ಪರಿಸರ

ಸ್ಥಳೀಯ ದನ ಯಾವುದು ಹೊರರಾಜ್ಯದ್ದು ಯಾವುದು ಎಂದು ಗುರುತಿಸಲು ಸಾಧ್ಯವೇ ?

ಕರ್ನಾಟಕ ರಾಜ್ಯದ ಅರಣ್ಯಗಳ ಕೆಲವೆಡೆ ಹೊರರಾಜ್ಯದ ಅರಣ್ಯಗಳ ಜೊತೆಗೆ ಗಡಿ ಹಂಚಿಕೆಯಾಗಿದೆ. ಇದರಿಂದ ಅಲ್ಲಿನ ಜಾನುವಾರುಗಳನ್ನು ಕರ್ನಾಟಕದ ಅರಣ್ಯ ಪ್ರದೇಶಗಳ ಒಳಗೆ ಅಟ್ಟಲಾಗುತ್ತದೆ. ಸಮೃದ್ಧವಾಗಿ ಮೇಯುವ ಅವುಗಳನ್ನು ವಾಪಸ್‌ ಕಳಿಸುವುದಿಲ್ಲ. ಅವುಗಳನ್ನು ಇಲ್ಲಿಯ ದೊಡ್ಡಿಗಳಲ್ಲಿಯೇ ಕೂಡಿ ಹಾಕಲಾಗುತ್ತದೆ.

ಇಂಥ ಪರಿಪಾಠವೇ ಮಲೆ ಮಹದೇಶ್ವರ ವನ್ಯಜೀವಿಧಾಮದ ಹೂಗ್ಯಂ ವಲಯದಲ್ಲಿ ಐದು ಹುಲಿಗಳ ಹತ್ಯೆಗೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಅರಣ್ಯ ಪ್ರದೇಶದೊಳಗೆ ಜಾನುವಾರುಗಳನ್ನು ಬಿಡದಂತೆ ಸೂಚನೆ ನೀಡಿದರು. ಇದಾದ ಎರಡೇ ದಿನದಲ್ಲಿ ಅವರ ಆದೇಶದಲ್ಲಿ ಅಚ್ಚರಿಯ ಮಾರ್ಪಾಡು ಆಗಿದೆ.

“ಸ್ಥಳೀಯರ ದನಕರುಗಳಿಗೆ ಮತ್ತು ಅರಣ್ಯಹಕ್ಕು ಕಾಯಿದೆಯಡಿ ಹಕ್ಕು ಪಡೆದವರಿಗೆ ವಿನಾಯಿತಿ ನೀಡಲಾಗುವುದು. ಹೊರರಾಜ್ಯದ ದನಕರುಗಳನ್ನು ಕಾಡಿನಲ್ಲಿ ಮೇಯಿಸುವುದಕ್ಕೆ ಮಾತ್ರ ನಿಷೇಧ, ಸ್ಥಳೀಯರಿಗೆ ಆತಂಕ ಬೇಡ” ಎಂದು ಈಶ್ವರ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ. ಸುದೀರ್ಘ ವಿವರಣೆ ನೀಡಿದ್ದಾರೆ.

ಅರಣ್ಯ ಹಕ್ಕು ಕಾಯಿದೆ -2006 ಅಡಿಯಲ್ಲಿ ಅರಣ್ಯವಾಸಿಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಕಾಡಿನಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸಲು ಅವಕಾಶವಿದೆ. ಆದರೆ ನೆರೆರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ದನಕರು ತಂದು ಮೇಯಿಸುವುದಕ್ಕೆ ಮಾತ್ರ ಕಡಿವಾಣ ಹಾಕಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ರಾಜ್ಯದ ಅರಣ್ಯವಾಸಿಗಳು ಮತ್ತು ಬುಡಕಟ್ಟು ಜನಾಂಗದವರಲ್ಲಿ ಹೆಚ್ಚಿನವರು ದನಕರುಗಳನ್ನು ಸಾಕಿಲ್ಲ. ಕೆಲವರು ಸಾಕಿದ್ದರೂ ಒಂದೋ ಎರಡೋ ಅಷ್ಟೆ. ಕಾಡಿನಂಚಿನಲ್ಲಿರುವ ಹಳ್ಳಿಗಳ ನಿವಾಸಿಗಳು ಅಧಿಕ ಹಾಲು ನೀಡುವ ಮಿಶ್ರ ತಳಿ ಹಸುಗಳನ್ನು ಸಾಕಣೆ ಮಾಡುತ್ತಿದ್ದಾರೆ. ಅವುಗಳು ದೇಹ ಪ್ರಕೃತಿ ಸೂಕ್ಷ್ಮವಾದ ಕಾರಣ ಹಟ್ಟಿಯಲ್ಲಿಯೇ ಕಟ್ಟಿ ಹಾಕಿ ಮೇವು, ಹಿಂಡಿ, ಬೂಸಾ ನೀಡುತ್ತಾರೆ.

ಕರ್ನಾಟಕದಲ್ಲಿ ಐವತ್ತು ವರ್ಷಗಳ ಹಿಂದೆ ನಾಡತಳಿ ಜಾನುವಾರುಗಳು ಅಧಿಕವಾಗಿದ್ದವು. ಆಗ ಅವುಗಳನ್ನು ಕಾಡಿಗೆ ಅಟ್ಟಲಾಗುತ್ತಿತ್ತು. ಸಂಜೆ ಮರಳಿದ ನಂತರ ದೊಡ್ಡಿಯಲ್ಲಿ ಕೂಡಿ ಹಾಕಲಾಗುತ್ತಿತ್ತು. ಕಾಡಿಗೆ ಹೋದ ದನಗಳನ್ನು ಅಪರೂಪಕ್ಕೆ ಹುಲಿಯೋ, ಚಿರತೆಯೋ ಹಿಡಿಯುವುದು ಸಾಮಾನ್ಯವಾಗಿತ್ತು ! ಆದರೆ ಯಾರೂ ಅವುಗಳತ್ತ ಕ್ರೋಧ ತೋರಿಸುತ್ತಿರಲಿಲ್ಲ. ಈಗ ಆ ರೀತಿ ಹೆಚ್ಚು ಸಂಖ್ಯೆಯಲ್ಲಿ ದನಕರು ಸಾಕುತ್ತಿರುವವರೇ ಅಪರೂಪ ಅಥವಾ ಇಲ್ಲವೇ ಇಲ್ಲ ಎಂದರೂ ಉತ್ಪ್ರೇಕ್ಷೆಯಲ್ಲ.

ತಮಿಳುನಾಡಿನಲ್ಲಿ ಪರಿಸ್ಥಿತಿ ವಿಭಿನ್ನ. ಅಲ್ಲಿ ಹೈನುಗಾರಿಕೆಗಿಂತಲೂ ಗೊಬ್ಬರ ಸಂಗ್ರಹಣೆಗೆ ಒತ್ತು ನೀಡುತ್ತಾರೆ. ಈ ಉದ್ದೇಶಕ್ಕೆ ಸಾಕುವ ದನಗಳ ಮಂದೆಯಲ್ಲಿ ಹಾಲು ಕೊಡುವ ಸ್ಥಿತಿಯಲ್ಲಿರುವ ಹಸುಗಳ ಸಂಖ್ಯೆ ಅತ್ಯಲ್ಪ. ಅವರು ಮೇವು ತಂದು ಹಾಕುವ ಖರ್ಚು ತಪ್ಪಿಸಲು ಕಾಡುಗಳಿಗೆ ಅಟ್ಟುತ್ತಾರೆ. ಅಲ್ಲಿನ ಕಾಡುಗಳ ಒಳಗೆ ಜಾನುವಾರುಗಳಿಗೆ ಪ್ರವೇಶವಿಲ್ಲ. ಹದ್ದಿನ ಕಣ್ಣಿಟ್ಟು ಕಾಯುತ್ತಾರೆ. ಆದರೆ ಕರ್ನಾಟಕದ ವನ್ಯಜೀವಿಧಾಮಗಳಲ್ಲಿ ಜನರೂ ಜಾನುವಾರುಗಳು ಸಲೀಸಾಗಿ ನುಗ್ಗಬಹುದು.

ತಮಿಳುನಾಡಿನಿಂದ ಇಲ್ಲಿಗೆ ಬರುವ ದನಗಳು, ಎಮ್ಮೆಗಳು ಮತ್ತೆ ಅತ್ತ ಹೋಗುವುದಿಲ್ಲ. ಅವುಗಳನ್ನು ವಾಪಸ್‌ ಅಟ್ಟಿಕೊಂಡು ಹೋಗುವ ಕಾರ್ಯವನ್ನೂ ಅವರು ಮಾಡುವುದಿಲ್ಲ. ಇಲ್ಲಿನ ಕಾಡುಗಳಲ್ಲಿ ಸಮೃದ್ಧವಾಗಿ ಮೇಯುವ ಅವುಗಳು ಸಮೃದ್ಧವಾಗಿಯೇ ಸಗಣಿ ಹಾಕುತ್ತವೆ. ಅವುಗಳನ್ನು ಸಂಗ್ರಹಿಸಿ ಗೊಬ್ಬರ ಮಾಡುತ್ತಾರೆ. ಒಂದು ಟ್ರಾಕ್ಟರ್‌ ಲೋಡಿಗೆ ಮೂರು ಸಾವಿರ ರೂಪಾಯಿ ಇದೆ. ಗೊಬ್ಬರ ಮಾರಾಟದಿಂದಲೇ ಪ್ರತಿವರ್ಷ ಅಪಾರ ಮೊತ್ತ ಸಂಗ್ರಹಣೆಯಾಗುತ್ತದೆ. ಹಾಗಾಗಿ ಇದೊಂದು ಸಗಣಿ ಮಾಫಿಯಾ ಎಂದರೂ ತಪ್ಪಲ್ಲ !!

ಪಶು ಸಂಗೋಪನಾ ಇಲಾಖೆ ಅಂಕಿಅಂಶದ ಪ್ರಕಾರವೇ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ  ಸುಮಾರು 33 ಸಾವಿರ ದನಕರುಗಳಿವೆ. ಆದರೆ ವಾಸ್ತವಿಕವಾಗಿ ಈ ಸಂಖ್ಯೆಯ ಹಲವು ಪಟ್ಟು ದನಕರುಗಳಿವೆ. ಅವುಗಳಲ್ಲಿ ಶೇಕಡ ಎಂಬತ್ತಕ್ಕಿಂತ ಹೆಚ್ಚಿನವು ತಮಿಳುನಾಡಿನ ವ್ಯಕ್ತಿಗಳ ಮಾಲಿಕತ್ವಕ್ಕೆ ಒಳಪಟ್ಟಿವೆ. ಸಾಕಣೆ ಮಾಡುತ್ತಿರುವವರು ಮಾತ್ರ ಸ್ಥಳೀಯರು.

“ಹೊರರಾಜ್ಯದ ಜಾನುವಾರುಗಳಿಗೆ ಅವಕಾಶವಿಲ್ಲ” ಎಂದರೆ ನಮ್ಮದೇ ದನಕರುಗಳು, ನಾವೇ ಸಾಕಣೆ ಮಾಡುತ್ತಿದ್ದೇವೆ” ಎಂದವರು ಹೇಳುತ್ತಾರೆ. ಇವುಗಳು ನಿಮ್ಮದಲ್ಲ ಎನ್ನುವುದಕ್ಕೆ ಅರಣ್ಯ ಇಲಾಖೆಯವರ ಬಳಿ ಏನು ದಾಖಲೆಗಳಿವೆ ?

“ಈ ಹಿನ್ನೆಲೆಯಲ್ಲಿ ಸ್ಥಳೀಯರು ಸಾಕಣೆ ಮಾಡುತ್ತಿರುವ ದನಕರುಗಳಿಗೆ ಪ್ರವೇಶ ಕೊಡುತ್ತೇವೆ, ಹೊರರಾಜ್ಯದವುಗಳಿಗೆ ಅವಕಾಶವಿಲ್ಲ” ಎನ್ನುವ ಅರಣ್ಯ ಸಚಿವರ ಆದೇಶದಿಂದ ಏನೇನೂ ಪ್ರಯೋಜನವಿಲ್ಲ. ಯಥಾಸ್ಥಿತಿಯೇ ಮುಂದುವರಿಯುತ್ತದೆ. ಮುಂದೊಂದು ದಿನ ಅಲ್ಲಿ ಕಾಡು ಇರುವುದಿಲ್ಲ. ಹುಡುಕಿದರೂ ಕಾಡುಪ್ರಾಣಿಗಳು ಕಾಣುವುದಿಲ್ಲ.

ಕಾಡಿಗೆ ನಾಡಿನ ಜಾನುವಾರು ಹೋಗುವುದರಿಂದ ಏನೇನು ಅಪಾಯಗಳಿವೆ ?

  • ದನಕರುಗಳನ್ನು ಒಟ್ಟಿಗೆ ಕಾಡಿಗೆ ತೆಗೆದುಕೊಂಡು ಹೋಗುವುದರಿಂದ ವನ್ಯಜೀವಿಗಳಾದ ಆನೆ, ಕಾಡೆಮ್ಮೆ, ಕಾಡುಕೋಣ, ಜಿಂಕೆ, ಕಡವೆ ಇತ್ಯಾದಿಗಳಿಗೆ ಮೇವಿನ ಕೊರತೆ, ನೀರಿನ ಕೊರತೆ ಉಂಟಾಗುತ್ತದೆ.
  • ನಾಡಿನ ಜಾನುವಾರುಗಳಲ್ಲಿ ಸಾಮಾನ್ಯವಾಗಿರುವ ಕಾಲುಬಾಯಿ ರೋಗ, ಚರ್ಮಗಂಟು ಅಥವಾ ಬಾವು (ಲಿಂಪಿ ಸ್ಕಿನ್), ನೆರಡಿ (ಆಂಥರಾಕ್ಸ್) ಮೊದಲಾದ ಸಾಂಕ್ರಾಮಿಕ ಕಾಯಿಲೆಗಳು ವನ್ಯಜೀವಿಗಳಿಗೂ ಹಬ್ಬುವ ಅಪಾಯ ಇರುತ್ತದೆ.
  • ಕಾಡಿನಲ್ಲಿ ದನಕರು ಮೇಯಿಸುವುದರಿಂದ ಕಾಡಿನ ಹುಲ್ಲುಗಾವಲು ಬರಿದಾಗುತ್ತಿದೆ, ಸಸ್ಯಸಂವರ್ಧನೆಗೂ ಅಡ್ಡಿಯಾಗುತ್ತದೆ.
  • ದಿನದಿಂದ ದಿನಕ್ಕೆ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತದೆ.

ಈ ಎಲ್ಲ ಹಿನ್ನೆಲೆಯಲ್ಲಿ ಸ್ಥಳೀಯರು ಸಾಕಣೆ ಮಾಡುತ್ತಿರುವ ಜಾನುವಾರುಗಳನ್ನು ಸಹ ಕಾಡಿನೊಳಗೆ ಬಿಡದಿರುವುದು ಸೂಕ್ತ. ಅವಕಾಶ ಕೊಟ್ಟರೆ ಅದರ ಲಾಭವನ್ನು ಹೊರರಾಜ್ಯದ ಜಾನುವಾರು ಸಾಕಣೆದಾರರರೇ ಪಡೆಯುತ್ತಾರೆ. ಈ ದಿಶೆಯಲ್ಲಿ ಕಾಡಿನಂಚಿನಲ್ಲಿರುವ ಹಳ್ಳಿಗರ ಮನವೊಲಿಸುವುದು ಸೂಕ್ತ !

Leave a Reply

Your email address will not be published. Required fields are marked *

error: Content is protected !!