ಇಂದು ವಿಶ್ವ ಹಾವುಗಳ ದಿನ. ಇಂಥ ಸಂದರ್ಭದಲ್ಲಿ ಹಾವುಗಳ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸುವುದು ಅಗತ್ಯ. ಹಾವುಗಳ ಸ್ವಭಾವಗಳನ್ನು ಅರಿಯುವುದು ಮತ್ತೊಬ್ಬರಿಗೆ ತಿಳಿಸುವುದು ಅತ್ಯಗತ್ಯ. ಈ ದಿಶೆಯಲ್ಲಿ ನನ್ನ ಅನುಭವಗಳನ್ನು ಹಂಚಿಕೊಂಡಿದ್ದೇನೆ.
ಘಟನೆ ೧
ಭತ್ತ ಕೊಯ್ಲಾಗಿತ್ತು. ಕೂಳೆಗಳು, ನೆಲದೊಳಗಿನಿಂದ ಮೂಡಿದ ಬಂಗಾರದ ಎಸಳುಗಳಂತೆ ಕಾಣುತ್ತಿದ್ದವು. ಶುಭ್ರ ನೀಲಾಕಾಶ. ತೇಲಿ ಬರುತ್ತಿದ್ದ ತಂಗಾಳಿ, ಹೊಂಗೆ, ಬುಗುರಿ ಮರದ ನೆರಳು. ಬದುವಿನ ಮೇಲೆ ಒಂದೆರಡು ಇಂಚಿದ್ದ ಹಸಿರು ಹುಲ್ಲು. ಅದರ ಮೇಲೆ ನನ್ನ ತಾಯಿ, ಸೋದರ ಮಾವಂದಿರು, ನನ್ನ ತಮ್ಮ ಸಿದ್ದರಾಜು, ನಾನು ಕುಳಿತಿದ್ದೆವು. ಬದುವಿಗೆ ಅಂಟಿಕೊಂಡಂತೆ ಹರಿಯುತ್ತಿದ್ದ ಹಳ್ಳದ ನೀರು ಕಲ್ಲುಗಳಿಗೆ ಬಡಿದು ಮೈಮೇಲೆ ಹನಿಗಳು ಸಿಂಪಡಣೆಯಾಗುತ್ತಿತ್ತು.
ಹೊಂಗೆಯ ಮರದ ಪಕ್ಕದಲ್ಲೇ ನಾನು, ತುಸು ಅಂತರದಲ್ಲಿ ನನ್ನ ತಾಯಿಯ ಚಿಕ್ಕಪ್ಪನ ಮಗ, ಆತನ ಪಕ್ಕ ನನ್ನ ತಮ್ಮ ಸಿದ್ದರಾಜು ಇವನ ಪಕ್ಕ ನನ್ನ ಸೋದರ ಮಾವ, ನಂತರ ನನ್ನ ತಾಯಿ. ಮಾತುಕಥೆ ಸಾಗಿತ್ತು. ಹೊಂಗೆಯ ತಂಪಾದ ನೆರಳಿನಲ್ಲಿ ಕಟಾವಾದ, ಕಟಾವಾಗದ ಭತ್ತದ ಗದ್ದೆಗಳು ಅದರ ಮೇಲೆ ನೀಲಿ ಗುಡಾರ ಹಾಕಿದಂತೆ ಕಾಣುತ್ತಿದ್ದ ಆಕಾಶ ನೋಡುತ್ತಾ ಕುಳಿತಿದ್ದೆ. ಅದೊಂದು ಬಗೆಯ ಗುಂಗು.
ಎರಡೂ ಕೈಗಳನ್ನು ತುಸು ಹಿಂದಕ್ಕೆ ವೂರಿ, ವಾರಿ ಕುಳಿತಿದ್ದೆ. ಹಳ್ಳದ ನೀರು, ಮೈ, ಕೈಗೆ ಸಿಡಿಯುತ್ತಲೇ ಇತ್ತು. ಕೈ ತುಸು ಹೆಚ್ಚು ತಣ್ಣಗಾದಂತೆ ಅನಿಸಿತು. ನೀರ ಹನಿಗಳು ಎಂದುಕೊಂಡು ಅದರತ್ತ ಗಮನ ನೀಡಲಿಲ್ಲ. ಬಲದೊಡೆಯ ಮಗ್ಗುಲಿಗೆ ತಾಗಿ ಏನೋ ಹರಿದಂತಾಯಿತು. ನೋಡಿದರೆ ನಾಗರಹಾವು
ಹೊಂಗೆ ಎಲೆಗಳಿಂದ ತೂರಿ ಬಂದ ಬೆಳಕಿನ ಕಿರಣಗಳು ಗೋಧಿಬಣ್ಣದ ಅದರ ಮೇಲೆ ಬಿದ್ದು ಹೊಳೆಯುತ್ತಿತ್ತು. ನಾನು ನೋಡುವಷ್ಟರಲ್ಲಿ ಅದರ ತಲೆ ನನ್ನ ಬಲದೊಡೆಯ ಮೇಲಿತ್ತು. ವಿಶ್ರಾಂತಿ ಪಡೆಯುವವನಂತೆ ತುಸು ಹೊತ್ತು ತಲೆಯಾನಿಸಿದ ನಾಗ, ಎರಡೂ ಕಾಲುಗಳ ನಡುವೆ ಮೆಲ್ಲನೆ ಹರಿದು ಶೂಗಳ ಮೇಲೆ ತಲೆಯಿಟ್ಟ. ಅತ್ತಿತ್ತ ತಲೆ ತಿರುಗಿಸಿ ಎಡಕ್ಕೆ ಹರಿಯತೊಡಗಿದ. ನನ್ನಿಡೀ ಮೈ ಮರಗಟ್ಟಿತ್ತು.
ಎಂಟಡಿಗೂ ಹೆಚ್ಚು ಉದ್ದವಿದ್ದ ನಾಗ ಬದುವಿನ ಅಂಚಿಗೆ ಹರಿದರಿದು ಕಾಣದಂತಾದ. ಇದೆಲ್ಲವನ್ನೂ ನನ್ನ ಪಕ್ಕದಲ್ಲಿಯೇ ಇದ್ದ ಮಾವ ಗಮನಿಸಿದ್ದ. ನಾನಾಗಲಿ, ಆತನಾಗಲಿ ಗಾಬರಿಗೊಂಡು ಮೈ ಅಲುಗಿಸಿದ್ದರೆ ಕ್ಷಣ ಮಾತ್ರದಲ್ಲಿ ಹೆಡೆಯುತ್ತಿದ್ದ ನಾಗನ ರೋಷಕ್ಕೆ ಈಡಾಗುತ್ತಿದ್ದವು. ಆದರೆ ಹಾಗೆ ಆಗಲಿಲ್ಲ. ಹಾವು ಮೈಮೇಲೆ ಹರಿದು ಹೋಗಿದ್ದನ್ನು ಆತ ಉಳಿದವರಿಗೂ ತಿಳಿಸಿದಾಗ ಅವರೆಲ್ಲರಿಗೂ ದಿಗ್ಬ್ರಮೆ. ಇದು ಸುಮಾರು ಇಪ್ಪತ್ತು ವರ್ಷದ ಹಿಂದಿನ ಘಟನೆ.
ರೈತ ಕುಟುಂಬದ ನಮಗ್ಯಾರಿಗೂ ಹಾವುಗಳನ್ನು ನೋಡುವುದು ಹೊಸ ಸಂಗತಿಯಲ್ಲ. ಆದರೆ ಮೈಮೇಲೆ ನಾಗರಹಾವು ಹಾದು ಹೋಗುವುದು ಭಯದ ಸಂಗತಿ. ಕೆಲವು ಭತ್ತದ ತಳಿಗಳು ನಾಲ್ಕುವರೆ ಅಡಿಗೂ ಹೆಚ್ಚು ಎತ್ತರವಿರುತ್ತವೆ. ಅದರೊಳಗೆ ಬೆಳೆದು ನಿಂತ ಗಂಡು ಭತ್ತ ಕೊಯ್ದು, ಹೊರೆ ಮಾಡಿಕೊಂಡು ಸೈಕಲ್ ಕ್ಯಾರಿಯರ್ಗೆ ಕಟ್ಟಿ ತಂದು ದನಗಳಿಗೆ ನಿತ್ಯ ಹಾಕುತ್ತಿದ್ದೆ. ಕಳೆ ಕೊಯ್ಯುವಾಗ ನಾಗರಹಾವುಗಳನ್ನು ಕಂಡಿದ್ದೇನೆ. ಒಂದೆರಡು ಬಾರಿ ಅವು ಹೆಡೆಯೆತ್ತಿದ್ದು ಇದೆ. ನಾವೇನೂ ಪ್ರತಿಕ್ರಿಯಿಸದೇ ಇದ್ದರೆ ಅವಷ್ಟಕ್ಕೆ ಹರಿದು ಹೋಗುತ್ತವೆ ವಿನಃ ಮುಂದೆ ಬಂದೇನೂ ಕಚ್ಚುವುದಿಲ್ಲ.
ಕಾಲುಗಳ ಮೇಲಿಂದ ಹಾವು ಹರಿದು ಹೋಗುವಾಗ ಮಿಸುಕಾಡಿದ್ದರೂ ಅದು ಗಾಬರಿಯಾಗುತ್ತಿತ್ತು. ಇಂಥದ್ದೇ ಇನ್ನೆರಡು ಸಂಗತಿಗಳಿಗೆ ನಾನು ಮುಖಾಮುಖಿಯಾದೆ. ನನಗೆ ಅವೆಲ್ಲವೂ ಹಾವುಗಳ ಸ್ವಭಾವ ಪರಿಚಯಿಸಿತು.
ಘಟನೆ ೨
“ಮೊಗಾ, ಕರಿಯಪ್ಪ ಎರೆಹೊಲದಲ್ಲಿ ಏರು ಕಟ್ಟಿದ್ದಾನೆ. ನೀನು ಉಣ್ಕಂಡು ಬುತ್ತಿ ತಗೊಂಂಡೋಗಿ ಕೊಡು” ಇದು ನನ್ನ ಅಜ್ಜಿಯ ನುಡಿ. “ನಾನೂ ಅಲ್ಲೇ ಉಣ್ತೀನಿ. ಕಟ್ಕೊಂಡು” ಅಂದೆ. ಸೈಕಲ್ ಏರಿ ಬರುವಷ್ಟರಾಗಲೇ ಸೂರ್ಯ ನೆತ್ತಿ ಮೇಲೆ ಬಂದಿದ್ದ.
ಗದ್ದೆ ಬಳಿ ಬರುವಷ್ಟರಲ್ಲಿ ಕರಿಯಪ್ಪ ಏರು ಬಿಚ್ಚುತ್ತಿದ್ದ. ಇಬ್ಬರೂ ಬುತ್ತಿ ಬಿಚ್ಚಿ ಊಟ ಮಾಡಿದೆವು. ಬೀಡಿ ಹಚ್ಚಿದ ಅವನು ಸೇದಿ ಮುಗಿಸಿದ ನಂತರ ಅಲ್ಲೇ ಸನಿಹದಲ್ಲಿದ್ದ ತೆಂಗಿನ ಮರಗಳ ನೆರಳಿನಲ್ಲಿ ಮಲಗಿದ. ಅಲ್ಲಿ ಸಮಾಧಿಗಳಿದ್ದರಿಂದ ಒಂದಷ್ಟು ಜಾಗವನ್ನು ಉಳುಮೆ ಮಾಡದೇ ಹಾಗೆ ಉಳಿಸಿದ್ದರು. ಚಿಗುರು ಹುಲ್ಲು. ಮೆತ್ತನೆಯ ಹಾಸಿಗೆಯಂತಿತ್ತು. ಮುದ್ದೆಯನ್ನು ಭರ್ಜರಿಯಾಗಿ ಮೆದ್ದಿದ್ದರಿಂದ ತೂಕಡಿಕೆ ಶುರುವಾಯಿತು. ಅಲ್ಲೇ ಮಲಗಿದೆ.
ಇದಕ್ಕಿದಂತೆ ಎಚ್ಚರವಾಯಿತು. ಬಲಮಗ್ಗುಲಾಗಿ ಎದ್ದೆ, ನಾನು ಏಳುತ್ತಿದ್ದ ಹಾಗೆ ನನ್ನೆದುರು ಕೇವಲ ಐದಾರು ಅಡಿ ಅಂತರದಲ್ಲಿದ್ದ ನಾಗರಹಾವು ಹೆಡೆ ಎತ್ತಿತು. ಮೆಲ್ಲನೇ ಪಕ್ಕದಲ್ಲಿದ್ದ ಕರಿಯಪ್ಪನನ್ನು ಅಲುಗಾಡಿಸಿದೆ. ಆತ ಎದ್ದು ಕುಳಿತು ಏನು ಏನುವಂತೆ ಪ್ರಶ್ನಾರ್ಥಕವಾಗಿ ನೋಡಿದ. ಎದುರಿಗೆ ಕೈ ತೋರಿಸಿದೆ. ಆತ ಗಾಬರಿಯಾದರೂ ತೋರಗೊಡದೇ ಕುಳಿತೇ ಕೈ ಮುಗಿದ. ಆತನನ್ನೇ ನಾನೂ ಅನುಕರಿಸಿದೆ.
ಎತ್ತಿದ್ದ ಹೆಡೆಯನ್ನು ಇಳಿಸಿದ ನಾಗರಹಾವು ಮೂತಿಯನ್ನು ಹಾಗೆ ಮುಂದೆ ಮಾಡಿ ವಾಹನಗಳು ರಿವರ್ಸ್ ಗೇರಿನಲ್ಲಿ ಹೋಗುವಂತೆ ಮೆಲ್ಲಮೆಲ್ಲನೇ ಹಿಂದಕ್ಕೆ ಹರಿಯುತ್ತಾ ಕಾಣದಂತಾಯಿತು. ಇದು ನನ್ನ ಬಾಲ್ಯದಲ್ಲಿ ನಡೆದ ಘಟನೆ. ನಾವು ಕೈ ಮುಗಿದಿದ್ದರಿಂದ ಅದು ಹಿಂದಕ್ಕೆ ಹರಿದು ಹೋಗಿದ್ದಲ್ಲ. ನಾವು ನಿರಪಾಯಕಾರಿ ಎಂದು ಅದಕ್ಕೆ ಅನಿಸಿರಬಹುದು ಜೊತೆಗೆ ಅದು ಹೊಲದಲ್ಲಿ ಅದು ನಮ್ಮನ್ನು ಮತ್ತೆಮತ್ತೆ ನೋಡಿರಬಹುದು. ಅದೇನೇ ಇರಲಿ ಒಟ್ಟಾರೆ ಅದರ ವರ್ತನೆ ಅಚ್ಚರಿ ಮೂಡಿಸಿತು.
ಘಟನೆ ೩
ಈ ಘಟನೆ ನಾನು ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾಗ ನಡೆದಿದ್ದು. ಆಗ ಗಂಗೋತ್ರಿ ಲೇಔಟ್ ಅಷ್ಟೇನೂ ಬೆಳವಣಿಗೆಯಾಗಿರಲಿಲ್ಲ. ನಾವಿದ್ದ ಮನೆಪಕ್ಕದಲ್ಲಿ ಸಾಕಷ್ಟು ಸೈಟುಗಳು ಖಾಲಿಯಿದ್ದವು. ಅಂದು ಮನೆಯಲ್ಲಿ ನಾನು, ನನ್ನ ತಮ್ಮ ಸಿದ್ದರಾಜು ಇಬ್ಬರೇ ಇದ್ದೆವು. ರಾತ್ರಿ ಎಂಟರ ಸಮಯ. ಆತ ಚಿಕನ್ ತರೋಣ ಎಂದ. ಆಯಿತೆಂದು ನಾನು ತಲೆಯಾಡಿಸಿದೆ. ಹಿತ್ತಲ ಬಾಗಿಲು ಹಾಕಿಕೊಂಡು ಡೋರ್ ಲಾಕ್ ಕೀ ತಗೊಂಡು ಬಾ ಎಂದ ನಾನು ಹೊರಗೆ ಬಂದು ಬಾಗಿಲು ಮುಂದೆ ನಿಂತೆ.
ನನ್ನ ತಮ್ಮ ಹಿಂದಿನಿಂದ ಬಂದವನು ಕೆಳಗೆ ಹಾವಿದೆ ಎಂದ. ನೋಡಿದರೆ ನಾಲ್ಕೈದು ಅಡಿ ಇದ್ದ ಕಟ್ಟುಹಾವು (ತೀವ್ರ ವಿಷಕಾರಿ) ನನ್ನ ಪಾದದಿಂದ ಕೇವಲ ಅರ್ಧ ಅಡಿ ಮುಂದಿದೆ. ತಕ್ಷಣ ಹಿಂದಕ್ಕೆ ಜಿಗಿದೆ. ಹೀಗೆ ನೆಗೆದ ಕೂಡಲೇ ಅದು ಗೇಟಿನಾಚೆ ಹರಿದು ಕಾಣದಂತಾಯಿತು.
ಅದು ನಾನು ಅಚೇ ಬರುವ ಮೊದಲೇ ಆ ಹಾದಿಯಲ್ಲಿ ಬಂದಿದೆ. ಆಚೆ ಬಂದು ಎದುರು ನಿಂತ ಕೂಡಲೇ ಗಾಬರಿಯಾಗಿ ತಟಸ್ಥವಾಗಿದೆ. ನಾನು ಕೊಂಚ ಮುಂದೆ ಸರಿದಿದದ್ದರೂ ಅದು ಕಚ್ಚುವ ಸಾಧ್ಯತೆ ಅಧಿಕವಾಗಿತ್ತು. ನಾನೂ ನಿಸ್ಚಲವಾಗಿ ನಿಂತ ಕಾರಣ ಅದೂ ನಿಶ್ಚಲವಾಗಿ ನಿಂತಿದೆ.
ಇಂಥ ಘಟನೆಗಳು ಸಾಕಷ್ಟು. ಕಾಡುಗಳಲ್ಲಿ ಟ್ರೆಕ್ಕಿಂಗ್ ಮಾಡುವಾಗ ಅಕ್ಕಪಕ್ಕದಲ್ಲಿಯೇ ಕಾಳಿಂಗ ಸರ್ಪಗಳು ಇದ್ದ ಘಟನೆಗಳು ನಡೆದಿವೆ. ನಾವು ನಿರಪಾಯಕಾರಿ ಎನಿಸಿದರೆ ಅವುಗಳೇನು ಮಾಡಲಾರವು. ತಾವಾಗಿ ಮುಂದೆ ಬಂದು ಅವುಗಳು ಕಚ್ಚುವುದಿಲ್ಲ. ನಾವು ಆಕಸ್ಮಿಕವಾಗಿ ಮೆಟ್ಟಿದರೆ ಅಥವಾ ಹುಂಬ ಧೈರ್ಯ ತೋರಿಸಿ ಪರಿಣಿತಿಯಿಲ್ಲದೇ ಹಿಡಿಯಲು ಹೋದರೆ ಕಚ್ಚಬಹುದೇ ವಿನಃ ವಿನಾಕಾರಣ ಕಚ್ಚುವುದಿಲ್ಲ
Thrilling story.thanks for sharing
Thank you