ಕರ್ನಾಟಕ ರಾಜ್ಯ ಸಚಿವ ಸಂಪುಟ ಇಂದು ಗುರುವಾರ (ಸೆಪ್ಟೆಂಬರ್ 26, 2024) ಸಂಚಲನ ಸೃಷ್ಟಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಸಿಬಿಐ ತನಿಖೆ ಮಾಡುವುದಕ್ಕೆ ಅವಕಾಶ ನಿರಾಕರಿಸಿದೆ.
ಕರ್ನಾಟಕ ಸರ್ಕಾರದ ಒಪ್ಪಿಗೆ ಪಡೆದು ರಾಜ್ಯದಲ್ಲಿ ಕೇಂದ್ರೀಯ ತನಿಖಾ ದಳ ಅರ್ಥಾತ್ ಸಿಬಿಐ ತನಿಖೆ ನಡೆಸಬಹುದಾಗಿತ್ತು. ಆದರೆ ಇನ್ನು ಮುಂದೆ ಸಿಬಿಐ ಘಟಕ, ರಾಜ್ಯ ಸರ್ಕಾರದ ಒಪ್ಪಿಗೆ ಕೋರಿ ಪತ್ರ ಸಲ್ಲಿಸುವುದಕ್ಕೂ ಅವಕಾಶ ಇರುವುದಿಲ್ಲ. ರಾಜ್ಯ ಸಚಿವ ಸಂಪುಟ ಇಂಥ ತೀರ್ಮಾನಕ್ಕೆ ಬರಬೇಕಾದರೆ ಎಂಥಾ ಪರಿಸ್ಥಿತಿ ನಿರ್ಮಾಣವಾಗಿರಬಹುದು ಎಂಬುದನ್ನು ಗಮನಿಸುವುದು ಅಗತ್ಯ !
“ನಾವು (ಕರ್ನಾಟಕ ರಾಜ್ಯ ಸಚಿವ ಸಂಪುಟ) ರಾಜ್ಯದಲ್ಲಿ ಸಿಬಿಐ ತನಿಖೆಗೆ ಬಹಿರಂಗ ಒಪ್ಪಿಗೆಯನ್ನು ಹಿಂಪಡೆಯುತ್ತಿದ್ದೇವೆ. ಸಿಬಿಐ ದುರ್ಬಳಕೆ ಬಗ್ಗೆ ನಮ್ಮ ಕಳವಳ ವ್ಯಕ್ತಪಡಿಸುತ್ತಿದ್ದೇವೆ. ನಾವು ಸಿಬಿಐಗೆ ಸೂಚಿಸಿದ ಎಲ್ಲ ಪ್ರಕರಣಗಳಲ್ಲಿ ಅವರು ಚಾರ್ಜ್ ಶೀಟ್ ಸಲ್ಲಿಸಿಲ್ಲ, ಅನೇಕ ಪ್ರಕರಣಗಳು ಬಾಕಿ ಉಳಿದಿವೆ. ನಾವು ಕಳುಹಿಸಿದ ಹಲವು ಪ್ರಕರಣಗಳ ತನಿಖೆಗೂ ಅವರು ನಿರಾಕರಿಸಿದ್ದಾರೆ. ಇಂತಹ ಹಲವಾರು ನಿದರ್ಶನಗಳಿವೆ. ಅವರು ಪಕ್ಷಪಾತಿಗಳು. ಅದಕ್ಕಾಗಿಯೇ ನಾವು ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ. ಇದು ಮುಡಾ ಪ್ರಕರಣದಿಂದಲ್ಲ. ಅವರನ್ನು (ಸಿಬಿಐ) ತಪ್ಪು ದಾರಿ ಹಿಡಿಯದಂತೆ ನಿಯಂತ್ರಿಸಲು ಈ ನಿರ್ಧಾರ ಕೈಗೊಂಡಿದ್ದೇವೆ” ಎಂದು ಸಂಪುಟ ಸಭೆ ನಂತರ ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.
ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ ಅನುಸಾರ ಕೇಂದ್ರೀಯ ತನಿಖಾ ದಳ ಅಂದರೆ ಸಿಬಿಐ ಸ್ಥಾಪನೆಗೊಂಡಿದೆ. 1946 ರ ಸೆಕ್ಷನ್ 6 ರ ಪ್ರಕಾರ ರಾಜ್ಯಗಳಲ್ಲಿ ತನಿಖೆ ನಡೆಸಲು ಆಯಾ ರಾಜ್ಯ ಸರ್ಕಾರಗಳ ಒಪ್ಪಿಗೆ ಪಡೆದಿರಬೇಕು. ಇದು ಇಲ್ಲದೇ ರಾಜ್ಯದಲ್ಲಿ ಸಿಬಿಐ ಯಾವುದೇ ಪ್ರಕರಣದ ತನಿಖೆ ನಡೆಸುವಂತಿಲ್ಲ.
ಕರ್ನಾಟಕ ರಾಜ್ಯ ಸರ್ಕಾರ ಹಿಂದೆ ಸಿಬಿಐಗೆ ವಹಿಸಿದ್ದ ಅಥವಾ ಆ ತನಿಖಾ ಏಜೆನ್ಸಿ ಕೈಗೆತ್ತಿಕೊಂಡ ಹಲವು ಪ್ರಕರಣಗಳಲ್ಲಿಯೂ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ ಎಂಬ ವಿಷಯ ಗಮನಾರ್ಹ. “ಸಿಬಿಐ, ಹಲವು ಪ್ರಕರಣಗಳಲ್ಲಿ ಆರೋಪ ಪಟ್ಟಿ ಸಲ್ಲಿಸಲು ನಿರಾಕರಿಸಿದ್ದಾರೆ. ಹಲವಾರು ಗಣಿಗಾರಿಕೆ ಪ್ರಕರಣಗಳ ತನಿಖೆಯನ್ನೂ ನಿರಾಕರಿಸಿದ್ದಾರೆ” ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ವಿವರಣೆ ನೀಡಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಭಾರಿ ಮೊತ್ತದ ಹಣ ದುರ್ಬಳಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ರಾಜ್ಯದ ಬಿಜೆಪಿ ಘಟಕ ಈಗಾಗಲೇ ಒತ್ತಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆಯೇ ಎಂಬ ಪ್ರಶ್ನೆಗೂ ಕಾನೂನು ಸಚಿವರು ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ. ವಿಷಯ ನ್ಯಾಯಾಲಯದಲ್ಲಿರುವುದರಿಂದ ಅದಕ್ಕೂ ಈ ತೀರ್ಮಾನಕ್ಕೂ ಸಂಬಂಧವಿಲ್ಲ” ಎಂದಿದ್ದಾರೆ.
ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ. ಒಂದು ವೇಳೆ ಸಿಬಿಐ ತನಿಖೆಗೆ ಮುಂದಾದರೆ ನಿಷ್ಪಕ್ಷಪಾತ ತನಿಖೆ ನಡೆಯದಿರಬಹುದು ಎಂಬ ಅನುಮಾನ ರಾಜಕೀಯ ಪಡಸಾಲೆಗಳಲ್ಲಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ರಾಜಕೀಯ ವಿರೋಧಿಗಳನ್ನು ಮಣಿಸಲು ಸಿಬಿಐ, ಈಡಿ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೈಗೊಂಡ ನಿರ್ಣಯ ಗಮನಾರ್ಹ.
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು (ಆಗ ಇನ್ನೂ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿರಲಿಲ್ಲ) ನೀಡುವ ಸಂದರ್ಭದಲ್ಲಿ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿ ಉಜ್ವಲ್ ಭುಯಾನ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಸೂಕ್ತವೆನ್ನಿಸುತ್ತದೆ. ನ್ಯಾಯಮೂರ್ತಿಗಳ ಮಾತನ್ನು ಮುಂದೆ ಕೋಟ್ ನಲ್ಲಿ ಉದ್ದರಿಸಲಾಗಿದೆ.
“ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂಡಲಾದ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್ ಅವರಿಗೆ ನೀಡಲಾಗಿದ್ದ ಜಾಮೀನನ್ನು ವಿಫಲಗೊಳಿಸಲೆಂದೇ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿತ್ತು”
“ಸಿಬಿಐ ಬಂಧನವು ಉತ್ತರಕ್ಕಿಂತ ಹೆಚ್ಚಾಗಿ ಪ್ರಶ್ನೆಗಳನ್ನೇ ಮೂಡಿಸುತ್ತದೆ. ಮಾರ್ಚ್ 2023ರಲ್ಲಿಯೇ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಗುರಿ ಪಡಿಸಲಾಗಿದ್ದರೂ ಅವರನ್ನು ಸಿಬಿಐ ಬಂಧಿಸಲಿಲ್ಲ. ಇದರ ಬದಲು ಇಡಿ ಹೂಡಿದ್ದ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸದಂತೆ ನ್ಯಾಯಾಲಯ ತಡೆ ನೀಡಿದ ನಂತರವಷ್ಟೆ ಸಿಬಿಐ ಕಾರ್ಯೋನ್ಮುಖವಾಯಿತು. 22 ತಿಂಗಳಿಗೂ ಹೆಚ್ಚು ಕಾಲ ತಟಸ್ಥವಾಗಿದ್ದ ಸಿಬಿಐ ನಂತರ ಕೇಜ್ರಿವಾಲ್ ಅವರನ್ನು ವಶಕ್ಕೆ ನೀಡುವಂತೆ ಕೋರಿತು. ಸಿಬಿಐನ ಇಂಥ ಕ್ರಮವು ಕೇಜ್ರಿವಾಲ್ ಬಂಧನವಾದ ಸಂದರ್ಭದ ಬಗ್ಗೆ ಗಂಭೀರ ಪ್ರಶ್ನೆ ಮೂಡಿಸುತ್ತದೆ. ಸಿಬಿಐ ಮಾಡಿದ ಬಂಧನವು ಇಡಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ನೀಡಲಾದ ಜಾಮೀನನ್ನು ವಿಫಲಗೊಳಿಸುವುದಾಗಿದೆ”
“ಇಡಿ ಹೂಡಿದ್ದ ಮೊಕದ್ದಮೆಯಲ್ಲಿ ಕೇಜ್ರಿವಾಲ್ ಅವರಿಗೆ ಈಗಾಗಲೇ ದೊರೆತಿದ್ದರೂ ಕೇಜ್ರಿವಾಲ್ ಅವರು ಮೊದಲು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿ ಜಾಮೀನು ಪಡೆಯಬೇಕಿತ್ತು ಎನ್ನುವ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರ ವಾದವನ್ನು ಪುರಸ್ಕರಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಮತ್ತೊಮ್ಮೆ ಕೇಜ್ರಿವಾಲ್ ಅವರನ್ನು ಸಿಬಿಐ ಮತ್ತೊಮ್ಮೆ ಬಂಧಿಸಿದ್ದು ಸಮರ್ಥನೀಯವಲ್ಲ. ಜಾಮೀನಿಗೆ ಆದ್ಯತೆ ನೀಡುವುದು ಬೆಳವಣಿಗೆ ಹೊಂದಿದ ನ್ಯಾಯಶಾಸ್ತ್ರ ವ್ಯವಸ್ಥೆಯ ಒಂದು ಮುಖವಾಗಿದೆ. ಅನಿವಾರ್ಯವಾದರೆ ಮಾತ್ರ ಜೈಲು ಎಂಬುದನ್ನು ಅರಿಯಬೇಕು. ವಿಚಾರಣಾ ಪ್ರಕ್ರಿಯೆ ಅಥವಾ ಬಂಧನಕ್ಕೆ ಕಾರಣವಾಗುವ ಸ್ಥಿತಿಗಳು ಕಿರುಕುಳವಾಗಿ ಮಾರ್ಪಾಟಾಗಬಾರದು. ಆದ್ದರಿಂದ ಸಿಬಿಐ ಮಾಡಿದ ಬಂಧನವು ನ್ಯಾಯ ಸಮ್ಮತವಲ್ಲ. ಮೇಲ್ಮನವಿದಾರರನ್ನು (ಕೇಜ್ರಿವಾಲ್) ತಕ್ಷಣವೇ ಬಿಡುಗಡೆ ಮಾಡಬೇಕು” ಎಂದು ನ್ಯಾಯಮೂರ್ತಿ ಭುಯಾನ್ ಅವರು ಆದೇಶಿಸಿದ್ದರು.
“ಸಿಬಿಐ ಪಂಜರದ ಗಿಳಿ ಎಂಬ ಬಗ್ಗೆ ಇರುವ ಕಲ್ಪನೆಯನ್ನು ತೊಡೆದು ಹಾಕಲು ಸ್ವತಃ ಸಿಬಿಐ ಮುಂದಾಗಬೇಕು. ತಾನು (ಸಿಬಿಐ) ಬಂಧಮುಕ್ತ ಗಿಳಿ ಎಂದು ನಿರೂಪಿಸಬೇಕು. ಅದು (ಸಿಬಿಐ) ಸಂಶಯಾತೀತವಾಗಿರಬೇಕು” ಎಂದು ಸಹ ನ್ಯಾಯಮೂರ್ತಿ ಭುಯಾನ್ ಅವರು ಹೇಳಿದ್ದಾರೆ.
ಸಿಬಿಐ ಸಂಶಯಾತೀತ ತನಿಖಾ ಸಂಸ್ಥೆಯಾಗಿ ಉಳಿದಿಲ್ಲ ಎನ್ನುವುದಕ್ಕೆ ನ್ಯಾಯಮೂರ್ತಿಗಳ ಈ ಅಭಿಪ್ರಾಯವೇ ಸಾಕಲ್ಲವೇ ? ಇದುವರೆಗಿನ ಎಲ್ಲ ಬೆಳವಣಿಗಳ ಹಿನ್ನೆಲೆಯಲ್ಲಿ ಕರ್ನಾಟಕ ಸಚಿವ ಸಂಪುಟ ಕೈಗೊಂಡ ತೀರ್ಮಾನ ಸೂಕ್ತವಾಗಿದೆ.

Similar Posts

Leave a Reply

Your email address will not be published. Required fields are marked *