ಪ್ರತಿವರ್ಷ ಸೆಪ್ಟೆಂಬರ್ ೧೪ ರಂದು ರಾಷ್ಟ್ರಮಟ್ಟದಲ್ಲಿ ಹಿಂದಿ ದಿವಸ್ ಆಚರಿಸಲಾಗುತ್ತದೆ. ಇದು ಕೇಂದ್ರ ಸರ್ಕಾರಿ ಪ್ರಯೋಜಿತ ಕಾರ್ಯಕ್ರಮ. ಈ ಸಂದರ್ಭದಲ್ಲಿ ನಮಗೆ ಏಕೆ ರಾಷ್ಟ್ರಮಟ್ಟದಲ್ಲಿ ದಕ್ಷಿಣ ಭಾರತೀಯ ಭಾಷೆಗಳನ್ನು ಕನ್ನಡ ದಿವಸ, ತಮಿಳು ದಿವಸ, ತೆಲುಗು ದಿವಸ, ಮಲೆಯಾಳಂ ದಿವಸ ಎಂದು ಪ್ರಶ್ನೆ ಮೂಡಬೇಕು.
ಏಕೆ ಹಿಂದಿ ದಿವಸ್ ?
1949 ರಲ್ಲಿ ಈ ದಿನದಂದು ಭಾರತದ ಸಂವಿಧಾನ ಸಭೆಯು ಹಿಂದಿಯನ್ನು ಭಾರತದ ಅಧಿಕೃತ ಭಾಷೆಯಾಗಿ ಸ್ವೀಕರಿಸಿದ ನೆನಪಿಗಾಗಿ ಪ್ರತಿ ವರ್ಷ ಸೆಪ್ಟೆಂಬರ್ 14 ರಂದು ಹಿಂದಿ ದಿವಸ್ ಅನ್ನು ಆಚರಿಸಲಾಗುತ್ತದೆ. ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರು ಸೆಪ್ಟೆಂಬರ್ 14 ಅನ್ನು ಅಧಿಕೃತವಾಗಿ ಘೋಷಿಸಿದರು. ಇದೇ ಸಂದರ್ಭದಲ್ಲಿ ಇಂಗ್ಲಿಷ್ ಕೂಡ ಅಧಿಕೃತ ಭಾಷೆಯೆಂದು ಘೋಷಿತವಾಯಿತು. ಮೊದಲ ಹಿಂದಿ ದಿವಸ್ ಅನ್ನು 1953 ರಲ್ಲಿ ಆಚರಿಸಲಾಯಿತು. ಭಾರತೀಯ ಸಂವಿಧಾನದ 343 ನೇ ವಿಧಿಯ ಅಡಿಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಗಳಲ್ಲಿ ಒಂದಾಗಿ ಅಳವಡಿಸಲಾಯಿತು.
ಸೇಠ್ ಗೋವಿಂದ್ ದಾಸ್, ಮೈಥಿಲಿ ಶರಣ್ ಗುಪ್ತ್ ಮತ್ತು ಕಾಕಾ ಕಾಲೇಲ್ಕರ್ ಮುಂತಾದ ವಿದ್ವಾಂಸರು ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಘೋಷಿಸಲು ಒತ್ತಾಯಿಸಿದರು. ಮತ್ತೋರ್ವ ಪ್ರಮುಖ ಹಿಂದಿ ವಿದ್ವಾಂಸ ಬೆಯೋಹರ್ ರಾಜೇಂದ್ರ ಸಿಂಹ ಕೂಡ ಹಿಂದಿ ಭಾಷೆಯ ಪ್ರಚಾರಕ್ಕಾಗಿ ಒತ್ತಡ ಹೇರಿದರು
ಹಲವು ಕೋಟಿ ರೂಪಾಯಿ ವೆಚ್ಚ
ಪ್ರತಿವರ್ಷ ಸೆಪ್ಟೆಂಬರ್ ೧೪ರಂದು ಹಿಂದಿ ದಿವಸ್ ಆಚರಿಸಲು ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಸರ್ಕಾರಿ ಕಚೇರಿಗಳು ವಿಶೇಷವಾಗಿ ಕೇಂದ್ರ ಸರ್ಕಾರದಡಿ ಬರುವ ವಿವಿಧ ಇಲಾಖೆಗಳು, ರಾಷ್ಟ್ರ ಪಠ್ಯ ಕ್ರಮ, ರಾಜ್ಯ ಪಠ್ಯ ಕ್ರಮದ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಸ್ಪರ್ಧೆಗಳು, ರಸಪ್ರಶ್ನೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸೆಮಿನಾರ್ ಗಳು, ಕಾರ್ಯಾಗಾರಗಳು ನಡೆಯುತ್ತವೆ. ಹಿಂದಿ ಭಾಷೆಯ ಶ್ರೀಮಂತಿಕೆಗೆ ಕೊಡುಗೆ ನೀಡಿದ ಬರಹಗಾರರು, ಕವಿಗಳು ಮತ್ತು ಸಾಂಸ್ಕೃತಿಕ ಕಾರ್ಯಕರ್ತರಿಗೆ ಪ್ರಶಸ್ತಿಗಳನ್ನು ನೀಡುತ್ತವೆ.
ವಿಶ್ವ ಹಿಂದಿ ದಿವಸ್ ಆಚರಣೆ
ಭಾರತದಲ್ಲಿ ಸೆಪ್ಟೆಂಬರ್ 14 ಅನ್ನು ಹಿಂದಿ ದಿವಸ್ ಅಥವಾ ರಾಷ್ಟ್ರೀಯ ಹಿಂದಿ ದಿವಸ್ ಎಂದು ಆಚರಿಸಲಾಗುತ್ತದೆ. ಜನವರಿ 10 ಅನ್ನು ವಿಶ್ವ ಹಿಂದಿ ದಿನ ಎಂದು ಆಚರಿಸಲಾಗುತ್ತದೆ. ವಿಶ್ವಾದ್ಯಂತ ಹಿಂದಿ ಭಾಷೆಯ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ವರ್ಷ ಜನವರಿ 10 ರಂದು ವಿಶ್ವ ಹಿಂದಿ ದಿನವನ್ನು ಆಚರಿಸಲಾಗುತ್ತದೆ.
ಹಿಂದಿಗಿರುವ ಪ್ರೋತ್ಸಾಹ ಕನ್ನಡಕ್ಕೇಕಿಲ್ಲ ?
ಹಿಂದಿ ಭಾಷೆ ಕುರಿತು ಇಷ್ಟೆಲ್ಲ ಕಾಳಜಿ ಪ್ರದರ್ಶಿಸುವ ಕೇಂದ್ರ ಸರ್ಕಾರ ಇದೇ ಉತ್ಸಾಹವನ್ನು ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳ ಬಗ್ಗೆ ತೋರಿಸುತ್ತಿಲ್ಲ. ಇವುಗಳು ಹಿಂದಿಗಿಂತಲೂ ಹಳತಾದ, ಹಿರಿಯ ಭಾಷೆಗಳಲ್ಲವೇ ?
ಹಿಂದಿ ರಾಷ್ಟ್ರಭಾಷೆಯಾಗಿದೆಯೇ ?
ಶಾಲಾ ಕಾಲೇಜುಗಳಲ್ಲಿ ಮೇಷ್ಟ್ರು, ಅಧ್ಯಾಪಕರು ಹಿಂದಿಯೇ ರಾಷ್ಟ್ರಭಾಷೆ ಎಂದೆಲ್ಲ ಮತ್ತೆಮತ್ತೆ ಹೇಳಿಹೇಳಿ ಭ್ರಮೆ ಮೂಡಿಸಿದ್ದಾರೆ. ಆದರೆ ಇವರೆಲ್ಲ ಹೇಳುವಂತೆ ಹಿಂದಿ ರಾಷ್ಟ್ರಭಾಷೆ ಅಲ್ಲ; ಅದು ಕೇಂದ್ರದ ಮಟ್ಟದಲ್ಲಿ ಸಂವಹನಕ್ಕಾಗಿ ಘೋಷಿತವಾಗಿರುವ ಇಂಗ್ಲಿಷ್ ಕೂಡ ಸೇರಿದಂತೆ ಒಂದು ಅಧಿಕೃತ ಭಾಷೆ ಅಷ್ಟೆ
ಹಿಂದಿ ಏಕೆ ಭಾರತದ ರಾಷ್ಟ್ರೀಯ ಭಾಷೆ ಅಲ್ಲ?
ಭಾರತದ ಸಂವಿಧಾನವು ಯಾವುದೇ ಭಾಷೆಗೆ ರಾಷ್ಟ್ರೀಯ ಸ್ಥಾನಮಾನವನ್ನು ನೀಡಿಲ್ಲ. ಹಾಗಾಗಿ ಭಾರತಕ್ಕೆ ರಾಷ್ಟ್ರೀಯ ಭಾಷೆ ಇಲ್ಲ. ಭಾರತದ ಸಂವಿಧಾನದ ಎಂಟನೇ ಶೆಡ್ಯೂಲ್ 22 ಭಾಷೆಗಳ ಪಟ್ಟಿಯನ್ನು ಒಳಗೊಂಡಿದೆ. ಆರ್ಟಿಕಲ್ 351, ನಿರ್ದೇಶನ ಆದೇಶವು ಹಿಂದಿ ಹರಡುವಿಕೆಯನ್ನು ಉತ್ತೇಜಿಸುವುದು ಸರ್ಕಾರದ ಕರ್ತವ್ಯ ಎಂದಷ್ಟೇ ಹೇಳುತ್ತದೆ ಹೊರತು ಹಿಂದಿ ರಾಷ್ಟ್ರ ಭಾಷೆ ಎಂದಲ್ಲ
ತ್ರಿಭಾಷಾ ಸೂತ್ರದ ಹೊರೆಯೇಕೆ ?
ತಮಿಳುನಾಡು ಸ್ವಾತಂತ್ರ್ಯ ಪೂರ್ವದಿಂದಲೂ ಹಿಂದಿ ಹೇರಿಕೆಯನ್ನು ವಿರೋಧಿಸಿಕೊಂಡು ಬಂದಿದೆ. 1937-40ರ ಅವಧಿಯಲ್ಲಿ ಬ್ರಿಟಿಷ್ ರಾಜ್ನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ನಡೆದ ಸರಣಿ ಪ್ರತಿಭಟನೆಗಳು ನಡೆದಿವೆ. ಸ್ವಾತಂತ್ರ್ಯ ನಂತರ ೧೯೬೦ರಲ್ಲಿ ಹಿಂದಿ ಹೇರಿಕೆ ವಿರುದ್ಧ ಉಗ್ರ ಪ್ರತಿಭಟನೆಗಳು ನಡೆದಿವೆ. ಈ ಕಾರಣದಿಂದ ಅಲ್ಲಿ ತ್ರಿ ಭಾಷಾ ಸೂತ್ರದ ಹೊರೆ ಇಲ್ಲ. ಅಲ್ಲಿಯ ರಾಜ್ಯ ಪಠ್ಯ ಕ್ರದ ಶಾಲೆಗಳಲ್ಲಿ – ಕಾಲೇಜುಗಳಲ್ಲಿ ಹಿಂದಿ ಕಲಿಸುವುದಿಲ್ಲ. ಅಲ್ಲಿನ ಕೇಂದ್ರ ಪಠ್ಯ ಕ್ರಮದ ಶಾಲೆಗಳಲ್ಲಿಯೂ ಹಿಂದಿ ಕಲಿಕೆ ಕಡ್ಡಾಯವಲ್ಲ. ಅದು ಐಚ್ಛಿಕ ಅಷ್ಟೆ !
ಮಕ್ಕಳಿಗೆ ಇದೊಂದು ಹೊರೆ
ತಮಿಳುನಾಡು ತೋರಿದ ಹಿಂದಿ ಪ್ರತಿರೋಧ ದಕ್ಷಿಣದ ಇತರ ರಾಜ್ಯಗಳಲ್ಲಿ ಕಂಡು ಬಾರದ ಕಾರಣ ಇಲ್ಲೆಲ್ಲ ತ್ರಿ ಭಾಷಾ ಸೂತ್ರವಿದೆ. ರಾಜ್ಯ ಭಾಷೆ ಜೊತೆಗೆ ಇಂಗ್ಲಿಷ್ ಮತ್ತು ಹಿಂದಿಯನ್ನು ಕಲಿಯಬೇಕಾಗಿದೆ. ಇದರಿಂದ ಶಾಲಾ ಮಕ್ಕಳಿಗೆ ಹಿಂದಿ ಒಂದು ಹೊರೆಯಾಗಿ ಪರಿಣಮಿಸಿದೆ. ಆದರೂ ಹಿಂದಿಯತ್ತ ವಿದ್ಯಾರ್ಥಿಗಳನ್ನು ಆಕರ್ಷಿಸಲು ಹೆಚ್ಚು ಅಂಕಗಳ ಆಮಿಷ ಒಡ್ಡಲಾಗುತ್ತಿದೆ. ಇದರಿಂದ ಕರ್ನಾಟಕ ಸೇರಿದಂತೆ ಆಂಧ್ರ, ತೆಲಂಗಾಣ, ಕೇರಳದಲ್ಲಿ ಶಾಲಾ-ಕಾಲೇಜು ಹಂತದಲ್ಲಿ ಪ್ರತಿವರ್ಷ ಮೊದಲನೇ ಭಾಷೆಯಾಗಿ ಹಿಂದಿಯನ್ನೇ ತೆಗೆದುಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ಆಯಾ ರಾಜ್ಯದ ಅಧಿಕೃತ ಭಾಷೆ ಮೇಲೆ ಆಗುವ ಪರಿಣಾಮಗಳನ್ನು ಆಯಾ ರಾಜ್ಯ ಸರ್ಕಾರಗಳು ಚಿಂತಿಸುತ್ತಿಲ್ಲ
ನಾವ್ಯಾಕೆ ಹಿಂದಿ ಕಲಿಯಬೇಕು ?
ಹಿಂದಿ ಅಧಿಕೃತ ಭಾಷೆಯೇ ಆಗಿಲ್ಲದಿರುವಾಗ ನಾವ್ಯಾಕೆ ತ್ರಿ ಭಾಷಾ ಸೂತ್ರ ಒಪ್ಪಿಕೊಳ್ಳಬೇಕು ? ರಾಜ್ಯದ ಭಾಷೆಯಾಗಿ ಕನ್ನಡವಿದೆ, ಸಂವಹನ ಭಾಷೆಯಾಗಿ ಇಂಗ್ಲಿಷ್ ಇರುತ್ತದೆ. ಹೀಗಿರುವಾಗ ಶಾಲಾ-ಕಾಲೇಜು ವಿದ್ಯಾರ್ಥಿಗಳ ಮೇಲೆ ಹೊರೆಯೇಕೆ ? ಇತ್ತೀಚೆಗೆ ಕೇಂದ್ರ ಸರ್ಕಾರದಡಿ ಬರುವ ಇಲಾಖೆಗಳಲ್ಲಿ, ಬ್ಯಾಂಕುಗಳಲ್ಲಿ ಹಿಂದಿ ಭಾಷಿಕರನ್ನು ತುಂಬುತ್ತಾ ಸಾರ್ವಜನಿಕರ ಮೇಲೆಯೂ ಪ್ರತ್ಯಕ್ಷ – ಪರೋಕ್ಷವಾಗಿ ದೈನಂದಿನ ಜೀವನದಲ್ಲಿ ಹಿಂದಿ ಹೇರಲಾಗುತ್ತಿದೆ. ಇದೇ ಪ್ರವೃತ್ತಿಗಳು ಮುಂದುವರಿಯುತ್ತಾ ಹೋದರೆ ನಮ್ಮ ದಕ್ಷಿಣ ಭಾರತೀಯರ ಮಾತೃಭಾಷೆಗಳು ಮಂಕಾಗುತ್ತವೆ. ಈ ಅಪಾಯ ನಮಗೆ ಬೇಕೇ ?