ಕರ್ನಾಟಕ ರಾಜ್ಯ ಸರಾಸರಿ ಕಬ್ಬು ಇಳುವರಿ 1 ಎಕರೆಗೆ 27 ರಿಂದ 28 ಟನ್. ಮಂಡ್ಯ ಜಿಲ್ಲೆಯಲ್ಲಿ 1 ಎಕರೆಗೆ ಸರಾಸರಿ 35 ರಿಂದ 40 1 ಟನ್ ಬೆಳೆದರೆ ಭಾರಿ. ಬೆಳಗಾವಿ ಜಿಲ್ಲೆ ರೈತರು 1 ಎಕರೆಗೆ 80 ಟನ್ ತನಕ ಬೆಳೆಯುತ್ತಾರಾದರೂ ಪ್ರತಿವರ್ಷ ಇಷ್ಟೆ ಪ್ರಮಾಣದ ಇಳುವರಿ ಬರುವುದಿಲ್ಲ. ಆದರೆ ಇದೇ ಜಿಲ್ಲೆ ಅಥಣಿ ತಾಲೂಕಿನ ರೈತನೋರ್ವ 1 ಎಕರೆಯಲ್ಲಿ ಕಳೆದ 25 ವರ್ಷಗಳಿಂದ ಸರಾಸರಿ 80 ರಿಂದ 90 ಟನ್ ತೆಗೆಯುತ್ತಾರೆ. ಈ ಬಾರಿ ಅವರು 161 ಟನ್ ಇಳುವರಿ ಪಡೆದಿದ್ದಾರೆ. ಇದು ದಾಖಲೆ.

ಭೂಮಿಯ ಫಲವತ್ತತೆ ಕಾಪಾಡಿಕೊಂಡಿರುವುದು, ಉತ್ತಮ ತಳಿಯ ಆಯ್ಕೆ, ಬೀಜೋಪಚಾರ, ಸಮಯಕ್ಕೆ ಸರಿಯಾಗಿ ಪೋಷಕಾಂಶಗಳ ಪೂರೈಕೆ, ಅಗತ್ಯವಿದ್ದಷ್ಟೆ ಪ್ರಮಾಣದ ನೀರು ನೀಡುವಿಕೆ, ತಜ್ಞರ ಮಾರ್ಗದರ್ಶನವನ್ನು ಅನುಸರಿಸಿರುವುದು, ಲಭ್ಯವಿರುವ ತಂತ್ರಜ್ಞಾನದ ಸಮರ್ಥ ಬಳಕೆ ಇವೆಲ್ಲದರ ಪರಿಣಾಮ ಒಂದು ಎಕರೆಯಲ್ಲಿ 148 ಟನ್ ಇಳುವರಿ ಪಡೆಯಲು ಸಾಧ್ಯವಾಗಿದೆ’ ಎಂದು ಬೆಳಗಾವಿ ಜಿಲ್ಲೆ, ಅಥಣಿ ತಾಲೂಕು, ಶೇಡಬಾಳ ಗ್ರಾಮದ ಕಬ್ಬು ಬೆಳೆಗಾರ ಸುರಗೌಡ ರಾಯಗೌಡ ಪಾಟೀಲ (ಪಾಲಗೌಡರ) ಅವರು ವಿವರಿಸುತ್ತಾರೆ.
ಎಸ್.ಆರ್. ಪಾಟೀಲರು ಕಬ್ಬು ಬೆಳೆದಿರುವ ಜಮೀನಿನಲ್ಲಿ ರ್ಯಾಡಮ್ ಸ್ಯಾಪಲಿಂಗ್ ಸರ್ವೇ ಕಾರ್ಯ ಪ್ರಕಾರ ಒಂದು ಎಕರೆಯಲ್ಲಿ ಸರಾಸರಿ ಕಬ್ಬಿನ ಇಳುವರಿ 161 ಟನ್ (ಸೋಗೆ ಅಥವಾ ತೊಂಡೆ ಎನ್ನುವ ಮೇಲಿನ ಭಾಗ ಕಡಿಯದೇ ತೆಗೆದುಕೊಂಡಿರುವ ಲೆಕ್ಕ) ಈ ಕುರಿತ ಹೆಚ್ಚಿನ ಮಾಹಿತಿಯನ್ನು ಮುಂದೆ ನೀಡಲಾಗಿದೆ.
ಬೆಳಗಾವಿ ಜಿಲ್ಲೆಯಿಂದ ಸುಮಾರು 123 ಕಿಲೋಮೀಟರ್ ದೂರವಿರುವ ಶೇಡಬಾಳ ಗ್ರಾಮ, ಮಹಾರಾಷ್ಟ್ರ ರಾಜ್ಯದ ಅಂಚಿನಲ್ಲಿದೆ. ಈ ಗ್ರಾಮದ ರಾಯಗೌಡ ಪಾಟೀಲ ಅವರ ಮಗ ಎಸ್. ಆರ್. ಪಾಟೀಲ (ಪಾಲಗೌಡರ) ಅವರು ಓದಿದ್ದು 10ನೇ ತರಗತಿ. ಮೊದಲಿನಿಂದಲೂ ಚುರುಕಾಗಿದ್ದ ಹುಡುಗ ಸಮೀಪದಲ್ಲಿದ್ದ ಕಾರ್ಖಾನೆಯೊಂದರಲ್ಲಿ ಮೆಕ್ಯಾನಿಕ್ ಆಗಿದ್ದರು. ಈ ಕೆಲಸದಲ್ಲಿ ಇವರ ಪ್ರತಿಭೆ ಕಂಡ ಪರಿಚಯಸ್ಥರೊಬ್ಬರು ದೆಹಲಿ ಸಮೀಪದ ಫರೀದಾಬಾದ್ನಲ್ಲಿರುವ ದ್ವಿಚಕ್ರ ತಯಾರಿಕಾ ಕಾರ್ಖಾನೆಯಲ್ಲಿ ಇವರನ್ನು ಉದ್ಯೋಗಕ್ಕೆ ಸೇರಿಸಿದರು. ಅಲ್ಲಿ 7 ವರ್ಷ ಕೆಲಸ ಮಾಡಿದ ನಂತರ 1984ರಲ್ಲಿ ತಮ್ಮ ಮದುವೆ ಸಲುವಾಗಿ ಊರಿಗೆ ಬಂದ ಇವರು ಇಲ್ಲಿಯೇ ಉಳಿದರು.
ಮಳೆಯಾಶ್ರಿತ ಜಮೀನು. ಬಿಳಿಜೋಳ, ಹತ್ತಿ, ಕಡಲೆ ಇತ್ಯಾದಿ ಬೆಳೆಯತೊಡಗಿದರು. ಸದಾ ಮುಂಗಾರು ಮಳೆಯೊಂದಿಗೆ ಜೂಜಾಟ. ಇದರಿಂದಾಗಿ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸುವ ನಿರ್ಧಾರಕ್ಕೆ ಬಂದವರು ಅದನ್ನು ಕಾರ್ಯಗತಗೊಳಿಸಿದರು. ಸಿಹಿ ಅಂಶ ಇರುವ ಉತ್ತಮ ಪ್ರಮಾಣದ ನೀರು ದೊರೆತ ಮೇಲೆ ಮೊದಲು ಮೆಣಸಿನ ಗಿಡಗಳನ್ನು ನೆಟ್ಟರು. ಉತ್ತಮ ಇಳುವರಿಯೊಂದಿಗೆ ಒಳ್ಳೆಯ ಲಾಭವೂ ದೊರೆಯಿತು. ಇದರಿಂದ ಉತ್ತೇಜಿತರಾಗಿ ಕಬ್ಬು ಬೆಳೆಯುವ ನಿರ್ಧರಿಸಿದರು.1987ರಲ್ಲಿ ಐದು ಎಕರೆಯಲ್ಲಿಯೂ ಕಬ್ಬು ಬಿತ್ತನೆ ಮಾಡಿದರು.
ಅಧಿಕ ಇಳುವರಿ ನೀಡುವ ಖ್ಯಾತಿ ಹೊಂದಿದ್ದ, ಈ ಭಾಗದಲ್ಲಿ ಹೆಚ್ಚಿನ ಬೆಳೆಗಾರರು ಬಳಸುತ್ತಿದ್ದ ಕಬ್ಬಿನ 740 ಸಂಖ್ಯೆಯ ತಳಿಯನ್ನು ಬಿತ್ತನೆ ಮಾಡಿದರು. ‘ ಆಗ ಒಂದು ಎಕರೆಗೆ ಸುಮಾರು 40 ಗಾಡಿ ಕೊಟ್ಟಿಗೆ ಗೊಬ್ಬರ ಪೂರೈಸಿದ್ದೆ. “ಆಗೆಲ್ಲ ಬಹಳ ಸಾವಯವ ಗೊಬ್ಬರದ ಬಳಕೆ ಮಾಡುತ್ತಿದ್ದೆವು. ಇದಲ್ಲದೆ ಅಗತ್ಯ ಪ್ರಮಣದಲ್ಲಿ ಯೂರಿಯಾ, ಪೊಟಾಷ್ ಗೊಬ್ಬರಗಳನ್ನು ಪೂರೈಸಲಾಯಿತು. ತಜ್ಞರ ಮತ್ತು ಪರಿಚಯದ ಪ್ರಗತಿಪರ ಬೆಳೆಗಾರರ ಸಲಹೆ-ಮಾರ್ಗದರ್ಶನ ಪಡೆದು ಬಿತ್ತನೆ ಮಾಡಿದೆ. 1988ರ ಅಂತ್ಯದಲ್ಲಿ ಕಬ್ಬು ಕಟಾವಿಗೆ ಬಂತು. ಆಗ ಒಂದು ಎಕರೆಗೆ ದೊರೆತ ಇಳುವರಿ 99 ಟನ್. ಅತ್ಯಧಿಕ ಪ್ರಮಾಣದ ಕಬ್ಬು ಬೆಳೆದ ಬೆಳೆಗಾರರ ಸಾಲಿಗೆ ಸೇರಿದೆ. ಇದಕ್ಕಾಗಿ ಪುರಸ್ಕಾರವೂ ದೊರೆಯಿತು. ಮೆಕ್ಯಾನಿಕ್ ಆಗಿದ್ದ ವ್ಯಕ್ತಿಯೊಬ್ಬ ಮೊದಲಬಾರಿಗೆ ಇಷ್ಟು ಪ್ರಮಾಣದ ಇಳುವರಿ ಪಡೆದಿದ್ದಕ್ಕೆ ಸುತ್ತಲಿನವರು ಅಚ್ಚರಿಪಟ್ಟರಲ್ಲದೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು” ಎಂದು ಎಸ್.ಆರ್. ಪಾಟೀಲರು ವಿವರಿಸುತ್ತಾರೆ. ಅಂದಿನಿಂದ ಇಂದಿನವರೆಗೆ ಎಸ್.ಆರ್. ಪಾಟೀಲರು ಪ್ರತಿಬಾರಿಯೂ ಸರಾಸರಿ 60ರಿಂದ 100 ಟನ್ ಕಬ್ಬು ಬೆಳೆಯುತ್ತಿದ್ದಾರೆ.
ಮಣ್ಣು ಪರೀಕ್ಷೆ
ಪ್ರತಿಬಾರಿ ಕಬ್ಬು ಬಿತ್ತನೆ ಮಾಡುವ ಮುನ್ನ ಜಮೀನಿನ ಮಣ್ಣಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸುತ್ತಾರೆ. ಇದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳ ಕೊರತೆ ತಿಳಿಯುತ್ತದೆ. ಕೊರತೆ ಇರುವ ಪೋಷಕಾಂಶಗಳನ್ನು ಅಗತ್ಯ ಪ್ರಮಾಣದಲ್ಲಿ ನೀಡುತ್ತಾರೆ. ಸಾವಯವ ಗೊಬ್ಬರ ಪೂರೈಕೆಯನ್ನು ಕಡ್ಡಾಯವಾಗಿ ಮಾಡುತ್ತಾರೆ. ಒಂದು ಎಕರೆಗೆ ಕನಿಷ್ಠ 9 ಗಾಡಿ ಗೊಬ್ಬರ ಹಾಕುತ್ತಾರೆ. ಇದರ ಪೂರೈಕೆ ಇಲ್ಲದಿದ್ದರೆ ಇಳುವರಿ ಕುಂಠಿತವಾಗುತ್ತದೆ. ಇದಲ್ಲದೆ ಯೂರಿಯಾ, ಪೊಟಾಷ್ ಮತ್ತು ಜೈವಿಕ ಗೊಬ್ಬರಗಳನ್ನು ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ಮಣ್ಣಿಗೆ ಬೇಕಾದ ಪೋಷಕಾಂಶಗಳ ಪ್ರಮಾಣ ಸರಿಯಾಗಿರುತ್ತದೆ. ಇದರಿಂದ ಇಳುವರಿಯ ಪ್ರಮಾಣ ತಗ್ಗುವುದಿಲ್ಲ ಎಂದು ತಿಳಿಸುತ್ತಾರೆ.
ದ್ವಿದಳ ಗೊಬ್ಬರ ಪೂರೈಕೆ ಮತ್ತು ಬಿಸಿಲಿಗೆ ಬಿಡುವುದು
ಮುಖ್ಯಬೆಳೆ ನಂತರ ಕೂಳೆಕಬ್ಬು ತೆಗೆದುಕೊಳ್ಳುತ್ತಾರೆ. ಇದರಿಂದ ಜಮೀನು ಹದಗೊಳಿಸುವುದು, ಬಿತ್ತನೆಕಬ್ಬು, ಬಿತ್ತನೆ ಮಾಡುವಿಕೆಯ ಖರ್ಚು ಇರುವುದಿಲ್ಲ. ಮುಖ್ಯಬೆಳೆಗೆ ನೀಡುವಷ್ಟು ಪ್ರಮಾಣದ ಗೊಬ್ಬರವನ್ನು ಇದಕ್ಕೆ ನೀಡುವುದಿಲ್ಲ. ಇದರ ಇಳುವರಿ ಪ್ರಮಾಣ ಒಂದು ಎಕರೆಗೆ ಸರಾಸರಿ 80 ಟನ್. ಕೂಳೆಕಬ್ಬಿನ ಕಟಾವಿನ ನಂತರ ಉಳುಮೆ ಮಾಡಿ ಕಡಲೆ ಎರಚುತ್ತಾರೆ. ಹೀಗೆ ಮಾಡಿದ ಮೂರು ತಿಂಗಳಿಗೆ ಅಂದರೆ ಹೂ ಬರುವುದಕ್ಕಿಂತ ಮುಂಚೆ ಉಳುಮೆ ಮಾಡಿ ಸೊಪ್ಪನ್ನು ಮಣ್ಣಿಗೆ ಮಿಶ್ರಣ ಮಾಡುತ್ತಾರೆ. ಈ ನಂತರ ಸುಮಾರು ಎಂಟು ತಿಂಗಳು ಭೂಮಿಯನ್ನು ಖಾಲಿ ಬಿಡುತ್ತಾರೆ. ಮಧ್ಯೆ ಒಂದೆರಡು ಸಲ ಉಳುಮೆ ಮಾಡಿ ಮಣ್ಣನ್ನು ತಿರುವಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಮಣ್ಣಿನಲ್ಲಿರುವ ಹಾನಿಕಾರಕ ಕೀಟಗಳು ಸಾಯುತ್ತವೆ. ಪಕ್ಷಿಗಳಿಗೂ ಆಹಾರವಾಗುತ್ತವೆ. ಸೂರ್ಯಶಾಖದಿಂದ ಮಣ್ಣಿನ ಫಲವತ್ತತೆಯೂ ವೃದ್ಧಿಯಾಗುತ್ತದೆ. ಬಿಡುವು ಕೊಡುವುದರಿಂದ ಮುಂದಿನ ಬೆಳೆಯಲ್ಲಿ ಹೆಚ್ಚು ಇಳುವರಿ ನೀಡಲು ಭೂಮಿ ಸಿದ್ಧವಾಗುತ್ತದೆ.
ಹೊಸ ಜಮೀನಿನಲ್ಲಿ ಬಿತ್ತನೆ
2012ರಲ್ಲಿ ಹಳೆಯ ಜಮೀನಿನ ಬದಲು ಇದೇ ಗ್ರಾಮದ ಬೇರೆಡೆ ಇರುವ ತಮ್ಮ 5 ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯಲು ಎಸ್. ಆರ್. ಪಾಟೀಲ ಅವರು ನಿರ್ಧರಿಸಿದರು. ಜಮೀನಿನ ಪ್ರಾಥಮಿಕ ಸಿದ್ಧತೆ ನಂತರ ಒಂದು ಎಕರೆಗೆ 6 ಸಾವಿರ ಕಣ್ಣಿನಂತೆ ಐದು ಎಕರೆಗೂ ಬಿತ್ತನೆ ಮಾಡಿದರು. ಸಾಲಿನಿಂದ ಸಾಲಿಗೆ ನಾಲ್ಕುವರೆ ಅಡಿ ಅಂತರ ಕೊಟ್ಟು ಒಂದು ಬಿತ್ತನೆ ಕಬ್ಬಿನಿಂದ ಮತ್ತೊಂದು ಬಿತ್ತನೆ ಕಬ್ಬಿಗೆ 1 ಅಡಿ ಅಂತರ ನೀಡಿದರು. ಇದನ್ನು ಕಂಡಿ ಪದ್ಧತಿ ಪ್ರಕಾರ ಮಾಡಿದರು. ಇದರಂತೆ ಎರಡು ಗಣಿಕೆ ಬಿತ್ತನೆ ಮಾಡಬೇಕು.
ಬಿತ್ತನೆ ಮಾಡುವುದಕ್ಕೂ ಮೊದಲೇ ಪ್ರತಿ ಒಂದು ಎಕರೆಗೆ 9 ಟನ್ ಕೊಟ್ಟಿಗೆ ಗೊಬ್ಬರ, 4 ಚೀಲ ಡಿಎಪಿ, 3 ಚೀಲ ಪೊಟ್ಯಾಷ್, 2 ಚೀಲ ಡಿಎನ್ಪಿ (ಡೈನಾಮಿಕ್ ನ್ಯೂಟ್ರಿಯೆಟ್ ಪ್ರೊವೈಡರ್) ನೀಡಿದ್ದರು. ಇದಲ್ಲದೆ ಈ ಬಾರಿ ಜಮೀನಿನಲ್ಲಿ ಕಡಲೆ ಸೊಪ್ಪು ಅರಗಿದ ಬಳಿಕ ಮೂರು ದಿನ ಮೂರು ಸಾವಿರದಷ್ಟಿದ್ದ ಮಂದೆಯ ಕುರಿ ತರುಬಿಸಿದ್ದರು. ಇದರಿಂದ ಜಮೀನಿಗೆ ಯಥೇಚ್ಛ ಪ್ರಮಾಣದಲ್ಲಿ ಸಾವಯವ ಗೊಬ್ಬರ ಲಭ್ಯವಾಗಿತ್ತು. ಕುರಿ ತರುಬಿಸಿದ ನಂತರವೂ ಉಳುಮೆ ಮಾಡಿ ಮಣ್ಣಿನೊಂದಿಗೆ ಗೊಬ್ಬರ ಮಿಶ್ರವಾಗುವಂತೆ ಮಾಡಿದರು. ಇದರಿಂದ ಐದು ಎಕೆರೆಗೂ ಸಮ ಪ್ರಮಾಣದ ಗೊಬ್ಬರ ಹಂಚಿಕೆಯಾಗಿತ್ತು. ಜಮೀನಿನ ಮಣ್ಣಿನ ಪಿಎಚ್. ಸಾರಾಂಶ ಸೂಕ್ತ ಪ್ರಮಾಣದಲ್ಲಿರುವುದು ಸಹ ಇಳುವರಿಯ ನಿಗದಿತ ಗುರಿಗಿಂತಲೂ ಹೆಚ್ಚಿ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.
ಬಿತ್ತನೆ ಮಾಡಿದ 75 ದಿನಗಳ ಬಳಿಕ 3 ಚೀಲ 10:26, 2 ಚೀಲ ಯೂರಿಯಾ, 2 ಚೀಲ ಡಿಎಪಿ ನೀಡಿದರು. ಕಳೆದ ಬಾರಿ ಹಾಕಿದ್ದ ಕೂಳೆ ಕಬ್ಬು ಕಟಾವಾದ ನಂತರ ತರಗನ್ನು ಕೂಡ ಅವರು ಸುಟ್ಟಿಲ್ಲ. ಯಂತ್ರದ ಮುಖಾಂತರ ಪುಡಿ ಮಾಡಿ ಮಣ್ಣಿಗೆ ಸೇರಿಸಿದ್ದಾರೆ. ಪ್ರತಿಬಾರಿ ಕಬ್ಬು ಕಟಾವು ಆದ ನಂತರ ಹೀಗೆ ಮಾಡುತ್ತೇವೆ. ಇದರಿಂದ ಅಮೂಲ್ಯವಾದ ಸಾವಯವ ಗೊಬ್ಬರ ವ್ಯರ್ಥವಾಗುವುದಿಲ್ಲ ಎಂದು ಎಸ್.ಆರ್. ಪಾಟೀಲ್ ತಿಳಿಸುತ್ತಾರೆ.
ಬೀಜೋಪಚಾರ
ನಿಗದಿತವಾಗಿ ಕಬ್ಬು ತೆಗೆದುಕೊಳ್ಳುವ ಸಮೀಪದ ಮಹಾರಾಷ್ಟ್ರದ ಕೊಲ್ಲಾಪುರಿ ಜಿಲ್ಲೆಯ ಶಿರೋಳದಲ್ಲಿನ (ಶೇಡಬಾಳದಿಂದ 33 ಕಿಲೋಮೀಟರ್ ಅಂತರ) ದತ್ತಾ ಸಕ್ಕರೆ ಕಾರ್ಖಾನೆ ತಜ್ಞರ ಮಾರ್ಗದರ್ಶನದಂತೆ ಕಬ್ಬಿನ ಸಿ.ಓ. 765 ಸಂಖ್ಯೆಯ ತಳಿಯನ್ನು ಆಯ್ಕೆಮಾಡಿಕೊಂಡರು. ಇದು ಮಹಾರಾಷ್ಟ್ರದ ಪಾಡೇಗಾವ್ನಲ್ಲಿ ಅಭಿವೃದ್ಧಿಪಡಿಸಿರುವ ತಳಿ. ಒಂದು ಎಕರೆಗೆ 6 ಸಾವಿರ ಕಬ್ಬಿನ ಕಣ್ಣು ಬಿತ್ತನೆ ಮಾಡುವ ಮೊದಲು ಅವುಗಳಿಗೆ ಬೀಜೋಪಚಾರ ಮಾಡಿದರು. ಹೀಗೆ ಮಾಡುವುದರಿಂದ ಬಿತ್ತನೆ ಕಬ್ಬಿನಲ್ಲಿ ಇರಬಹುದಾದ ಹಾನಿಕಾರಕ ರೋಗಾಣುಗಳು ನಾಶ ಹೊಂದುವುದಲ್ಲದೆ ಶೀಘ್ರ ಮೊಳಕೆ ಬರುತ್ತದೆ. ಬೆಳವಣಿಗೆಯ ವೇಗವೂ ಉತ್ತಮವಾಗಿರುತ್ತದೆ.
ಸಕ್ಕರೆ ಕಾರ್ಖಾನೆ ತಜ್ಞರು ಸಿದ್ಧಪಡಿಸಿರುವ ಚಾಟರ್ಿನ ಪ್ರಕಾರ ಗೊಬ್ಬರ ನೀಡಿದರು. ಮೊದಲ ಮೂರು ತಿಂಗಳು ಕಬ್ಬಿನ ಗದ್ದೆಯಲ್ಲಿ ಬೆಳೆದ ಕಳೆ ಕಿತ್ತು ಹಾಕಿದರು. ಅಗತ್ಯವಿದ್ದೆಡೆ ಟ್ರೆಚಿಂಗ್ ಸಹ ಮಾಡಿದ್ದಾರೆ. ಕೀಟಗಳ ನಿಯಂತ್ರಣ ಮಾಡುವ ಸಲುವಾಗಿ ಶಿಫಾರಸು ಮಾಡಿದ ಪ್ರಮಾಣದಲ್ಲಿಯೇ ಕೀಟನಾಶಕಗಳನ್ನು ಸಿಂಪಡಣೆ ಮಾಡಿದ್ದಾರೆ.
ಗೊಬ್ಬರ ಪೂರೈಕೆ:
ಐದು ಎಕರೆಗೂ ಸಮಪ್ರಮಾಣದಲ್ಲಿ ಗೊಬ್ಬರ ಪೂರೈಕೆಯಾಗುವಂತೆ ಮಾಡುವ ಸಲುವಾಗಿ ಜಮೀನಿಗೆ ಹರಿಯುವ ನೀರಿನೊಂದಿಗೆ ಗೊಬ್ಬರ ಬೆರಸಿ ಪೂರೈಸಿದ್ದಾರೆ. ಇದಲ್ಲದೆ ಜೀವಾಣು ಗೊಬ್ಬರಗಳನ್ನು ಕಬ್ಬಿನ ಸುಳಿ ಮತ್ತು ಗರಿಗಳ ಮೇಲೆ ಬೀಳುವಂತೆ ಆಧುನಿಕ ಯಂತ್ರದ ಮೂಲಕ ಸಿಂಪಡಣೆ ಮಾಡಿದ್ದಾರೆ. ಈ ಹಂತದಲ್ಲಿ ದತ್ತಾ ಸಕ್ಕರೆ ಕಾರ್ಖಾನೆ ಯವರೇ ಯಂತ್ರವನ್ನು ಕಳುಯಿಸಿಕೊಡುತ್ತಾರೆ. ಇದಕ್ಕೆ ಕಡಿಮೆ ಬಾಡಿಗೆ ತೆಗೆದುಕೊಳ್ಳುತ್ತಾರೆ ಎಂದು ಎಸ್.ಆರ್. ಪಾಟೀಲ್ ತಿಳಿಸಿದರು.
ನೀರು ಪೂರೈಕೆ:
ಹಗಲಿನಲ್ಲಿ ಜಮೀನಿಗೆ ನೀರು ಹಾಯಿಸುವುದಿಲ್ಲ. ಬದಲಿಗೆ ರಾತ್ರಿ ವೇಳೆ ನೀರು ನೀಡುತ್ತಾರೆ. ತಂಪು ಸಮಯದಲ್ಲಿ ನೀರು ನೀಡುವುದರಿಂದ ಮತ್ತು ಗೊಬ್ಬರ ನೀಡುವ ಹಂತಗಳಲ್ಲಿ ನೀರಿಗೆ (ಇದೂ ಕೂಡ ರಾತ್ರಿ ವೇಳೆ) ಗೊಬ್ಬರ ಬೆರೆಸಿ ಪೂರೈಸುವುದರಿಂದ ಅತ್ಯುತ್ತಮ ಫಲಿತಾಂಶ ಲಭ್ಯವಾಗುತ್ತದೆ ಎನ್ನುತ್ತಾರೆ. ಈ ಬಾರಿಯ ಮತ್ತೊಂದು ವಿಶೇಷವೇನೆಂದರೆ ಶೇಡಬಾಳ ಗ್ರಾಮದಿಂದ 7 ಕಿಲೋಮೀಟರ್ ದೂರವಿರುವ ಕೃಷ್ಣಾ ನದಿಯಿಂದ ಪೈಪ್ ಲೈನ್ ಮುಖಾಂತರ ನೀರು ತಂದಿರುವುದು. ಈ ಕಾರ್ಯಕ್ಕಾಗಿ ಭಾರಿ ಪ್ರಮಾಣದ ವೆಚ್ಚವಾಗಿದೆ. ಒಮ್ಮೆ ಬಂಡವಾಳ ಹೂಡಿದರೆ ಮುಂದಿನ ವರ್ಷಗಳಲ್ಲಿ ಅನುಕೂಲವಾಗುವುದರಿಂದ ಹೀಗೆ ಮಾಡಿದ್ದೇನೆ. ಕೊಳವೆ ಬಾವಿ ನೀರಿಗಿಂತ ಕೃಷ್ಣಾ ನದಿಯ ನೀರನ್ನು ಪೂರೈಸಿದರೆ ಬೆಳೆಗಳಿಂದ ಅತ್ಯುತ್ತಮ ಪ್ರಮಾಣದ ಇಳುವರಿ ದೊರೆಯುವುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳುತ್ತಾರೆ.
ನೀರಿದೆ ಎಂದು ಯಥೇಚ್ಛ ಪ್ರಮಾಣದಲ್ಲಿ ಹಾಯಿಸಿ, ನಿಲ್ಲಿಸುವ ಕಾರ್ಯವನ್ನು ಇಲ್ಲಿ ಮಾಡುವುದಿಲ್ಲ. ಬದಲಾಗಿ ಜಮೀನಿನಲ್ಲಿ ನೀರು ಚೆನ್ನಾಗಿ ಹಾಯ್ದ ನಂತರ ನೀರು ಪೂರೈಕೆ ನಿಲ್ಲಿಸುತ್ತಾರೆ. ಕಬ್ಬು ಇರುವ ಜಮೀನಿನಲ್ಲಿ ಸತತವಾಗಿ ನೀರು ನಿಲ್ಲಿಸುವುದರಿಂದ ಅನೇಕ ರೀತಿಯ ದುಷ್ಪರಿಣಾಮಗಳು ಉಂಟಾಗುತ್ತವೆ. ಮುಖ್ಯವಾಗಿ ಕಬ್ಬಿನ ಬೇರುಗಳು ಕೊಳೆಯುತ್ತವೆ. ಸಸ್ಯರೋಗ ಬಾಧೆ, ಕೀಟಬಾಧೆ ಹೆಚ್ಚಾಗುತ್ತದೆ ಎಂದು ತಿಳಿಸುತ್ತಾರೆ.
ಬಿತ್ತನೆ ಮಾಡಿದ ಐದು ತಿಂಗಳ ಬಳಿಕ ಕಬ್ಬು ಎತ್ತರಕ್ಕೆ ಬೆಳೆದಿರುವುದರಿಂದ ಗೊಬ್ಬರ ಪೂರೈಕೆ ಕಳೆ ತೆಗೆಯುವಿಕೆ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಮಣ್ಣಿನಲ್ಲಿ ತೇವಾಂಶ ಕಡಿಮೆಯಾದಾಗ ನೀರು ಪೂರೈಸುವ ಕಾರ್ಯ ಮಾಡುತ್ತಾರೆ. ಇದನ್ನು ಸಹ ಚಾರ್ಟಿನಲ್ಲಿ ತಿಳಿಸಿರುವ ಪ್ರಕಾರವೇ ಮಾಡುತ್ತಾರೆ.
ಅವಧಿ:
ಕಬ್ಬಿನ ಸಿ.ಓ 765ನೇ ನಂಬರಿನ ತಳಿ ಕಟಾವಿಗೆ ಬರುವ ಅವಧಿ 16 ತಿಂಗಳು. ಇದಾದ ಬಳಿಕ ಹೆಚ್ಚು ದಿನ ಜಮೀನಿನಲ್ಲಿ ಕಬ್ಬು ಬಿಡುವುದಿಲ್ಲ. ನಿಗದಿಪಡಿಸಿದ ದಿನದಂದು ಕಾರ್ಖಾನೆಯ ನುರಿತ ಸಿಬ್ಬಂದಿ, ಕಾರ್ಮಿಕ ವರ್ಗ ಅತ್ಯಾಧುನಿಕ ಯಂತ್ರಗಳೊಂದಿಗೆ ಬಂದು ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸುತ್ತಾರೆ. ಕಬ್ಬಿನ ಕಟಾವು ಸಂದರ್ಭದಲ್ಲಿ ಹಸಿರು ಭಾಗ ಕಡಿದು, ಒಟ್ಟು ವೇಸ್ಟೇಜ್ ಕಳೆದ ನಂತರ ಒಂದು ಎಕರೆಗೆ ಸರಾಸರಿ 148 ಟನ್ ಇಳುವರಿ ದೊರೆಯುತ್ತದೆ ಎಂದು ಪ್ರಗತಿಪರ ಬೆಳೆಗಾರ ಎಸ್.ಆರ್. ಪಾಟೀಲ ಅವರು ತಿಳಿಸಿದರು.

Similar Posts

Leave a Reply

Your email address will not be published. Required fields are marked *