ಕನ್ನಡ ಭಾಷೆ ಒಂದೆ, ಶೈಲಿಗಳು ಹಲವು. ಓದಿಗಾಗಿ, ಕೆಲಸಕ್ಕಾಗಿ ಯಾವುದೇ ಊರಿಗೆ ಹೋದರೂ ನಮ್ಮನಮ್ಮ ಊರ ಕನ್ನಡ ಮಾತನಾಡಲು, ಸಂಕೋಚ, ಹಿಂಜರಿತ ಬೇಡ. ಪಟ್ಟಣ – ನಗರ – ಮಹಾನಗರಗಳಲ್ಲಿರುವ ಸಂಕುಚಿತ ಭಾವಗಳವರು ” ಅ ಹ, ಒ ಶ ಷ ಸ ವ್ಯತ್ಯಾಸಳಿಲ್ಲದೇ ಮಾತನಾಡುತ್ತಿರುತ್ತೀರಿ ಎಂದರೆ ಅವರತ್ತ ಒಮ್ಮೆ ನಿರ್ಲಕ್ಷ್ಯದ ನಗೆ ಚೆಲ್ಲಿ.
ನನ್ನ ಅನುಭವಕ್ಕೆ ಬಂದ ಹಾಗೆ ಬೆಂಗಳೂರು, ಮೈಸೂರು ಮಹಾನಗರಗಳ ಅಕ್ಷರಸ್ಥರಲ್ಲಿ ಒಂದು ಕಾಯಿಲೆಯಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದವರು ಅ ಹ ಶ ಸ ಷ ಗಳ ವ್ಯತ್ಯಾಸವಿಲ್ಲದೇ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡುತ್ತಾರೆ. ಬರೆಯುವುದುಕ್ಕೂ, ಮಾತನಾಡುವುದಕ್ಕೂ ವ್ಯತ್ಯಾಸವಿದೆ ಎಂಬ ಪ್ರಾಥಮಿಕ ಸಂಗತಿಯೂ ಅವರ ಅರಿವಿಗೆ ಬಂದಿರುವುದಿಲ್ಲ
ಕನ್ನಡವನ್ನು ಶತಶತಮಾನಗಳಿಂದ ಉಳಿಸಿ – ಬೆಳೆಸಿಕೊಂಡು ಬಂದಿರುವುದರಲ್ಲಿ ಗ್ರಾಮೀಣರ ಪಾತ್ರವೇ ಅಗಾಧ. ಅವರು ಗ್ರಾಂಥಿಕತೆಯ ಮೊರೆ ಹೋಗಲಿಲ್ಲ. ಹಕ್ಕಿಗಳು ಉಲಿದ ಹಾಗೆ, ನದಿಗಳು ಹರಿಯುವ ಹಾಗೆ ಮಾತನಾಡಿದರು, ಅಪಾರ ಸಂಪದ್ಭರಿತ ಮೌಖಿಕ ಸಾಹಿತ್ಯ ನೀಡಿದರು. ಅದಕ್ಕೆ ಹೋಲಿಸಿದರೆ ಗ್ರಾಂಥಿಕ ಸಾಹಿತ್ಯ, ಸೂರ್ಯನ ಮುಂದಿನ ಹಣತೆಯ ಹಾಗೆ. ಇಲ್ಲಿಂದ ನಗರ – ಮಹಾನಗರಗಳಿಗೆ ಬಂದವರೇ ಇಲ್ಲಿ ಪರಭಾಷೆಗಳು ಸೊಕ್ಕಿನಿಂದ ಮೊರೆಯುವುದನ್ನು ನಿಲ್ಲಿಸಿ ಕನ್ನಡ ಮೆರೆಯುಂತೆ ಮಾಡಿದವರು.
ಇಂಥವರನ್ನು ಓರಾಟಗಾರರು ಎಂದು ವ್ಯಂಗ್ಯ ಮಾಡುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇದೆ. ಅಂಥವರಿಗೆ ಯಾವುದೇ ಮುಲಾಜು ಇಲ್ಲದೇ ಸಿಟ್ಟಿನಿಂದಲೇ ಮಾರುತ್ತರ ನೀಡಿ. ಓರಾಟ ಎನ್ನುವವರೇ ಕನ್ನಡಕ್ಕಾಗಿ ಜೈಲುವಾಸಗಳನ್ನು ಕಂಡವರು, ಪೊಲೀಸ್ ಸ್ಟೇಷನ್, ಕೋರ್ಟುಗಳ ಮೆಟ್ಟಿಲು ಹತ್ತಿಳಿಯುತ್ತಿರುವವರು, ಕನ್ನಡಕ್ಕಾಗಿ ಕಷ್ಟಗಳ ಸರಮಾಲೆಗಳನ್ನೇ ಮೈಮೇಲೆ ಎಳೆದುಕೊಂಡವರು ಎಂಬುವುದನ್ನು ಮರೆಯಬೇಡಿ.
ಸ್ವದೇಶದ ಯಾವ ರಾಜ್ಯದಲ್ಲಿಯಾದರೂ ಇರಿ, ವಿದೇಶದಲ್ಲಾದರೂ ಇರಿ. ಎಲ್ಲಿದ್ದರೂ ಮನೆಮಂದಿಯೆಲ್ಲ ಪರಸ್ಪರ ಕನ್ನಡದಲ್ಲಿಯೇ ಮಾತನಾಡಿ.ಮನೆ ಮಕ್ಕಳೊಂದಿಗೆ ಕನ್ನಡದಲ್ಲಿಯೇ ಮಾತನಾಡಿ. ಕನ್ನಡ ಮಾತನಾಡುವುದು ಹೆಮ್ಮೆ ಎಂಬ ಭಾವ ಅವರಲ್ಲಿ ಮೊಳೆಯುವಂತೆ ಮಾಡಿ. ಹೊರಗೆ ಕನ್ನಡಿಗರಿಬ್ಬರು ಭೇಟಿಯಾದರೆ ಕನ್ನಡದಲ್ಲಿಯೇ ಮಾತನಾಡಿ. ವ್ಯಾಪಾರ – ಉದ್ಯೋಗಗಳ ಸಲುವಾಗಿ ಕರ್ನಾಟಕಕ್ಕೆ ಬಂದವರೊಂದಿಗೆ ಅವರ ಭಾಷೆಯಲ್ಲಿಯೇ ಮಾತನಾಡಬೇಡಿ. ಕರ್ನಾಟಕದಲ್ಲಿ ಜೀವನ ನಡೆಸಬೇಕಾದರೆ ಕನ್ನಡದಲ್ಲಿಯೇ ಮಾತನಾಡಬೇಕು ಎಂಬ ವಾತಾವರಣ ಮೂಡುವಂತೆ ಮಾಡೋಣ…
ಸಿರಿಗನ್ನಡಂ ಗೆಲ್ಗೆ…ಸಿರಿಗನ್ನಡಂ ಬಾಳ್ಗೆ …
ಕನ್ನಡ ರಾಜ್ಯೋತ್ಸವ ಶುಭಾಶಯಗಳು
– ಕುಮಾರ ರೈತ, ಪತ್ರಕರ್ತ