ಭಾಷೆ ಎಂದರೆ ಬರೀ ಸಂವಹನ ಮಾತ್ರವಲ್ಲ; ಅದೊಂದು ಸಂಸ್ಕೃತಿ. ಕನ್ನಡ ಸಂದರ್ಭದಲ್ಲಿ ಈ ಮಾತು ಹೆಚ್ಚು ಅನ್ವಯಿಸುತ್ತದೆ. ಭಾಷಾವಾರು ಪ್ರಾಂತ್ಯ ಆದಾಗ ಲಾಗಾಯ್ತಿನಿಂದಲೂ ಕನ್ನಡ ಸಂಸ್ಕೃತಿ ಇರುವ, ಇದರೊಂದಿಗೆ ಸಾವಿರಾರು ವರ್ಷಗಳಿಂದ ಒಡನಾಟ ಹೊಂದಿರುವ ಪ್ರದೇಶಗಳನ್ನು ಒಂದು ತೆಕ್ಕೆಗೆ ತಂದು “ಮೈಸೂರು ರಾಜ್ಯ”ಅರ್ಥಾತ್ ಕನ್ನಡನಾಡು ರಚಿಸಲಾಯಿತು. ಹೀಗೆಯೇ ತಮಿಳುನಾಡು, ಕೇರಳ, ಆಂಧ್ರ ಇತ್ಯಾದಿ ರಾಜ್ಯಗಳು ಉದಯವಾದವು.
ಭಾಷಾವಾರು ಪ್ರಾಂತ್ಯ ಸಂದರ್ಭದಲ್ಲಿ ಕನ್ನಡನಾಡಿಗೆ ಗಣನೀಯವಾದ ಅನ್ಯಾಯವಾಗಿದೆ. ಅನೇಕ ಕನ್ನಡಮಯ ಪ್ರದೇಶಗಳು ನೆರೆಹೊರೆಯ ರಾಜ್ಯಗಳಿಗೆ ಸೇರಿದವು. ತಮಿಳುನಾಡಿನಲ್ಲಿರುವ ಹೊಸೂರು ಸೇರಿದಂತೆ ಸುತ್ತಮುತ್ತಲ ಊರುಗಳು, ಆಂಧ್ರದಲ್ಲಿರುವ ಆದವಾನಿ ಸೇರಿದಂತೆ ಸುತ್ತಮುತ್ತಲ ಊರುಗಳು, ಮಹಾರಾಷ್ಟ್ರದಲ್ಲಿರುವ ಅಕ್ಕಲಕೋಟೆ, ಜತ್ತ ಸೇರಿದಂತೆ ಸಾಕಷ್ಟು ಊರುಗಳು, ಕೇರಳದ ವಯನಾಡು, ಕಾಸರಗೋಡು ಹೀಗೆ ಅನೇಕವು ಕರ್ನಾಟಕಕ್ಕೆ ಸೇರಲಿಲ್ಲ. ವಯನಾಡು, ಕಾಸರಗೋಡು ವಿಷಯದಲ್ಲಿಯಂತೂ ಈ ತಪ್ಪು ಆಕಸ್ಮಿಕವಾಗಿ ಆಗಿದ್ದಲ್ಲ. ಭಾಷಾವಾರು ಪ್ರಾಂತ್ಯ ರಚನೆ ಸಮಿತಿಯಲ್ಲಿದ್ದ ಪಣಿಕ್ಕರ್ ಅವರು ದುರುದ್ದೇಶ ಪೂರ್ವಕವಾಗಿ ಮಾಡಿದ್ದು.
ಮಹಾಜನ ಆಯೋಗ
ಈಗಾಗಲೇ ಮಹಾಜನ ಆಯೋಗ ಕಾಸರಗೋಡು ಸೇರಿದಂತೆ ಕೈತಪ್ಪಿದ ಸಾಕಷ್ಟು ಊರುಗಳು ಕರ್ನಾಟಕಕ್ಕೆ ಸೇರಬೇಕೆಂದು ವರದಿ ನೀಡಿದೆ. ಮಹಾರಾಷ್ಟ್ರ ಸರ್ಕಾರ ಕೋರ್ಟಿಗೆ ಹೋದ ಕಾರಣ ಆಯೋಗದ ವರದಿ ಜಾರಿಗಾಗಿ ಕಾಯುವಂತಾಗಿದೆ. ಈ ಸ್ಥಿತಿಯಲ್ಲಿಯೂ ಸೇರ್ಪಡೆಯಾಗದೇ ಉಳಿದ ಪ್ರದೇಶಗಳಲ್ಲಿ ಭಾಷಾ ಅಲ್ಪಸಂಖ್ಯಾತ ಸೌಲಭ್ಯಗಳನ್ನು ಆಯಾ ರಾಜ್ಯ ಸರ್ಕಾರ ಕಲ್ಪಿಸಬೇಕೆಂಬ ನಿಯಮವಿದೆ. ನೆನಪಿಡಿ, ಇದು ಸಂವಿಧಾನಾತ್ಮಕವಾಗಿ ದತ್ತವಾಗಿದೆ.
ಹೀಗಿದ್ದೂ ಕಾಸರಗೋಡು ವಿಷಯದಲ್ಲಿ ಅಲ್ಲಿನ ಸರ್ಕಾರಗಳು ವಿಶೇಷವಾಗಿ ಕಮ್ಯುನಿಷ್ಟ್ ಸರ್ಕಾರ ಸಂವಿಧಾನಾತ್ಮಕವಾಗಿ ದಕ್ಕಿರುವ ಹಕ್ಕುಗಳನ್ನು ವಂಚಿಸುವುದರಲ್ಲಿಯೇ ತೊಡಗಿದೆ. ಈ ಕೆಲಸಗಳನ್ನು ಬಹು ಜಾಣತನದಿಂದ ಮಾಡುತ್ತಿದೆ. ಅವುಗಳ ಪಟ್ಟಿ ಮುಂದಿದೆ
- ತಾಲ್ಲೂಕು ಆಗಿದ್ದ ಕಾಸರಗೋಡನ್ನು ಜಿಲ್ಲಾ ಕೇಂದ್ರ ಮಾಡಿ ಕನ್ನಡ ಭಾಷಿಕ ಅಲ್ಲದ ಪ್ರದೇಶ ಸೇರಿಸಿದ್ದು. ಇದರಿಂದ ಕನ್ನಡ ಸಂಸ್ಕೃತಿಯ ಮಂಜೇಶ್ವರದಲ್ಲಿಯೂ ದುಷ್ಪರಿಣಾಮ ಉಂಟಾಗಿದೆ
- ಇದು ಒಂದು ರೀತಿಯಲ್ಲಿ ನ್ಯಾಯಾಂಗ ನಿಂದನೆ. ಕೋರ್ಟ್ ಅಂತಿಮ ತೀರ್ಪು ನೀಡುವ ತನಕ ಯಥಾಸ್ಥಿತಿ ಕಾಯ್ದುಕೊಳ್ಳಬೇಕಿತ್ತು. ಕೇರಳ ಸರ್ಕಾರ ಕಾಸರಗೋಡನ್ನು ಜಿಲ್ಲಾ ಕೇಂದ್ರ ಮಾಡುವ ಮೂಲಕ ಇದನ್ನು ಉಲ್ಲಂಘಿಸಲಾಗಿದೆ.
- ಕನ್ನಡಿಗರಿಗೂ ಮಲೆಯಾಳ ಭಾಷಾ ಕಲಿಕೆ ಕಡ್ಡಾಯ ಮಾಡಿರುವುದು
- ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಗೊತ್ತಿಲ್ಲದ ನೌಕರರ ನೇಮಕ
- ಅನೇಕ ಊರುಗಳ ಹೆಸರನ್ನು ಮಲೆಯಾಳೀಕರಣ ಮಾಡಿರುವುದು
- ಕನ್ನಡ ಶಾಲೆಗಳಲ್ಲಿ ಕನ್ನಡ ಗೊತ್ತಿಲ್ಲದ ಮಲೆಯಾಳ ಭಾಷಿಕ ಶಿಕ್ಷಕರ ನೇಮಕ
- ವಯೋ ನಿವೃತ್ತಿ ಹೊಂದಿದ ಕನ್ನಡ ಶಿಕ್ಷಕರ ಜಾಗಗಳಿಗೆ ಕನ್ನಡ ಶಿಕ್ಷಕರನ್ನು ನೇಮಿಸುವಲ್ಲಿ ವಿಳಂಬ
- ಕೇರಳ ಲೋಕಸೇವಾ ಆಯೋಗದಲ್ಲಿ ಕನ್ನಡ ಅಭ್ಯರ್ಥಿಗಳಿಗೆ ಮಾನ್ಯತೆ ನೀಡದಿರುವುದು
- ಊರುಗಳ ನಾಮಫಲಕಗಳನ್ನು ಮಲೆಯಾಳ ಭಾಷೆಯಲ್ಲಿಯೇ ಹಾಕಿರುವುದು
- ಸಾರ್ವಜನಿಕ ಸಾರಿಗೆ ಸಂಸ್ಥೆಯ ಬಸುಗಳ ನಾಮಫಲಕಗಳು ಮಲೆಯಾಳ ಭಾಷೆಯಲ್ಲಿ ಇರುವುದು
- ಸರ್ಕಾರಿ ಆಸ್ಪತ್ರೆಗಳಲ್ಲಿ ಕನ್ನಡ ಗೊತ್ತಿಲ್ಲದ ಮಲೆಯಾಳ ವೈದ್ಯರುಗಳ ನೇಮಕ, ಇದರಿಂದ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಕಲಿತ, ಮನೆಯಲ್ಲಿ ತುಳು, ಕೊಂಕಣಿ, ಮರಾಠಿ, ಬ್ಯಾರಿ ಮಾತನಾಡುವವರಿಗೆ ಆಗುತ್ತಿರುವ ತೊಂದರೆ ಅಪಾರ
ಹೇಳುತ್ತಾ ಹೋದರೆ ಇದರ ಪಟ್ಟಿ ದೀರ್ಘವಾಗುತ್ತದೆ. ಕೇರಳ ಸರ್ಕಾರ ಎಸಗುತ್ತಿರುವ ಈ ಅನ್ಯಾಯಗಳ ವಿರುದ್ಧ ಕಯ್ಯಾರ ಕಿಇಣ್ಣ ರೈ, ಕಕ್ಕಿಲಾಯರು ಸೇರಿದಂತೆ ಹಿಂದಿನ ತಲೆಮಾರು ಹೋರಾಟ ಮಾಡಿದೆ, ಇಂದು ಕೆ. ಭಾಸ್ಕರ, ಗುರುಪ್ರಸಾದ್ ಕೋಟೆಕರ, ಕೆ. ಭಾಸ್ಕರ, ಸುಂದರ್ ಬಾರಡ್ಕ, ರಾಧಾಕೃಷ್ಣ ಉಕ್ಕಿನಡ್ಕ ನರೇಶ್ ಮುಳ್ಳೇರಿಯಾ, ಸೇರಿದಂತೆ ಅನೇಕರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಇವರುಗಳ ಹೋರಾಟಕ್ಕೆ ನೀಡಬೇಕಾದ ಮನ್ನಣೆ ಸಿಗುತ್ತಿಲ್ಲ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ
ಅನ್ಯರಾಜ್ಯಗಳಿಗೆ ಅನ್ಯಾಯವಾಗಿ ಸೇರಿರುವ ಕನ್ನಡ ಪ್ರದೇಶದ ನಿವಾಸಿಗಳ ಸಲುವಾಗಿ, ಅಲ್ಲಿ ನ್ಯಾಯಯುತವಾಗಿ ಅವರಿಗೆ ಸಲ್ಲಬೇಕಿರುವ ಸೌಲಭ್ಯ ಸಿಗುತ್ತಿದೆಯೇ ಎಂದು ಗಮನಿಸಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ. ಆದರೆ ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಗಡಿ ಪ್ರದೇಶಗಳ ಬಗ್ಗೆ ಆಳವಾದ ಅಧ್ಯಯನ ಇಲ್ಲದವರೇ ಹೆಚ್ಚು ಸಮಯ ಅಧ್ಯಕ್ಷ ರುಗಳಾಗಿದ್ದಾರೆ. ಇದರ ಜೊತೆಗೆ ಅನುದಾನವೂ ಇಲ್ಲ.
ಹಣದ ಕೊರತೆ ನಡುವೆಯೂ ಮಾಡಬಹುದಾದ ಕೆಲಸಗಳನ್ನು ಪ್ರಾಧಿಕಾರ ಮಾಡುತ್ತಿಲ್ಲ. ಉದಾಹರಣೆಗೆ ಹೇಳುವುದಾದರೆ ನೆರೆರಾಜ್ಯಗಳಲ್ಲಿರುವ ಕನ್ನಡ ಪ್ರದೇಶದಲ್ಲಿರುವರಿಗೆ ಅನ್ಯಾಯವಾದಾಗಲೆಲ್ಲ ಬಲವಾಗಿ ಪ್ರತಿಭಟಿಸುವ, ಸಾಧ್ಯವಾದರೆ ಕೇಂದ್ರ ಸರ್ಕಾರ, ನ್ಯಾಯಾಲಯಗಳ ಗಮನಕ್ಕೆ ತರುವ ಕೆಲಸಗಳೂ ಆಗುತ್ತಿಲ್ಲ. ಇದರಿಂದಾಗಿ ಪ್ರಾಧಿಕಾರ ಇದ್ದೂ ಇಲ್ಲದಂತಾಗಿದೆ.
ಇನ್ನು ಅಧಿಕಾರಕ್ಕೆ ಬರುವ ಪಕ್ಷದ ರಾಜಕಾರಣಿಗಳಿಗೆ ಪರರಾಜ್ಯದಲ್ಲಿರುವ ಕಾಸರಗೋಡು, ಇನ್ನಿತರ ಕನ್ನಡ ಪ್ರದೇಶಗಳು ಮರತೇ ಹೋಗಿವೆ. ಇದರಿಂದಾಗಿಯೇ ವಿಶೇಷವಾಗಿ ಕೇರಳ ಸರ್ಕಾರ ಕನ್ನಡ, ಕನ್ನಡಿಗರ ವಿಷಯದಲ್ಲಿ ನಿರ್ದಾಕ್ಷಿಣ್ಯವಾಗಿ ವರ್ತಿಸುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಎಂದಾಗ ಕಾಸರಗೋಡು ಸೇರಿದಂತೆ ರಾಜ್ಯದಿಂದ ತಾತ್ಕಾಲಿಕವಾಗಿ ಕೈ ತಪ್ಪಿರುವ ಕನ್ನಡ ಪ್ರದೇಶಗಳನ್ನೂ ನೆನಪಿಸಿಕೊಳ್ಳಬೇಕು