ಕನ್ನಡಿಗರ ನಾಡಿನಲ್ಲಿ ಕೈವೊಡೆದ ಜಾತಿಗಳಿಂದ ಬಂದು ರಾಜ್ಯಭಾರ ಮಾಡಿದವರು ಇದ್ದಾರೆಯೇ..?. ಕೈವೊಡೆದ ಜಾತಿ ಎಂದರೆ ಬಹುತೇಕರಿಗೆ ಅರ್ಥ ಆಗದಿರಬಹುದು. ಮೈಸೂರು, ಮಂಡ್ಯ ಮತ್ತು ಬೆಂಗಳೂರು ಸೀಮೆಯೆಲ್ಲ ತೀರಾ ಹಿಂದುಳಿದ ಜಾತಿಗಳಿಗೆ ಕೈವೊಡೆದ ಜಾತಿಗಳು ಎಂದು ಕರೆಯುವ ರೂಢಿ ಇದೆ. ಹೀಗೆಂದರೆ ದುರ್ಬಲ ಜಾತಿಗಳು ಎಂಬ ಅರ್ಥವೂ ಇದೆ. ಇಂಥ ಸಮುದಾಯಗಳಿಂದ ಬಂದು ರಾಜ್ಯ ಆಳಿದವರು ಯಾರು… ?
ತೀರಾ ಹಿಂದುಳಿದ ಸಮುದಾಯದಿಂದ ಬಂದು ರಾಜ್ಯಭಾರ ಮಾಡಿದ್ದು 12ನೇ ಶತಮಾನದ ಕಳಚೂರಿ ರಾಜವಂಶದವರು. ಈ ನಂತರ ಎಂಟು ಶತಮಾನಗಳ ನಂತರ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಇದೇ ಸಮುದಾಯದ ವೀರಪ್ಪಮೊಯ್ಲಿ. ಮೊಯ್ಲಿಯವರಿಗೂ ಮೊದಲು ತೀರಾ ಹಿಂದುಳಿದ ಜಾತಿಯಾದ ಈಡಿಗ ಸಮುದಾಯದಿಂದ ಬಂದ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದರು. ಈ ನಂತರ ಹಿಂದುಳಿದ ಜಾತಿಯೇ ಎನ್ನಬಹುದಾದ ಸಮುದಾಯದಿಂದ ಬಂದ ಧರ್ಮಸಿಂಗ್ ಮುಖ್ಯಮಂತ್ರಿಯಾದರು. ಈ ಬಳಿಕ ಹತ್ತು ವರ್ಷಗಳ ನಂತರ ಮತ್ತೆ ಹಿಂದುಳಿದ ವರ್ಗದ ಸಿದ್ದರಾಮಯ್ಯ ರಾಜ್ಯಾಧಿಕಾರದ ಚುಕ್ಕಾಣಿ ಹಿಡಿದರು.
ಹಿಂದುಳಿದ ಇಷ್ಟೂ ಮಂದಿ ವ್ಯಕ್ತಿಗಳಿಗೂ ಮುಖ್ಯಮಂತ್ರಿಯಾಗುವ ಅವಕಾಶ ದೊರಕಿಸಿದ್ದು ಕಾಂಗ್ರೆಸ್ ಎಂಬುದಿಲ್ಲಿ ಗಮನಾರ್ಹ. ಇದೇ ಮಾತನ್ನು ಜೆಡಿಎಸ್ ಗಾಗಲಿ, ಬಿಜೆಪಿಗಾಗಲಿ ಹೇಳುವುದಕ್ಕೂ ಸಾಧ್ಯವಿಲ್ಲ. 2004ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಮಿಶ್ರ ಸರ್ಕಾರ ರಚಿಸಿದಾಗ ಮುಖ್ಯಮಂತ್ರಿ ಯಾರಾಗಬೇಕೆಂಬ ಪ್ರಶ್ನೆ ಎದುರಾಗಿತ್ತು. ಈ ವಿಚಾರದಲ್ಲಿ ಕಾಂಗ್ರೆಸ್ ಮುಕ್ತವಾಗಿತ್ತು. ಆ ಸಂದರ್ಭದಲ್ಲಿ ಜೆಡಿಎಸ್ ನಿಂದ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಅವಕಾಶ ಇತ್ತು. ಆದರೆ ದೇವೇಗೌಡರು ಅದನ್ನು ತಪ್ಪಿಸಿದರು ಎಂಬ ಆರೋಪಗಳಿವೆ. ಸ್ವತಃ ಸಿದ್ರಾಮಯ್ಯ ಈ ಮಾತು ಹೇಳಿದ್ದಾರೆ. ಅವತ್ತಿನ ಸಂದರ್ಭದಲ್ಲಿ ದೇವೇಗೌಡರ ಪರಮಾಪ್ತರಾಗಿದ್ದ ಸಿಎಂ ಇಬ್ರಾಯಿಂ ಕೂಡ ಈ ವಿಷಯವನ್ನು ಸಾಕಷ್ಟು ಬಾರಿ ಹೇಳಿದ್ದಾರೆ.
ಈ ವಿಷಯ ಅತ್ತ ಇರಲಿ. ಕಾಂಗ್ರೆಸ್ ನಿಂದ ಧರ್ಮಸಿಂಗ್ ಮುಖ್ಯಮಂತ್ರಿಯಾದರು. ಇವರು ಸಿಎಂ ಕುರ್ಚಿಯಲ್ಲಿ ಸರಿಯಾಗಿ ಕುಳಿತುಕೊಳ್ಳುವ ಮುನ್ನವೇ ಅವರನ್ನು ಉರುಳಿಸಲಾಯ್ತು. ಹೀಗೆ ಮಾಡಿದ್ದು ದೇವೇಗೌಡರೇ ಹೈ ಕಮಾಂಡ್ ಆಗಿರುವ ಜೆಡಿಎಸ್. ಧರ್ಮಸಿಂಗ್ ರನ್ನು ಕೆಳಗೆ ಉರುಳಿಸಿ ತಾನೇ ಮುಖ್ಯಮಂತ್ರಿಯಾಗುವ (ಕು)ತಂತ್ರದಲ್ಲಿ ಮುಂಚೂಣಿಯಲ್ಲಿದ್ದವರು ದೇವೇಗೌಡರ ಪುತ್ರ ಕುಮಾರಸ್ವಾಮಿ. ಪಕ್ಷದ ಹೆಸರಿನಲ್ಲಿಯೇ ಜಾತ್ಯತೀತ ಎಂದಿದ್ದರೂ ಅದಕ್ಕೆ ಎಳ್ಳುನೀರು ಬಿಟ್ಟು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ತಾನೇ ಮುಖ್ಯಮಂತ್ರಿ ಗದ್ದುಗೆಯಲ್ಲಿ ಕುಳಿತರು. ಹೀಗೆ ಮಾಡುವ ಮೂಲಕ ಹಿಂದುಳಿದ ಸಮುದಾಯದ ಮುಖ್ಯಮಂತ್ರಿಯೊಬ್ಬರು ಅಧಿಕಾರದ ಚುಕ್ಕಾಣಿಯನ್ನು ಸರಿಯಾಗಿ ಹಿಡಿಯಲು ಬಿಡದವರು ಎಂಬ ಆರೋಪವನ್ನೂ ತಾವಾಗಿ ಹೊತ್ತುಕೊಂಡರು.
ಈ ನಂತರ ತಮ್ಮದೇ ಅಂದರೆ ಜೆಡಿಎಸ್ ನಲ್ಲಿದ್ದ ಹಿಂದುಳಿದ ಸಮುದಾಯದ ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಹೊರ ಹಾಕಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಕ್ಕೆ ಇದ್ದ ಅಡ್ಡಿ ನಿವಾರಿಸುವುದಕ್ಕಾಗಿಯೇ ಹೀಗೆ ಮಾಡಲಾಯಿತು ಎಂಬುದು ರಾಜಕಾರಣದ ವಲಯದಲ್ಲಿ ಇಂದಿಗೂ ಕೇಳಿಬರುತ್ತಿರುವ ಮಾತು. ಹೀಗೆ ಮಾಡುವ ಮೂಲಕ ಜೆಡಿಎಸ್ ತಾನು ಹಿಂದುಳಿದ ಸಮುದಾಯಗಳ ಹಿತೈಷಿಯಲ್ಲ ಎಂಬುದನ್ನು ತಾನಾಗಿ ರಾಜ್ಯದ ಜನತೆಗೆ ತೋರಿಸಿಕೊಂಡಿತು.
ಸ್ವಾತಂತ್ರ್ಯ ನಂತರ ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳ ಕೈಗೆ ಶಕ್ತಿ ರಾಜಕಾರಣ ಯಾವಯಾವ ಸಂದರ್ಭದಲ್ಲಿ ದೊರೆಯಿತು ಎಂಬುದನ್ನು ಅವಲೋಕಿಸಿದರೆ ಮೊದಲು ಕಾಣಿಸುವವರೇ ದೇವರಾಜ ಅರಸು. ಮೈಸೂರು ರಾಜಮನೆತನದವರಿಗೆ ಹತ್ತಿರದ ಸಂಬಂಧಿಕರಾಗಿದ್ದರೂ ಅದರ ಅಮಲನ್ನು ಕಿಂಚಿತ್ತೂ ತಲೆಗೆರಿಸಿಕೊಳ್ಳದವರು. ಇವರು ಮುಖ್ಯಮಂತ್ರಿಯಾದ ನಂತರ ತಂದ ಭೂ ಸುಧಾರಣೆಯಿಂದ ಬಹುಮುಖ್ಯವಾಗಿ ಹಿಂದುಳಿದ ಸಮುದಾಯಗಳವರು ಸ್ವಂತ ಕೃಷಿಭೂಮಿ ಹೊಂದುವ ಅವಕಾಶ ದೊರಕಿಸಿತು.
ಇದಲ್ಲದೇ ರಾಜ್ಯ ರಾಜಕಾರಣವೆಂದರೇನು ಎಂಬುದೇ ಅರಿಯದ ಅದೆಷ್ಟೊ ಸಮುದಾಯಗಳ ವ್ಯಕ್ತಿಗಳು ಶಾಸಕರಾಗಿ ವಿಧಾನಸೌಧದ ಮೆಟ್ಟಿಲೇರುವಂತೆ ಮಾಡಿದರು. ಮಂತ್ರಿಗಳಾಗುವ ಸದವಕಾಶ ಕಲ್ಪಿಸಿದರು. ತನ್ಮೂಲಕ ಈ ವ್ಯಕ್ತಿಗಳ ಹಿನ್ನೆಲೆಯಲ್ಲಿರುವ ಜಾತಿಗಳಿಗೆ ಶಕ್ತಿ ರಾಜಕಾರಣದ ಅಸ್ಮಿತೆಯನ್ನು ದೊರಕಿಸಿಕೊಟ್ಟರು.
ಇದಲ್ಲದೇ ಮತ್ತೊಂದು ಮಹತ್ತರ ಕ್ರಾಂತಿಯೆಂದರೆ ಹಾವನೂರು ವರದಿಯನ್ನು ಜಾರಿಗೊಳಿಸಿದ್ದು. ಹಾವನೂರು ಅವರ ನೇತೃತ್ವದಲ್ಲಿ ಕಮೀಷನ್ ರಚಿಸಿ ಅದರ ವರದಿ ಜಾರಿಗೆ ಯಾವ ಅಡ್ಡಿಯೂ ಬಾರದಂತೆ ನೋಡಿಕೊಂಡರು. ಈ ಮೂಲಕ ಹಿಂದುಳಿದ ಜಾತಿಗಳ ಲಕ್ಷಾಂತರ ವ್ಯಕ್ತಿಗಳು ಸರ್ಕಾರಿ ನೌಕರರಾಗುವ ಅವಕಾಶ ದೊರೆಯಿತು. ಇಂಥ ಕ್ರಾಂತಿ ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಆಗಿದ್ದು ಎಂಬುದು ಗಮನಾರ್ಹ.
ಇಂಥ ಕ್ರಾಂತಿಕಾರಿ ಕೆಲಸಕ್ಕೆ ದೇವರಾಜ ಅರಸು ಅವರು ಮುಂದಾಗಲು ಪ್ರಮುಖ ಪ್ರೇರಣೆಯಾಗಿದ್ದವರು ಮಹಾತ್ಮಗಾಂಧೀಜಿ ಅವರಿಂದ ಅತ್ಯುತ್ತಮ ಆಡಳಿತಗಾರ ಎನ್ನಿಸಿಕೊಂಡಿದ್ದ, ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವನ್ನಾಗಿ ಮಾಡಿದ್ದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್. ಇವರು ಹಿಂದುಳಿದ ಜಾತಿಗಳ ಏಳಿಗೆ ಸಲುವಾಗಿ ಮಿಲ್ಲರ್ ಕಮೀಷನ್ ಸ್ಥಾಪಿಸಿ ಅದನ್ನು ಜಾರಿಗೆ ತಂದಿದ್ದರು. ಇದರ ಜಾರಿಗೆ ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರಬಲ ವಿರೋಧವಿತ್ತು. ಸಮಿತಿ ವರದಿಯನ್ನು ಜಾರಿಗೆ ತಂದರೆ ರಾಜಿನಾಮೆ ನೀಡುತ್ತೇನೆಂದು ವಿಶ್ವೇಶ್ವರಯ್ಯ ಹೇಳಿದರೂ ಹಿಂಜರಿಯದೇ ದಿಟ್ಟತನದಿಂದ ಒಡೆಯರ್ ಅವರು ಮಿಲ್ಲರ್ ವರದಿ ಜಾರಿಗೊಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸು ಅವರ ನಂತರ ಈ ನಾಡಿನ ಹಿಂದುಳಿದ ಸಮುದಾಯಗಳ ಬಗ್ಗೆ ಪ್ರಬಲವಾಗಿ ಚಿಂತಿಸಿದವರು ಬ್ರಾಹ್ಮಣ ಸಮುದಾಯದಿಂದ ಬಂದ ರಾಮಕೃಷ್ಣ ಹೆಗಡೆ. ತಮ್ಮ ಸಚಿವ ಸಂಪುಟದಲ್ಲಿ ಹಿಂದುಳಿದ ಜಾತಿ, ಅಲ್ಪಸಂಖ್ಯಾತ ಧರ್ಮದ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಿದರು. ಅವರು ಸ್ವತಂತ್ರವಾಗಿ ಉತ್ತಮ ಆಡಳಿತ ನಡೆಸುವ ಅವಕಾಶ ಕಲ್ಪಿಸಿದರು. ರಾಜಕೀಯವಾಗಿ ಮತ್ತಷ್ಟೂ ಬೆಳೆಯುವ ವಾತಾವರಣ ನಿರ್ಮಿಸಿದರು.
ಹಿಂದುಳಿದ ಜಾತಿಗಳ ಶೈಕ್ಷಣಿಕ, ಔದ್ಯೋಗಿಕ ಬೆಳವಣಿಗೆ ದೃಷ್ಟಿಯಿಂದ ವೆಂಕಟಸ್ವಾಮಿ ಆಯೋಗದ ವರದಿಯನ್ನು ಜಾರಿಗೊಳಿಸಿದರು. ಆದರೆ ಇದು ಜಾರಿಯಾಗದಂತೆ ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಭಾಗಗಳಲ್ಲಿ ದೊಡ್ಡ ಹೋರಾಟವೇ ನಡೆಯಿತು. ಇದಕ್ಕೆ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಪ್ರಮುಖ ಖಾತೆ ಹೊಂದಿದ್ದ, ಪ್ರಭಾವಿ ಸಚಿವ, ಅಂದು ಭಿನ್ನಮತೀಯರೂ ಆಗಿದ್ದವರೊಬ್ಬರ ಪರೋಕ್ಷ ಬೆಂಬಲವೂ ಇತ್ತು ಎಂಬ ಆರೋಪವೂ ಇದೆ. ಈ ಬಳಿಕ ವೀರಪ್ಪಮೊಯ್ಲಿ ಅವರ ಅಧಿಕಾರವಧಿಯಲ್ಲಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ರಚಿತವಾಗಿದ್ದ ಚಿನ್ನಪ್ಪರೆಡ್ಡಿ ವರದಿಯೂ ಕೂಡ ಜಾರಿಯಾಗಲು ವಿರೋಧ ವ್ಯಕ್ತವಾಯಿತು.
ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ವೀರಪ್ಪಮೊಯ್ಲಿ ನಂತರ ಹಿಂದುಳಿದ ಸಮುದಾಯಗಳ ಬಗ್ಗೆ ಪ್ರಬಲವಾಗಿ ಚಿಂತಿಸಿದವರು ಸಿದ್ದರಾಮಯ್ಯ ಎಂಬುದು ಸಹ ಇಲ್ಲಿ ಗಮನಾರ್ಹ ಸಂಗತಿ. ಇವರು ತಂದ ಯೋಜನೆಗಳು ಕೇವಲ ಹಿಂದುಳಿದ ಸಮುದಾಯಗಳ ಏಳಿಗೆಯಲ್ಲದೇ ಇತರ ಎಲ್ಲ ಸಮುದಾಯಗಳ ಏಳಿಗೆ ದೃಷ್ಟಿಯನ್ನೂ ಹೊಂದಿವೆ.
ಅನ್ನಭಾಗ್ಯ ಯೋಜನೆ ಬಗ್ಗೆ ಕುಹಕವಾಡುವವರು, ಟೀಕೆ ಮಾಡುವವರೂ ಇದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಹಬ್ಬಹರಿದಿನಗಳಲ್ಲಿ ಮಾತ್ರ ಅದೆಷ್ಟೋ ಕುಟುಂಬಗಳು ಅನ್ನ ಕಾಣುತ್ತಾರೆ. ಇದು ಉತ್ಪ್ರೇಕ್ಷೆ ಮಾತಲ್ಲ. ಇದನ್ನು ಸ್ವತಃ ನೋಡಿದ ಸಿದ್ದರಾಮಯ್ಯ 1 ರೂಪಾಯಿಗೆ ಒಂದು ಕೆಜಿ ಅಕ್ಕಿ ಎನ್ನುವ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದು ಸಾಧಾರಣವಾದ ಸಂಗತಿಯಂತೂ ಅಲ್ಲ.
ಗ್ರಾಮೀಣ ಪ್ರದೇಶದ ಬಹುತೇಕ ಕುಟುಂಬಗಳ ಪಾಲಿಗೆ ಹೈನುಗಾರಿಕೆ ಬಹುದೊಡ್ಡ ಆಸರೆ. ಈ ಹಿನ್ನೆಲೆಯಲ್ಲಿ ಪ್ರತಿಲೀಟರ್ ಗೆ 2 ರೂಪಾಯಿ ಇದ್ದ ಸಹಾಯಧನವನ್ನು ದುಪ್ಪಟ್ಟುಗೊಳಿಸಿದ್ದು ಅಂದರೆ 4 ರೂಪಾಯಿಗೆ ಏರಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವ್ಯಕ್ತಿಗಳು ಮಾಡಿದ್ದ ಸಾಲಮನ್ನಾ ಮಾಡಿದರು. ತಲೆಮೇಲೆ ಸ್ವಂತ ಸೂರು ಇರಲಿ ಎಂದು ಪ್ರತಿಯೊಂದು ಕುಟುಂಬವೂ ಚಿಂತಿಸುತ್ತದೆ. ಆದರೆ ಪುಟ್ಟದೊಂದು ಮನೆಕಟ್ಟಿಕೊಳ್ಳಲು ಸಹ ಕಷ್ಟವಿದೆ. ಇದನ್ನು ಅರಿತಿದ್ದ ಸಿದ್ದರಾಮಯ್ಯ ಅವರು ಬಡವರು ಮನೆಕಟ್ಟಿಕೊಳ್ಳಲು ನೀಡುತ್ತಿದ್ದ 75 ಸಾವಿರ ರೂಪಾಯಿಗಳನ್ನು 1. 5 ಲಕ್ಷ ರೂಪಾಯಿಗೆ ಏರಿಸಿದರು.
ಅನ್ನಭಾಗ್ಯ ಶುರುವಾದ ಅಲ್ಪಾವಧಿಯಲ್ಲಿಯೇ ಅಕ್ಕಿಯನ್ನು ಉಚಿತವಾಗಿ ನೀಡಲು ತೊಡಗಿದರು. ಭಾಗ್ಯಲಕ್ಷ್ಮಿ ಫಲಾನುಭವಿಗಳಾದ ಬಡ ಕುಟುಂಬಗಳ ಬಾಕಿ ಉಳಿದಿದ್ದ ವಿದ್ಯುತ್ ಬಿಲ್ ಬಾಕಿ ಮನ್ನಾ, ಶಾಲಾಮಕ್ಕಳಿಗೆ ಉಚಿತ ಹಾಲು, ಮೊಟ್ಟೆ, ಉಚಿತ ಲ್ಯಾಪ್ ಟ್ಯಾಪ್ ನೀಡಿಕೆ ಯೋಜನೆಗಳು ಬಹು ದೂರದರ್ಶಿತ್ವವನ್ನು ಹೊಂದಿವೆ. ಭವಿಷ್ಯದ ಪ್ರಜೆಗಳನ್ನು ದೈಹಿಕವಾಗಿ, ಶೈಕ್ಷಣಿಕವಾಗಿ ಸದೃಢರನ್ನಾಗಿಸುವ ಆಶಯ ಹೊಂದಿವೆ.
ಕೃಷಿ ಸಮುದಾಯಕ್ಕೆ ಗುಣಮಟ್ಟದ ಬಿತ್ತನೆಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ನೋಡಿಕೊಂಡಿದ್ದೂ ಕಡಿಮೆ ಸಾಧನೆಯಲ್ಲ. ಸಹಕಾರಿ ಬ್ಯಾಂಕುಗಳಲ್ಲಿ ಬಹುದಿನಗಳಿಂದ ಬಾಕಿ ಉಳಿದಿದ್ದ ರೈತರ ಸಾಲವನ್ನು ಮನ್ನಾ ಮಾಡಿದ್ದು ಕೂಡ ಮುಖ್ಯ ಸಾಧನೆ. ಅಲ್ಪಸಂಖ್ಯಾತ ಸಮುದಾಯದ ಏಳಿಗೆಗೆ ಸಿದ್ದರಾಮಯ್ಯ ಸರ್ಕಾರ ಪ್ರಮುಖ ಕಾಣಿಕೆ ನೀಡಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರದ ಬೊಕ್ಕಸದಿಂದ ನೀಡುತ್ತಿದ್ದ ಹಣ ಕೇವಲ 1, 444 ಕೋಟಿ ರೂ. ಮಾತ್ರ. ಇದನ್ನು ನಂತರ 6, 428 ಕೋಟಿಗೆ ಏರಿಸಲಾಗಿದೆ. ಇದಲ್ಲದೇ ಆರನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿದ್ದು ಕೂಡ ಪ್ರಮುಖ ಕಾರ್ಯಗಳಲ್ಲೊಂದಾಗಿದೆ.
ಇಷ್ಟೆಲ್ಲಕ್ಕೂ ಸಿದ್ದರಾಮಯ್ಯ ಮತ್ತು ಅವರ ಸರ್ಕಾರದ ಮಂತ್ರಿಗಳು ಕೈಯಿಂದ ಕೊಡುತ್ತಾರೆಯೇ ಎಂದು ಕುಹಕವಾಡುವವರು ಸಾಕಷ್ಟು ಮಂದಿ ಇದ್ದಾರೆ. ಟೀಕೆ ಅತ್ಯಂತ ಸಹಜ. ಆದರೆ ರಾಜ್ಯ ಸರ್ಕಾರದ ಹಣಕಾಸು ವಹಿವಾಟು ಹಳಿ ತಪ್ಪದ ಹಾಗೆ ನೋಡಿಕೊಳ್ಳಬೇಕು. ಸಮರ್ಪಕ ರೀತಿಯಲ್ಲಿ ತೆರಿಗೆ ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಬಹಳವಾಗಿ ಶ್ರಮಿಸಬೇಕಾಗುತ್ತದೆ. ಸ್ವತಃ ಹಣಕಾಸು ಇಲಾಖೆ ಹೊಂದಿದ್ದ ಸಿದ್ದರಾಮಯ್ಯ ಇದೆಲ್ಲವನ್ನೂ ನಿಭಾಯಿಸಿದ್ದು ಸಾಧಾರಣ ಸಾಧನೆಯಂತೂ ಅಲ್ಲ.
ಹಿಂದುಳಿದ ಜಾತಿಯಿಂದ ಬಂದ ವ್ಯಕ್ತಿಯೊಬ್ಬರು ಇಷ್ಟೆಲ್ಲ ಕಾರ್ಯ ಮಾಡಿದ್ದು ಎಲ್ಲ ಹಿಂದುಳಿದ ಜಾತಿಗಳಿಗೂ ಆತ್ಮವಿಶ್ವಾಸವನ್ನು ದೊರಕಿಸಿಕೊಡುತ್ತದೆ ಎಂಬುದನ್ನು ನಿರಾಕರಿಸಲು ಆಗುವುದಿಲ್ಲ. ಓರ್ವ ಮುಖ್ಯಮಂತ್ರಿ, ಹಣಕಾಸು ಮಂತ್ರಿ ಇಷ್ಟೆಲ್ಲ ಕಾರ್ಯ ಸರ್ಕಾರದಿಂದ ಆಗುವಂತೆ ಮಾಡಬೇಕಾದರೆ ಆತನಿಗೆ ನೊಂದವರ ಕಂಪನಗಳು ಅರ್ಥವಾಗಬೇಕಾಗುತ್ತದೆ. ಹೀಗೆ ಅರ್ಥವಾಗಬೇಕಾದರೆ ಆತ ಸಂವೇದನಾಶೀಲನಾಗಿರಬೇಕಾಗುತ್ತದೆ. ಇಂಥ ಸಂವೇದನಾಶೀಲತೆ ತಮಗಿದೆ ಎಂದು ಸಿದ್ದರಾಮಯ್ಯ ಸಾಬೀತುಪಡಿಸಿದ್ದಾರೆ.
ಧಾರ್ಮಿಕ ಕ್ರಾಂತಿ
ಬಸವಣ್ಣ ಅವರು ವೈದಿಕದರ್ಮದ ಆಚರಣೆಗಳನ್ನು ಕಂಡು ನೊಂದಿದ್ದವರು. ಸಾಮಾಜಿಕ ಸುಧಾರಣೆ ಸಲುವಾಗಿ ಶ್ರಮಿಸಿದವರು. ಈ ಹಿನ್ನೆಲೆಯಲ್ಲಿ ಎಲ್ಲ ಜಾತಿಗಳ ಪ್ರಮುಖವಾಗಿ ಹಿಂದುಳಿದ ಜಾತಿಗಳ ಸಮಕಾಲೀನ ಒಡನಾಡಿಗಳ ಸಹಕಾರದೊಂದಿಗೆ ಲಿಂಗಾಯಿತ ಧರ್ಮ ರಚನೆಯಾಗುವಂತೆ ಮಾಡಿದರು. ಬುದ್ಧನ ನಂತರ ಈ ಮಟ್ಟದಲ್ಲಿ ಚಿಂತಿಸಿದ್ದು ಬಸವಣ್ಣ ಮಾತ್ರ. ಇಂಥ ಕ್ರಾಂತಿಕಾರಕ ಧರ್ಮ, ವೈದಿಕಧರ್ಮದ ಹುನ್ನಾರದಿಂದ ಜಾತಿಯಾಗುವಂತೆ ಮಾಡಿತ್ತು.
ಲಿಂಗಾಯಿತ ಎನ್ನುವುದು ಜಾತಿಯಲ್ಲ, ಧರ್ಮ ಎಂಬ ಕೂಗು ಮೊಳಗುತ್ತಿದ್ದರೂ ಬ್ರಿಟಿಷರೂ ಸೇರಿದಂತೆ ಯಾವುದೇ ರಾಜಪ್ರಭುತ್ವವಾಗಲಿ, ಸರ್ಕಾರಗಳಾಗಲಿ ಅದರತ್ತ ಕಿವಿಗೊಟ್ಟಿರಲಿಲ್ಲ. ಹಾಗೆ ಕಿವಿಗೊಡುವುದು ಸಾಧಾರಣವಾದ ಸಂಗತಿಯಾಗಿರಲಿಲ್ಲ. ಈ ಧೈರ್ಯ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ. ಲಿಂಗಾಯಿತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ದೊರಕಿಸಿದ್ದು ಧಾರ್ಮಿಕ ಕ್ರಾಂತಿಯೇ ಆಗಿದೆ. ಇದೊಂದೇ ಕಾರ್ಯ-ಧೈರ್ಯ, ಸಿದ್ದರಾಮಯ್ಯ ಹೆಸರನ್ನು ಧರ್ಮಗಳ ಅಸ್ತಿತ್ವ ಇರುವವರೆಗೂ ಉಳಿಸುತ್ತದೆ ಎಂಬುದು ನಿರಾಕರಿಸಲಾಗದ ಸತ್ಯ.