ಮಾತೃಭಾಷೆಯನ್ನು ಎಂದು ಹಗುರುವಾಗಿ, ಕೇವಲವಾಗಿ ನೋಡಬಾರದು. ಅದು ಪರಂಪರೆಯಿಂದ ಪರಂಪರೆಗೆ ಇರುವ ಜ್ಞಾನವಾಹಕ ಕೊಂಡಿಗಳು. ಇದನ್ನು ಬೇರೊಂದು ಭಾಷೆಯಲ್ಲಿ ಅರ್ಥೈಸಿಕೊಳ್ಳುವುದು, ದಾಟಿಸುವುದು ಸುಲಭವಲ್ಲ. ಆದ್ದರಿಂದಲೇ ಮಾತೃಭಾಷೆ ಜ್ಞಾನ ವರ್ಗಾವಣೆ ಮತ್ತು ಸಂಸ್ಕೃತಿ ಸಂರಕ್ಷಿಸುವ ವಾಹಕ. ಆದ್ದರಿಂದಲೇ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಬಹುಮುಖ್ಯ. ಇದು ವ್ಯಕ್ತಿ ತನ್ನ ಭಾಷೆಯಲ್ಲಿಯೇ ಆಳವಾಗಿ ವಿವೇಚಿಸುವ, ವಿಶ್ಲೇಷಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲು ಸಾಧ್ಯ.

ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಯುನೆಸ್ಕೋ,  ಅಂತರರಾಷ್ಟ್ರೀಯ ಮಾತೃಭಾಷಾ ದಿನದ ೨೫ ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ  ಭಾಷಾ ವೈವಿಧ್ಯತೆ ಸಂರಕ್ಷಣೆ ಮತ್ತು ಮಾತೃಭಾಷೆಗಳನ್ನು ಉತ್ತೇಜಿಸಲು ಕಳೆದ ೨೫ ವರ್ಷದಲ್ಲಿ ಮಾಡಿರುವ ಪ್ರಯತ್ನಗಳನ್ನು ಸ್ಮರಿಸುವ ಕಾರ್ಯ ಮಾಡುತ್ತಿದೆ.  ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಮೊದಲು ಯುನೆಸ್ಕೋ ಘೋಷಿಸಿತು. ಈ  ನಂತರ ಯುನೈಟೆಡ್‌ ನೇಶನ್‌  ಜನರಲ್ ಅಸೆಂಬ್ಲಿ ಅಂಗೀಕರಿಸಿತು.

ಭಾಷಾ ವೈವಿಧ್ಯತೆ ಸಂರಕ್ಷಣೆ

ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆ. ಸ್ಥಳೀಯ ಸಮುದಾಯ, ಸ್ಥಳೀಯ ಸರ್ಕಾರಗಳು ಮುತುವರ್ಜಿ ವಹಿಸದ ಕಾರಣಕ್ಕೆ ಅವುಗಳಲ್ಲಿ ಕೆಲವು ಅಳಿದು ಹೋಗಿವೆ. ಇನ್ನೂ ಕೆಲವು ಅಳಿದು ಹೋಗುವ ಅಂಚಿನಲ್ಲಿವೆ. ಪ್ರತಿ ಎರಡು ವಾರಗಳಿಗೊಮ್ಮೆ ಒಂದು ಭಾಷೆ ಕಣ್ಮರೆಯಾಗುತ್ತದೆ ಎಂಬ ಆತಂಕವನ್ನು ಅಂತರರಾಷ್ಟ್ರೀಯ ಭಾಷಾತಜ್ಞರು ವ್ಯಕ್ತಡಿಸುತ್ತಾರೆ. ಇದು ಸಾಂಸ್ಕೃತಿಕ ಮತ್ತು ಬೌದ್ದಿಕ ದಿವಾಳಿತನಕ್ಕೂ ಕಾರಣವಾಗುತ್ತದೆ.

ಯುನೆಸ್ಕೋ ಅಂದಾಜಿನ ಪ್ರಕಾರ 8,324 ಕ್ಕೂ ಹೆಚ್ಚು ಮೌಖಿಕ ಭಾಷೆಗಳಿವೆ. ಇವುಗಳಲ್ಲಿ ಸುಮಾರು 7,000 ಭಾಷೆಗಳು ಇನ್ನೂ ಬಳಕೆಯಲ್ಲಿವೆ. ಶಿಕ್ಷಣ ವ್ಯವಸ್ಥೆಗಳು ಮತ್ತು ಸಾರ್ವಜನಿಕ ವಲಯದಲ್ಲಿ ಕೆಲವೇ ನೂರು ಭಾಷೆಗಳಿಗಳಿಗಷ್ಟೆ ನಿಜವಾಗಿಯೂ ಸ್ಥಾನ ನೀಡಲಾಗಿದೆ ಮತ್ತು ಡಿಜಿಟಲ್ ಜಗತ್ತಿನಲ್ಲಿ ನೂರಕ್ಕಿಂತ ಕಡಿಮೆ ಭಾಷೆಗಳನ್ನು ಬಳಸಲಾಗುತ್ತದೆ !

ಮಾತೃಭಾಷೆಯಲ್ಲಿ ಕಲಿಯುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸುವವರು ಹೆಚ್ಚಾಗುತ್ತಿದ್ದಾರೆ. ಅವರ ಕಣ್ಣಿಗೆ ಇಂಗ್ಲಿಷ್‌ ಎದ್ದು ಕಾಣುತ್ತಿದೆ. ಮಗು ತನ್ನ ಮಾತೃಭಾಷೆಯಲ್ಲಿ ಮಾತನಾಡಿದಾಗ ಖುಷಿಪಡದ ತಾಯಿ-ತಂದೆ ಮತ್ತು ಸನಿಹದ ಬಂಧುಗಳು ಆ ಮಗು ಇಂಗ್ಲಿಷಿನಲ್ಲಿ ಒಂದೆರಡು ಶಬ್ದ ಉಲಿದರೆ ಹಿಗ್ಗಿ ಹೀರೇಕಾಯಿಯಾಗುತ್ತಿದ್ದಾರೆ. ಈ ಕಾರಣದಿಂದಲೇ ಹಳ್ಳಿಹಳ್ಳಿಗಳಲ್ಲಿಯೂ  ಇಂಗ್ಲಿಷ್‌ ಮಾಧ್ಯಮ ಶಾಲೆಗಳು ತಲೆಯೆತ್ತಿವೆ. ಬೆಳಗ್ಗೆ ೮ ಗಂಟೆ ಕಳೆಯುತ್ತಿದ್ದಂತೆ ತಾಯಂದಿರು ಸೂಟು ಬೂಟು ಮತ್ತು ಟೈ ಧರಿಸಿ ಹೊರಲಾರದಷ್ಟು ಪುಸ್ತಕಗಳ ಹೊರೆ ಹೊತ್ತ ಪುಟ್ಟಪುಟ್ಟ ಮಕ್ಕಳೊಂದಿಗೆ ಶಾಲಾ ವಾಹನಗಳಿಗಾಗಿ ಕಾಯುವುದು ಸಾಮಾನ್ಯ ದೃಶ್ಯವಾಗಿದೆ. ಇಂಗ್ಲಿಷ್‌ ಕಲಿತರಷ್ಟೇ ತನ್ನ ಮಗು ಉದ್ದಾರವಾಗುತ್ತದೆ ಎಂಬ ಭಾವನೆ ಅವರಲ್ಲಿ ಬೇರೂರಿದೆ.

ಇಂಗ್ಲಿಷ್‌ ಮಾಧ್ಯಮದ ಒಲವು ಹೆಚ್ಚಾಗಲು ಸರ್ಕಾರಗಳೇ ಕಾರಣ

ಭಾಷೆ ಕಲಿಯುವುದು ಮತ್ತು ಮಾಧ್ಯಮ ಎರಡಕ್ಕೂ ವ್ಯತ್ಯಾಸವಿದೆ. ಮಗುವಿಗೆ ತನ್ನ ತಾಯಿನುಡಿಯೇ ಮಾಧ್ಯಮ. ಅದು ಅದರ ಮೂಲಕವೇ ಜಗತ್ತಿನ ವಿಷಯಗಳೆಲ್ಲವೂ ಸಮರ್ಥವಾಗಿ ಅರಿಯಬಲ್ಲುದು. ತನ್ನ ಮಾತೃಭಾಷೆ ಜೊತೆಗೆ ಇತರ ಭಾಷೆಯನ್ನು ಕಲಿಯುವುದು ಅದಕ್ಕೆ ತೊಡಕೇ ಅಲ್ಲ ! ಆದರೆ ಕರ್ನಾಟಕದಲ್ಲಿ ಇದು ಉಲ್ಟಾ ಆಗಿದೆ. ಅದು ತನ್ನ ಮಾತೃಭಾಷೆಯಲ್ಲದ ಪರಕೀಯ ಭಾಷೆಯನ್ನು ಮಾಧ್ಯಮವಾಗಿ ಆಯ್ಕೆ ಮಾಡಿಕೊಂಡು ಜಗತ್ತಿನ ವಿಷಯಗಳನ್ನು ಕಲಿಯಬೇಕಾದ ಒತ್ತಡ ಹಾಕಲಾಗಿದೆ. ಇದಕ್ಕೆ ಪೋಷಕರು ಕೈ ಜೋಡಿಸಿರುವ ದುಸ್ಥಿತಿ ಉಂಟಾಗಿದೆ.

ಪರಿಹಾರವೇನು ?

ಪರಿಹಾರ ಸರಳ ಮತ್ತು ಸುಲಭ. ಅನಗತ್ಯವಾಗಿ ಇದನ್ನು ಕಗ್ಗಂಟು ಮಾಡಲಾಗಿದೆ. ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡ ಮಾಧ್ಯಮ – ಇಂಗ್ಲಿಷ್‌ ಮಾಧ್ಯಮ ಇವೆ. ಕನ್ನಡ ಮಾಧ್ಯಮವೊಂದೇ ಇರಬೇಕು. ಇಂಗ್ಲಿಷ್‌ ಅನ್ನು ಒಂದು ಸಂವಹಕ ಭಾಷೆಯನ್ನಾಗಿಯಷ್ಟೇ ಕಲಿಸಬೇಕು ಅರ್ಥಾತ್‌ ಇಂಗ್ಲಿಷ್‌ ಮೂಲಕವೇ ಇತರ ವಿಷಯಗಳನ್ನು ಕಲಿಸುವ ಪ್ರಯತ್ನಮಾಡಬಾರದು. ಪರಕೀಯ ಭಾಷೆ ಕಲಿಯಲು ೧ ರಿಂದ ೫ನೇ ತರಗತಿ ಮಗುವಿಕೆ ಯಾವುದೇ ಹಿಂಜರಿಕೆಯೂ ಇರುವುದಿಲ್ಲ. ಅದು ತಪ್ಪು ಮಾಡಿದರೂ ಅಂಜುವುದಿಲ್ಲ. ಅಳುಕುವುದಿಲ್ಲ.  ಈ ವಿಶ್ವಾಸವೇ ಅದು ಪರಕೀಯ ಭಾಷೆಯನ್ನು ಸಹ ಉತ್ತಮವಾಗಿ ಕಲಿಯುತ್ತದೆ. ಜೊತೆಜೊತೆಗೆ ವಿಶ್ವವನ್ನು ತನ್ನ ಮಾತೃಭಾಷೆಯಲ್ಲಿಯೇ ಅತ್ಯುತ್ತಮವಾಗಿ ಗ್ರಹಿಸಿಕೊಳ್ಳುತ್ತದೆ.

ಹೀಗೆ ಮಾಡುವುದರಿಂದ  ಕನ್ನಡದ ಅಸ್ಮಿತೆಗೆ ಧಕ್ಕೆ ಒದಗುವುದಿಲ್ಲ. ಪೋಷಕರಿಗೂ ತನ್ನ ಮಗು ಇಂಗ್ಲಿಷ್‌ ಅನ್ನು ಸಮರ್ಥವಾಗಿ ಕಲಿಯುತ್ತಿದೆ, ಕಲಿತಿದೆ ಎಂಬ ತೃಪ್ತಿ ಇರುತ್ತದೆ. ಆಗ ಅವರು ಇಂಗ್ಲಿಷ್‌ ಮಾಧ್ಯಮಗಳ ಶಾಲೆ ಮುಂದೆ ಉದ್ದದ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ದುಬಾರಿ ಶುಲ್ಕ ತೆರುವುದು ತಪ್ಪುತ್ತದೆ. ಈಗ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಹೀಗೆ ಮಾಡಿದರೆ ಇಂಗ್ಲಿಷ್‌ ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಮುಚ್ಚುವ ಸ್ಥಿತಿ ಖಂಡಿತವಾಗಿಯೂ ಉಂಟಾಗುತ್ತದೆ.

ತ್ರಿ ಭಾಷಾ ಸೂತ್ರ ಬೇಕಿಲ್ಲ

ಶಾಲಾ ಮಕ್ಕಳಿಗೆ ಕನ್ನಡವಷ್ಟೇ ಮಾಧ್ಯಮ ಆಗಿರಬೇಕು.  ಒಂದು ಭಾಷೆಯಾಗಿಯಷ್ಟೆ ಇಂಗ್ಲಿಷ್‌ ಕಲಿಯುವ ಅವಕಾಶ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ಹಿಂದಿಯನ್ನು ಶಾಲೆಗಳಲ್ಲಿ ತ್ರಿ ಭಾಷಾ ಸೂತ್ರದಡಿ ಕಲಿಸಬಾರದು. ಹಿಂದಿ ನಮ್ಮರಾಷ್ಟ್ರಭಾಷೆಯಲ್ಲ ! ಹಿಂದಿ ರಾಷ್ಟ್ರಭಾಷೆ ಎಂದು ಸಂವಿಧಾನ ಹೇಳಿಲ್ಲ. ನಾವು  ಒಕ್ಕೂಟ ವ್ಯವಸ್ಥೆಯಲ್ಲಿರುವ ರಾಜ್ಯಗಳು. ಈ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಸಾರ್ವಭೌಮತ್ವ ಹೊಂದಿಲ್ಲ. ಹಿಂದಿಯನ್ನೂ ಕಲಿಸಿ ಎಂಬ ಅದರ ಒತ್ತಡಕ್ಕೆ ಮಣಿಯಬಾರದು. ಹೀಗೆ ಮಾಡಲು ನಮ್ಮ ಅಧಿಕಾರಸ್ಥ ರಾಜಕಾರಣಿಗಳಿಗೆ ಶಕ್ತಿ ಇದೆಯೇ ?

Similar Posts

Leave a Reply

Your email address will not be published. Required fields are marked *