ನಿಮಗೆ ನೆನಪಿರಬಹುದು. ಕೆಲವು ವರ್ಷಗಳ ಹಿಂದೆ ಕನ್ನಡ ಚಳವಳಿಗಾರರು ಬೆಂಗಳೂರಿನಲ್ಲಿ ಇಂಗ್ಲಿಷ್‌ – ಹಿಂದಿ ನಾಮಫಲಕಗಳಿಗೆ ಮಸಿ ಬಳಿದಿದ್ದರು. ಅವರಿಗೇನೂ ಈ ಭಾಷೆಗಳ ಮೇಲೆ ದ್ವೇಷವಿರಲಿಲ್ಲ. ಕನ್ನಡಾಭಿಮಾನ ಪ್ರದರ್ಶಿಸಿದ ಕಾರಣಕ್ಕೆ ಪೊಲೀಸ್‌ ಕೇಸಿಗೂ ಗುರಿಯಾದರು.

ನಾಮಫಲಕದಲ್ಲಿ ಮೊದಲು ಇಂಗ್ಲಿಷ್‌ ಅಥವಾ ಹಿಂದಿಯಿದ್ದರೆ ತಪ್ಪೇನು ಎಂದು ಅನಿಸಬಹುದು. ಆದರೆ ಆ ನಾಡಿನಲ್ಲಿ ಅರಳಿ ಬೆಳೆದ ಸ್ಥಳೀಯ ಬಹುಜನರ ಅಸ್ಮಿತೆ ಭಾಗವಾದ ಭಾಷೆಗೆ ಆದ್ಯತೆ ನೀಡುವುದು ಎಲ್ಲರ ಕರ್ತವ್ಯ. ಸರಕಾರ ಈ ಕೆಲಸ ಆಗುವಂತೆ ನೋಡಿಕೊಳ್ಳಬೇಕು.

ಚಳವಳಿ ನಂತರ ಸಂಘಸಂಸ್ಥೆ, ವಿವಿಧ ವಹಿವಾಟುದಾರರು ಎಚ್ಚೆತ್ತಕೊಂಡರು. ಕನ್ನಡಕ್ಕೆ ಆದ್ಯತೆ ನೀಡಲು ಆರಂಭಿಸಿದರು. ಆದರೆ ಕನ್ನಡ ನೆಲವೇ ಆದ ಕಾಸರಗೋಡಿನಲ್ಲಿ ಇಂದಿಗೂ ಏನಾಗುತ್ತಿದೆ. ಅಲ್ಲಿನ ಭಾಷಾ ಅಸ್ಮಿತೆಯನ್ನು ಅಳಿಸುವ ಕೆಲಸವನ್ನು ಕೇರಳ ಸರಕಾರ ಮಾಡುತ್ತಿದೆ. ಇದರ ಭಾಗವಾಗಿಯೇ ಅಲ್ಲಿನ ನಾಮಫಲಕಗಳನ್ನೂ ಮಲೆಯಾಳೀಕರಣಗೊಳಿಸಿದೆ.

ನಾನು ಬಾಲ್ಯದಿಂದಲೂ ಕೂಡ ಕಾಸರಗೋಡಿಗೆ ಭೇಟಿ ನೀಡುತ್ತಿದ್ದೇನೆ. ಪುತ್ತೂರು, ವಿಟ್ಲ ಮಾರ್ಗ, ಮಂಗಳೂರು ತಲಪ್ಪಾಡಿ ಮಾರ್ಗ, ಕೇರಳದ ಕಣ್ಣೂರು ಮಾರ್ಗವಾಗಿ ಕಾಸರಗೋಡಿಗೆ ಹೋಗಿದ್ದೇನೆ. ಆಗೆಲ್ಲ ಎಲ್ಲೆಲ್ಲೂ ಕನ್ನಡ ಭಾಷೆ, ಅದರ ನಾಮಫಲಕಗಳು ರಾರಾಜಿಸುತ್ತಿದ್ದವು. ಹುಡುಕಿದರೂ ಮಲೆಯಾಳ ನಾಮಫಲಕ ಕಾಣುತ್ತಿರಲಿಲ್ಲ.

ರಾಜ್ಯ – ಕೇಂದ್ರ ಸರಕಾರಗಳ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕುಗಳು, ವಿವಿಧ ಸಂಘಸಂಸ್ಥೆಗಳು, ಚಿತ್ರಮಂದಿರಗಳು, ವಾಣಿಜ್ಯ ಮಳಿಗೆಗಳು, ಆಸ್ಪತ್ರೆಗಳು, ಮೈಲಿಗಲ್ಲುಗಳು, ಊರುಗಳ ದಿಕ್ಕು, ಅಂತರ ತೋರಿಸುವ ಫಲಕಗಳು ಕನ್ನಡದಲ್ಲಿದ್ದವು. ಅವೆಲ್ಲವೂ ಈಗ ಬದಲಾಗಿದೆ.

ಕನ್ನಡ ಮಾತ್ರ ಓದಲು ಬರೆಯಲು ಗೊತ್ತಿರುವ ಹಳ್ಳಿಗಳಿಗೂ ಮಲೆಯಾಳೀಕರಣ ವ್ಯಾಪಿಸಿದೆ. ಅಲ್ಲಿನ ಕಚೇರಿಗಳಿಗೆ ಮಾತ್ರವಲ್ಲ, ಯಾವುದೇ ಸರಕಾರಿ ಸಮಾರಂಭವಾದರೂ ಅಲ್ಲಿ ಮಲೆಯಾಳಿ ಬ್ಯಾನರ್‌ ರಾರಾಜಿಸುತ್ತದೆ. ಇದನ್ನು ಓದಲು ಬಾರದವರೇ ಇಲ್ಲಿದ್ದಾರೆ ಎಂದು ಗೊತ್ತಿದ್ದೂ ಗೊತ್ತಿದ್ದೂ ಹೀಗೆ ಮಾಡಲಾಗುತ್ತದೆ. ಹೇಗಾದರೂ ಮಾಡಿ ಕನ್ನಡಿಗರಿಗೆ ಮಲೆಯಾಳಮ್‌ ಕಲಿಸಬೇಕು ಎಂಬ ಹಠಕ್ಕೆ ಅಲ್ಲಿನ ಸರಕಾರ ಬಿದ್ದಿದೆ.

ಇದರ ಬಗ್ಗೆ ಸ್ಥಳೀಯರಾದ ಪ್ರತಿಭಾವಂತ ಗಾಯಕ ವಸಂತ ಬಾರಡ್ಕ ಅವರು ಹೇಳುವುದು ಹೀಗೆ “ಪರಿಸರ ದಿನಾಚರಣೆಯ ಶುಭಾಶಯಗಳು ಇವತ್ತು ಪುತ್ತಿಗೆ ಗ್ರಾಮ ಪಂಚಾಯಿತಿನ ಮೀನಾಡಿ ಪಳ್ಳದ ಪರಿಸರದಲ್ಲಿ  ಗಿಡ ನೆಡುವ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಾನು ಕೂಡ ಭಾಗಿಯಾಗಿದ್ದೆ. ಆದರೆ ನನ್ನ ಮನಸ್ಸಿಗೆ ಬೇಸರವಾದ   ವಿಷಯ ಅಚ್ಚ ಕನ್ನಡದ ಪ್ರದೇಶವಾದ ಮೀನಾಡಿ ಪಳ್ಳದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಮಲಯಾಳಂ ಬ್ಯಾನರ್ ಮಾತ್ರ ರಾರಾಜಿಸುತ್ತಿತ್ತು ಕನ್ನಡದ ಬ್ಯಾನರ್ಗಳನ್ನು ಹಾಕಿರಲಿಲ್ಲ..  ಯಾರು ಇದಕ್ಕೆ ಹೊಣೆ ?…ಯಾಕೆ?  ಚುನಾಯಿತರಾದ ಬಳಿಕ ಮಂಜೇಶ್ವರ ಮಂಡಲದ ಶಾಸಕರು ಪಾಲ್ಗೊಳ್ಳುವ ಮೊದಲನೇ ಕಾರ್ಯಕ್ರಮ ಇದಾಗಿದೆ. ನನ್ನ ಕಳಕಳಿಯ ವಿನಂತಿ ಶಾಸಕರಲ್ಲಿ ಪಂಚಾಯತಿನ ಜನಪ್ರತಿನಿಧಿಗಳಲ್ಲಿ ಇನ್ನು ಮುಂದೆಯಾದರೂ ಕನ್ನಡದ ಬ್ಯಾನರ್ಗಳು ರಾರಾಜಿಸುವಂತೆ ಮಾಡಬೇಕು. ಯಾವುದೇ ಕಾರ್ಯಕ್ರಮವಾದರೂ ಕನ್ನಡ ಕಡ್ಡಾಯವಾಗಿ ಮಾಡಬೇಕು ಎಂದು ನನ್ನ ಕಳಕಳಿಯ ವಿನಂತಿ. ನಾನು ಯಾರ ವಿರೋಧಿಯೂ ಅಲ್ಲ ಯಾವ ಭಾಷೆಯ ವಿರೋಧಿಯೂ ಅಲ್ಲ ನಾನೊಬ್ಬ ಕನ್ನಡದ ಕಟ್ಟ ಅಭಿಮಾನಿ.  ಕಾಸರಗೋಡಿನಲ್ಲಿ ಕನ್ನಡ ಭಾಷೆಯ ಉಳಿವು ಅತ್ಯಗತ್ಯ. ಎಲ್ಲಾ ಜನಪ್ರತಿನಿಧಿಗಳೂ ಇದರ ಬಗ್ಗೆ ಗಮನಹರಿಸಬೇಕು. ಇನ್ನು ಮುಂದೆಯಾದರೂ ಕನ್ನಡ  ಭಾಷೆಯ ನಿರ್ಲಕ್ಷ್ಯ ಆಗಬಾರದೆಂದು ನನ್ನ ವಿನಂತಿ”

ಈ ಮಲೆಯಾಳೀಕರಣದ ಬಗ್ಗೆ ಡಾ. ನರೇಶ್‌ ಮುಳ್ಳೇರಿಯ ಹೀಗೆ ಹೇಳುತ್ತಾರೆ “ನಾವು ಯಾವ ಭಾಷೆಯ ವಿರೋಧಿಗಳೂ ಅಲ್ಲ. ಮಲಯಾಳ ಬ್ಯಾನರ್ ಬೇಡ ಅಂತ ಹೇಳಲಿಲ್ಲ. ಮಲಯಾಳದ ಜೊತೆ ಕನ್ನಡವೂ ಇರಲಿ ಎಂದು ಹೇಳಿದೆವು. ಆದರೆ ದುರದೃಷ್ಟಕರ ವಿಷಯವೆಂದರೆ ಇಲ್ಲಿ ಮಲಯಾಳದ ಜೊತೆ ಕನ್ನಡವೂ ಬೇಕು ಎನ್ನುವವರನ್ನು ಮಲಯಾಳ ವಿರೋಧಿಗಳನ್ನಾಗಿಯೂ ಭಾಷಾಂಧರಾಗಿಯೂ ಬಿಂಬಿಸಲಾಗುತ್ತದೆ. ಮಲಯಾಳ ಮಾತ್ರ ಸಾಕು ಎನ್ನುವವರು ಭಾಷಾಭಿಮಾನಿಗಳೆನಿಸುತ್ತಾರೆ! ಭಾಷಾ ಅಲ್ಪಸಂಖ್ಯಾತ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ  ಮಲಯಾಳದೊಂದಿಗೆ ಕನ್ನಡದಲ್ಲೂ ಮಾಹಿತಿ ನೀಡಬೇಕು, ನಾಮಫಲಕ- ಸೂಚನಾಫಲಕಗಳನ್ನು ಪ್ರದರ್ಶಿಸಬೇಕು ಎಂದು ನಿಯಮವಿದೆ. ಇದನ್ನೆಲ್ಲ ರಾಜಾರೋಷವಾಗಿ  ಉಲ್ಲಂಘಿಸಲಾಗುತ್ತಿದೆ. ಇದಕ್ಕೆ ಅಚ್ಚಗನ್ನಡಪ್ರದೇಶದಲ್ಲಿ ಕನ್ನಡದ ಬಗೆಗಿನ ನಿರ್ಲಕ್ಷ್ಯವೇ ಸಾಕ್ಷಿ”

ಕನ್ನಡದ ಕುರಿತಂತೆ ಸ್ಥಳೀಯರು ಮಾಡುತ್ತಿರುವ ನಿವೇದನೆ ಎಲ್ಲ ಮಲೆಯಾಳಿ ಸರಕಾರಿ ಅಧಿಕಾರಿಗಳ ಮುಂದೆ ಅರಣ್ಯ ರೋದನವಾಗಿದೆ. ಇದಕ್ಕೆ ಕಾರಣವೂ ಇದೆ. ಯಾವಾಗ ಕರ್ನಾಟಕದ ಕನ್ನಡಿಗರು, ಇಲ್ಲಿನ ಸರಕಾರದವರು ಕಾಸರಗೋಡು ಬಗ್ಗೆ ನಿರ್ಲಕ್ಚ್ಯ ಧೋರಣೆ ತೋರಲಾರಂಭಿಸಿದರೋ ಅಂದಿನಿಂದ ಕೇರಳಿಗರ ವರಸೆಯೇ ಬದಲಾಯಿತು. ಕನ್ನಡದ ನೆಲದಲ್ಲಿ ಮಲೆಯಾಳೀಕರಣ ಆರಂಭವಾಯಿತು. ಇದು ನಾಮಫಲಕಗಳಿಗೂ, ಸರಕಾರಿ ಸಭೆ – ಸಮಾರಂಭಗಳ ಬ್ಯಾನರುಗಳಿಗೂ ವ್ಯಾಪಿಸಿತು.

ಇದು ಎಷ್ಟರ ಮಟ್ಟಿಗೆ ಆಗಿದೆಯೆಂದರೆ ಕೊರೊನ ವೈರಸ್‌ ಕುರಿತು ಮಾಹಿತಿ ನೀಡುವ ಕರಪತ್ರಗಳು, ಫಲಕಗಳು, ಭಿತ್ತಿಪತ್ರಗಳೂ ಮಲೆಯಾಳದಲ್ಲಿವೆ. ಇದನ್ನು ಕನ್ನಡಿಗರು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ. ಜನಕ್ಕೆ ಏನಾದರೂ ಆದರೂ ಸರಿ ಮಲೆಯಾಳೀಕರಣ ಅವ್ಯಾಹತವಾಗಿ ನಡೆಯಬೇಕು ಎಂಬುದು ಕೇರಳ ಸರಕಾರದ ಧೋರಣೆಯೇ ?

ಒಂದೇ ಒಂದು ಅಕ್ಷರ ಮಲೆಯಾಳ  ಬಾರದ ಬಹು ಸಂಖ್ಯಾತ ಕನ್ನಡಿಗರು ಕಾಸರಗೋಡಿನಲ್ಲಿದ್ದಾರೆ. ಇಲ್ಲಿಗೆ ಕನ್ನಡ ಭಾಷಾ ಅಲ್ಪಸಂಖ್ಯಾತ ಸ್ಥಾನವೂ ದೊರೆತಿದೆ. ಮಹಾಜನ್‌ ಆಯೋಗದಲ್ಲಿ ಈ ಪ್ರದೇಶ ಕರ್ನಾಟಕಕ್ಕೆ ಸೇರಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ಮಲೆಯಾಳೀಕರಣ ನಿಂತಿಲ್ಲವೆಂದರೆ ಅವರ ಸೊಕ್ಕು ಎಷ್ಟಿರಬೇಕು…. ಇನ್ನಾದರೂ ಕನ್ನಡಿಗರು ಉದಾಸೀನ ಬಿಟ್ಟು ಪ್ರತಿಭಟಿಸೋಣವೇ ಅಥವಾ ನಮಗ್ಯಾಕೆ ಎಂದು ರಗ್ಗು ಹೊಚ್ಚಿಕೊಂಡು ಮಲಗೋಣವೇ… ? ನೀವೇ ಹೇಳಿ

ಕನ್ನಡದ ಕುರಿತಂತೆ ಸ್ಥಳೀಯರು ಮಾಡುತ್ತಿರುವ ನಿವೇದನೆ ಎಲ್ಲ ಮಲೆಯಾಳಿ ಸರಕಾರಿ ಅಧಿಕಾರಿಗಳ ಮುಂದೆ ಅರಣ್ಯ ರೋಧನವಾಗಿದೆ. ಇದಕ್ಕೆ ಕಾರಣವೂ ಇದೆ. ಯಾವಾಗ ಕರ್ನಾಟಕದ ಕನ್ನಡಿಗರು, ಇಲ್ಲಿನ ಸರಕಾರದವರು ಕಾಸರಗೋಡು ಬಗ್ಗೆ ನಿರ್ಲಕ್ಚ್ಯ ಧೋರಣೆ ತೋರಲಾರಂಭಿಸಿದರೋ ಅಂದಿನಿಂದ ಕೇರಳಿಗರ ವರಸೆಯೇ ಬದಲಾಯಿತು.

Similar Posts

2 Comments

  1. ಅಲ್ಲಿ ಕನ್ನಡ ಹೊರತು ಪಡಿಸಿ ಮಲಯಾಳಿ ನಾಮ ಫಲಕ, ಕರಪತ್ರಗಳನ್ನು ಪ್ರಕಟಿಸುತ್ತಿರುವ ಅವರ ಉದ್ದೇಶ ಕನ್ನಡಿಗರು ಮಲಯಾಳಿಯನ್ನು‌ ಕಲಿಯುವುದು ಅಗತ್ಯ ಮತ್ತು ಅನಿವಾರ್ಯ ಎಂಬ ಒತ್ತಡಕ್ಕೆ ಸಿಲುಕಿ ಮಲಯಾಳಿ‌ ಕಲಿಯಲಿ ಅನ್ನುವ ಉದ್ದೇಶವೇ ಅನ್ನಿಸುತ್ತದೆ. ಭಾಷೆಗೆ ಗಡಿಗಳಿಲ್ಲ. ಅದನ್ನೂ ಕಲಿಯಲಿ. ಆದರೆ ಅದು ಕರ್ನಾಟಕದ ಭಾಗವಾಗಿರುವ ಸ್ಥಳ. ಅಲ್ಲಿ ಕನ್ನಡ ಭಾಷೆಯ ಬಳಕೆ ಕಡ್ಡಾಯವಾಗಿರಬೇಕು.

  2. ಕಾಸರಗೋಡಿನಲ್ಲಿ ಅಡ್ಡಾಡಿದಾಗ ಅದು ಕೇರಳದ ಭಾಗ ಅಂತ ಅನ್ನಿಸೋದೇ ಇಲ್ಲ.

Leave a Reply

Your email address will not be published. Required fields are marked *