ಪ್ರಸ್ತುತ ಭಾರತೀಯ ಸಂದರ್ಭದಲ್ಲಿ ಹಿಂದಿ ಸಿನೆಮಾ ಎನ್.ಎಚ್. 10 ಅನೇಕ ಕಾರಣಗಳಿಗೆ ಮುಖ್ಯವಾಗುತ್ತದೆ. ಮಹಾನಗರಗಳಲ್ಲಿ ದುಡಿಯುವ ಮಹಿಳೆಯರ ಆತಂಕ, ಅಭದ್ರತೆ, ಅಸಹಾಯಕ ಆಗಿರುವ ಪೊಲೀಸ್, ಅಪರಾಧಗಳಿಗೆ ‘ಹೆದ್ದಾರಿ’ ಆಗಿರುವ ಹೆದ್ದಾರಿಗಳು, ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಹಣೆಪಟ್ಟಿ ಹೊತ್ತ ರಾಷ್ಟ್ರೀಯ ಹೆದ್ದಾರಿ ಮಗ್ಗುಲುಗಳಲ್ಲಿ ಇರುವ ಹಳ್ಳಿಗಳಲ್ಲಿನ ಜಾತೀಯತೆ ಕಾರಣದಿಂದ ಕೊಳೆತ ಮನಸುಗಳು, ಫ್ಯೂಡಲ್ ಸಿಸ್ಟಂ ನೆರಳಿನಲ್ಲಿ ನೆರಳಾಗಿರುವ ಪೊಲೀಸ್ ಮತ್ತು ಇವೆಲ್ಲದರ ಜೊತೆಗೆ ವಿದ್ಯಾವಂತ ಪುರುಷರ ನಿಸತ್ವ ‘ಇಗೋ’
ಕಾರ್ಪೊರೇಟ್ ಕಂಪನಿಗಳಲ್ಲಿ ಸಮಯದ ಪರಿಮಿತಿ ಇಲ್ಲದೆ ದುಡಿಯುತ್ತಾ ಅಭದ್ರತೆ ಕಾರಣಕ್ಕೆ ಸದಾ ಆತಂಕದಲ್ಲಿ ಇರುವ ನೆರಳಿನಲ್ಲಿ ಮಹಿಳೆಯರ ಪ್ರತಿನಿಧಿಯಂತೆ ಈ ಚಿತ್ರದ ಮೀರಾ ಕಾಣುತ್ತಾಳೆ. ತಡರಾತ್ರಿಗಳಲ್ಲಿಯೂ ಕಚೇರಿಗೆ ತೆರಳಬೇಕಾದ ಅನಿವಾರ್ಯತೆ ಇವರ ನೆಮ್ಮದಿ ಕಸಿದುಕೊಳ್ಳುತ್ತದೆ. ಆಗಬಹುದಾದ ಅನಾಹುತಗಳ ಅರಿವಿಲ್ಲದೆ ಮಹಾನಗರಗಳಲ್ಲಿ ತಡರಾತ್ರಿ ವಹಿವಾಟು ಜಾರಿಯಲ್ಲಿರಬೇಕು ಎಂದು ಹಂಬಲಿಸುವ ವ್ಯಕ್ತಿಗಳನ್ನು ಪ್ರತಿನಿಧಿಸುವ ಪಾತ್ರವೊಂದರ ವಿವರ ಸಂಕ್ಷಿಪ್ತವಾಗಿದ್ದರೂ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ.
ಎಗ್ಗಿಲ್ಲದೆ ಬೆಳೆದ; ಬೆಳೆಯುತ್ತಿರುವ ಮಹಾನಗರಗಳು, ಇದರ ಫಾಯಿದೆ ತೆಗೆದುಕೊಳ್ಳುತ್ತಿರುವ ಪುಂಡು-ಫೋಕರಿಗಳು, ಇವರನ್ನು ನಿಯಂತ್ರಿಸಲಾಗದ ಅಸಹಾಯಕರಾದ ಪೊಲೀಸರು, ಇಂಥ ಪೊಲೀಸರ ಪ್ರತಿನಿಧಿಯಂತೆ ಕಾಣುವ ಠಾಣಾಧಿಕಾರಿಯಿಂದ ಸ್ವಯಂರಕ್ಷಣೆಗಾಗಿ ಗನ್ ತೆಗೆದುಕೊಳ್ಳುವಂತೆ ಮೀರಾ ಮತ್ತು ನೈಲ್ ಭೂಪಾಲನ್ ದಂಪತಿಗೆ ಶಿಫಾರಸು.
ಮೀರಾ ಕೈಗೆ ಗನ್ ಬರುತ್ತದೆ. ರಕ್ಷಣೆ ಸಲುವಾಗಿ ತೆಗೆದುಕೊಳ್ಳುವ ಗನ್ ಇವರ ಅಭದ್ರತೆಗೂ ಕಾರಣವಾಗುತ್ತದೆ. ಈ ಮೂಲಕ ಎಲ್ಲೆಡೆ ಮೊಬೈಲ್ , ಇಂಟರ್ನೆಟ್ ನೆಟ್ ವರ್ಕ್. ಅಲ್ಲಲ್ಲಿ ಪೊಲೀಸ್ ಠಾಣೆಗಳು ಇರುವ ನುಣ್ಣನೆ ಮೈ ಹೊದ್ದ ಹೆದ್ದಾರಿ ಬದಿಯ ಹಳ್ಳಿಗಳಲ್ಲಿ ಇಂದಿಗೂ ಜಾರಿಯಲ್ಲಿರುವ ಅಮಾನುಷ ‘ಮಾರ್ಯಾದಾ ಹತ್ಯೆ’ ಅನಾವರಣಗೊಳ್ಳುತ್ತದೆ.
ಪೊಳ್ಳು ಇಗೋ:
ಮಹಾನಗರಗಳ ವಿದ್ಯಾವಂತ ಯುವಕರಲ್ಲಿ ಸಂಗಾತಿಯನ್ನು ಮೆಚ್ಚಿಸುವ, ಹೀರೋಯಿಸಂ ತೋರಿಸುವ ತವಕ ಹೆಚ್ಚಿರುತ್ತದೆ. ಆದರೆ ಹೀಗೆ ಮಾಡಲು ಹೋಗುವ ಮುನ್ನ ಜೊತೆಗಿರುವ; ತನ್ನನ್ನೆ ನಂಬಿದ ಸಂಗಾತಿ ಭದ್ರತೆ ಜೊತೆಗೆ ತನ್ನ ಬಲಾಬಲ ಬಗ್ಗೆ ಯೋಚಿಸದೆ ದುಡುಕುವವವರ ಪ್ರತಿನಿಧಿಯಂತೆ ನೈಲ್ ಭೂಪಾಲನ್ ಕಾಣುತ್ತಾನೆ.
ಢಾಭಾ ಆವರಣದಲ್ಲಿ ಯುವ ಪ್ರೇಮಿಗಳಿಬ್ಬರನ್ನು ಥಳಿಸುತ್ತಿರುವ ಗ್ಯಾಂಗಿನ ಕೃತ್ಯವನ್ನು ಹಳ್ಳಿಗರು, ಪ್ರಯಾಣಿಕರು ಮೌನವಾಗಿ ನೋಡುತ್ತಿರುತ್ತಾರೆ. ಭೂಪಾಲನ್ ಇದನ್ನು ಪ್ರಶ್ನಿಸಿ ಏಟು ತಿನ್ನುತ್ತಾನೆ. ಆದರೆ ಅಲ್ಲೆ ಮರು ಏಟು ಹಾಕದೆ ಗ್ಯಾಂಗಿನ ಬೆನ್ನು ಹತ್ತುತ್ತಾನೆ. ಇದಕ್ಕೆ ಕಾರಣ ಜೊತಿಗಿರುವ ಗನ್ ನೀಡಿದ ಧೈರ್ಯ. ಪತ್ನಿ ಪರಿಪರಿಯಾಗಿ ಬೇಡಿಕೊಂಡರೂ ಈತ ತನ್ನ ಇಗೋ ಬಿಡುವುದಿಲ್ಲ.
ಜೊತೆಗಿರುವ ಗನ್ ಅನ್ನು ಯುವಪ್ರೇಮಿಗಳು ಮತ್ತು ತನ್ನನ್ನು ರಕ್ಷಿಸಿಕೊಳ್ಳಲು ಈತ ಬಳಸುತ್ತಾನೆಯೇ ? ಅದು ಇಲ್ಲ. ಗ್ಯಾಂಗಿನ ಕೃತ್ಯವನ್ನು ಅಸಹಾಯಕನಂತೆ ನೋಡುತ್ತಾನೆ. ಪಾರಾಗುವ ಯತ್ನದಲ್ಲಿ ತಾನೂ ಅವರಿಗೆ ಸಿಕ್ಕಿ ಬೀಳುವುದಲ್ಲದೆ ಪತ್ನಿಯೂ ಸಿಲುಕಿಕೊಳ್ಳುವಂತೆ ಮಾಡುತ್ತಾನೆ. ಮತ್ತೆ ಪಾರಾಗುವ ಯತ್ನ ಮಾಡುತ್ತಾನೆ. ಆಗ ಘಟಿಸುವುದೆ ಬೇರೆ…
ಜಾತಿಯ ಮರ್ಯಾದೆ (?) ಕಾರಣಕ್ಕೆ ತನ್ನ ಒಡ ಹುಟ್ಟಿದ ತಂಗಿ ಮತ್ತು ಈಕೆಯ ಪ್ರೇಮಿಯನ್ನು ಕೊಲ್ಲುವ ಸತ್ಬೀರ್ ಇಂಥವರೆಲ್ಲರ ಪ್ರತಿನಿಧಿಯಾಗಿ ಕಾಣುತ್ತಾನೆ. ಈ ಕೃತ್ಯಕ್ಕೆ ಸಾಕ್ಷಿಯಾದ ದಂಪತಿಗಳನ್ನು ಮುಗಿಸಲು ಇವನು ಮತ್ತಿವನ ತಂಡ ಬೆನ್ನು ಬೀಳುತ್ತದೆ. ಈ ಕೊಲೆಗಡುಕರಿಂದ ಪಾರಾಗುತ್ತಾ ಮತ್ತೆಮತ್ತೆ ಅಂಥವರೊಂದಿಗೆ ನೆಂಟು ಇರುವವರ ಹಿಡಿತಕ್ಕೆ ಸಿಲುಕಿ ಮತ್ತೆ ಅವರಿಂದ ಪಾರಾಗುತ್ತಾ ಮತ್ತೆ ಅಂಥವರ ಕೈಗೆ ಸಿಲುಕುವ ಮೀರಾ ಸ್ಥಿತಿ ತಲ್ಲಣ ಮೂಡಿಸುತ್ತದೆ.
ಪಾರಾಗುವ ಹಾದಿಯಲ್ಲಿ ಇಂದಿಗೂ ಭಾರತದ ಅನೇಕ ಹಳ್ಳಿಗಳಲ್ಲಿ ಜಾರಿಯಲ್ಲಿರುವ ಫ್ಯೂಡಲ್ ಸಂಸ್ಕೃತಿ, ಜಾತೀಯ ದರ್ಬಾರು, ಪಾಳೆಗಾರಿಕೆ ಮನೋಭಾವದ ಸರಪಂಚರು ಮತ್ತು ಅಸಹಾಯಕತೆಯಿಂದ ಇಂಥವರ ಸೇವಕರಂತೆ ಆಡುವ ಪೊಲೀಸರ ಚಿತ್ರಣ ದೊರೆಯುತ್ತದೆ. ಅಸಹಾಯಕವಾಗಿ ಕಾಣುವ ಮೀರಾ ತನ್ನ ಪ್ರಾಣ ಲೆಕ್ಕಿಸದೆ ಕೊಲೆಗಡುಕರನ್ನು ಬೇಟೆಯಾಡುವ ರೀತಿ ಬಹು ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಈ ಮೂಲಕ ಹೆಣ್ಣಿನಲ್ಲಿರುವ ಕೆಚ್ಚು, ರೋಷ ಸೂಕ್ತ ರೀತಿಯಲ್ಲಿ ಚಿತ್ರಿತವಾಗಿದೆ.
ಸಮಕಾಲೀನ ಭಾರತೀಯ ಸಮಾಜದ ಹುಳುಕಗಳನ್ನು ಎತ್ತಿ ತೋರಿಸುವ ಹಾದಿಯಲ್ಲಿ ಎನ್.ಎಚ್. 10 ಡಾಕ್ಯುಮೆಂಟರಿಯಾಗಿಲ್ಲ. ಜನಪ್ರಿಯ ಸಿನೆಮಾದ ಪರಿಭಾಷೆಯಲ್ಲಿಯೆ ತಾನು ಹೇಳಬೇಕಾದ ಸಂಗತಿಗಳನ್ನು ನಿರ್ದೇಶಕ ನವದೀಪ್ ಸಿಂಗ್ ಹೇಳಿದ್ದಾರೆ. ಚಿತ್ರಕಥೆಯಲ್ಲಿರುವ ಬಿಗಿ, ಕ್ಯಾಮರಾ ಕೆಲಸ ಜೊತೆಗೆ ಎಲ್ಲ ಕಲಾವಿದರ ಅಭಿನಯ ಸಿನೆಮಾವನ್ನು ಕೊನೆಯವರೆಗೂ ನೋಡಿಸಿಕೊಂಡು ಹೋಗುತ್ತದೆ.
ವಿಶೇಷವಾಗಿ ಅನುಷ್ಕಾ ಶರ್ಮ ಅಭಿನಯ ಗಮನ ಸೆಳೆಯುತ್ತದೆ. ದೊಡ್ಡ ವಹಿವಾಟು ಇರುವ ಕಂಪನಿ ಅಧಿಕಾರಿಯಾಗಿ, ತಡರಾತ್ರಿಯಲ್ಲಿ ದಾಳಿ ಮಾಡುವ ಕಾಮಂಧರಿಂದ ಪಾರಾಗುವ ಹೆಣ್ಣಾಗಿ, ಪತಿಯನ್ನು ರಕ್ಷಿಸಿಕೊಳ್ಳಲು ಯತ್ನಿಸುವ ಪತ್ನಿಯಾಗಿ, ನಗರದತ್ತ ಧಾವಿಸಿ ಹೋಗಲು ಆಸ್ಪದ ದೊರೆತರೂ ಕೊಲೆಗಡುಕರ ದಮನಕ್ಕೆ ಹೊರಡುವ ದುರ್ಗೆಯಾಗಿ ಇವರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.