“ಅಮಿತ್‌ ಶಾ ಅವರು ಭಾಷಾತಜ್ಞರಾಗಿದ್ದು ಯಾವಾಗ “ಎಂಬ ಪ್ರಶ್ನೆ ಓದಿ, ಏಕೀಗೆ ಕೇಳ್ತಿದ್ದಾರೆ ಎಂದು ನಿಮಗೆ ಖಂಡಿತ ಅನಿಸುತ್ತದೆ. ಆದ್ದರಿಂದ ಅವರು ಸೆಪ್ಟೆಂಬರ್‌ 14, 2023 ಹಿಂದಿ ದಿವಸ್‌ ಆಚರಣೆಯಂದು ಆಡಿರುವ ಮಾತುಗಳ ಪೂರ್ಣ ಪಠ್ಯ ಮುಂದಿದೆ. ಅದನ್ನೊಮ್ಮೆ ಪೂರ್ಣ ಓದಿ

ಭಾರತದ ಭಾಷಾ ವೈವಿಧ್ಯ ಒಗ್ಗೂಡಿಸುವ ಹಿಂದಿ: ಅಮಿತ್ ಶಾ

ನವದೆಹಲಿ: ‘ಭಾರತವು ವೈವಿಧ್ಯಮಯ ಭಾಷೆಗಳ ದೇಶ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳ ಈ ದೇಶದಲ್ಲಿ ಭಾಷೆಗಳ ವೈವಿಧ್ಯವನ್ನು ಹಿಂದಿ ಭಾಷೆಯು ಒಂದುಗೂಡಿಸುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದರು.

‘ಹಿಂದಿ ದಿವಸ್’ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭ ಕೋರಿರುವ ಅವರು, ‘ಹಿಂದಿಯು ಭಾರತದ ಬೇರೆ ಯಾವುದೇ ಭಾಷೆಯೊಂದಿಗೆ ಸ್ಪರ್ಧಿಸಿಲ್ಲ ಮತ್ತು ಎಂದಿಗೂ ಸ್ಪರ್ಧಿಸುವುದಿಲ್ಲ’

ಹಿಂದಿಯು ವಿವಿಧ ಭಾರತೀಯ ಭಾಷೆಗಳು, ಉಪಭಾಷೆಗಳು ಮತ್ತು ಅನೇಕ ಜಾಗತಿಕ ಭಾಷೆಗಳನ್ನು ಗೌರವಿಸಿದೆ. ಅವುಗಳ ಶಬ್ದಕೋಶಗಳು, ವಾಕ್ಯಗಳು ಮತ್ತು ವ್ಯಾಕರಣ ನಿಯಮಗಳನ್ನು ಅಳವಡಿಸಿಕೊಂಡಿದೆ. ಹಿಂದಿ ಎಲ್ಲ ಸ್ಥಳೀಯ ಭಾಷೆಗಳನ್ನು ಸಬಲೀಕರಣಗೊಳಿಸುವ ಮಾಧ್ಯಮವಾಗಲಿದೆ ಎಂಬ ಖಾತರಿ ನನಗಿದೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ, ಭಾರತೀಯ ಭಾಷೆಗಳಿಗೆ ರಾಷ್ಟ್ರೀಯ ಮತ್ತು ಜಾಗತಿಕ ವೇದಿಕೆಗಳಲ್ಲಿ ಸೂಕ್ತ ಮಾನ್ಯತೆ ಹಾಗೂ ಗೌರವ ದೊರೆತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ಚಳವಳಿಗೂ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಚಳವಳಿಯ ಕಷ್ಟದ ದಿನಗಳಲ್ಲಿ ದೇಶವನ್ನು ಒಗ್ಗೂಡಿಸುವಲ್ಲಿ ಹಿಂದಿ ಭಾಷೆ ಅಭೂತಪೂರ್ವ ಪಾತ್ರ ವಹಿಸಿದೆ. ಇದು ಅನೇಕ ಭಾಷೆಗಳು ಮತ್ತು ಉಪಭಾಷೆಗಳಾಗಿ ವಿಭಜನೆಗೊಂಡಿದ್ದ ದೇಶದಲ್ಲಿ ಏಕತೆಯ ಭಾವನೆಯನ್ನು ಹುಟ್ಟುಹಾಕಿದೆ. ಸಂವಹನ ಭಾಷೆಯಾಗಿ ಹಿಂದಿ, ದೇಶದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸ್ವರಾಜ್ಯ ಮತ್ತು ಸ್ವಭಾಷಾ ಸಾಧಿಸುವ ಆಂದೋಲನಗಳು ದೇಶದಲ್ಲಿ ಏಕಕಾಲದಲ್ಲಿ ನಡೆಯುತ್ತಿವೆ ಎಂದು ಅಮಿತ್ ಶಾ ವಿಶ್ಲೇಷಿಸಿದರು.

ದೇಶದಲ್ಲಿ ಅಧಿಕೃತ ಭಾಷೆ ವಿಚಾರದಲ್ಲಿ ಆಗಿರುವ ಕೆಲಸವನ್ನು ನಿಯಮಿತವಾಗಿ ಪರಿಶೀಲಿಸಲು ಅಧಿಕೃತ ಭಾಷಾ ಸಂಸದೀಯ ಸಮಿತಿಯನ್ನು ರಚಿಸಲಾಗಿದೆ. ದೇಶದಾದ್ಯಂತ ಕೆಲಸಗಳಲ್ಲಿ ಹಿಂದಿ ಬಳಕೆಯಲ್ಲಿ ಆಗಿರುವ ಪ್ರಗತಿ ಪರಿಶೀಲಿಸುವ ಮತ್ತು ಅದರ ವರದಿ ಸಿದ್ಧಪಡಿಸಿ ರಾಷ್ಟ್ರಪತಿ- ಯವರಿಗೆ ಸಲ್ಲಿಸುವ ಜವಾಬ್ದಾರಿ- ಯನ್ನು ಸಮಿತಿಗೆ ನೀಡಲಾಗಿದೆ. ಈ ವರದಿಯ 12ನೇ ಸಂಪುಟವನ್ನು ರಾಷ್ಟ್ರಪತಿ ಅವರಿಗೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಹೇಗೆ ಭಾಷಾ ವೈವಿಧ್ಯ ಒಂದುಗೂಡಿಸುತ್ತದೆ ?

ಹಿಂದಿ ಭಾಷೆಯು ಭಾಷಾ ವೈವಿಧ್ಯ ಒಂದುಗೂಡಿಸುತ್ತದೆ ಎಂದು ಹೇಳಿರುವ ಅಮಿತ್‌ ಶಾ ಅದು ಹೇಗೆಂದು ವಿವರಿಸಿಲ್ಲ. ಭಾರತದ ಇತರ ಭಾಷೆಗಳಿಗೆ ಹೋಲಿಸಿದರೆ ಹಿಂದಿಗೆ ಸುದೀರ್ಘ ಇತಿಹಾಸವಿಲ್ಲ.  ಭಾಷಾ ಇತಿಹಾಸದ ದೃಷ್ಟಿಯಿಂದ ಕಿರಿಯ ಆಗಿರುವ ಹಿಂದಿ ಅದ್ಹೇಗೆ ಭಾಷೆಗಳ ವೈವಿಧ್ಯ ಒಂದುಗೂಡಿಸುತ್ತದೆ ? ಇದಕ್ಕೆ ತರ್ಕವಿದೆಯೇ ?

ಇತರ ಭಾಷೆಗಳೊಂದಿಗೆ ಸ್ಪರ್ಧಿಸುತ್ತಿಲ್ಲವೇ ?

‘ಹಿಂದಿಯು ಭಾರತದ ಬೇರೆ ಯಾವುದೇ ಭಾಷೆಯೊಂದಿಗೆ ಸ್ಪರ್ಧಿಸಿಲ್ಲ ಮತ್ತು ಎಂದಿಗೂ ಸ್ಪರ್ಧಿಸುವುದಿಲ್ಲ’ ಎಂದು ಅಮಿತ್‌ ಶಾ ಅಪ್ಪಣೆ ಕೊಡಿಸಿದ್ದಾರೆ. ತ್ರಿ ಭಾಷಾ ಸೂತ್ರವೇ ಇತರ ಭಾಷೆಗಳೊಂದಿಗೆ ಸ್ಪರ್ಧೆಯಲ್ಲವೇ ? ಹಿಂದಿಯೇತರ ರಾಜ್ಯಗಳಲ್ಲಿ ತ್ರಿ ಭಾಷಾ ಸೂತ್ರ ಮಾಡಿ ಕಲಿಯಬೇಕು; ಶಾಲಾಕಾಲೇಜು ಹಂತದಲ್ಲಿ ಪರೀಕ್ಷೆ ಬರೆದು ಕನಿಷ್ಟ ಅಂಕಗಳನ್ನಾದರೂ ತೆಗೆದುಕೊಂಡು ಉತ್ತೀರ್ಣತೆ ಗಳಿಸಬೇಕು ಎಂಬ ನಿಯಮ ರೂಪಿಸುವುದು ಸ್ಪರ್ಧೆಯಲ್ಲವೇ ? ಇತ್ತೀಚಿನ ವರ್ಷಗಳಲ್ಲಿ ಶಾಲೆಗಳಲ್ಲಿ, ಪಿಯುಸಿ ಹಂತದಲ್ಲಿ ಹಿಂದಿಯನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಹಿಂದಿ ಭಾಷೆಯಲ್ಲಿ ಅತೀಹೆಚ್ಚು ಗಳಿಸಬಹುದು ಎಂಬುದೊಂದೇ ಆಗಿದೆ. ಇದರಿಂದ ಆಯಾ ಸ್ಥಳೀಯ ಭಾಷೆಯ ಸಮಗ್ರತೆಗೆ ಧಕ್ಕೆಯಾಗುವುದಿಲ್ಲವೇ ? ಇದು ಭಾಷಾ ಸ್ಪರ್ಧೆ ಜೊತೆಗೆ ಇತರ ಭಾರತೀಯ ಭಾಷೆಗಳನ್ನು ಹಿಂದಿಕ್ಕುವುದೇ ಆಗಿದೆಯಲ್ಲಯೇ ?

ಸಬಲೀಕರಣಗೊಳಿಸುವ ಮಾಧ್ಯಮ

ಹಿಂದಿ ಎಲ್ಲ ಭಾಷೆಗಳನ್ನು ಸಬಲೀಕರಣಗೊಳಿಸುವ ಮಾಧ್ಯಮವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಭಾಷಾ ಸಂಪತ್ತಿನಲ್ಲಿ ಆಯಾ ರಾಜ್ಯ ಭಾಷೆಗಳಷ್ಟು ಸಮೃದ್ಧವಲ್ಲದ ಹಿಂದಿ ಹೇಗೆ ಇತರ ಭಾಷೆಗಳನ್ನು ಸಬಲೀಕರಣಗೊಳಿಸುವ ಮಾಧ್ಯಮವಾಗುತ್ತದೆ. ಉದಾಹರಣೆಗೆ ದಕ್ಷಿಣ ರಾಜ್ಯಗಳ ದ್ರಾವಿಡ ಭಾಷೆಗಳಾದ ತಮಿಳು, ಕನ್ನಡ, ತೆಲುಗು ಮತ್ತು ಮಲೆಯಾಳಂ ಭಾಷೆಗಳನ್ನೇ ತೆಗೆದುಕೊಳ್ಳೋಣ. ಈ ಭಾಷೆಗಳಿಗೆ ಸಾವಿರಾರು ವರ್ಷ ಇತಿಹಾಸ, ಸ್ವಂತ ಲಿಪಿ, ವೈಜ್ಞಾನಿಕ ಹಿನ್ನೆಲೆಯ ವ್ಯಾಕರಣವಿದೆ. ಹಿಂದಿ ಭಾಷೆಯು ಲಿಪಿಗಾಗಿ ದೇವನಾಗರಿ ಲಿಪಿಯನ್ನು ಬಳಸುತ್ತದೆ. ಸುದೀರ್ಘ ಭಾಷಾ ಇತಿಹಾಸವೂ ಇಲ್ಲ. ಹೀಗಿರುವಾಗ ಸಬಲೀಕರಣಗೊಳಿಸುವ ಮಾಧ್ಯಮವಾಗಲಿದೆ ಎಂದು ಹೇಗೆ ಭವಿಷ್ಯ ನುಡಿಯುತ್ತೀರಿ ?

ದೇಶವನ್ನು ಒಗ್ಗೂಡಿಸಿದೆಯೇ ?

ಸ್ವಾತಂತ್ರ್ಯ ಚಳವಳಿಯ ಕಷ್ಟದ ದಿನಗಳಲ್ಲಿ ದೇಶವನ್ನು ಒಗ್ಗೂಡಿಸುವಲ್ಲಿ ಹಿಂದಿ ಭಾಷೆ ಅಭೂತಪೂರ್ವ ಪಾತ್ರ ವಹಿಸಿದೆ ಎಂಬ ಮಾತನ್ನು ಅಮಿತ್‌ ಶಾ ಹೇಳಿದ್ದಾರೆ. ಈ ಸಂಗತಿ ಇತಿಹಾಸದಲ್ಲಿ ಎಲ್ಲಿಯಾದರೂ ದಾಖಲಾಗಿದೆಯೇ ? ಹಿಂದಿ, ಉತ್ತರದ ಎಲ್ಲ ರಾಜ್ಯಗಳ ಭಾಷೆಯೇನಿಲ್ಲ. ಈಶಾನ್ಯ ರಾಜ್ಯಗಳ ಭಾಷೆಯೂ ಅಲ್ಲ. ಸ್ವಾತಂತ್ರ್ಯಪೂರ್ವದಲ್ಲಿ   ದಕ್ಷಿಣದ ರಾಜ್ಯಗಳ ಹೆಚ್ಚಿನವರಿಗೆ ಹಿಂದಿ ಭಾಷೆಯ ಪರಿಚಯವೇ ಇರಲಿಲ್ಲ. ಹೀಗಿರಬೇಕಾದರೆ ಹಿಂದಿ ಹೇಗೆ ದೇಶವನ್ನು ಒಂದುಗೂಡಿಸಲು ಸಾಧ್ಯ ?

ಮುಖ್ಯವಾಗಿ ಅಮಿತ್‌ ಶಾ ಸ್ವಾತಂತ್ರ್ಯ ಚಳವಳಿಗೂ ಹಿಂದಿ ಭಾಷೆಗೂ ಗಂಟು ಹಾಕಿದ್ದಾರೆ. “ಸಂವಹನ ಭಾಷೆಯಾಗಿ ಹಿಂದಿ, ದೇಶದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ” ಎಂದಿದ್ದಾರೆ. ಕರ್ನಾಟಕವೊಂದನ್ನೇ ಉದಾಹರಣೆಯಾಗಿ ನೋಡೋಣ ! ಬ್ರಿಟಿಷರ ವಿರುದ್ಧ ಕೊನೆ ಉಸಿರಿನ ತನಕ ಹೋರಾಡಿದ  ಮೈಸೂರು ಸಂಸ್ಥಾನದ ದೊರೆ ಟಿಪ್ಪು ಸುಲ್ತಾನ್‌, ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮ, ಬೆಳವಡಿ ಸಂಸ್ಥಾನದ ಮಲ್ಲಮ್ಮ, ಹಡಗಲಿಯ ಬೇಡರು ಇವರಿಗೆಲ್ಲ ಸ್ವಾತಂತ್ರ್ಯ ಹೋರಾಟ ನಡೆಸಲು ಹಿಂದಿ ಭಾಷೆ ಪ್ರೇರಣೆ ನೀಡಿರಲಿಲ್ಲ. ಹೀಗಿರುವಾಗ ಉತ್ತರದಿಂದ ಹೇಗೆ ಹಿಂದಿ ಸ್ವಾತಂತ್ರ್ಯ ಚಳವಳಿಗೆ ಪ್ರೇರಣೆಯಾಗಿ ಒದಗಲು ಸಾಧ್ಯ ?

ನಾವು ಇಲ್ಲಿ ಇನ್ನೊಂದು ಸಂಗತಿಯನ್ನು ಗಮನಿಸಬೇಕು; ಸ್ವಾತಂತ್ರ್ಯ ಹೋರಾಟವನ್ನು ಉತ್ತರದಿಂದ ದಕ್ಷಿಣಕ್ಕೆ ಕೊಂಡೊಯ್ಯುವಲ್ಲಿ ಹಿಂದಿ ಭಾಷೆ ಪಾತ್ರ ವಹಿಸಿದೆ ಎಂದಿದ್ದಾರೆ ! ಹಾಗಿದ್ದರೆ ಉತ್ತರದಿಂದಲೇ ದಕ್ಷಿಣದವರಿಗೆ ಸ್ವಾತಂತ್ರ್ಯ ಹೋರಾಟದ ಪ್ರೇರಣೆ ಸಿಕ್ಕಿತು ಎಂಬುದು ಇದರರ್ಥವೇ ? ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿಸುವಲ್ಲಿ ದಕ್ಷಿಣ ರಾಜ್ಯಗಳವರ ಪಾತ್ರ ನೂರಾರು ವರ್ಷದ ಹಿಂದೆಯೇ ಆರಂಭವಾಗಿತ್ತು ಎಂಬುದರ ಕುರಿತು ಮರೆವಾಗಿದೆಯೇ ?

Similar Posts

1 Comment

  1. Good analysis

Leave a Reply

Your email address will not be published. Required fields are marked *