, ಮುಳಬಾಗಿಲು ದೋಸೆ, ಚಿಂತಾಮಣಿ ಚಾಟ್ಸ್, ಬೆಳಗಾವಿ ಕುಂದಾ, ಧಾರವಾಡ ಪೇಡ ಇತ್ಯಾದಿ.
ಕೆಲವೊಮ್ಮೆ ಇಂಥ ಜಂಟಿ ಹೆಸರಿನ ಊರುಗಳಲ್ಲಿ ಸಿಗುವ ತಿನಿಸಿಗಿಂತಲೂ ಬೇರೆ ಊರಿನಲ್ಲಿ ಸಿಗುವ ತಿನಿಸಿನ ರುಚಿ ಅತ್ಯಧಿಕವಾಗಿರುತ್ತದೆ. ಉದಾಹರಣೆಗೆ ಧಾರವಾಡ ಪೇಢಾ ! ನಾನು ಶಾಲೆಯಲ್ಲಿದ್ದಾಗ ಲೈನ್ ಬಜಾರ್ ಮನೆ ಕಮ್ ಅಂಗಡಿ (ಜಗಲಿಯಲ್ಲಿ ಪೇಢಾ ಮಾರಾಟ ಮಾಡ್ತಿದ್ರು ಎಂಬ ನೆನಪು) ಕ್ಯೂ ನಿಂತು ಠಾಕೂರ್ ಪೇಢಾ ತಂದಿದ್ದೆ ! ಪತ್ರಕರ್ತನಾಗಿ ಕೆಲಸ ಮಾಡತೊಡಗಿದಾಗ ಕೃಷಿಕರೊಬ್ಬರನ್ನು ಸಂದರ್ಶಿಸಲು ಬೆಳಗಾವಿ ಜಿಲ್ಲೆಯ ಐನಾಪುರಕ್ಕೆ ಹೋಗಿದ್ದೆ. ಅಲ್ಲಿ ತಿಂದ ಪೇಢಾ ರುಚಿಗೆ ಮಾರುಹೋದೆ. ಅದರ ಮುಂದೆ ಮತ್ತೊಂದು ಪೇಢಾ ಇಲ್ಲ ಎನಿಸಿತು. ಹಾಗೆಯೇ ಮೈಸೂರು ಪಾಕ್ ತಿನಿಸನ್ನು ಮೈಸೂರಿನಲ್ಲಿ ತಯಾರು ಮಾಡುವುದಕ್ಕಿಂತಲೂ ರುಚಿಕರವಾಗಿ ಬೇರೆ ಊರುಗಳಲ್ಲಿ ಮಾಡುತ್ತಾರೆ. ಹೀಗೆ ಹೇಳುತ್ತಾ ಹೋಗಬಹುದು. ಈ ವಿಷಯ ಇರಲಿ,ನಾನು ಹೇಳಲು ಹೊರಟ್ಟಿದ್ದು ಬೇರೆಯೇ ಇದೆ !
ಸಾಮಾನ್ಯವಾಗಿ ಸಂಜೆವೇಳೆ ಬಯಲುಸೀಮೆಯ ಬಹುತೇಕ ಹೋಟೆಲುಗಳಲ್ಲಿ ಬೆಳಗ್ಗೆ ಮಾಡುವ ತಿಂಡಿಗಳೇ ರಿಪೀಟ್ ಆಗಿರುತ್ತವೆ. ದೋಸೆಯೇ ವಿಶೇಷ. ಇದಲ್ಲದೇ ಬೋಂಡಾ ಸೂಪ್, ಕೆಲವೆಡೆ ಮಂಗಳೂರು ಬಜ್ಜಿ, ಉತ್ತರ ಕರ್ನಾಟಕದಲ್ಲಿ ಗಿರ್ಮಿಟ್ಟು, ಮೆಣಸಿನಕಾಯಿ ಬಜ್ಜೆ ಜೊತೆಗ ಅಧಿಕ ಸಕ್ಕರೆ ಹಾಕಿದ ಚಹಾ.
ದಕ್ಷಿಣ ಕನ್ನಡದಲ್ಲಿ ಸಂಜೆಯ ವೇಳೆಗೆ ವೈವಿಧ್ಯ ತಿನಿಸುಗಳನ್ನು ಮಾಡುತ್ತಾರೆ. ಕೆಲವು ಸಾಂಪ್ರದಾಯಿಕ ಹೋಟೆಲ್ ಗಳಲ್ಲಿ ಈ ಸಮಯದಲ್ಲಿ ಇರುವ ಮೆನು ನೋಡಿಯೇ ಸುಸ್ತಾಗುತ್ತದೆ. ಕೆಲಸದ ಮೇಲೆ ಮಂಗಳೂರಿಗೆ ಹೋಗಿದ್ದೆ. ವಾಪಸು ಹೋಟೆಲ್ ರೂಮಿಗೆ ಬಂದೆ. ಧರಿಸಿದ್ದ ಬಟ್ಟೆಗಳು ಕರಾವಳಿಯ ಧಗೆಯಿಂದ ನೀರಿನಂತೆ ಹರಿಯುತ್ತಿದ್ದ ಬೆವರಿಗೆ ಅಂಟಿಕೊಂಡಿದ್ದವು. ತಣ್ಣೀರಿನಲ್ಲಿ ಸ್ನಾನ ಮಾಡಿದೆ. ಹೊರಗೆ ಬಂದೆ. ಹಾಗೆ ನಡೆಯುತ್ತಾ ಬಂದಾಗ ಪಿವಿಎಸ್ ಸರ್ಕಲ್ ಬಳಿ ಇರುವ ಅಯೋಧ್ಯಾ ಹೋಟೆಲ್ ಕಂಡಿತು !
ನಾನು, ಸಾಮಾನ್ಯವಾಗಿ ಮಧ್ಯಾಹ್ನ ಊಟ ಮಾಡೋದಿಲ್ಲ. ಬೆಳ್ಬೆಳಿಗ್ಗೆ ಗಡದ್ದು ತಿಂಡಿ ತಿಂದಿದ್ದರೆ ಸಂಜೆಯಷ್ಟರಲ್ಲಿ ಜೋರು ಹಸಿವು. ಸಂಜೆಯೇನಾದ್ರೂ ತಿಂದ್ರೆ ಮತ್ತೆ ರಾತ್ರಿ ಊಟ ಮಾಡೋದಿಲ್ಲ. ಸಮಯ ಸಂಜೆ ಐದು ಕಳೆದಿತ್ತು. ಹೋಟೆಲ್ ಒಳಗೆ ಹೋದೆ. ಅಲ್ಲಿರುವ ಬೋರ್ಡ್ ದಿಟ್ಟಿಸಿದೆ. ಗುಜ್ಜೆ ಸುಕ್ಕಾ + ಬ್ರೆಡ್ ಎಂಬುದು ಗಮನ ಸೆಳೆಯಿತು. ಗುಜ್ಜೆ ಪಲ್ಯ ತಿಂದಿದ್ದೇನೆ. ಇದ್ಯಾವುದು ಸುಕ್ಕಾ ಅದೂ ಬ್ರೆಡ್ ಕಾಂಬಿನೇಶನಿನಲ್ಲಿ ಅಂದ್ಕೊಂಡೆ. ಒಂದು ಪ್ಲೇಟ್ ತರಲು ಹೇಳಿದೆ. ಹದಿನೈದು ನಿಮಿಷದ ನಂತರ ಹೇಳಿದ್ದು ಟೇಬಲಿಗೆ ಬಂತು. ಅಷ್ಟರಲ್ಲಿ ಹಸಿವು ಜೋರಾಗಿತ್ತು !
ಮೂರು ಸ್ಲೈಸ್ ಬ್ರೆಡ್ ಮತ್ತು ಸುಕ್ಕಾ. ಹೋಟೆಲಿನ ಥರಥರಾ ತಿನಿಸುಗಳ ನಡುವೆ ಇದರದೊಂದು ವಿಶಿಷ್ಟ ಪರಿಮಳ. ಗುಜ್ಜೆ ಸುಕ್ಕಾ ಎಂದರೆ ಕಿಂಚಿತ್ತೂ ರಸವಿಲ್ಲದ್ದು. ಮೊದಲು ಒಂದು ಚಮಚದಷ್ಟು ತಿಂದೆ. ಹದವಾದ ಖಾರ, ಹುಳಿ ಮತ್ತು ಉಪ್ಪು… ಬ್ರೇಡಿನ ಮೇಲೆ ಸಮನಾಗಿ ಹರಡಿ ಅದರ ಮೇಲೆ ಮತ್ತೊಂದು ಸ್ಲೈಸ್ ಇಟ್ಟು ತಿಂದರೆ ಮತ್ತಷ್ಟೂ ರುಚಿ… ಅದು ಯಾವ ಬರ್ಗರಿಗೂ ಕಡಿಮೆಯಿಲ್ಲ… ಪಲ್ಯವನ್ನು ತುಸು ಹೆಚ್ಚೇ ಎನ್ನುವಷ್ಟು ಕೊಡುತ್ತಾರೆ. ಹೀಗಾಗಿ ಇನ್ನೆರಡು ಸ್ಲೈಸ್ ತಿಂದು ಹೊಟ್ಟೆ ಗಡದ್ದು ತುಂಬಿತು… ಇದರ ಮೇಲೆ ಫಿಲ್ಟರ್ ಕಾಫಿ ಕುಡಿದ ನಂತರ ಹಾಯ್ ಎನಿಸಿತು.
ಕರಾವಳಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜೀಗುಜ್ಜೆ/ಗುಜ್ಜೆ ಹಲಸು ಲಭ್ಯ. ಇದರಲ್ಲಿ ವ್ಯರ್ಥವಾಗುವ ಪ್ರಮಾಣವೇ ಅಧಿಕ. ಹೆಚ್ಚಿನ ಹೋಟೆಲ್ ಗಳಲ್ಲಿ ಇದರ ಬಹುರುಚಿಯಾದ ತಿನಿಸುಗಳನ್ನು ಮಾಡತೊಡಗಿದರೆ ಉತ್ತಮ ಮಾರುಕಟ್ಟೆ ದೊರೆತು ಕೃಷಿಕರಿಗೂ ಲಾಭವಾಗುತ್ತದೆ.
ಕೃಷಿ ಉತ್ಪನ್ನಗಳನ್ನು ಬಹುಬಗೆಯಲ್ಲಿ ಮೌಲ್ಯವರ್ಧನೆ ಮಾಡಿ ಉತ್ತಮವಾಗಿ ಮಾರುಕಟ್ಟೆ ಮಾಡಿದರೆ ಎಷ್ಟೆಲ್ಲ ಲಾಭವಿದೆಯಲ್ಲವೇ ? ಈ ದಿಶೆಯಲ್ಲಿ ಕರಾವಳಿ ಜೊತೆಗೆ ಮಲೆನಾಡು, ಬಯಲುಸೀಮೆಯ ಹೋಟೆಲ್ ಉದ್ಯಮಿಗಳು ಗಮನ ಹರಿಸಬಹುದು.