ಅಣ್ಣಾವ್ರು, ಪ್ರೇಕ್ಷಕರನ್ನು “ಅಭಿಮಾನಿ ದೇವರುಗಳು” ನಿರ್ಮಾಪಕರನ್ನು “ಅನ್ನದಾತರು” ಎಂದು ಕರೆದರು. ಈ ರೀತಿಯ ಕರೆಯುವಿಕೆ ದೇಶದ ಬೇರೆಡೆಯಲ್ಲಿಯೂ, ವಿದೇಶಗಳಲ್ಲಿಯೂ ಆಗಿಲ್ಲ. ಹೀಗೆ ಖಚಿತವಾಗಿ ಹೇಳುವ ಮುನ್ನ ಒಂದಷ್ಟು ಮಾಹಿತಿ ಮೂಲಗಳನ್ನು ನೋಡಿದ್ದೇನೆ.

ಪ್ರೇಕ್ಷಕರು ನಟರಿಗೇನೂ ನೇರವಾಗಿ ದುಡ್ಡು ಕೊಡುವುದಿಲ್ಲ. ಅವರು ಕೊಡುವುದು ಥಿಯೇಟರ್ ಗಳಿಗೆ. ಇವುಗಳಿಗೆ ಬಾಡಿಗೆ ನೀಡುವವರು ನಿರ್ಮಾಪಕರು. ಸಿನೆಮಾ ದುಡ್ಡು ಮಾಡಲಿ ಬಿಡಲಿ, ಇವರು ಸಿನೆಮಂದಿರಗಳ ಮಾಲೀಕರಿಗೆ ಹಣ ನೀಡಲೇಬೇಕು. ಆದರೆ ಇವುಗಳ ಮಾಲೀಕರಾರು ನಿರ್ಮಾಪಕರನ್ನು “ಅನ್ನದಾತ” ರೆಂದು ಸಿನೆಮಾ ನೋಡಲು ಬಂದ ಪ್ರೇಕ್ಷಕರನ್ನು “ಗ್ರಾಹಕ ದೇವರು” ಗಳೆಂದು ನೋಡಲಿಲ್ಲ. ನೋಡಿದ್ದರೆ 90% ಕ್ಕೂ ಅಧಿಕ ಥಿಯೇಟರ್ ಗಳು ಸೊಳ್ಳೆ, ತಿಗಣೆ, ಗಬ್ಬುವಾಸನೆ ಅಶೌಚಾಲಯಗಳ ಆಗರವಾಗಿರುತ್ತಿರಲಿಲ್ಲ.

ಮಲ್ಟಿಫ್ಲೆಕ್ಸುಗಳು ಬಂದ ಮೇಲೆ ಸುಖಾಸೀನ, ಎಸಿ, ಶೌಚಾಲಯ ಸಾಮಾನ್ಯವಾದರೂ ಇವುಗಳು ಆಡಳಿತ ಮಂಡಳಿಗಳೂ ನಿರ್ಮಾಪಕರನ್ನು “ಅನ್ನದಾತ”ರೆಂದೂ ಪ್ರೇಕ್ಷಕರನ್ನು ” ಗ್ರಾಹಕ ದೇವರು”ಗಳೆಂದೂ ಭಾವಿಸಲೇ ಇಲ್ಲ. ಹೀಗೆ ಭಾವಿಸಿದ್ದರೆ ದುಬಾರಿ ಟಿಕೇಟು ಖರೀದಿಸಿ ಬಂದವರ ಬ್ಯಾಗು, ಜೇಜು ತಡಕಿತಡಕಿ ನೀರಿನ ಬಾಟಲು, ಚಾಕೊಲೆಟ್, ಒಂದಿಷ್ಟು ಕುರುಕು ತಿಂಡಿ ಕಿತ್ತುಕೊಂಡು ಒಳಗೆ ಕಳಿಸುತ್ತಿರಲಿಲ್ಲ. ಪ್ರತಿಹಂತದಲ್ಲಿಯೂ ಪ್ರೇಕ್ಷಕರ ಪರ್ಸಿನ ಭಾರ ಕಡಿಮೆ ಮಾಡುವ ತವಕ ಇವರಿಗೆ….

ಇತ್ತೀಚೆಗೆ ಸಿನೆಮಾಗಳ ಭಂಡಾರವನ್ನೇ ಹೊತ್ತುಕೊಂಡ ಆನ್ ಲೈನ್ ತಾಣಗಳು ಬಂದಿವೆ. ಉದಾಹರಣೆಗೆ MUBI, Amazon Prime, Netflix ಇತ್ಯಾದಿ. ನಾನು ಈ ಮೂರೂ ತಾಣಗಳ ಗ್ರಾಹಕ. ನೀವು ಯಾವ ಹೋಟೆಲಿಗೆ ಹೋದರೂ ಆಹಾರ ಸೇವಿಸಿ ಚೆನ್ನಾಗಿದ್ದರೆ ಮಾತ್ರ ಕಾಸುಕೊಡಿ ಎನ್ನುವುದಿಲ್ಲ. ಸಿನೆಮಾ ಚೆನ್ನಾಗಿದೆ ಅನಿಸಿದರೆ ಮಾತ್ರ ವಾಪ್ಪಸ್ಸು ಹೋಗುವಾಗ ಟಿಕೇಟ್ ದುಡ್ಡುಕೊಟ್ಟು ಹೋಗಿ ಎನ್ನುವುದಿಲ್ಲ.

ಹೀಗಿರುವಾಗ ಈ ಜಾಲತಾಣಗಳು ಭರ್ತಿ ಒಂದು ತಿಂಗಳು ಉಚಿತವಾಗಿ ಸಿನೆಮಾ ತೋರಿಸುತ್ತವೆ. ಇದರಲ್ಲಿ MUBi ಮಾತ್ರ 7 ದಿನ ಉಚಿತ ವೀಕ್ಷಣೆ ಅವಕಾಶ ನೀಡಿದೆ. ಈ ಅವಧಿಗಳು ಮುಗಿಯುವುದರೊಳಗೆ ನಿಮಗೆ ಅವರ ಭಂಡಾರದಲ್ಲಿರುವ ಸಿನೆಮಾಗಳ ಬಗ್ಗೆ, ಪ್ರದರ್ಶನದ ಕ್ವಾಲಿಟಿ ಬಗ್ಗೆ ತೃಪ್ತಿ ಬಾರದಿದ್ದರೆ ಚಂದಾದಾರಿಕೆ ರದ್ದು ಮಾಡಬಹುದು. ಈ ಹಂತಗಳಲ್ಲಿಯೂ ಅವುಗಳು ಫೀಡ್ ಬ್ಯಾಕ್ ತೆಗೆದುಕೊಳ್ಳುತ್ತವೆ. ಏಕೆ – ಏನು- ಎತ್ತ ಎಂದೆಲ್ಲ ವಿಚಾರಿಸಿಕೊಳ್ಳುತ್ತವೆ.

ನೀವು ಸಲಹೆ ನೀಡಿದರೆ ಅವುಗಳನ್ನು ಅಳವಡಿಸಿಕೊಳ್ಳಲು ಯತ್ನಿಸುತ್ತವೆ. ಇದು ಪೈಪೋಟಿಯ ಮಾರುಕಟ್ಟೆ ಗೆಲ್ಲಲು ಬೇಕಾದ ತಂತ್ರವೇ ಆಗಿದ್ದರೂ ಆ ಪರಿ ವಿನಯವನ್ನೇನೂ ಅವುಗಳು ಅಳವಡಿಸಿಕೊಳ್ಳಬೇಕಿರಲಿಲ್ಲ. ಆದರೆ ಅವುಗಳ ಆಡಳಿತ ಮಂಡಳಿಗೆ ಪ್ರೇಕ್ಷಕರು ದೇವರು, ನಿರ್ಮಾಪಕರು “ಅನ್ನದಾತರು” ಎಂಬುದು ಅರಿವಾದಂತಿದೆ.

MUBI ಬಗ್ಗೆ ಇನ್ನೊಂದು ಅನುಭವ ಹಂಚಿಕೊಳ್ಳುತ್ತೇನೆ. ನನಗೆ ಪ್ರತಿದಿನ ರಾತ್ರಿ ಒಂದು ಸಿನೆಮಾ ನೋಡಿ ಮಲಗುವ ಅಭ್ಯಾಸ. ಮೊದಲೇ ಹೇಳಿದಂತೆ MUBi, Amazon Prime, Netflix ಚಂದಾದಾರ. Mubiಯಲ್ಲಿಯಂತೂ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತ ಸಿನೆಮಾಗಳ ಬಹುದೊಡ್ಡ ಲೈಬ್ರರಿಯೇ ಇದೆ.

ಈ ಥರದ ಸಿನೆಮಾಗಳು ಪ್ರದರ್ಶಿತವಾಗುವ ಅವಧಿ ಒಂದು ತಿಂಗಳು. ಆ ನಂತರವೂ ಆ ಸಿನೆಮಾ ನೋಡಬೇಕೆನ್ನಿಸಿದರೆ ದುಬಾರಿ ರೆಂಟ್ ಕೊಟ್ಟು ನೋಡಬೇಕು. ಇತ್ತೀಚೆಗೆ ನನ್ನ ಬಳಿಯಿರುವ ಎರಡೂ ಎಕ್ಸಟ್ರನಲ್ ಹಾರ್ಡ್ ಡಿಸ್ಕ್ ಗಳು, ಸಿನೆಮಾಗಳಿಂದ ತುಂಬಿ ಹೋಗಿವೆ. ಇವುಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 4 TB.

ಇಷ್ಟೊಂದು ಸಿನೆಮಾ ಇರುವಾಗ ಆನ್ ಲೈನ್ ತಾಣಗಳ ಚಂದಾದಾರಿಕೆ ಭಾರ ಕಡಿಮೆ ಮಾಡಿಕೊಳ್ಳೊಣ ಎಂದು ನಿರ್ಧರಿಸಿದೆ. ಮೊದಲು MUBI ಚಂದಾದಾರಿಕೆ ರದ್ದು ಮಾಡಿದೆ. ಇದು ಮೂರು ಹಂತಗಳಲ್ಲಿ ನಡೆಯುತ್ತದೆ. ಗ್ರಾಹಕರಿಂದ ಗರಿಷ್ಠ ಫೀಡ್ ಬ್ಯಾಕ್ ಪಡೆಯಲಾಗುತ್ತದೆ. ಕೊನೆಹಂತ ಕ್ಲಿಕ್ ಮಾಡಿ ನಿರ್ಗಮಿಸುವಷ್ಟರಲ್ಲಿ ಸ್ಕ್ರೀನ್ ಮೇಲೆ ನಿಮ್ಮ ಮಾಸಿಕ ಚಂದಾದಾರಿಕೆ ಮೊತ್ತವನ್ನು 40% ರಷ್ಟು ಕಡಿಮೆ ಮಾಡುತ್ತೇವೆ ಎಂದು ಮೆಸೇಜ್ ಬಂತು. ಗ್ರಾಹಕರನ್ನು ಕಳೆದುಕೊಳ್ಳಬಾರದೆಂಬ ಹಠ. ಪ್ರೇಕ್ಷಕರು, ನಿರ್ಮಾಪಕರೇ ಅನ್ನದಾತರೆಂಬ ಧೋರಣೆ. ಅಣ್ಣಾವ್ರ ತತ್ವ ಹೀಗೆ ಸಿನೆರಂಗದ ಬೇರೊಂದು ಮಜಲಿನಲ್ಲಿ ಕಾರ್ಯಗತವಾಗುವುದನ್ನು ಕಂಡು ಬಲು ಸೋಜಿಗವಾಯಿತು.

Similar Posts

Leave a Reply

Your email address will not be published. Required fields are marked *