ರಾಜ್ ಕುಮಾರ್ ಕನ್ನಡನಾಡಿಗೆ ಕೊಟ್ಟ ಕಾಣಿಕೆಯೇನು… ? ಈ ಪ್ರಶ್ನೆಯನ್ನು ಕೇಳುವವರನ್ನು ಕಂಡಿದ್ದೇನೆ. ಅರೇ.. ಇವರಿಗೆ ಸ್ವತಃ ರಾಜಕುಮಾರ್ ಅವರೇ ಕನ್ನಡನಾಡಿಗೊಂದು ಬಹುದೊಡ್ಡ ಕಾಣಿಕೆಯೆಂಬುದು ಏಕೆ ತಿಳಿಯುತ್ತಿಲ್ಲ ಎಂಬ ಸೋಜಿಗವೂ ಆಗಿದೆ. ಈ ವಿಷಯವಿರಲಿ… ರಾಜ್ ಜೊತೆಜೊತೆಗೆ ಕನ್ನಡ ಚಿತ್ರರಂಗವೂ ಬೆಳೆದಿದ್ದನ್ನು ಮರೆಯಲು ಸಾಧ್ಯವೆ… ? ಕನ್ನಡಭಾಷೆಯ ಅಸ್ಮಿತೆ, ಸೊಬಗು ಚೆನ್ನಾಗಿ ಮನದಟ್ಟಾಗಬೇಕೆಂದರೆ ರಾಜ್ ಸಂಭಾಷಣೆ ಹೇಳುವ ಪರಿ ನೋಡಿದಾಗ ಕನ್ನಡಭಾಷೆಯ ಅಸ್ಮಿತೆ, ಸುಂದರತೆ, ಸೊಬಗು ಮನಮುಟ್ಟುತ್ತದೆ. ನಮ್ಮ ಕನ್ನಡನುಡಿ ಎಷ್ಟು ಚೆಂದ ಎಂಬ ಅಭಿಮಾನ ಮೂಡುತ್ತದೆ.

ಕನ್ನಡನಾಡಿನ ಪ್ರತಿಯೊಂದು ಊರುಗಳಲ್ಲಿಯೂ ರಾಜ್ ಸ್ಮಾರಕಗಳಿವೆ, ಸ್ಮರಣೆಯಿದೆ. ಬೆಂಗಳೂರೆಂಬ ಮಹಾನಗರದ ಹಳೆ – ಹೊಸ ಬಡಾವಣೆಗಳಲ್ಲಿಯೂ ರಾಜ್ ಪುತ್ಥಳಿಗಳಿವೆ. ಇದೆಲ್ಲವನ್ನು ನೋಡಿದಾಗ ಹಳೆ-ಹೊಸ ತಲೆಮಾರುಗಳ ಮನಗಳ ಒಳಗೆ ರಾಜ್ ಕುಳಿತ ಪರಿಗೆ ಅಚ್ಚರಿಯಾಗುತ್ತದೆ. ಇದೆಲ್ಲವೂ ಹೇಗೆ ಸಾಧ್ಯವಾಯಿತು ?

ಆದರ್ಶ ವ್ಯಕ್ತಿ ಹೇಗಿರಬೇಕು ಎಂಬ ಪ್ರಶ್ನೆ ಎದುರಾದರೆ ಥಟ್ಟನೆ ಸುಳಿಯುವ ಚಿತ್ರ ರಾಜ್ ಕುಮಾರ್ ಅವರದು. ಇದಕ್ಕೆ ಕಾರಣ ಇವರು ಮಾಡುತ್ತಾ ಬಂದ ಪಾತ್ರಗಳು. ತಾವು ಅಭಿನಹಿಸುವ ಪಾತ್ರಗಳ ಒಳಗೆ ಪರಕಾಯ ಪ್ರವೇಶ ಮಾಡುತ್ತಾ ಮೋಡಿ ಮಾಡುವುದನ್ನು ಮರೆಯಲು ಸಾಧ್ಯವೆ… ಇದಕ್ಕೆ ಅನೇಕ ಉದಾಹರಣೆಗಳನ್ನು ಹೇಳಬಹುದು. ಮಯೂರ,  ಕೃಷ್ಣದೇವರಾಯ, ಇಮ್ಮಡಿ ಪುಲಿಕೇಶಿ ಎಂದಕೂಡಲೇ ಕನ್ನಡಿಗರ ಕಣ್ಣಿಗೆ ಕಟ್ಟುವುದು ರಾಜ್ ಅಭಿನಹಿಸಿದ ಈ ಚಿತ್ರಗಳ ಪಾತ್ರಗಳು.

ಕ್ರೀಡಾಂಗಣಗಳು: ರಾಜ್ಯದ ಸಾಕಷ್ಟು ಕ್ರೀಡಾಂಗಣಗಳ ಅಭಿವೃದ್ಧಿಯಲ್ಲಿ ರಾಜ್ ಕೊಡುಗೆಯೂ ಇದೆ. ರಾಜ್ ರಸಮಂಜರಿ ಕಾರ್ಯಕ್ರಮದ ಮೂಲಕ ಹಣ ಸಂಗ್ರಹಿಸಿ ಅದನ್ನು ಮಂಡ್ಯ ಕ್ರೀಡಾಂಗಣ ಅಭಿವೃದ್ಧಿಗೆ ಬಳಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ರಸಮಂಜರಿ ತಂಡಕ್ಕೆ ನೀಡಲಾದ ಸಂಭಾವನೆಯ ಚೆಕ್ ಅನ್ನು ರಾಜ್ ಜಿಲ್ಲಾಧಿಕಾರಿಯವರಿಗೆ ಹಿಂದಿರುಗಿಸಿ, ಕ್ರೀಡಾಂಗಣದ ಅಭಿವೃದ್ಧಿಗೆ ಬಳಸುವಂತೆ ಸೂಚಿಸಿದರು.

ಶಕ್ತಿಧಾಮ: ಮೈಸೂರಿನಲ್ಲಿ ಅಸಹಾಯಕ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಶಕ್ತಿಧಾಮ ಸ್ಥಾಪಿಸಲಾಗಿದೆ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಆಸಕ್ತಿ ಮತ್ತು ಕೊಡುಗೆಯಿಂದಾಗಿ ಇದು ನಿರ್ಮಾಣಗೊಂಡಿದೆ. ಈ ಸಂಸ್ಥೆಯಿಂದಾಗಿ ಅನೇಕ ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದಾರೆ ಮತ್ತು ಕಟ್ಟಿಕೊಳ್ಳುತ್ತಿದ್ದಾರೆ.

ಗಾಯನದ ಹಣ: ರಾಜ್ ಕುಮಾರ್ ಉತ್ತಮ ಗಾಯಕರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಹಿಷಾಶುರ ಮರ್ದಿನಿಯಲ್ಲಿ ಹಾಡಿದರೂ ಮಂದೆ ಸಂಪತ್ತಿಗೆ ಸವಾಲ್ ಚಿತ್ರದ ತನಕ ಹಾಡಲು ಹೋಗಿರಲಿಲ್ಲ. ಈ ಚಿತ್ರದ ಬಳಿಕ ನಿರಂತರವಾಗಿ ಸಿನೆಮಾ, ಭಕ್ತಿಗೀತೆಗಳನ್ನು ಹಾಡತೊಡಗಿದರು. ಇದಕ್ಕೆ ಬಂದ ಸಂಭಾವನೆಗಳನ್ನು ಕಿವುಡು-ಮೂಕರ ಶಿಕ್ಷಣ ಸಂಸ್ಥೆಗಳು, ಮತ್ತಿತರ ಸಂಘಸಂಸ್ಥೆಗಳಿಗೆ ನೀಡಿದ್ದನ್ನು ಮರೆಯಲು ಸಾಧ್ಯವೆ… ?

ಅತಿವೃಷ್ಟಿ- ಅನಾವೃಷ್ಟಿ: ಕನ್ನಡಿಗರು ಅತಿವೃಷ್ಟಿ-ಅನಾವೃಷ್ಟಿಗಳಿಗೆ ಸಿಲುಕಿ ತತ್ತರಿಸಿದ ಸಂದರ್ಭಗಳಲ್ಲಿಯೂ ರಾಜ್ ನೆರವಿನ ಹಸ್ತ ಚಾಚಿದ್ದಾರೆ. ತಾವೂ ಸರ್ಕಾರದ ನಿಧಿಗೆ ಹಣ ನೀಡಿದ್ದಲ್ಲದೇ ಊರೂರು ಅಲೆದು ಹಣ ಸಂಗ್ರಹಿಸಿ ಹಣ ನೀಡಿದ್ದಾರೆ. ಜನ ಚೆನ್ನಾಗಿದ್ದರೆ ಮಾತ್ರ ಕಲಾವಿದರು ಸಂತೋಷವಾಗಿರಲು ಎಂದರಿತು ಆಚರಣೆಗೆ ತಂದಿದ್ದು ಬಹುದೊಡ್ಡ ಸಂಗತಿ

ಗೋಕಾಕ್ ಚಳವಳಿ: ಕನ್ನಡನಾಡಿನ ನುಡಿಯ ಆಸ್ಮಿತೆ ಅಳಿಯದಿರಲು ಗೋಕಾಕ್ ವರದಿ ಜಾರಿಗೆ ಬರಬೇಕು ಎನ್ನುವ ಕೂಗು ಎಲ್ಲೆಡೆ ಎದ್ದಿತ್ತು. ಚಳವಳಿಯೂ ಶುರುವಾಗಿತ್ತು. ಆದರೆ ಈ ಚಳವಳಿಯ ಬಿಸಿ ಸರ್ಕಾರಕ್ಕೆ ತಟ್ಟಿದ್ದು ರಾಜ್ ಪ್ರವೇಶದ ನಂತರವೇ ಎಂಬ ಸಂಗತಿಯನ್ನು ನಿರಾಕರಿಸಲು ಸಾಧ್ಯವೇ… ಈ ನಂತರವೇ ಗೋಕಾಕ್ ವರದಿಯನ್ನು ಸರ್ಕಾರ ಅಂಗೀಕರಿಸಿ, ಅನುಷ್ಠಾನಕ್ಕೆ ತರಲು ಮುಂದಾಯಿತು.

ಹೀಗೆ ಕನ್ನಡನಾಡು ಮತ್ತು ರಾಜ್ ಅವರಿಗೆ ಸಂಬಂಧಿಸಿದಂತೆ ಅನೇಕ ಸಂಗತಿಗಳನ್ನು ಹೇಳುತ್ತಾ ಹೋಗಬಹುದು. ಸಿನೆಮಾದ ಆದರ್ಶಗಳನ್ನು ನಿಜಜೀವನದಲ್ಲಿಯೂ ಅಳವಡಿಸಿಕೊಂಡ ರಾಜ್ ಕನ್ನಡಿಗರ ಮನದಂಗಳದಲ್ಲಿ ಎಂದಿಗೂ ಬಾಡದ ಹೂ… ಇವರ ಸಿನೆಮಾಗಳು ನಾಡಿನನುಡಿಯ ಆನನ್ಯತೆಯನ್ನು ಅವಿರತ ಸ್ಥಾಯಿಯಾಗಿರುವಂತೆ ಶ್ರಮಿಸುತ್ತಲೇ ಇರುತ್ತವೆ.

Similar Posts

Leave a Reply

Your email address will not be published. Required fields are marked *