ಗಂಗಾರತಿ ನೋಡಲು ಹೋಗಿದ್ದು ಎರಡನೇ ಬಾರಿ. ಹಿಂದಿನ ದಿನ ಸಂಜೆ ದೋಣಿಯಲ್ಲಿ ಗಂಗಾನದಿ ವಿಹಾರ ಆಗಿತ್ತು. ಗಾಳಿ ತಣ್ಣಗೆ ಬೀಸುತ್ತಿತ್ತು. ಹೊಯ್ದಾಡುವ ನದಿಯಲ್ಲೇ ಕುಳಿತು ಗಂಗಾರತಿ ವೀಕ್ಷಣೆ. ನಂತರ ಪೇಟೆ ಬೀದಿ ಸಾಲುಗಳಲ್ಲಿ ನಡೆದು ಹೊಟ್ಟೆಭರ್ತಿ ‘ಲಾಂಗ್ ಲತ್ತಾ’ (ಲವಂಗಾ ಲತ್ತಾ), ಸಮೋಸಾ, ಖಚೋರಿ ಸ್ವಾಹ.
ಮರುದಿನ ಬೆಳಗ್ಗೆ ಬನಾರಸ್ (ಕಾಶಿ) ಗಲ್ಲಿಗಳಲ್ಲಿ ಅಲೆತ. ಜೊನ್ನೆಯಲ್ಲಿ ನೀಡುವ ಚಿಕ್ಕಚಿಕ್ಕ ಪೂರಿಗಳು, ಪಲ್ಯ. ಎಷ್ಟು ಜೊನ್ನೆ ಪೂರಿ ತಿಂದೆ ನೆನಪಿಲ್ಲ. ಮೇಲೆ 250 ಗ್ರಾಮ್ ಜಿಲೇಬಿ. ಹೊಟ್ಟೆ ಭಾರವಾಗಿತ್ತು. ಅಲ್ಲಿಂದ ರಾಮಗಢ ಕೋಟೆಗೆ ಹೋಗಿ ಸುತ್ತಾಟ. ಬಿಸಿಲು, ಅಲೆತದಿಂದಲೋ ಏನೋ ಹೊಟ್ಟೆ ಚುರುಗುಟ್ಟುತ್ತಿತ್ತು. ಕಾರ್ ಡ್ರೈವರ್ ಇಲ್ಲಿ ಒಳ್ಳೆ ಲಸ್ಸಿ ಸಿಗುತ್ತೆ ಅಂದರು. ಕೋಟೆ ಮಗ್ಗುಲಿನಲ್ಲೇ ಲಸ್ಸಿ ಅಂಗಡಿ. ದೊಡ್ಡ ಮಣ್ಣಿನ ಬಟ್ಟಲು, ಅದರಲ್ಲಿ ತುಂಬಿದ ಲಸ್ಸಿ, ಮೇಲೆ ಪೇಢಾ. ವ್ಹಾ… ಅಂಥ ಲಸ್ಸಿ ಹಿಂದೆಂದೂ ತಿಂದಿರಲಿಲ್ಲ. ಒಂದು, ಎರಡು, ಮೂರು, ಸಾಕೆನ್ನಿಸಿತು.
ರೂಮಿಗೆ ಬಂದು ಅಡ್ಡಾಗಿದ್ದು ತುಸು ಹೊತ್ತು. ಮತ್ತೆ ‘ಗಂಗಾರತಿ’ ಸೆಳೆಯುತ್ತಿತ್ತು. ಹೋಟೆಲಿನಿಂದಲೇ ಕೇದಾರನಾಥ ದೇಗುಲದತ್ತ ನಡಿಗೆ. ಅಲ್ಲಿಂದ ಪಾವಟಿಗೆ ಇಳಿದು ಘಾಟುಗಳನ್ನು ದಾಟುತ್ತಾ ದಶಾಶ್ವಮೇಧ ಘಾಟ್ ತಲುಪುವಿಕೆ. ಇನ್ನೂ ಸಾಕಷ್ಟು ಬೆಳಕಿತ್ತು. ವೀಕ್ಷಣೆಗೆ ಸೂಕ್ತ ಜಾಗ ಆಯ್ದು ಕುಳಿತಿದ್ದಾಯ್ತು. ಜನ ನಿಧಾನವಾಗಿ ಸೇರತೊಡಗಿದರು. ಪೂಜಾ ಸಹಾಯಕರು ಎಲ್ಲವನ್ನು ಅಣಿಗೊಳಿಸಿದರು. ಕತ್ತಲು ಕವಿಯಲು ತೊಡಗಿದಂತೆ ಅದರ ಜೊತೆ ಘಾಟಿನ ದೀಪಗಳು ಪೈಪೋಟಿ ನೀಡತೊಡಗಿದವು.
ಗಂಗೆ ಕತ್ತಲಿನಲ್ಲಿ ಕಪ್ಪಾಗಿ ಹೊಳೆಯುತ್ತಿದ್ದಳು. ಸೇರುತ್ತಿದ್ದ ದೋಣಿಗಳು ಮಸಿ ಚಿತ್ರಗಳಂತೆ ಕಾಣತೊಡಗಿದವು. ಸಮವಸ್ತ್ರದಂತೆ ಉಡುಪು ಧರಿಸಿದ್ದ ಐದು ಮಂದಿ ಕಟುಮಸ್ತು ಯುವಕರು ಬಂದು ಘಾಟಿನ ಮಧ್ಯಭಾಗದಲ್ಲಿದ್ದ ಗಂಗೆ ವಿಗ್ರಹಕ್ಕೆ ನಮಿಸಿದರು. ಪೂಜಾ ವಿಧಾಮ ಆರಂಭವಾಯಿತು.
ಅಲ್ಲಿ ಮೆಲ್ಲನೆ ಬೇರೊಂದು ಲೋಕ ತೆರೆದುಕೊಂಡಿತು. ಅದು 21ನೇ ಶತಮಾನವಂತೂ ಆಗಿರಲಿಲ್ಲ. ವಿವಿಧ ರೀತಿ ಗಂಗೆ ಸ್ತುತಿ. ಹಿನ್ನೆಲೆಯಲ್ಲಿ ಮಂತ್ರಗಳ ಪಠಣ. ಇಡೀ ಸಮೂಹ ಶಾಂತ. ಗಂಗೆಯ ಮೇಲೆ ಆರತಿಗಳ ಛಾಯೆ ಮೂಡತೊಡಗಿತು. ನೀರಿನೊಳಗಿಂದಲೇ ಯಾರೋ ಆರತಿ ಎತ್ತುತ್ತಿದ್ದಾರೆಂಬ ಭಾವ.
ಚಾಮರ, ಧೂಪ, ನಂತರ ತೈಲ ತುಂಬಿದ್ದ ಬೃಹತ್ ದೀಪಗಳ ಗುಚ್ಛ ಹಿಡಿದು ಆರತಿ ಎತ್ತ ತೊಡಗಿದರು. ದೀಪಗಳು ಆ ಪರಿ ಬಾಗಿ ಬಳುಕಿದರೂ ಒಂದನಿ ತೈಲ ಚೆಲ್ಲದಂತೆ ಚಾಕಚಕ್ಯತೆ. ಗಂಗಾರತಿಗೆ ಭಂಗ ಉಂಟಾಗುತ್ತದೆಯೇನೋ ಎನ್ನುವಂತೆ ಗಾಳಿ ಬಹು ನಿಧಾನವಾಗಿ ಬೀಸುತ್ತಿತ್ತು. ಕಾಲ ನಿಂತಲ್ಲೇ ನಿಂತಿದೆಯೇನೋ ಎನ್ನವಂತಿತ್ತು. ಘಂಟಾನಾದದೊಂದಿಗೆ ಮಂಗಳಾರತಿ ಆದಗಲೇ ಮರಳಿ ಸಮಕಾಲೀನ ಸ್ಥಿತಿ. ಕನಸು ಕಂಡ ರೀತಿ ಮಂಪರು.
ಮೆಲ್ಲನೆ ಎದ್ದೆ. ಘಾಟುಗಳನ್ನು ದಾಟುತ್ತಾ ಬಂದೆ. ಎಲ್ಲ ಘಾಟುಗಳಲ್ಲಿಯೂ ಒಂದೇ ರೀತಿ ಬೆಳಕಿರಲಿಲ್ಲ. ಕೆಲವೆಡೆ ಮಂದ, ಕೆಲವೆಡೆ ಪ್ರಕಾಶ, ಕೆಲವೆಡೆ ಪಕ್ಕದ ಘಾಟುಗಳಿಂದ ಕ್ಷೀಣ ಬೆಳಕು. ದಡಗಳಲ್ಲಿ ಕುಳಿತು ಕೆಲವರು ಗಂಗೆಯನ್ನೇ ದಿಟ್ಟಿಸುತ್ತಿದ್ದರು. ಬಾಬಾಗಳನ್ನು ಒಂದಷ್ಟು ಮಂದಿ ವಿದೇಶಿಯರು ಸುತ್ತುವರೆದಿದ್ದರು. ಅಲ್ಲೊಬ್ಬ ಬಾಲಕ ಗಂಗೆಗೆ ಆರತಿ ಎತ್ತುತ್ತಿದ್ದ. ಯಾರು ನೋಡುತ್ತಾರೋ ನೋಡುವುದಿಲ್ಲವೊ ಎಂಬ ಪರಿವೆ ಅವನಿಗಿರಲಿಲ್ಲ. ಅವನ ದೀಪದ ಬೆಳಕು ನೀರಿನೆಡೆಯಿಂದ ಹಾಯುವಾಗ ಗಂಗೆ ಮುಗುಳ್ನಕ್ಕಂತೆ ಭಾಸವಾಯಿತು.