ಪ್ರಸ್ತುತದ ತಲ್ಲಣಗಳನ್ನು ಕಟ್ಟಿಕೊಡುವುದೆಂದರೆ ಅದು ಪ್ರಭುತ್ವದ ವಿರೋಧ ಕಟ್ಟಿಕೊಂಡಂತೆ. ಆದರೆ ಆಳುವ ವರ್ಗಕ್ಕೆ ಅಂಜದೇ ಆಯಾ ಕಾಲಘಟ್ಟದ ದುಮ್ಮಾನಗಳು; ನಿಟ್ಟುಸಿರುಗಳನ್ನು ಕಟ್ಟಿಕೊಡುವ ಸಿನೆ ನಿರ್ದೇಶಕರಿದ್ದಾರೆ. ಅಂಥವರ ಸಾಲಿನಲ್ಲಿ ಪ್ರಸನ್ನ ವಿತನಗೆ ನಿಲ್ಲುತ್ತಾರೆ.

ಪ್ರಸನ್ನ ವಿತನಗೆ ಅವರ ನಿರ್ದೇಶನದ ಸಿನೆಮಾ “ಪ್ಯಾರಡೈಸ್”‌ (Paradise) ಅನ್ನು ಇಂದು ಮಾರ್ಚ್‌ ೧, ೨೦೨೪) ಬೆಂಗಳೂರು ಚಿತ್ರೋತ್ಸವದಲ್ಲಿ ನೋಡಿದೆ. ಶ್ರೀಲಂಕಾದ ಆರ್ಥಿಕ ದುಸ್ಥಿತಿ, ಅದರ ದುಷ್ಪರಿಣಾಮಗಳ ಆಯಾಮಗಳನ್ನು ಪ್ರವಾಸಿ ಭಾರತೀಯ ದಂಪತಿಯ ನೋಟದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ಐದು ವರ್ಷಗಳ ವಿವಾಹ ವಾರ್ಷಿಕೋತ್ಸವದ ನೆಪದಲ್ಲಿ ಭಾರತೀಯ (ದಕ್ಷಿಣ) ದಂಪತಿ ಕೇಶವ್‌, ಅಮೃತಾ ಶ್ರೀಲಂಕಾಗೆ ಬರುತ್ತಾರೆ. ಇಬ್ಬರಿಗೂ ತಮಿಳು ಅರ್ಥವಾಗುತ್ತದೆ.  ಈ ಸಂದರ್ಭದಲ್ಲಿ ಅವರ ಲ್ಯಾಪ್‌ ಟ್ಯಾಪ್‌, ‌ ಅತೀ ದುಬಾರಿ ಮೊಬೈಲ್‌ ಪೋನ್ ಗಳ ದರೋಡೆಯಾಗುತ್ತದೆ. ದೂರು ದಾಖಲಾಗುತ್ತದೆ. ಬಹುತೇಕ ಏಷಿಯನ್‌ ದೇಶಗಳಂತೆ ಅಲ್ಲಿಯೂ ಪೊಲೀಸರ ಉದಾಸೀನತೆ. ಹಿರಿಯ ಅಧಿಕಾರಸ್ಥರ ಹೆಸರು ಹೇಳಿದೊಡನೆ ತನಿಖೆ ಚರುಕಾಗುತ್ತದೆ.

ತನಿಖೆ ಹಾದಿಯಲ್ಲಿ ಪೊಲೀಸರ ದೃಷ್ಟಿ ತಮಿಳು ಕಾಲೋನಿ ಯುವಕರ ಮೇಲೆ ಹೊರಳುತ್ತದೆ. ಐಡೆಂಟಿಟಿ ಪೆರೇಡ್‌ ನಲ್ಲಿ ಇವರ ಮೇಲೆಯೇ ಕೇಶವ್‌ ಅನುಮಾನ ಪಡುತ್ತಾನೆ. ಬಂಧಿತರ ಮೇಲೆ ಪೊಲೀಸ್‌ ಥರ್ಡ್‌ ಡಿಗ್ರಿ ಪ್ರಯೋಗವಾಗುತ್ತದೆ. ಯುವಕನೋರ್ವ ತೀವ್ರ ಗಾಯಕ್ಕೀಡಾಗುತ್ತಾನೆ. ಇಲ್ಲಿಂದ ಕಥನ ತೀವ್ರಗತಿ ಪಡೆಯುತ್ತದೆ.

ಕಥನದ ಆರಂಭದಿಂದಲೇ ಶ್ರೀಲಂಕಾದ ಆರ್ಥಿಕ ಜರ್ಜರಿತ, ನಿರುದ್ಯೋಗ, ಅಲ್ಲಿನ ಬವಣೆಗಳನ್ನು ದಂಪತಿ ಕಣ್ಣೋಟದಿಂದಲೇ ಕಟ್ಟುವ ಕಾರ್ಯವನ್ನು ಪ್ರಸನ್ನ ಮಾಡಿದ್ದಾರೆ. ಇದು ಪರಿಣಾಮಕಾರಿಯಾಗಿ ಬಂದಿದೆ.

ಕಥನದ ಅಂತ್ಯದಲ್ಲಿ ನಿರೀಕ್ಷಿತ ಬೆಳವಣಿಗೆಯೇ ನಡೆಯುತ್ತದೆ. ಆದೇನು ಎಂದು ನಾನು ವಿವರಿಸಲು ಹೋಗುವುದಿಲ್ಲ. ಏಕೆಂದರೆ ಸಿನೆಮಾ ನೋಡುವ ನಿಮ್ಮ ಆಸಕ್ತಿ ಕಮರಬಹುದು. ಆದರೆ ಈ ಕಥನ ಕಟ್ಟುವಿಕೆಯಲ್ಲಿ ಗಮನಿಸಿರುವ ಅಂಶಗಳನ್ನು ಮಾತ್ರ ಹಂಚಿಕೊಳ್ಳಲು ಬಯಸುತ್ತೇನೆ.

ರಾಮಾಯಣದಲ್ಲಿ ಅನೇಕ ಬಗೆ ಇದೆ. ಇವುಗಳು ಭಾರತ ಸೇರಿದಂತೆ ಏಶಿಯಾದ ಬೇರೆಬೇರೆ ದೇಶಗಳಲ್ಲಿಯೂ ಚಾಲ್ತಿಯಲ್ಲಿದೆ. ಶ್ರೀಲಂಕಾಕ್ಕೆ ಬಹುತೇಕ ಭಾರತೀಯ ಪ್ರವಾಸಿಗರು ಹೋಗುವುದೇ ಅಲ್ಲಿಯೂ ರಾಮಾಯಣದ ಒಂದಷ್ಟು ಭಾಗ ನಡೆದಿತ್ತು. ಈ ಕಾವ್ಯದ ಸಂಬಂಸಿದಂತೆ ಪೌರಾಣಿಕ ಅಂಶಗಳು ಅಲ್ಲಿವೆ ಎಂಬ ಕಾರಣಕ್ಕೂ ಹೌದು. ಕಥೆಯ ಒಟ್ಟು ಓಘಕ್ಕೆ ರಾಮಾಯಣದ ಚರ್ಚೆ ಅಗತ್ಯವಿರಲಿಲ್ಲ.

ದಾಂಪತ್ಯದಲ್ಲಿ ಪತಿ ಅಥವಾ ಪತ್ನಿ ಪರಸ್ಪರ ವ್ಯಕ್ತಿತ್ವದ ಮೂಲಭೂತ ಅಂಶಗಳನ್ನು ಅರಿಯುವುದು ಸ್ವಾಭಾವಿಕ. ಇಲ್ಲಿ ಕೇಶವ್‌ ನಡವಳಿಕೆ ತನಗೆ ಹೊಸದೇನೋ ಎಂಬಂತೆ ಅಮೃತಾ ನಡೆದುಕೊಳ್ಳುವುದು, ರಿಯಾಕ್ಟ್‌ ಮಾಡುವುದು ಅಸಹಜ ಎನಿಸುತ್ತದೆ.

ಅಮೃತಾ ವ್ಯಕ್ತಿತ್ವವೂ ಗಟ್ಟಿರೂಪದಲ್ಲಿ ಬಂದಿಲ್ಲ. ಪ್ರಾಣಿ ಹಿಂಸೆಯನ್ನು ಇಷ್ಟಪಡದೇ ಇರುವವರು ಬೇಟೆಗಾರರ ಜೊತೆ ಹೋಗುವುದಿಲ್ಲ. ಒಂದು ವೇಳೆ ಪತಿಯೇ ಹೊರಟರೂ ನಿರ್ಬಂಧಿಸಲು ಯತ್ನಿಸುತ್ತಾರೆ. ಇಲ್ಲಿ ಜೊತೆಗೆ ಹೋಗುವ ಅಮೃತಾ, ಪ್ರಾಣಿಗೆ ಬಂದೂಕು ಗುರಿಯಿಟ್ಟ ಗಳಿಗೆಯಲ್ಲಿ ಪ್ರತಿರೋಧಿಸುವುದು ವಿಚಿತ್ರ.

ತೀವ್ರ ಉದ್ವೇಗಕ್ಕೊಳಗಾದ ಸಮೂಹ ಆ ಕ್ಷಣದಲ್ಲಿ ಏನನಾದರೂ ಮಾಡಬಹುದು. ಅಂಥ ಸಮೂಹದಿಂದ ಪ್ರಾಣಭೀತಿಗೆ ಒಳಗಾದವರು ಆತ್ಮರಕ್ಷಣೆಗಾಗಿ ಪ್ರಯತ್ನಿಸುತ್ತಾರೆ. ಇಂಥದ್ದೇ ಪ್ರಯತ್ನದಲ್ಲಿ ಇರುವ ವ್ಯಕ್ತಿಗೆ ಅಮೃತಾ ಪ್ರತಿಕ್ರಿಯಿಸುವ ರೀತಿಯೂ ಅಸಹಜವಾಗಿದೆ.

ಇಂಥ ಅಸಹಜತೆಗಳನ್ನು ಹೊರತುಪಡಿಸಿದರೆ ಕಥನವನ್ನು ಬಿಗಿಯಾಗಿ ಕಟ್ಟಲಾಗಿದೆ. ಯಾವುದೇ ದೇಶಕಾಲವಾದರೂ ಅಸಹಾಯಕರು, ದುರ್ಬಲರ ಮೇಲೆ ಪೊಲೀಸ್‌ ಬಲ ಹೇಗೆ ಪ್ರಯೋಗವಾಗುತ್ತದೆ (ತಮಿಳಿನ ವಿಸಾರಣೈ ಸಿನೆಮಾ ಗಮನಿಸಿ) ಎಂಬುದನ್ನು ಪರಿಣಾಮಕಾರಿಯಾಗಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ “ಪ್ಯಾರಡೈಸ್”‌ ಅಂತ್ಯವನ್ನು ಬೇರೊಂದು ಬಗೆಯಲ್ಲಿ ಹೆಣೆಯಬಹುದಿತ್ತು ಎನಿಸುತ್ತದೆ.

ಪ್ರಸನ್ನ ವಿತನಗೆ ಅವರ ಕಥೆಗೆ ಅನುಷ್ಕಾ ಸೇನಾನಾಯಕೆ ಚಿತ್ರಕಥೆ ಸ್ವರೂಪ ಕೊಟ್ಟಿದ್ದಾರೆ.  ರಾಜೀವ್‌ ರವಿ ಅವರ ಛಾಯಾಗ್ರಹಣ,  ಎ. ಶ್ರೀಕರ್‌ ಪ್ರಸಾದ್‌ ಅವರ ಸಂಕಲನ ಉತ್ತಮ. ರೋಶನ್‌ ಮಾಥ್ಯೂ, ದರ್ಶನ ರಾಜೇಂದ್ರನ್‌, ಶ್ಯಾಮ್‌ ಫೆರ್ನಾಡೋ, ಮಹೇಂದ್ರ ಪೆರೆರಾ ಅತ್ಯುತ್ತಮವಾಗಿ ನಟಿಸಿದ್ದಾರೆ.

Similar Posts

1 Comment

  1. Nice sir

Leave a Reply

Your email address will not be published. Required fields are marked *