ಹಾವುಗಳು ಅದರಲ್ಲಿಯೂ ವಿಷಪೂರಿತ ಹಾವುಗಳ ಬಗ್ಗೆ ವರ್ಷದ ಎಲ್ಲ ಋತುಗಳಲ್ಲಿಯೂ ಎಚ್ಚರವಿರಬೇಕು. ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚು ಎಚ್ಚರವಿರಬೇಕು. ತಮ್ಮ ಪರಿಸರದಲ್ಲಿ ಹಾವುಗಳನ್ನೇ ಕಾಣದ ಸಂಪೂರ್ಣ ಅಭಿವೃದ್ಧಿ ಹೊಂದಿದ ನಗರ ಪ್ರದೇಶಗಳವರಿಗೆ ಮಳೆಗಾಲದಲ್ಲಿಯೇ ಏಕೆ ವಿಶೇಷವಾದ ಎಚ್ಚರಿಕೆ ಬೇಕು ಎಂಬ ಪ್ರಶ್ನೆ ಉದ್ಬವಿಸುವುದು ಸಹಜ.
ಹಾವುಗಳು ಶೀತರಕ್ತದ ಪ್ರಾಣಿಗಳು. ತಮ್ಮ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿರಿಸಿಕೊಳ್ಳಲು ಸದಾ ಪ್ರಯತ್ನಿಸುತ್ತವೆ. ಚಳಿಗಾಲದಲ್ಲಿ ಹುತ್ತಗಳು ಅವುಗಳಿಗೆ ಪ್ರಶಸ್ತ ಸ್ಥಳ. ಅಲ್ಲಿದ್ದುಕೊಂಡೇ ದೇಹದ ಉಷ್ಣಾಂಶ ಕಾಪಾಡಿಕೊಳ್ಳುತ್ತವೆ. ಮಳೆಗಾಲದಲ್ಲಿ ಹುತ್ತಗಳ ಒಳಗೆ ನೀರು ಇಳಿಯುವುದರಿಂದ ಬೇರೆಡೆ ಬೆಚ್ಚನೇ ಸ್ಥಳಗಳನ್ನು ಅರಸುತ್ತವೆ.
ಹಾವುಗಳಲ್ಲಿ ನಾಗರಹಾವುಗಳೇ ಹೆಚ್ಚು ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಡುತ್ತದೆಯೋ ಏನೋ ? ಗೆದ್ದಲುಗಳು ಕಟ್ಟಿದ ಹುತ್ತದೊಳಗೆ ಇವುಗಳ ಸಂಖ್ಯೆಯೇ ಅತ್ಯಧಿಕ. ಮನೆಗಳ ಒಳಗೆ ಬರುವುದರಲ್ಲಿ ಇವುಗಳ ಸಂಖ್ಯೆಯೇ ಹೆಚ್ಚು !
ಚಳಿಗಾಲದಲ್ಲಿಯೂ ಬೆಳಗ್ಗಿನ 10 ಗಂಟೆಯ ತನಕ ಸಂಜೆ 6 ರ ಮೇಲೆ ಡಾಂಬರು ಹಾಕಿದ ರಸ್ತೆಗಳು ಬೆಚ್ಚಗಿರುತ್ತವೆ. ಇಂಥ ಸಮಯಗಳಲ್ಲಿ ಹಾವುಗಳು ಸಾಮಾನ್ಯವಾಗಿ ನಿಡಿದಾಗಿ ಮೈ ಚೆಲ್ಲಿಕೊಂಡಿರುತ್ತವೆ. ಅಪರೂಪಕ್ಕೆ ಸುರುಳಿ ಸುತ್ತಿಕೊಂಡು ಬೆಚ್ಚಗೆ ಮಲಗಿರುತ್ತವೆ. ಇಂಥ ಸಮಯದಲ್ಲಿ ಪಾದಾಚಾರಿಗಳು, ದ್ವಿಚಕ್ರ ವಾಹನಗಳಲ್ಲಿ ಹೋಗುವವರು ಎಚ್ಚರದಿಂದ ಇರುವುದು ಸೂಕ್ತ.
ಹಾವುಗಳು ಮಳೆಗಾಲದಲ್ಲಿ ಬೆಚ್ಚಗಿರುವ ತಾಣಗಳನ್ನು ಅರಸುತ್ತವೆ. ಅದರಲ್ಲಿಯೂ ಮನೆಗಳ ಬಳಿ ಇಲಿಗಳು, ಸಣ್ಣಸಣ್ಣ ಕೋಳಿಗಳು ಅಥವಾ ಬಿಸಾಡಿದ ಮೊಟ್ಟೆ, ಮಾಂಸದ ಚೂರುಗಳು ಇದ್ದರಂತೂ ಅನಾಯಾಸವಾಗಿ ಬಂದು ಸೇರಿಕೊಳ್ಳುತ್ತವೆ. ಕೆಲವೊಮ್ಮೆ ದಿನಗಟ್ಟಲೇ ಇವುಗಳ ಸುಳಿವೂ ಸಿಕ್ಕಿರುವುದಿಲ್ಲ.
ಇದನ್ನೂ ಓದಿ ಮೈಮೇಲೆ ಹರಿದ ನಾಗರಹಾವು !
ಕೋಳಿಗೂಡು, ಮನೆಯೊಳಗೆ ಬೂದಿ ಇರುವ ಒಲೆ, ಬೂಟುಗಳಲ್ಲಿ ಸೇರಿಕೊಳ್ಳುತ್ತವೆ. ಮಳೆಯಲ್ಲಿ ನೆನೆಯದಂತೆ ಇಟ್ಟಿರುವ ಕಟ್ಟಿಗೆರಾಶಿಯೂ ಅವುಗಳಿಗೆ ಅಪ್ಯಾಯಮಾನ. ಕೆಲವೊಮ್ಮೆ ಭತ್ತದ ಹುಲ್ಲಿನ ಒಕ್ಕಣೆ ಮಾಡಿದಲ್ಲಿಯೂ ಸೇರಿಕೊಳ್ಳುತ್ತವೆ.
ಬಾಲ್ಯದಲ್ಲಿ ಮಾಧ್ಯಮಿಕ ಶಾಲೆ, ಹೈಸ್ಕೂಲು ಓದುವ ಹಂತದಲ್ಲಿ ನಮ್ಮ ಮನೆ ಹೊಲಗಳ ಅಂಚಿನಲ್ಲಿತ್ತು. ಮನೆಯ ಹಿಂದಕ್ಕೆ ಮೈಲುಗಟ್ಟಲೆ ದೂರ ಹರಡಿಕೊಂಡ ಹೊಲ, ಅಲ್ಲಲ್ಲಿ ಕುರುಚಲು ಕಾಡು. ಇಂಥಲ್ಲಿ ಹಾವಿನೊಂದಿಗೆ ಅದರಲ್ಲಿಯೂ ಎಳೆಯ, ದೊಡ್ಡ ನಾಗರಹಾವುಗಳು, ಕೊಳಕು ಮಂಡಲಗಳೊಂದಿಗೆ ಮುಖಾಮುಖಿಯಾಗುವ ಸಂದರ್ಭಗಳು ಎದುರಾಗುತ್ತಿದ್ದವು.
ಬಚ್ಚಲು ಮನೆಯ ಬೆಂಕಿ ನಂದಿದ ಹಂಡೆ ಒಲೆಯ ಬೂದಿ ರಾಶಿ, ಶೌಚಾಲಯ, ಹಿತ್ತಲಿನಲ್ಲಿ ತರಕಾರಿಗಳನ್ನು ಬೆಳೆಯುತ್ತಿದ್ದ ಜಾಗ, ಅಡುಗೆ ಮನೆಯಿಂದ ಪಾತ್ರೆ ತೊಳೆದ ನೀರು ಹೊರಗೆ ಹೋಗುವ ಕಿಂಡಿ ಹೀಗೆ ಎತ್ತ ನೋಡಿದರೂ ಹಾವು. ಒಮ್ಮೆಯಂತೂ ಮಧ್ಯಮ ಗಾತ್ರದ ಸ್ಟೀಲ್ ಚೊಂಬಿನೊಳಗೆ ಕೊಳಕು ಮಂಡಲ ಸೇರಿತ್ತು.
ಬಾಲ್ಯದಿಂದಲೂ ಇದನ್ನೆಲ್ಲ ನೋಡಿನೋಡಿ ಅವುಗಳು ಇರುವ ಜಾಗ ಪತ್ತೆ ಹಚ್ಚುವಲ್ಲಿ ತಕ್ಕಮಟ್ಟಿನ ಅನುಭವವಿತ್ತು. ಹಾವುಗಳು ನಮ್ಮ ಮನೆ ಅಥವಾ ನೆರೆಹೊರೆಯ ಮನೆಗಳಿಗೆ ( ಆ ಪರಿಸರದಲ್ಲಿ ಇದ್ದಿದ್ದೇ ಹತ್ತಾರು ಮನೆ ಮಾತ್ರ) ಭೇಟಿ ಕೊಡುತ್ತಿದ್ದರಿಂದ ಅವುಗಳನ್ನು ಹಿಡಿಯುವವರಿಗೆ ಬುಲಾವ್ ಹೊಗುತ್ತಿತ್ತು.
ಹಾವುಗಳೇನು ತಮ್ಮನ್ನು ಬಂದು ಹಿಡಿದುಕೊಂಡು ಹೋಗಲಿ ಎಂದೇನೂ ಕಾಯುತ್ತಾ ಕೂರುವುದಿಲ್ಲ. ಕಣ್ಣಿಗೆ ಕಂಡವು ಕ್ಷಣಾರ್ಧದಲ್ಲಿ ಮರೆಯಾಗುತ್ತಿದ್ದವು. ಹಾವು ಅದರಲ್ಲಿಯೂ ನಾಗರಹಾವು ಹಿಡಿಯುವವರು ನಮ್ಮ ಏರಿಯಾಕ್ಕೆ ಬಂದಾಗ ಅವರು ಹಾವು ಎಲ್ಲಿದೆ ಎಂದು ಹುಡುಕಾಡುವುದನ್ನು ನೋಡಿ ಥಟ್ಟನೇ ಇಂಥಲ್ಲಿ ಇದೆ ಎಂದು ಬೊಟ್ಟು ಮಾಡಿ ತೋರಿಸುತ್ತಿದ್ದೆ. ಅಷ್ಟರ ಮಟ್ಟಿಗೆ ಹಾವು ಎಲ್ಲಿದೆ ಎಂದು ಪತ್ತೆ ಹಚ್ಚುವುದರಲ್ಲಿ ಪ್ರವೀಣನಾಗಿದೆ. ಈಗಾಲೂ ಆಗಾಗ ಪಶ್ಚಿಮಘಟ್ಟಗಳಿಗೆ ಚಾರಣ ಹೋದಾಗ ಕಾಳಿಂಗ ಸರ್ಪಗಳು ಕಣ್ಣಿಗೆ ಬೀಳುತ್ತವೆ. ಮರೆಯಲ್ಲಿರುವ ಅವುಗಳನ್ನು ಸಹ ಚಾರಣಿಗರಿಗೆ ತೋರಿಸಿದ್ದೇನೆ.
ಹೊಲ, ಗದ್ದೆ, ಖಾಲಿ ನಿವೇಶನಗಳ ಸಮೀಪ ಮನೆ ಇರುವವರು ಮಳೆಗಾಲ, ಚಳಿಗಾಲದಲ್ಲಿ ಸಾಧ್ಯವಾದಷ್ಟು ಜಾಗ್ರತೆ ವಹಿಸಬೇಕು. ರಾತ್ರಿ ವೇಳೆ ತಂದು ನಿಲ್ಲಿಸಿದ ಕಾರು, ದ್ವಿ ಚಕ್ರ ವಾಹನಗಳು ಬೆಚ್ಚಗಿರುವುದರಿಂದ ಅಲ್ಲಿಯೂ ಬಂದು ಸೇರಿಕೊಳ್ಳುವ ಸಾಧ್ಯತೆ ಅಧಿಕ. ಮಲೆನಾಡುಗಳಲ್ಲಿ ಮಳೆಗಾಲದಲ್ಲಿ ಕೆಲವೊಮ್ಮೆ ಹಾವುಗಳು ಬಸ್ಸುಗಳನ್ನೇ ಏರಿ ಬೆಚ್ಚಗೆ ಪವಡಿಸಿರುತ್ತವೆ. ಸದಾ ಅದೃಷ್ಟ ದೇವತೆಯನ್ನೇ ನೆಚ್ಚದೆ ಹುಷಾರಿನಲ್ಲಿರಬೇಕು.
ಅಕಸ್ಮಾತ್ ಹಾವು ಕಚ್ಚಿದರೆ ತೀರಾ ಪ್ಯಾನಿಕ್ ಆಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚು. ಹಾವು ಕಡಿತದ ಸಂದರ್ಭದಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸೆ ಸರಳವಾಗಿದೆ. ಇವುಗಳ ವಿಡಿಯೋಗಳು ಯೂ ಟ್ಯೂಬ್ ನಲ್ಲಿಯೂ ಲಭ್ಯವಿವೆ. ಪ್ರಥಮ ಚಿಕಿತ್ಸೆ ಮಾಡಿ ತಕ್ಷಣ ತಜ್ಞವೈಜ್ಞರ ಬಳಿ ಕರೆದುಕೊಂಡು ಹೋಗಬೇಕು. ಅವರು ಸೂಕ್ತ ಚಿಕಿತ್ಸೆ ನೀಡುತ್ತಾರೆ.
ತಮ್ಮ ಪ್ರಾಣ ರಕ್ಷಣೆಗಾಗಿ ಹಾವುಗಳು ಬಹು ಆಕ್ರಮಣಕಾರಿಯಾಗಿ ವರ್ತಿಸುತ್ತವೆ. ಆದ್ದರಿಂದ ಯಾವುದೇ ಕಾರಣಕ್ಕೂ ಯೂ ಟ್ಯೂಬ್ ನೋಡಿ ಹಾವು ಹಿಡಿಯುವ ಕಾರ್ಯಕ್ಕೆ ಮುಂದಾಗಬೇಡಿ. ಈ ಕಾರ್ಯ ಪ್ರಾಣಕ್ಕೂ ಸಂಚಕಾರ ತರಬಹುದು. ಎಚ್ಚರ !