ಜಾನುವಾರು ಸಾಕಣೆ ಕೇಂದ್ರದಲ್ಲಿ ಕಾಣಸಿಗುವ ಮೊದಲು ಶತ್ರುವೆಂದರೆ ನೋಣ. ಮನುಷ್ಯನನ್ನು ಹಲವು ಬಗೆಯಲ್ಲಿ ಕಾಡುವ ಈ ಕ್ರಿಮಿ, ಪ್ರಾಣಿಗಳಿಗೆ ಬಗೆ ಬಗೆಯ ಕಾಯಿಲೆಗಳನ್ನು ತಂದೊಡ್ಡಬಲ್ಲದು. ಇಂಥ ಅಪಾಯಕಾರಿ ನೊಣಗಳನ್ನು ನಾಶ ಮಾಡಲು ಇದೀಗ ಹೊಸದೊಂದು ಮಾದರಿಯ ಬಲೆ ಹೆಣೆಯಲಾಗಿದೆ
ಕೋಳಿ, ಕುರಿ, ಮೊಲ, ಹಸು, ಹಂದಿ ಸಾಕಣೆ ಘಟಕಗಳಲ್ಲಿ ನೊಣಗಳ ಹಾವಳಿ ವಿಪರೀತ. ಇವುಗಳನ್ನು ನಿಯಂತ್ರಿಸದಿದ್ದರೆ ಕೆಲವೇ ದಿನಗಳಲ್ಲಿ 60ಕ್ಕೂ ಹೆಚ್ಚು ರೋಗಗಳು ಪಸರಿಸುವ ಅಪಾಯಗಳು ಉಂಟು. ನೊಣಗಳು ಮನುಷ್ಯರ ಆರೋಗ್ಯವನ್ನು ಬಾಧಿಸುವಂತೆ ಜಾನುವಾರುಗಳ ಆರೋಗ್ಯಸ್ಥಿತಿಗೂ ಧಕ್ಕೆ ತರುತ್ತವೆ. ಹೈನುಸಾಕಣೆ ಕೇಂದ್ರಗಳಲ್ಲಿ ಹಾಲಿಗೆ ರೋಗಾಣುಗಳು ಬಾಧಿಸದಂತೆ ನೋಡಿಕೊಳ್ಳುವ ಅಗತ್ಯವಿರುತ್ತದೆ.
ಇಂಥ ನಿರ್ವಹಣಾ ಕ್ರಮಗಳಿಗೂ ನೊಣಗಳು ಅಡ್ಡಿಯುಂಟು ಮಾಡುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ನೊಣಗಳ ತೀವ್ರಬಾಧೆಯಿಂದಲೇ ಸಾಕಷ್ಟು ಕೋಳಿಸಾಕಣೆ ಘಟಕಗಳು ಮುಚ್ಚಲ್ಪಟ್ಟಿವೆ ಎಂದರೆ ಆಶ್ಚರ್ಯವಾಗಬಹುದು. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೋಳಿ, ಕುರಿ, ಹಸು, ಹಂದಿ ಸಾಕಣೆ ಘಟಕಗಳನ್ನು ನಡೆಸುವವರು ರೈತಾಪಿ ಹಿನ್ನೆಲೆಯಿಂದಲೇ ಬಂದವರಾಗಿರುತ್ತಾರೆ.
ಘಟಕಗಳನ್ನು ಆರಂಭಿಸಲು ಸಾಕಷ್ಟು ಸಾಲ ಮಾಡಿರುತ್ತಾರೆ. ಅತ್ತ ಕೃಷಿಯೂ ಲಾಭದಾಯಕವಾಗದೇ, ಇತ್ತ ಆರಂಭಿಸಿದ್ದ ಘಟಕವೂ ಮುಚ್ಚುವ ಸ್ಥಿತಿಗೆ ಬಂದರೆ, ಅವರಿಗೆಲ್ಲ ಗಾಯದ ಮೇಲೆ ಬರೆ ಎಳೆದಂಥಾಗುತ್ತದೆ. ಇಂಥ ಪರಿಸ್ಥಿತಿಗಳಿಂದ ಪಾರಾಗ ಬೇಕು ಅನ್ನುವವರು, ಘಟಕಗಳ ಸ್ವತ್ಛತೆ ಕಡೆ ತೀವ್ರ ಗಮನ ನೀಡಬೇಕಾಗುತ್ತದೆ. ನೊಣಗಳನ್ನು ನಿಯಂತ್ರಿಸಲು ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ.
ಆದರೆ ಇದು ಪರಿಣಾಮಕಾರಿಯಲ್ಲ. ಹೀಗೆ ಮಾಡುವುದರಿಂದ ಸುತ್ತಲಿನ ಪರಿಸರಕ್ಕೂ, ಬೆಳೆಗಳಿಗೂ ಹಾನಿಯುಂಟಾಗುತ್ತದೆ. ಮೇಲ್ಮಟ್ಟದಲ್ಲಿರುವ ಜಲದ ಜೊತೆಗೆ ಅಂತರ್ಜಲವೂ ಕಲುಷಿತವಾಗುತ್ತದೆ. ಆದ್ದರಿಂದ ಇಂಥ ನಕರಾತ್ಮಕ ಪರಿಣಾಮಗಳು ಉಂಟಾಗದಂತೆ ನೊಣಗಳನ್ನು ನಿಯಂತ್ರಿಸಬೇಕಾದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ, ಬ್ಯಾರಿಕ್ಸ್ ಕೃಷಿ ಸಂಶೋಧನಾ ಕೇಂದ್ರವು ಜೈವಿಕ ಮಾದರಿಯ ನೊಣಗಳ ಬಲೆ ನಿರ್ಮಾಣ ಮಾಡಿದೆ.
ಇದು ಸಾಂಪ್ರದಾಯಿಕ ಮಾದರಿಯ ಬಲೆಯಲ್ಲ. ಮೂರು ಪ್ರತ್ಯೇಕ ಬಿಡಿಭಾಗಗಳನ್ನು ಜೋಡಿಸಿರುವ ಪುಟ್ಟ ಬಾಕ್ಸ್ ಮಾದರಿಯಲ್ಲಿ ಇರುವ ಬಲೆ. ಇದನ್ನು ಹೌಸ್ ಫ್ಲೈ ಡೊಮೊ ಟ್ರ್ಯಾಪ್ ಎಂದು ಕರೆಯಲಾಗುತ್ತದೆ. ಇದರ ನಿರ್ವಹಣೆ ಅತೀ ಸರಳ. ಖರ್ಚೂ ಕಡಿಮೆ. ಕೈರೊ ಲ್ಯೂರ್ ಪೌಚ್‌ಕಟ್ ಮಾಡಿ ಅದರಲ್ಲಿರುವ ಪೌಡರ್ ಅನ್ನು ಬೇಸ್ ಬೌಲ್ಗೆ ನೀರಿನೊಂದಿಗೆ ಹಾಕಬೇಕು. ಇದನ್ನು ಕಲಕಿದ ನಂತರ ಬೌಲ್ ಮೇಲೆ ಕೋನ್‌ಫಿಕ್ಸ್ ಮಾಡಬೇಕು.
ಇದರ ರೀಮ್ ಸುತ್ತಲೂ ಫೆರೊ ಲ್ಯೂರ್ ಹಚ್ಚಬೇಕು. ನಂತರ ಕೋನ್ ಮೇಲೆ ಪಾರದರ್ಶಕ ಬಾಕ್ಸ್ ಹಾಕಿದರೆ ನೊಣಗಳ ಬಲೆ ಸಿದ್ಧ. ಈ ಬಲೆಯಲ್ಲಿರುವ ಕೈರೊ, ಲ್ಯೂರ್ ಮತ್ತು ಫೆರೊ ಲ್ಯೂರ್ ಸೂಸುವ ವಾಸನೆಗೆ ನೊಣಗಳು ಆಕರ್ಷಿತವಾಗುತ್ತವೆ. ಬೇಸ್‌ಬೌಲ…ನಲ್ಲಿರುವ ದೊಡ್ಡ ರಂಧ್ರಗಳ ಮೂಲಕ ಒಳಪ್ರವೇಶಿಸಿ ಫೆರೋ ಲ್ಯೂರ್ ಹಚ್ಚಿದ ಕೋನ್ ಭಾಗಕ್ಕೆ ಬರುತ್ತವೆ.
ನಂತರ ಇವುಗಳು ಆಚೆ ಹೋಗಲು ಸಾಧ್ಯವೇ ಇಲ್ಲದಂತೆ ಬಲೆಯನ್ನು ವಿನ್ಯಾಸ ಮಾಡಲಾಗಿದೆ. ಒಂದೆರಡೇ ದಿನಗಳಲ್ಲಿ ಬಲೆಯೊಳಗೆ ಅಪಾರ ಸಂಖ್ಯೆಯ ನೊಣಗಳು ಬಂಧಿಯಾಗುತ್ತವೆ. ನಂತರ ಬಲೆಯ ಕ್ಯಾಪ್ ತೆಗೆದು ಸತ್ತ ನೊಣಗಳನ್ನು ಹೊರಚೆಲ್ಲಿ ಅದರ ಮೇಲೆ ಮಣ್ಣು ಮುಚ್ಚಬೇಕು. ನಂತರ ಬಲೆಯ ಭಾಗಗಳನ್ನು ನೀರಿನಿಂದ ತೊಳೆದು ಲ್ಯೂರ್‌ಗಳನ್ನು ಹಾಕಬೇಕು. ಇದರಿಂದ ಮತ್ತೆ ನೊಣಗಳನ್ನು ಆಕರ್ಷಿಸುವ ಬಲೆ ಸಿದ್ಧವಾಗುತ್ತದೆ.
ಪರಿಸರಕ್ಕೆ ಹಾನಿಕಾರಕವಲ್ಲದ, ಸುಲಭ, ಸರಳ ರೀತಿಯ, ಕಡಿಮೆ ವೆಚ್ಚದ್ದಾದ ಇಂಥ ಬಲೆಯನ್ನು ಬಳಸುವುದರಿಂದ ನೊಣಗಳ ಹಾವಳಿಯನ್ನು ತಡೆಯಬಹುದು. ಆ ಮೂಲಕ, ಕೋಳಿ ಮತ್ತು ಜಾನುವಾರುಗಳ ಸ್ವತ್ಛತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬಹುದು. ಜಾನುವಾರುಗಳ ಸಾಕಣೆ ಕೇಂದ್ರದಲ್ಲಿ ಮಾತ್ರವಲ್ಲ; ಸಿದ್ಧ ಆಹಾರ ತಯಾರಿಕಾ ಘಟಕಗಳಲ್ಲಿ, ಬೇಕರಿ, ಹೋಟೆಲ್, ಜ್ಯೂಸ್ ತಯಾರಿಕ ಸೆಂಟರುಗಳಲ್ಲಿ, ಆಸ್ಪತ್ರೆಗಳಲ್ಲಿ, ಮನೆಗಳಲ್ಲಿಯೂ ನೊಣ ಹಿಡಿಯುವ ಬಲೆಯನ್ನು ಪರಿಣಾಮಕಾರಿಯಾಗಿ ಬಳಸಬಹುದು.
ಮಾಹಿತಿಗೆ: 9900800033
Dear sir reshem bele gararige tumba avashkate idu working sariyadare nammurina raitarige heltini
ನೊಣಗಳ ನಿಯಂತ್ರಣ ಕುರಿತು ವರದಿ ಚೆನ್ನಾಗಿದೆ