ಲೇಖಕ: ಕುಮಾರ ರೈತ

ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರದೇಶ ಹುಲಿ ಸಂರಕ್ಷಿತಾರಣ್ಯ ಎಂದು ಘೋಷಿತವಾಗಿದೆ. ಆದ್ದರಿಂದ ಇಲ್ಲಿನ ಧಾರ್ಮಿಕ ಚಟುವಟಿಕೆಗಳಿಗೂ ನಿಯಮವಾಳಿಗಳ ನಿಯಂತ್ರಣವಿದೆ. ದೇಗುಲಕ್ಕೆ ಖಾಸಗಿ ವಾಹನಗಳಲ್ಲಿ ತೆರಳಲು ಅವಕಾಶವಿಲ್ಲ. ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ನೆರೆಯುವುದಕ್ಕೂ ಅನುಮತಿ ಇಲ್ಲ. ಹೀಗಿದ್ದೂ ಸಿನೆಮಾ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದು ಹೇಗೆ ಎಂದು ರೈತರು, ಪರಿಸರಾಸಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

“ಇವತ್ತು ಬೆಳಗ್ಗೆಯಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇಗುಲದ ಆವರಣದಲ್ಲಿ ಸಿನೆಮಾ ಚಿತ್ರೀಕರಣ ನಡೆಯುತ್ತಿದೆ.  ಸ್ಥಳೀಯ ರೈತರು ಹಬ್ಬಗಳ ಸಂದರ್ಭದಲ್ಲಿ ಬೆಟ್ಟದ ಮೇಲಕ್ಕೆ ತೆರಳಿ ಪೂಜೆ ಸಲ್ಲಿಸಲು ಅರಣ್ಯ ಇಲಾಖೆ ನೂರೆಂಟು ನಿಯಮಾವಳಿ ಹೇರುತ್ತದೆ. ಹೀಗಿರುವಾಗ  ಸಿನೆಮಾ ಶೂಟಿಂಗ್ ಮಾಡಲು ಅರಣ್ಯ ಇಲಾಖೆ ಹೇಗೆ ಅನುಮತಿ ಕೊಟ್ಟಿತು” ಎಂದು ಪರಿಸರವಾದಿ ಜೋಸೆಫ್ ಹೂವರ್ ಪ್ರಶ್ನಿಸಿದರು.

ಪರಿಸರವಾದಿ ಜೋಸೆಫ್ ಹೂವರ್

ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಯೋಜನೆ ನಿರ್ದೇಶಕ ಪ್ರಭಾಕರ್ ಅವರು ತಮ್ಮ ಕಚೇರಿಯಿಂದ  ಅನುಮತಿ ನೀಡಿಲ್ಲ. ಉನ್ನತ ಮಟ್ಟದಿಂದ ಬಂದ ಸೂಚನೆ ಮೇರೆಗೆ ಸಿನೆಮಾ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ ಎನ್ನುತ್ತಾರೆ. ಇದು ಹುಲಿ ಸಂರಕ್ಷಿತಾರಣ್ಯ. ಇಲ್ಲಿ ಸಿನೆಮಾ ಶೂಟಿಂಗ್ ಮಾಡಲು ಅವಕಾಶ ಇರುವುದಿಲ್ಲ ಎಂದು ಹೇಳಲು ಇವರಿಗೆ ಅಡ್ಡಿಯಾಗಿರುವುದೇನು ? ಅಷ್ಟಕ್ಕೂ ಉನ್ನತ ಮಟ್ಟದಿಂದ ಸೂಚನೆ ನೀಡಿದವರು ಯಾರು ? ನಿಯಮಗಳನ್ನು ರಕ್ಷಿಸಬೇಕಾದವರೇ ಅದನ್ನು ಮುರಿದರೆ ಕಾಡನ್ನು, ವನ್ಯಪ್ರಾಣಿಗಳನ್ನು ರಕ್ಷಿಸುವವರು ಯಾರು” ಎಂದು ಜೋಸೆಫ್ ಹೂವರ್ ಕೇಳಿದರು.

ಹಿಮವದ್ ಗೋಪಾಲಸ್ವಾಮಿ ದೇಗುಲದ ಸುತ್ತಮುತ್ತ ಹಗಲು ವೇಳೆಯಲ್ಲಿಯೂ ಕಾಡಾನೆಗಳು, ಹುಲಿ, ಚಿರತೆಗಳು ಸಂಚರಿಸುತ್ತವೆ. ಇಲ್ಲಿ ಜನರೇಟರ್, ಧ್ವನಿವರ್ಧಕಗಳನ್ನು ಬಳಸುವುದು, ಬೆಳಕಿನ ಪ್ರತಿಫಲಕಗಳನ್ನು, ಲೈಟುಗಳನ್ನು ಬಳಸುವುದು, ಹೆಚ್ಚು ಜನ ಗುಂಪುಗೂಡಿ ಕೂಗಾಡುವುದು ಸೂಕ್ಷ್ಮ ಪರಿಸರಕ್ಕೆ ಧಕ್ಕೆ ಉಂಟು ಮಾಡುತ್ತದೆ. ಅದೂ ಅಲ್ಲದೇ ದಿನವಿಡೀ ಡೀಸೆಲ್ ಚಾಲಿತ ಜನರೇಟರ್ ಬಳಕೆಯಿಂದ ಉಂಟಾಗುವ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಅಪಾರ. ಇವೆಲ್ಲವೂ ಅಲ್ಲಿನ ಪರಿಸರದ ಮೇಲೆ ದುಷ್ಪರಿಣಾಮ ಉಂಟು ಮಾಡುವುದರಿಂದ ವನ್ಯಪ್ರಾಣಿಗಳು ಗಲಿಬಿಲಿಯಾಗುತ್ತವೆ. ಅವುಗಳ ದೈನಂದಿನ ಸಂಚಾರದಲ್ಲಿ ವ್ಯತ್ಯಾಸಗಳಾಗುತ್ತವೆ.

ಈ ಎಲ್ಲ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತಾರಣ್ಯದಲ್ಲಿ ಸಿನೆಮಾ ಶೂಟಿಂಗ್ ಮಾಡಲು ಅವಕಾಶ ನೀಡುವುದಿಲ್ಲ. ಈಗ ಅವಕಾಶ ನೀಡಿರುವುದರಿಂದ ಮುಂದೆ ಬೇರೆಬೇರೆ ಸಿನೆಮಾ ತಂಡಗಳವರು ನಮಗೂ ಅನುಮತಿ ನೀಡಿ ಎಂಬ ಒತ್ತಾಯ ಹೇರುತ್ತಾರೆ. ಹೀಗೆ ಸಾಗುತ್ತಾ ಹೋದರೆ ಅಲ್ಲಿ ವನ್ಯಪ್ರಾಣಿಗಳ ಸಂರಕ್ಷಣೆ ಆಗುವುದಾದರೂ ಹೇಗೆ ? ಅವುಗಳು ನೆಮ್ಮದಿಯಿಂದ ಸಂಚರಿಸುವುದಾದರೂ ಹೇಗೆ ?

ಇದನ್ನೆಲ್ಲ ತಡೆಯಲು ಆಗಬೇಕಿರುವುದು ಸಿನೆಮಾ ಚಿತ್ರೀಕರಣಕ್ಕೆ ಅನುಮತಿ ಕೊಡಿಸಿದ ಪ್ರಭಾವಿ ಯಾರು ಎಂಬುದನ್ನು ತಿಳಿದು ಅವರ ಮೇಲೆ, ಹುಲಿ ಸಂರಕ್ಷಿತಾರಣ್ಯ ಯೋಜನಾ ನಿರ್ದೇಶಕರ ಮೇಲೆ ಹಾಗೂ ಚಿತ್ರೀಕರಣ ತಂಡದ ನಿರ್ದೇಶಕ – ನಿರ್ಮಾಪಕರ ಮೇಲೆ ಮೊಕದ್ದಮೆ ಹೂಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕಿದೆ.

Similar Posts

Leave a Reply

Your email address will not be published. Required fields are marked *