ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಎಲ್ಲ ಪಠ್ಯ ವಿಷಯಗಳನ್ನೂ ಕನ್ನಡದಲ್ಲಿಯೇ ಬೋಧಿಸಬೇಕು. ಇಂಗ್ಲಿಷ್, ಹಿಂದಿ ಪಠ್ಯಗಳ ಅರ್ಥವನ್ನೂ ಕನ್ನಡದಲ್ಲಿಯೇ ಹೇಳಬೇಕು. ಹೀಗೆ ಮಾಡುವುದರ ಬದಲು ಸಮಾಜಶಾಸ್ತ್ರ,ವಿಜ್ಞಾನ ಗಣಿತ ಜೊತೆಗೆ ಇಂಗ್ಲಿಷ್ ವಿಷಯಗಳನ್ನೂ ಮಲೆಯಾಳದಲ್ಲಿಯೇ ಬೋಧಿಸಲು ಶುರು ಮಾಡಿದರೆ ವಿದ್ಯಾರ್ಥಿಗಳ ಸ್ಥಿತಿ ಏನಾಗಬಹುದು ?
ಕಾಸರಗೋಡು ಸಮೀಪದ ಬೇಕಲ ಶಾಲೆಗೆ ಕೆಲಸಕ್ಕೆ ವರದಿ ಮಾಡಿಕೊಳ್ಳಲು ಕನ್ನಡದ ಗಂಧಗಾಳಿಯೇ ಗೊತ್ತಿಲ್ಲದ ಟೀಚರ್ ಒಬ್ಬರು ಸಡಗರದಿಂದಲೇ ಬಂದಿದ್ದರು. ಮುಖ್ಯೋಫಾಧ್ಯಾಯರನ್ನು ಭೇಟಿಯಾಗಿ ಕೇರಳ ಶಿಕ್ಷಣ ಇಲಾಖೆಯ ಆದೇಶದ ಪ್ರತಿ ನೀಡಿ ಕರ್ತವ್ಯಕ್ಕೆ ಹಾಜರಾದರು. ಹೆಚ್.ಎಂ. ಸರಕಾರಿ ನೌಕರ. ಅವರೇನು ತಾನೇ ಮಾಡಿಯಾರು ? ಸರಕಾರದ ಆದೇಶ ಪಾಲಿಸಬೇಕು. ಇಲ್ಲ ಮನೆಗೆ ಹೋಗಬೇಕು. ಅವರು ಸರಕಾರಿ ಆದೇಶ ಪಾಲಿಸಿದರು.
ಮಲೆಯಾಳ ಶಿಕ್ಷಕರು ತರಗತಿಗೆ ಹೋದರು. ಹೊಸ ಶಿಕ್ಷಕರನ್ನು ವಿದ್ಯಾರ್ಥಿಗಳು ಸಡಗರದಿಂದಲೇ ಸ್ವಾಗತಿಸಿದರು. ಸರಿ ಪರಿಚಯ ಆಗಬೇಕಲ್ಲ. ಶಿಕ್ಷಕರು ಮಲೆಯಾಳದಲ್ಲಿ ಪರಿಚಯ ಮಾಡಿಕೊಳ್ಳತೊಡಗಿದರು. ವಿದ್ಯಾರ್ಥಿನಿಯೊಬ್ಬರು ಎದ್ದು ನಿಂತು “ದಯವಿಟ್ಟು ಕನ್ನಡದಲ್ಲಿ ಮಾತನಾಡಿ, ನಮಗೆ ಮಲೆಯಾಳಂ ಬರುವುದಿಲ್ಲ “ ಎಂದರು. ಹೀಗೆ ಹೇಳಿದ್ದು ಸಹ ಶಿಕ್ಷಕರಿಗೆ ಅರ್ಥವಾಗಲಿಲ್ಲ. ಆ ವಿದ್ಯಾರ್ಥಿನಿ ಮೌನವಾಗಿಯೇ ತನ್ನ ಬ್ಯಾಗ್ ತೆಗೆದುಕೊಂಡು ಹೊರನಡೆದರು. ತರಗತಿಯಲ್ಲಿದ್ದ ಅಷ್ಟೂ ವಿದ್ಯಾರ್ಥಿಗಳು ಹಿಂಬಾಲಿಸಿದರು.
ಇತರ ತರಗತಿಗಳ ವಿದ್ಯಾರ್ಥಿಗಳಿಗೂ ವಿಷಯ ತಿಳಿಯುತ್ತಿದ್ದಂತೆ ಹೊರ ಬಂದು ಶಾಲಾ ಆವರಣದಲ್ಲಿ ಸೇರಿದರು. ಹೀಗೊಂದು ಪ್ರತಿಭಟನೆ ಶುರುವಾಯಿತು. ಮುಖ್ಯೋಫಾಧ್ಯಾಯರು ಇದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಅವರೇನು ತಾನೇ ಮಾಡಿಯಾರು. ಸರಕಾರದ ಆದೇಶವಿದು ಪಾಲಿಸಿ ಎಂದರು.
ಮರುದಿನ ಮಲೆಯಾಳ ಶಿಕ್ಷಕರು ಶಾಲೆಗೆ ಬಂದರು. ಆವರಣದ ಗೇಟ್ ಬಂದ್ ಆಗಿತ್ತು. ವಿದ್ಯಾರ್ಥಿಗಳು ಅಲ್ಲಿಂದಲೇ ಅವರನ್ನು ವಾಪ್ಪಸ್ ಕಳಿಸಿದರು. ಕಾಸರಗೋಡಿನ ಹೊಸದುರ್ಗ ಉದುಮ ಶಾಲೆಗೂ ನೂತನವಾಗಿ ನೇಮಕವಾದ ಮಲೆಯಾಳ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಅವರು ಬಂದರೆ ಪ್ರತಿಭಟಿಸಲು ವಿದ್ಯಾರ್ಥಿಗಳು ಸಜ್ಜಾಗಿದ್ದರು. ವಿಷಯ ತಿಳಿದ ಶಿಕ್ಷಕರು ಅತ್ತ ಸುಳಿಯುವ ಧೈರ್ಯ ಮಾಡಲಿಲ್ಲ.
ಸರಕಾರವೊಂದು ಹೀಗೆ ವರ್ತಿಸಲು ಸಾಧ್ಯವೇ ಎನಿಸಬಹುದಲ್ಲವೇ ? ಆದರೆ ಕೇರಳ ಸರಕಾರ ಇಂಥ ಕೆಲಸಗಳನ್ನು ಬಹು ಕುಯುಕ್ತಿಯಿಂದ ಮಾಡುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರು ಬೇರೆಡೆಗೆ ವರ್ಗವಾದಾಗ ಅಥವಾ ವಯೋ ನಿವೃತ್ತಿ ಹೊಂದಿದಾಗ ತೆರವಾಗುವ ಸ್ಥಾನಗಳನ್ನು ತಕ್ಷಣ ಭರ್ತಿ ಮಾಡಲು ಹೋಗುವುದಿಲ್ಲ. ತಿಂಗಳು, ಎರಡು ತಿಂಗಳು, ಮೂರು ತಿಂಗಳು ಹೀಗೆ ಸತಾಯಿಸುವುದು. ಶಿಕ್ಷಕರು ಬಂದರೆ ಸಾಕು, ಪಠ್ಯ ವಿಷಯ ಅರ್ಥವಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಚಡಪಡಿಸತೊಡಗುತ್ತಾರೆ. ಮುಖ್ಯೋಫಾಧ್ಯಾಯರಿಗೂ ಶಿಕ್ಷಣ ಇಲಾಖೆಗೆ ಪತ್ರದ ಮೇಲೆ ಪತ್ರ ಬರೆದು ಸಾಕಾಗಿರುತ್ತದೆ. ಇಂಥ ಹೊತ್ತಿನಲ್ಲಿ ಏನೋ ದೊಡ್ಡ ಮನಸು ಮಾಡಿದಂತೆ ಕೇರಳ ಶಿಕ್ಷಣ ಇಲಾಖೆ ಶಿಕ್ಷಕರನ್ನು ಕಳಿಸುತ್ತದೆ. ಅದೂ ಯಾರನ್ನು ? ಕನ್ನಡ ಓದುವುದಿರಲಿ, ಮಾತನಾಡಲು ಬಾರದ ಶಿಕ್ಷಕರನ್ನು ! ಹೇಗಿದೆ ನೋಡಿ ಕೇರಳ ಸರಕಾರದ ಜಾಣ್ಮೆ !
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾದರೆ ವಿದ್ಯಾರ್ಥಿಗಳು ಹತಾಶರಾಗುತ್ತಾರೆ. ಅವರ ಪೋಷಕರು ಬೇರೆ ಶಾಲೆಗೆ ಸೇರಿಸುವ ವ್ಯವಸ್ಥೆ ಮಾಡುತ್ತಾರೆ. ಹತ್ತಿರದಲ್ಲಿ ಬೇರೆ ಶಾಲೆ ಎಂದರೆ ಯಾವುದಿರುವುದು ? ಮಲೆಯಾಳಂ ಮಾಧ್ಯಮದ ಶಾಲೆಗಳು. ಅಲ್ಲಿ ಶಿಕ್ಷಕರ ಕೊರತೆಯೇ ಇರುವುದಿಲ್ಲ. ಅಗತ್ಯಕ್ಕಿಂತಲೂ ಒಂದಿಬ್ಬರು ಶಿಕ್ಷಕರು ಹೆಚ್ಚಿಗೆಯೇ ನೇಮಕವಾಗಿರುತ್ತಾರೆ. ಒಂದೆರಡು ತಿಂಗಳು ಕಷ್ಟವಾಗಬಹುದು ನಂತರ ತಮ್ಮ ಮಕ್ಕಳು ಮಲೆಯಾಳಂ ಕಲಿತುಕೊಳ್ಳುತ್ತಾರೆ. ಒಟ್ಟಿನಲ್ಲಿ ಚೆನ್ನಾಗಿ ಕಲಿತರೆ ಸಾಕು ಎಂಬ ಭಾವನೆ ಪೋಷಕರಿಗೆ ಇರುತ್ತದೆ.
ಮಲೆಯಾಳಂ ಮಾಧ‍್ಯಮದ ಶಾಲೆಗೆ ಸೇರಿಸಿ ಎಂದು ನೇರವಾಗಿ ಹೇಳದೇ ಅಡ್ಡದಾರಿ ಬಳಸಿ ಸೇರಲೇಬೇಕಾದಂಥ ದುಸ್ಥಿತಿ ಉಂಟು ಮಾಡುವ ರೀತಿ ಹೇಗಿದೆ ಗಮನಿಸಿ. ಅವರಿಗೆ ಗೊತ್ತು, ಮೂಗಿಡಿದರೆ ಬಾಯಿ ತೆರೆಯುತ್ತದೆ. ಹೀಗೆ ಕನ್ನಡದ ವಿಷಯದಲ್ಲಿ ಕೇರಳ ಮಾಡುತ್ತಿರುವ ಅನ್ಯಾಯಗಳು ಒಂದೆರಡಲ್ಲ. ಅಲ್ಲಿ ಸರಕಾರ ನಡೆಸುವವರದು ಕನ್ನಡದ ಕಣ್ಣಿಗೆ ಸುಣ್ಣ, ಮಲೆಯಾಳಂ ಕಣ್ಣಿಗೆ ಬೆಣ್ಣೆ ಎಂಬಂಥ ಧೋರಣೆ’
ಸಾಂದರ್ಭಿಕ ಚಿತ್ರ: ನಾನು, ಕಾಸರಗೋಡು ಜಿಲ್ಲೆಯ ಬದಿಯಡ್ಕ ಶಾಲೆಗೆ ಭೇಟಿ ನೀಡಿದಾಗ ತೆಗೆದ ಚಿತ್ರ