ಕೆಲಸದ ಸಹಜ ಒತ್ತಡಗಳ ನಡುವೆ ರಿಲೀಫ್ ಆಗಲು ದೂರ ನಿಸರ್ಗದ ಮಡಿಲಿಗೆ ಹೋಗಬೇಕೆನ್ನಿಸುತ್ತಿತ್ತು. ನಮ್ಮ ಸಂಸ್ಥೆಯ ವೆಬ್ ಪೋರ್ಟಲ್ ಗಳನ್ನು ಹೋಸ್ಟ್ ಮಾಡಲಾಗಿರುವ ಸರ್ವರ್ ನಿರ್ವಹಣೆ ಮಾಡುವ, ಸಾಫ್ಟ್ ವೇರ್ ಇಂಜಿನಿಯರ್ ಕೃಷ್ಣೇಗೌಡರದೂ ಇದೇ ಅನಿಸಿಕೆಯಾಗಿತ್ತು. ಆದರೆ ನನಗೆ ಸಮಯವಾದಾಗ ಅವರಿಗೆ, ಅವರಿಗೆ ಸಮಯವಾದಾಗ ನನಗೆ ಆಗುತ್ತಿರಲಿಲ್ಲ. ಮುಂದಿನ ವಾರ ಹೋಗೋಣ ಎಂದು ಕೊಳ್ಳುವುದು ಮುಂದಕ್ಕೆ ಹೋಗುವುದು ಆಗುತ್ತಲೇ ಇತ್ತು.

ಈ ಬಾರಿ ಬೈಕುಗಳಲ್ಲಿ ಹೋಗಲೇಬೇಕು ಎಂದು ನಿರ್ಧರಿಸಿದೆವು. ಈ ಬಾರಿಯೂ ಕೃಷ್ಣೇಗೌಡರಿಗೆ ಅನಿರೀಕ್ಷಿತ ಕೆಲಸ. ಶುಕ್ರವಾರ  ಬೆಳಗ್ಗೆ ಹೊರಡಬೇಕು ಎಂದು ನಿರ್ಧರಿಸಿದ್ದೆವು. ಮಧ್ಯಾಹ್ನದ ತನಕ ಸುಮ್ಮನಿದ್ದೆ. ಆದರೆ ಒಳಗಿನಿಂದ ಒತ್ತಡ. ಹೋಗುವುದಾಗಿ ನಿರ್ಧಾರ ಮಾಡಿಯಾಗಿದೆ. ಒಬ್ಬನೇ ಆಗುಂಬೆಗೆ ಹೊರಟು ಬಿಡೋಣ ಎಂದು ನಿರ್ಧರಿಸಿದೆ

ಬೆಂಗಳೂರಿನಲ್ಲಿ ಬೈಕ್ ಹತ್ತಿದಾಗ ಮಧ್ಯಾಹ್ನ 2 ಗಂಟೆ. ಬೆಳಗ್ಗೆ ಸಾಕೆನ್ನಿಸುವಷ್ಟು ನಾಷ್ಟಾ ಆಗಿತ್ತು. ಹಸಿವಾದರೆ ದಾರಿ ಮಧ್ಯದ ಹೋಟೆಲಿನಲ್ಲಿ ಏನಾದರೂ ತಿನ್ನೋಣ ಎಂದುಕೊಂಡೆ. ನೆಲಮಂಗಲ ದಾಟಲು ಮುಕ್ಕಾಲು ತಾಸು ಹಿಡಿಯಿತು.

ಹೊಂಡಗಳ ಕಿರುದಾರಿ

ಹಾಸನ ದಾಟಿ ಬೇಲೂರು ತಲುಪಿದಾಗಲೇ ಸೂರ್ಯ ಪಡುವಣದಲ್ಲಿ ಮುಳುಗಿದ್ದ. ನಾನು ಅಲ್ಲಿಯೇ  ತಂಗಿದ್ದರೆ ಚೆನ್ನಾಗಿರುತ್ತಿತ್ತು ಅಥವಾ ಅಲ್ಲಿಂದ 26 ಕಿಲೋ ಮೀಟರ್ ದೂರದ ಚಿಕ್ಕಮಗಳೂರಿಗೆ ಹೋಗಿದ್ದರೂ ಸೂಕ್ತವಾಗಿರುತ್ತಿತ್ತು. ಕೆಲವೊಮ್ಮೆ ಎಡವಟ್ಟು ನಿರ್ಧಾರ ತೆಗೆದುಕೊಳ್ಳುತ್ತೇವಲ್ಲ ಹಾಗೇ ಆಯಿತು. ಜಯಪುರ ಅಥವಾ ಬಾಳೇ ಹೊನ್ನೂರಿಗೆ ಹೋಗಿ ತಂಗೋಣ ಎಂದುಕೊಂಡೆ.  ಗೂಗಲ್ ಮ್ಯಾಪ್ ಬೇಲೂರು ನಂತರ ಗೆಂಡೆಹಳ್ಳಿ ದಾರಿ ತೋರಿಸುತ್ತಿತ್ತು. ಅಲ್ಲಿಂದ ಆಲ್ದೂರು ನಂತರ ಜಯಪುರ, ಬಾಳೆಹೊನ್ನೂರು ಹಾದಿ. ಹೊರಟೆ.

ಗೂಗಲ್ ಮ್ಯಾಪ್ ಶಾರ್ಟ್ ಕಟ್ ತೋರಿಸುತ್ತದೆಯೇ ವಿನಃ ರಸ್ತೆ ಉತ್ತಮ ಸ್ಥಿತಿಯಲ್ಲಿದೆಯೇ, ಇಲ್ಲವೇ ಎಂಬುದನ್ನು ತೋರಿಸುವುದಿಲ್ಲ. ಆದರೂ ಸ್ಥಳೀಯರೊಬ್ಬರನ್ನು ರಸ್ತೆ ಹೇಗಿದೆ ಎಂದು ಕೇಳಿದೆ. ಅವರು “ ಸ್ವಲ್ಪದೂರ ಚೆನ್ನಾಗಿಲ್ಲ ; ನಂತರ ರಸ್ತೆ ಚೆನ್ನಾಗಿದೆ” ಎಂದರು. ಅವರು ಯಾವುದೋ ಜ್ಞಾನದಲ್ಲಿ ಉಲ್ಟಾ ಹೇಳಿರಬಹುದು ಅಂತ  ಕೆಲವೇ ನಿಮಿಷಗಳಲ್ಲಿ ಹೊತ್ತಿನಲ್ಲಿಯೇ ಗೊತ್ತಾಯಿತು. ತುಸು ದೂರ ಹೋಗುತ್ತಿದ್ದಂತೆ ರಸ್ತೆಯೇ ಇಲ್ಲ; ಬರೀ ಗುಂಡಿ ಗುಂಡಿ.. ಸದ್ಯ ನನ್ನ ಹೆವಿ ತೂಕದ ಬೈಕ್ ಎಲ್ಲಿಯೂ ನನ್ನನ್ನು ಎತ್ತಿ ಹಾಕಲಿಲ್ಲ. ಬೈಕಿಗೆ ಆಫ್ ರೋಡ್ ಲೈಟ್ ಗಳನ್ನು ಫಿಟ್ ಮಾಡಿಸಿದ್ದೆ. ಈಗಾಗಿ ಗಾಢ ಕತ್ತಲೆಯ, ಹೊಂಡಗಳ ಹಾದಿಯಲ್ಲಿ ತೊಂದರೆಯಾಗಲಿಲ್ಲ.

ಆಲ್ದೂರು ತಲುಪುವುದರೊಳಗೆ ಬೈಕು, ನನ್ನ ಬಾಡಿಯಿಡೀ ಧೂಳುಮಯ. ನಾಣು ಹಾಕಿಕೊಂಡಿದ್ದ ಧರಿಸು, ಬೈಕ್ ಬಣ್ಣವೇ ಬದಲಾಗಿ ಹೋಗಿತ್ತು ! ಅಲ್ಲೇ ಉಳಿದು ಬಿಡೋಣ  ಎಂದು ನಿರ್ಧರಿಸಿ ಬಾಳೆ ಹೊನ್ನೂರಿಗೆ ಹೋಗುವ ವೃತ್ತದ  ಬಳಿ ವಿಚಾರಿಸಿದೆ. ಆಗವರು “ಇಲ್ಲಿ ಯಾವುದು ಅಂಥ ಒಳ್ಳೆಯ ಲಾಡ್ಜ್ ಇಲ್ಲ, ನೀವು ಚಿಕ್ಕಮಗಳೂರಿಗೆ ಹೋಗುವುದೇ ಸೂಕ್ತ” ಎಂದರು. ಬಾಳೆಹೊನ್ನೂರಿನಲ್ಲಿ ವಸತಿ ವ್ಯವಸ್ಥೆ ಬಗ್ಗೆ ಕೇಳಿದೆ. ಈ ಕತ್ತಲೆಯಲ್ಲಿ ಕಾಡಿನ ಹಾದಿಯಲ್ಲಿ ಅಲ್ಲಿಗೆ ಹೋಗುವುದು ಸೂಕ್ತವಲ್ಲ” ಎಂದುತ್ತರ ಬಂತು.

ಸರಿ, ಚಿಕ್ಕಮಗಳೂರಿನಲ್ಲಿ ತಂಗಿದ್ದು ಬೆಳಗ್ಗೆ ಆಗುಂಬೆಗೆ ಹೋಗೋಣ ಎಂದು ನಿರ್ದರಿಸಿದೆ. ಆಲ್ದೂರಿನಿಂದ ಚಿಕ್ಕಮಗಳೂರು 18 ಕಿಲೋ ಮೀಟರ್ ದೂರ. ಬೈಕು ಅತ್ತ ಚಲಿಸತೊಡಗಿತು.ಎಂದಿನಂತೆ ಇಂದಿರಾ ಗಾಂಧಿ ರಸ್ತೆಯಲ್ಲಿರುವ ಸೌಂದರ್ಯ ಹೋಟೆಲಿಗೆ ಹೋದೆ. ಇದು ಹಿತಮಿತ ಬೆಲೆಯಲ್ಲಿ ವಸತಿ ವ್ಯವಸ್ಥೆ ನೀಡುವ ಡಿಸೆಂಟ್ ಲಾಡ್ಸ್. ಪಾರ್ಕಿಂಗ್ ವ್ಯವಸ್ಥೆಯೂ ಇದೆ. ಬೈಕಿನಿಂದ ಲಗೇಜ್ ಬ್ಯಾಗ್ ಗಳನ್ನು ಬಿಚ್ಚಿ ತೆಗೆದುಕೊಂಡು ಹೋಗುವ ಗೋಜಿಗೆ ಹೋಗಲಿಲ್ಲ. ಬರೀ ಬ್ರಶ್, ಟೂಥ್ ಪೇಸ್ಟ್, ಸೋಪು ಟವೆಲ್ ತೆಗೆದುಕೊಂಡೆ.    ಅಟ್ಯಾಚ್ ಆಗಿರುವ ಹೋಟೆಲಿನಲ್ಲಿ ಪುಡ್ ಪಾರ್ಸೆಲ್ ಮಾಡಿಸಿಕೊಂಡು ಲಿಫ್ಟ್ ಹತ್ತಿ ರೂಮ್ ತಲುಪಿದೆ.  ಫ್ರೆಶ್ ಆಗಿ ಊಟ ಮಾಡಿ ಮಲಗಿದವನಿಗೆ ಗಾಢನಿದ್ದೆ. ಒಟ್ಟಿನಲ್ಲಿ ಗೂಗಲ್ ದೆಶೆಯಿಂದ ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತ ಅನುಭವ ಆಯ್ತು !!

ಕೆಸರುಗದ್ದೆ ಓಟಕ್ಕೆ ಸಿದ್ದತೆ

ಬೆಳಗ್ಗೆ ಎದ್ದಾಗ ಸಮಯ 6. ಬೆಳಗ್ಗಿನ ಕಾರ್ಯಗಳನ್ನು ಮುಗಿಸಿ   ಹೋಟೆಲಿನಿಂದ ಲಿಫ್ಟ್ ಬಳಸದೇ ಹೊರಬಂದೆ. ಒಂದಷ್ಟು ದೂರ ವಾಕ್ ಮಾಡಿ ಐಜಿ ರಸ್ತೆಯಲ್ಲಿಯೇ ಇರುವ ಕಾಫಿಶಾಫಿನಲ್ಲಿ ಎರಡು ಫಿಲ್ಟರ್ ಕಾಫಿ ಕುಡಿದಾಗ ಮನಸಿಗೂ, ದೇಹಕ್ಕೂ ಉಲ್ಲಾಸ. ಚಿಕ್ಕಮಗಳೂರಿನ ಪತ್ರಕರ್ತ ಗೆಳೆಯ ಶಿವಕುಮಾರ್ ಗೆ ಮೆಸೇಜ್ ಹಾಕಿದ್ದೆ. ಕಾಲ್ ಮಾಡಿದರು. “ಹೋಟೆಲ್ ಬಳಿಯೇ ಇರಿ, ಜೀಪ್ ಕಳಿಸುತ್ತೇನೆ. ಅದರಲ್ಲಿ ಬನ್ನಿ”  ಎಂದರು. ಕೆಲವೇ ನಿಮಿಷಗಳಲ್ಲಿ ಜೀಪ್ ಬಂತು. ಕೆಸರುಗದ್ದೆಯ ಸನಿಹ ನಿಲ್ಲಿಸಿತು. ಶಿವಕುಮಾರ್ ಅವರು ಬರ್ಮುಡಾ ಧರಿಸಿ ಕೆಸರುಗದ್ದೆಯನ್ನು ಸಮರ್ಪಕ ಮಾಡಿಸುವುದರಲ್ಲಿ ತೊಡಗಿದ್ದರು. ಟ್ರಾಕ್ಟರ್, ಎತ್ತುಗಳಿಗೆ ಕಟ್ಟಿದ ಮಣೆಯಲ್ಲಿ ಸಮತಟ್ಟು ಮಾಡುವ ಕಾರ್ಯ ಭರದಿಂದ ಸಾಗಿತ್ತು. “ಮರುದಿನ ಚಿಕ್ಕಮಗಳೂರು ಹಬ್ಬದ ಅಂಗವಾಗಿ ಕೆಸರುಗದ್ದೆ ಓಟ, ನಿಂಬೆಹಣ್ಣಿನ ರೇಸ್ ಇತ್ಯಾದಿ ಗ್ರಾಮೀಣ ಕ್ರೀಡೆಗಳಿವ” ಎಂದರು. ಜಿಲ್ಲಾಡಳಿತ ಇವರಿಗೆ ಗ್ರಾಮೀಣ ಕ್ರೀಡೆಯ ಉಸ್ತುವಾರಿ ವಹಿಸಿತ್ತು.

ವನ್ಯಜೀವಿ ಛಾಯಾಗ್ರಾಹಕ ಶಿವಕುಮಾರ್ ಅವರು ತಮ್ಮ ಛಾಯಾಚಿತ್ರಗಳ ಪ್ರದರ್ಶನ ಸಂದರ್ಭದಲ್ಲಿ

ಗದ್ದಯಲ್ಲಿ ಕುಳಿತು ಮಸ್ತ್ ತಿಂಡಿ

ಅಲ್ಲಿಗೆ ಶಿವಕುಮಾರ್ ತಿಂಡಿ ತರಿಸಿದರು. ಗದ್ದೆಯಲ್ಲಿಯೇ ಕುಳಿತು ಪಟ್ಟಾಗಿ ತಿಂಡಿ ತಿಂದೆವು. ನಂತರ ಶಿವಕುಮಾರ್ ತಮ್ಮ ಬುಲೆಟ್ ಬೈಕಿನಲ್ಲಿ ಸೌಂದರ್ಯ ಲಾಡ್ಜ್ ತನಕ ಡ್ರಾಪ್ ಮಾಡಿದೆರು. ರೂಪಿನಿಂದ ನನ್ನ ವಸ್ತುಗಳನ್ನು ತೆಗೆದುಕೊಂಡು ಬೈಕ್ ಬಳಿ ಬಂದಾಗ ಸಮಯ ಬೆಳಗ್ಗೆ 11.  ಅಲ್ಲಿಂದ ಆಗುಂಬೆಗೆ 113 ಕಿಲೋ ಮೀಟರ್ ದೂರ.

ಮತ್ತೆ ಆಲ್ದೂರಿಗೆ ಬಂದು ಅಲ್ಲಿಂದ ಜಯಪುರ ಕಡೆ ಹೋಗಬೇಕು. ಜಯಪುರದಿಂದ  ಆಗುಂಬೆಗೆ ಹೋಗುವ ಮಾರ್ಗದ ಬಹುತೇಕ ಹಾವಿನಂತೆ ಚಲಿಸುವ ಅಂಕುಡೊಂಕು ರಸ್ತೆ. ಕಾಡಿನ ಹಾದಿಯಲ್ಲಿಯೂ ಸಾಗಬೇಕು.  ನಿಧಾನವಾಗಿಯೇ ಬೈಕ್ ರೈಡ್ ಮಾಡುತ್ತಾ ಆಗುಂಬೆ ತಲುಪಿದಾಗ ಮಧ್ಯಾಹ್ನ 3.30. ಅಲ್ಲಿಯ ಕಣಿವೆಯಂಚಿನ ಆಸರೆಯಲ್ಲಿ ತಂಗಿದೆ.

ಫ್ರೆಶ್ ಆಗಿ ಸಂಜೆ 5.30ಕ್ಕೆ ಬೈಕ್ ಹತ್ತಿ ಆಗುಂಬೆ ಸನ್ ಸೆಟ್ ಪಾಯಿಂಟಿಗೆ ತಲುಪಿದೆ. ಅದೃಷ್ಟಕ್ಕೆ ಮೋಡಗಳು ಇರಲಿಲ್ಲ. ಆಗುಂಬೆಗೆ ಸಾಕಷ್ಟು ಸಲ ಬಂದಿದ್ದೇನೆ. ಮೋಡ, ಹವಾಮಾನ ವೈಪರಿತ್ಯ ಇತ್ಯಾದಿ ಕಾರಣದಿಂದ ಸೂರ್ಯಾಸ್ತ ಕಾಣಸಿಕ್ಕಿದ್ದೇ ಅಪರೂಪ. ಸುಂದರ ಸೂರ್ಯಾಸ್ತ ದರ್ಶನವೂ ಆಯಿತು. ವಾಪಸ್ ಬರುವಾಗ ದಾರಿಯ ಎಡಬದಿಯಲ್ಲಿ ಸಿಗುವ ಚಿಕ್ಕ, ಚೊಕ್ಕದಾದ ತಾಜ್ ಹೋಟೆಲಿನಲ್ಲಿ ಮೀನು ತಿಂದು ವಸತಿಗೆ ಬಂದೆ.. ಕುಳಿತಿದ್ದೆ.

ಸಮಯ ರಾತ್ರಿ 10 ದಾಟಿತ್ತು… ಆಗುಂಬೆಯ ಕಣಿವೆಯಲ್ಲಿ  ಬೆಂಗಳೂರಿನಷ್ಟು ಚಳಿಯಿರಲಿಲ್ಲ. ಆಶ್ಚರ್ಯ…‌ಕಾಡು ನಡುವಿನ‌ ಆಸರೆ ನಡುಗಿಸಬೇಕಿತ್ತು…ಹ್ಹುಹ್ಹು ಅದ್ಹಾಗಲಿಲ್ಲ… ವಿದ್ಯುತ್ ದೀಪಗಳಿಲ್ಲದೆಢೆ ನಕ್ಷತ್ರಗಳ ಮೋಹಕ ಜಗತ್ತು ತೆರೆದುಕೊಂಡಿತ್ತು…‌ಒಂದು ಎರಡು ಮೂರು… ಎಣಿಸಿದಷ್ಟು ಮುಗಿಯುತ್ತಿಲ್ಲ…. ನಕ್ಷತ್ರಗಳಿರುವಷ್ಟು ಸಂಖ್ಯೆಗಳಿವೆಯೇ… ? ಗೊತ್ತಿಲ್ಲ…‌ಆದರೆ ಅನಂತಾನಂತ‌ ಲೋಕದಿದುರು ನಾನೆಷ್ಟು ಕುಬ್ಜ… ಕ್ಷುಲ್ಲಕ.. ಯಕಶ್ಚಿತ್ ಎನ್ನುವುದಂತೂ‌ ಅರಿವಾಗಿದೆ…

ಮರುದಿನ ಗೋಕರ್ಣದೆಡೆಗೆ…. ಮುಂದುವರಿಯುತ್ತದೆ….

Similar Posts

1 Comment

  1. ತುಂಬಾ ಚೆನ್ನಾದ ವಿವರಣೆ..

Leave a Reply

Your email address will not be published. Required fields are marked *