ಮನುಷ್ಯರ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಬೆಳ್ಳುಳ್ಳಿ ಪಾತ್ರ ಹಿರಿದು. ನಿಯಮಿತವಾಗಿ ಇದರ ಸೇವನೆ ಮಾಡುತ್ತಿದ್ದರೆ ಇತ್ತೀಚಿನ ‘ಲೈಫ್ ಸ್ಟೈಲ್’ ಕಾಯಿಲೆಗಳನ್ನು ದೂರವಿಡಬಹುದು. ಕಾಯಿಲೆ ಬಂದಿದ್ದ ಸಂದರ್ಭದಲ್ಲಿ ಗುಣಪಡಿಸಲೂ ಬೆಳ್ಳುಳ್ಳಿ ಉಪಯುಕ್ತ. ಮಾರಕ ಕಾಯಿಲೆಗಳನ್ನು ತಡೆಯುವ ಶಕ್ತಿ ಇದಕ್ಕಿದೆಯೆಂದು ಸಂಶೋಧನೆಗಳು ದೃಢಪಡಿಸಿವೆ. ಮನುಷ್ಯರಿಗೆ ಇಷ್ಟೆಲ್ಲ ಉಪಯುಕ್ತವಾದ ಬೆಳ್ಳುಳ್ಳಿ, ಬೆಳೆಗೆ ಬರುವ ರೋಗಗಳನ್ನು ಹಾನಿಕಾರಕ ಕೀಟಗಳನ್ನು ತಡೆಗಟ್ಟಬಹುದು
ಕೀಟನಾಶಕ ತಯಾರಿಕೆ:
1.ಬೆಳ್ಳುಳ್ಳಿ ತೈಲ ಮತ್ತು ಸಾಬೂನು ದ್ರಾವಕ: 950 ಮಿಲಿ ಲೀಟರ್ ಶುದ್ದ ನೀರು, 50 ಮಿಲಿ ಲೀಟರ್ ಬೆಳ್ಳುಳ್ಳಿರಸ ಮತ್ತು 1 ಮಿಲಿ ಲೀಟರ್ ಸಾಬೂನು ದ್ರಾವಕ(ಸಾಬೂನನ್ನು ನೀರಿನಲ್ಲಿ ಕಲಕಿದಾಗ ದೊರೆಯುವ ದ್ರಾವಣ. ಇದನ್ನು ಸ್ವಚ್ಚ ಬಟ್ಟೆಯಲ್ಲಿ ಸೋಸಿಕೊಳ್ಳಬೇಕು. ಈ ದ್ರಾವಕ ಬೆಳ್ಳುಳ್ಳಿ ರಸದ ಅಂಶ ಎಲೆಗಳ ಮೇಲೆ ಕೂರುವಂತೆ ಮಾಡುತ್ತದೆ) ಇವುಗಳನ್ನು ಮಿಶ್ರಣ ಮಾಡಿ ಚೆನ್ನಾಗಿ ಕಲಕಬೇಕು. ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ಕೀಟನಾಶಕ ದ್ರಾವಣ ತಯಾರಿಸಿಕೊಳ್ಳಬೇಕು. ಬಳಸಬೇಕಾದ ವಸ್ತುಗಳ ಪ್ರಮಾಣ ಹೇಗಿರಬೇಕು ಎಂದು ಗಮನದಲ್ಲಿಟ್ಟುಕೊಳ್ಳಬೇಕು
2.ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ರಸ: ಹಸಿರು ಮೆಣಸಿನಕಾಯಿ ಮತ್ತು ಬೆಳ್ಳುಳಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇವೆರಡನ್ನೂ ಒಟ್ಟಿಗೆ ಚೆನ್ನಾಗಿ ಜಜ್ಜಿಕೊಳ್ಳಬೇಕು. ಈ ಪ್ರಮಾಣದ ಇನ್ನೂರಷ್ಟು ನೀರಿನಲ್ಲಿ ಬೆರಸಬೇಕು. ಇದನ್ನು ಚೆನ್ನಾಗಿ ಕಲಕಿದ ನಂತರ ಸೋಸಿಕೊಳ್ಳಬೇಕು. ಇದನ್ನು ಸಿಂಪಡಿಸುವುದರಿಂದ ಸಸ್ಯಹೇನು ನಿಯಂತ್ರಣಗೊಳ್ಳುತ್ತದೆ.
3.ಬೆಳ್ಳುಳ್ಳಿ ಗಡ್ಡೆಯ ರಸ:85 ಗ್ರಾಂ ಪ್ರಮಾಣದಲ್ಲಿ ಬೆಳ್ಳುಳ್ಳಿ ತೆಗೆದುಕೊಂಡು ಚೆನ್ನಾಗಿ ಜಜ್ಜಬೇಕು. ಇದಕ್ಕೆ 50 ಮಿಲಿ ಲೀಟರ್ ಸೀಮೇಎಣ್ಣೆ ಬೆರೆಸಬೇಕು. ಈ ಮಿಶ್ರಣವನ್ನು 24 ಗಂಟೆ ಅವಧಿ ಬಿಡಬೇಕು. ನಂತರ ಇದಕ್ಕೆ 450 ಮಿಲಿ ಲೀಟರ್ ನೀರು ಮತ್ತು 10 ಮಿಲಿ ಲೀಟರ್ ಸಾಬೂನು ದ್ರಾವಕ ಬೆರೆಸಬೇಕು. ಈ ಮಿಶ್ರಣವನ್ನು ಚೆನ್ನಾಗಿ ಕಲಕಿ ಸೋಸಿಕೊಳ್ಳಬೇಕು. ಈ ದ್ರಾವಕವನ್ನು ಮುಂಜಾನೆ ವೇಳೆ ಸಿಂಪಡಿಸುವುದರಿಂದ ಕೀಟಗಳ ಬಾಧೆ ತಡೆಯಲು ಸಹಾಯಕ.
4. ಬೆಳ್ಳುಳ್ಳಿ ಮತ್ತು ಕರಿಮೆಣಸಿನ ರಸ: ದಪ್ಪವಾಗಿರುವ ಎರಡು ಬೆಳ್ಳುಳ್ಳಿ ತೆಗೆದುಕೊಂಡು ಜಜ್ಜಿಕೊಳ್ಳಬೇಕು. ಇದಕ್ಕೆ ಎರಡು ಚಮಚೆ ಪ್ರಮಾಣದ ಕರಿಮೆಣಸು ಬೆರೆಸಬೇಕು. ಇದನ್ನು 4 ಲೀಟರ್ ಕುದಿಯುವ ನೀರಿನಲ್ಲಿ ಸೇರಿಸಬೇಕು. ಇದಕ್ಕೆ ಒಂದು ಗೇರು ಬೀಜದಷ್ಟು ಗಾತ್ರದ ಸಾಬೂನು ಚೂರು ಹಾಕಿ ಚೆನ್ನಾಗಿ ಕಲಕಬೇಕು. ಹಣ್ಣಿನ ಗಿಡಗಳನ್ನು ಬಾಧಿಸುವ ಕೀಟಗಳನ್ನು ನಿಯಂತ್ರಿಸಲು ಇದನ್ನು ಬಳಸಬಹುದು
5.ಬೆಳ್ಳುಳ್ಳಿ ಮತ್ತು ಬೇವಿನರಸದ ಮಿಶ್ರಣ: 1 ಕೆಜಿ ಬೆಳ್ಳುಳ್ಳಿ, 10 ಕೆಜಿ ಬೇವಿನ ಹಸಿ ಎಲೆ, ಅರ್ಧ ಕೈ ಹಿಡಿಯಷ್ಟು ಬೇವಿನ ಬೀಜ ಅರ್ಧ ಕೆಜಿಯಷ್ಟು ಬೇವಿನ ಮರದ ಕಾಂಡ ಹಾಗೂ ಬೇರು ಶೇಖರಿಸಬೇಕು. ಇವುಗಳನ್ನು ಚೆನ್ನಾಗಿ ಕೊಚ್ಚಿಕೊಂಡು 12 ಲೀಟರ್ ಶುದ್ದ ನೀರಿನಲ್ಲಿ ಬೆರೆಸಬೇಕು. ಇದು ಅರ್ಧ ಪ್ರಮಾಣಕ್ಕೆ ಬರುವವರೆಗೆ ತಾಮ್ರ ಅಥವಾ ಮಣ್ಣಿನ ಪಾತ್ರೆಯಲ್ಲಿ ಕುದಿಸಬೇಕು. ಬೇವಿನಬೀಜ ದೊರೆಯದಿದ್ದ ಸಂದರ್ಭದಲ್ಲಿ 50 ಗ್ರಾಂನಷ್ಟು ಬೇವಿನೆಣ್ಣೆ ಬಳಸಬಹುದು. ಕುದಿಸಿದ ನೀರು ತಂಪಾಗುವವರೆಗೂ ಇಡಬೇಕು. ನಂತರ ಇದನ್ನು ಚೆನ್ನಾಗಿ ಕಲಕಿ ಸೋಸಿಕೊಳ್ಳಬೇಕು.
ಮಿಶ್ರಣವನ್ನು ಶೋಧಿಸಿದ ನಂತರ ಉಳಿಯುವ ತ್ಯಾಜ್ಯವನ್ನು ಎಸೆಯಬಾರದು. ಇದನ್ನು ಮತ್ತೆ ಚೆನ್ನಾಗಿ ಜಜ್ಜಿ, ಸ್ವಲ್ಪ ಪ್ರಮಾಣದಲ್ಲಿ ಬೇವಿನೆಣ್ಣೆ ಹಾಗೂ ಅರಿಶಿಣ ಸೇರಿಸಬೇಕು. ಇವುಗಳನ್ನು ಕುದಿಸಿದ ನೀರಿನಲ್ಲಿ ಚೆನ್ನಾಗಿ ಕಲಕಬೇಕು. ನೀರು ತಂಪಾದ ನಂತರ ಮತ್ತೆ ಕಲಕಿ ಬೆಳೆಗಳ ಮೇಲೆ ಎರಚಬಹುದು. ಇದು ಕೂಡ ರೋಗಾಣುಯುಕ್ತ ಕೀಟ ಮತ್ತು ಬೆಳೆಗಳ ಸಂಪರ್ಕ ತಡೆಯುತ್ತದೆ.
ಬೆಳ್ಳುಳ್ಳಿ ಮತ್ತು ಬೇವಿನರಸದ ಮಿಶ್ರಣವನ್ನು 4 ರಿಂದ 5 ವಾರಗಳವರೆಗೆ ಮುಚ್ಚಳವಿರುವ ಜಾಡಿ ಅಥವಾ ಬ್ಯಾರೆಲ್ನಲ್ಲಿ ಹಾಕಿ ಮುಚ್ಚಿಡಬೇಕು. ನಂತರ ಒಂದು ಲೀಟರ್ ನೀರಿಗೆ 9 ಲೀಟರ್ ಶುದ್ದ ನೀರು ಬೆರೆಸಿ ಚೆನ್ನಾಗಿ ಕಲಕಿ ಸೋಸಿಕೊಂಡು ಬೆಳೆಗಳಿಗೆ ಸಿಂಪಡಿಸಬೇಕು. ತಂಪಾದ ವಾತಾವರಣವಿರುವ ಸಮಯದಲ್ಲಿ ಇದನ್ನು ಸಿಂಪಡಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ
ಕೀಟಗಳು ಉಂಟು ಮಾಡುವ ತೊಂದರೆಗಳು:
1. ಸಸ್ಯಹೇನು: ದ್ವಿದಳ ಧಾನ್ಯದ ಬೆಳೆಗಳು, ಸೋರೆಕಾಯಿ, ನಿಂಬೆ ಜಾತಿಯ ಸಸ್ಯಗಳಲ್ಲಿ ಇವು ಹೆಚ್ಚು ತೊಂದರೆಯುಂಟು ಮಾಡುತ್ತವೆ.ಇದರಿಂದ ನಂಜುರೋಗ, ಗುಚ್ಚರೋಗ, ಸೌತೇಕಾಯಿ ನಂಜುರೋಗ ಮುಂತಾದ ಸಸ್ಯರೋಗಗಳು ಹರಡುತ್ತವೆ. ಇದಲ್ಲದೇ ಈ ಕೀಟಗಳು ಸಸ್ಯಗಳ ರಸ ಹೀರುತ್ತವೆ. ಇದರಿಂದ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತವೆ. ಎಲೆಗಳು ಸಹಜ ಆಕಾರ ಕಳೆದುಕೊಳ್ಳುತ್ತವೆ. ಸಸ್ಯಹೇನುಗಳು ರಸ ಸ್ರವಿಸುವುದರಿಂದ ಎಲೆಗಳ ಮೇಲೆ ಬೂಷ್ಟು ಅಣುಜೀವಿಗಳು ವೃದ್ದಿಗೊಳ್ಳುತ್ತವೆ. ಇದರಿಂದ ಎಲೆಗಳ ದ್ಯುತಿ ವಿಶ್ಲೇಷಣಾ ಕ್ರಿಯೆಗೆ ಅಡ್ಡಿಯಾಗುತ್ತದೆ.
ಸಸ್ಯ ಹೇನುಗಳ ನಿಯಂತ್ರಣಕ್ಕೆ ಸೂಚಿಸದ ಸಾರಗಳಲ್ಲಿ ಯಾವುದಾದರೊಂದು ಸಾರ ಸಿಂಪಡಿಸಬಹುದು
2. ಹತ್ತಿಯ ಕಲೆ ತಿಗಣೆ: ಇದರ ವಯಸ್ಕ ಮತ್ತು ಮರಿಕೀಟಗಳು ಹಸಿರು ಹತ್ತಿಕಾಯಿ ತಿನ್ನುತ್ತವೆ. ಇದರಿಂದ ಹತ್ತಿಬೀಜದ ತೈಲ ಅಂಶ ಕಡಿಮೆಯಾಗುತ್ತದೆ. ನಾರು ಗುಣಮಟ್ಟ ಕಡಿಮೆಯಾಗುತ್ತದೆ. ಜೊತೆಗೆ ಈ ಕೀಟಗಳು ಸ್ರವಿಸುವ ಸ್ರವ ಹತ್ತಿಯಲ್ಲಿ ಕಲೆ ಉಂಟು ಮಾಡುತ್ತದೆ. ಇದರ ಸ್ರವಿಕೆಯಿಂದ ಬೂಷ್ಟು ಬೆಳೆಯುತ್ತದೆ.
ಈ ಕೀಟ ಬಾಧೆ ತಡೆಗಟ್ಟಲು-ನಿಯಂತ್ರಿಸಲು ಸೂಚಿಸಿರುವ ಸಾರಗಳಲ್ಲಿ ಸೂಕ್ತವೆನ್ನಿಸಿದ್ದನ್ನು ಬಳಸಬಹುದು
3. ಆಲೂಗಡ್ಡೆ ಹುಳು: ಬೆಳೆ ಹಂತದಲ್ಲಿ ಈ ಕೀಟಗಳು ಬಾಧಿಸುವುದಿಲ್ಲ. ದಾಸ್ತಾನು ಮಾಡಿರುವ ಆಲೂಗೆಡ್ಡೆಯನ್ನು ಹಾಳು ಮಾಡುತ್ತವೆ. ಇದರಿಂದ ಆಲೂಗೆಡ್ಡೆ ಗುಣಮಟ್ಟ ಕಳೆದುಕೊಳ್ಳುತ್ತದೆ. ಇದರ ಮರಿಹುಳುಗಳು ಗೆಡ್ಡೆ ಕೊರೆದು ರಸ ಹೀರುತ್ತವೆ. ಇದರ ನಿಯಂತ್ರಣಕ್ಕೆ ಬೆಳ್ಳುಳ್ಳಿ ಗೆಡ್ಡೆ ರಸ, ಬೆಳ್ಳುಳ್ಳಿ ತೈಲ-ಸಾಬೂನು ದ್ರಾವಕ ಬಳಸಬಹುದು.
4. ದುಂಡುಹುಳು: ದ್ವಿದಳ ಧಾನ್ಯದ ಬೆಳೆಗಳು, ತರಕಾರಿ, ಭತ್ತ, ಜೋಳ, ನಿಂಬೆ ಜಾತಿಯ ಬೆಳೆಗಳನ್ನು ಹಾಳು ಮಾಡುತ್ತವೆ. ಈ ಬೆಳೆಗಳು ಸಸಿಮಡಿ ಹಂತದಲ್ಲಿರುವಾಗಲೇ ಎಲೆಗಳನ್ನು ತಿನ್ನುತ್ತವೆ. ಇದರಿಂದ ನಡು ದಿಂಡು ಮಾತ್ರ ಉಳಿಯುತ್ತದೆ. ಜೊತೆಗೆ ಬೆಳೆ ಪುಷ್ಪದ ಕೆಳಭಾಗ ಹಾನಿಗೊಳಗಾಗುತ್ತದೆ. ಇದರ ನಿಯಂತ್ರಣಕ್ಕೆ ಬೆಳ್ಳುಳ್ಳಿ ತೈಲ-ಸಾಬೂನು ದ್ರಾವಕ 2 ಬೆಳ್ಳುಳ್ಳಿ ಮೆಣಸಿನ ಸಾರ 3. ಬೆಳ್ಳುಳ್ಳಿ ಬೇವಿನ ಸಾರ 4 ಬೆಳ್ಳುಳ್ಳಿ ಗಡ್ಡೆ ಸಾರ ಬಳಸಬಹುದು
5.ಈರುಳ್ಳಿ ಥ್ರಿಪ್ಸ್: ಬಟಾಣಿ, ಟೊಮ್ಯಾಟೋ ಮತ್ತು ಈರುಳ್ಳಿ ತಿಂದು ಹಾಳು ಮಾಡುತ್ತವೆ. ಇದರ ಬಾಧೆಯಿಂದ ಸಸ್ಯದ ಎಲೆಗಳು ಹಸಿರು ಬಣ್ಣ ಕಳೆದುಕೊಳ್ಳುತ್ತವೆ. ಎಲೆಗಳು ಆಕಾರ ಕಳೆದುಕೊಳ್ಳುತ್ತವೆ. ಈ ಕೀಟದಿಂದ ನಂಜುರೋಗ, ಹತ್ತಿಎಲೆ ಸುರುಳಿರೋಗ, ತಂಬಾಕು ಎಲೆಸುರುಳಿ ರೋಗ ಮತ್ತು ಸಿಹಿಗೆಣಸು ವೈರಸ್-ಬಿ ರೋಗಗಳು ಹರಡುತ್ತವೆ. ಇದರ ನಿಯಂತ್ರಣಕ್ಕೆ ಹಸಿಮೆಣಸಿನಕಾಯಿ-ಬೆಳ್ಳುಳ್ಳಿ ಸಾರ 2 ಬೆಳ್ಳುಳ್ಳಿ ಗೆಡ್ಡೆ ಸಾರ 3. ಬೆಳ್ಳುಳ್ಳಿ ಮತ್ತು ಬೇವಿನ ಸಾರ ಸಿಂಪಡಿಸಬಹುದು
6.ಕಬ್ಬು ಸುಳಿಕೊರಕ: ಈ ಕೀಟಗಳು ಕಬ್ಬಿನ ಕಾಂಡದಲ್ಲಿ ರಂಧ್ರ ಮಾಡಿ ತಿರುಳಿನ ಭಾಗ ತಿನ್ನಲು ಪ್ರಾರಂಬಿಸುತ್ತವೆ. ಇದರಿಂದ ಕಬ್ಬಿನ ಸುಳಿ ಒಣಗುತ್ತದೆ. ಈ ಕೀಟಗಳು ಕಬ್ಬಿನ ಬೆಳವಣಿಗೆಯ ಮೊದಲ 1ರಿಂದ 3 ತಿಂಗಳ ಅವಧಿಯಲ್ಲಿ ಬಾಧೆ ಉಂಟು ಮಾಡುತ್ತವೆ.
ಇದರ ನಿಯಂತ್ರಣಕ್ಕೆ ಬೆಳ್ಳುಳ್ಳಿ ಬೇವಿನಸಾರ 2 ಬೆಳ್ಳುಳ್ಳಿ ಗಡ್ಡೆ ರಸ ಬಳಸಬಹುದು
7. ಬಿಳಿನೊಣ: ತಂಬಾಕು, ಆಲೂಗೆಡ್ಡೆ, ಬೆಂಡೆ, ಹತ್ತಿ, ಸೂರ್ಯಕಾಂತಿ, ಹುರುಳಿ, ಸೋರೇಕಾಯಿ ಇತ್ಯಾದಿ ಬೆಳೆ ಬಾಧಿಸುತ್ತವೆ. ಈ ಕೀಟಗಳು ಎಲೆ ತಿನ್ನುತ್ತವೆ. ಇದರಿಂದ ಸಸ್ಯದ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಉಳಿಕೆ ಎಲೆ ಮೇಲೆ ದ್ರವ ಸ್ರವಿಸುವುದರಿಂದ ಬೂಷ್ಟು ಬೆಳೆಯಲು ಕಾರಣವಾಗುತ್ತದೆ. ಇದರಿಂದ ವೈರಸ್ ರೋಗಗಳಾದ ಕಸವಾ ನಂಜುರೋಗ, ಹತ್ತಿಎಲೆ ಸುರುಳಿರೋಗ ಹರಡುತ್ತವೆ.
ಇದರ ನಿಯಂತ್ರಣಕ್ಕೆ ಹಸಿಮೆಣಸಿನ ಕಾಯಿ-ಬೆಳ್ಳುಳ್ಳಿ ಸಾರ 2. ಹಸುವಿನ ಗಣಜಲ ಮಿಶ್ರಣದ ಬೆಳ್ಳುಳ್ಳಿ ಸಾರ 3. ಬೆಳ್ಳುಳ್ಳಿ ತೈಲ-ಸಾಬೂನು ದ್ರಾವಕ ಬಳಸಬಹುದು
8. ಜೇಡರ ನುಸಿ: ಟೊಮ್ಯಾಟೋ, ಜೋಳ, ಭತ್ತ, ಕಬ್ಬು, ಟೋಮ್ಯಾಟೋ, ಬದನೆ, ಬೆಂಡೆ ಬೆಳೆಗಳನ್ನು ಬಾಧಿಸುತ್ತವೆ. ಈ ಕೀಟಗಳು ಎಲೆಗಳನ್ನು ಭಕ್ಷಿಸುತ್ತವೆ. ಇದರಿಂದ ಎಲೆಗಳು ಹಸಿರು ಬಣ್ಣ ಮತ್ತು ಆಕಾರ ಕಳೆದುಕೊಳ್ಳುತ್ತವೆ. ಇದರಿಂದ ಸಸ್ಯದ ಬೆಳವಣಿಗೆಗೆ ಅಡ್ಡಿಯಾಗುತ್ತದೆ.
ಈ ಕೀಟಗಳ ನಿಯಂತ್ರಣಕ್ಕೆ 1.ಬೆಳ್ಳುಳ್ಳಿ-ಬೇವಿನ ಸಾರ 2. ಹಸಿಮೆಣಸಿನಕಾಯಿ-ಬೆಳ್ಳುಳ್ಳಿ ಸಾರ 3. ಹಸು ಗಂಜಲ ಮತ್ತು ಬೆಳ್ಳುಳ್ಳಿ ಮಿಶ್ರಣ ಸಿಂಪಡಿಸಬಹುದು
9.ಗಂಟುಬೇರಿನ ಜಂತುಹುಳು: ಬಾರ್ಲಿ, ಗೋಧಿ, ಕಬ್ಬು, ಮೆಣಸಿನಕಾಯಿ, ಚಹಾ, ಹತ್ತಿ ಬೆಳೆಗಳನ್ನು ಬಾಧಿಸುತ್ತವೆ. ಈ ಹುಳುಗಳು ತಿಂದ ಸಸ್ಯದ ಭಾಗದಲ್ಲಿ ದೊಡ್ಡದಾದ ಕೋಶಗಳು ಉಂಟಾಗುತ್ತವೆ. ಇದರ ಅಕ್ಕ-ಪಕ್ಕದ ಸಂಯೋಜಕ ಅಂಗಾಂಶಗಳು ಅಸಹಜವಾಗಿ ದೊಡ್ಡದಾಗುತ್ತವೆ. ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಸಸ್ಯದ ಎಲೆಗಳು ಬಿಳಚಿಕೊಳ್ಳುತ್ತವೆ.
ಕೀಟ ಬಾಧೆ ತಡೆಯಲು ಮತ್ತು ನಿಯಂತ್ರಿಸಲು 1 ಬೆಳ್ಳುಳ್ಳಿ ಗಡ್ಡೆ ಸಾರ, ಬೆಳ್ಳುಳ್ಳಿ ತೈಲ-ಸಾಬೂನು ದ್ರಾವಕ ಇವೆರಡರಲ್ಲಿ ಒಂದನ್ನು ತೆಗೆದುಕೊಳ್ಳಬೇಕು. ಇದರಲ್ಲಿ ಸಸಿಗಳನ್ನು ಅದ್ದಿ ನಾಟಿ ಮಾಡಬೇಕು.
ಬೆಳ್ಳುಳ್ಳಿಯಲ್ಲಿರುವ ರಾಸಾಯನಿಕ ದ್ರವಕ್ಕೆ ಕಟುವಾದ ವಾಸನೆಯಿದೆ. ಇದು ಭಾರಿ ಕಹಿ ಹಾಗೂ ಅಷ್ಟೇ ತೀಷ್ಣ. ಬೆಳ್ಳುಳ್ಳಿ ಸಸ್ಯದ ಎಲ್ಲ ಭಾಗಗಳಿಗೂ ಕೀಟ ವಿಕರ್ಷಕ ಗುಣವಿದೆ. ಇದರ ಭಾಗಗಳನ್ನು ಹಸಿಯಾಗಿ ಅಥವಾ ಒಣಗಿದ ರೂಪದಲ್ಲಿ ಬಳಸಬಹುದು. ಕೀಟ ನಿಯಂತ್ರಣಕ್ಕಾಗಿ ಬೆಳ್ಳುಳ್ಳಿ ದ್ರವ ಬಳಸಿದ ಸಂದರ್ಭದಲ್ಲಿ ಹೆಚ್ಚು ದಿನ ನೆನಸಿಡಬೇಕಾದ ಅಗತ್ಯವಿಲ್ಲ. ಒಮ್ಮೆ ಇದರ ದ್ರವ ಸಿಂಪಡಿಸಿದರೆ ಅದರ ಪ್ರಭಾವ ಎರಡು ವಾರ ಇರುತ್ತದೆ.
ಪರಿಣಾಮಕಾರಿ ನಿಯಂತ್ರಣ: ರಾಸಾಯನಿಕ ಕೀಟನಾಶಕಗಳು ಕೀಟಗಳ ನಿಯಂತ್ರಣ ಮಾಡಿದರೂ ಪರಿಸರಕ್ಕೆ ಮಾರಕ. ಆಹಾರಧಾನ್ಯ, ಅಂತರ್ಜಲ ಕಲುಷಿತಗೊಳ್ಳುತ್ತದೆ. ರಾಸಾಯನಿಕ ಕೀಟನಾಶಕಗಳ ವಿರುದ್ದ ಕೀಟಗಳು ಬೇಗನೇ ಕೀಟನಾಶಕ ನಿರೋಧಕ ಗುಣ ಬೆಳಸಿಕೊಳ್ಳುತ್ತವೆ. ಆದರೆ ಬೆಳ್ಳುಳ್ಳಿಯಂಥ ಸಸ್ಯಜನ್ಯ ಕೀಟನಾಶಕಗಳ ವಿರುದ್ದ ಈ ರೀತಿ ನಿರೋಧಕ ಶಕ್ತಿ ಬೆಳಸಿಕೊಳ್ಳಲು ಕೀಟಗಳಿಂದ ಆಗುವುದಿಲ್ಲ. ಬೆಳೆಗಳಿಗೆ ಎಲ್ಲ ರೀತಿಯ ಕೀಟಗಳೂ ಮಾರಕವಲ್ಲ. ಮಾರಕವಾದ ಕೀಟಗಳ ಸಂಖ್ಯೆ ಅತ್ಯಲ್ಪ. ಪರಿಸರದಲ್ಲಿ ಕಡಿಮೆ ಹಸ್ತಕ್ಷೇಪ ಮಾಡಿದಷ್ಟು ಮಾರಕ ಕೀಟಗಳನ್ನು ಪರಭಕ್ಷಕ ಕೀಟಗಳೇ ನಿಯಂತ್ರಿಸುವುದು ಕಂಡು ಬರುತ್ತದೆ. ಆದ್ದರಿಂದ ಬೆಳೆ ಹಾಳು ಮಾಡುವ ಕೀಟಗಳು ಕಂಡು ಬಂದ ಸಂದರ್ಭದಲ್ಲಿ ಮಾರಕ ರಾಸಾಯನಿಕ ಕೀಟನಾಶಕಗಳ ಸಿಂಪಡಣೆ ಮಾಡಬಾರದು. ಬದಲಿಗೆ ಸಸ್ಯಜನ್ಯ ಕೀಟನಾಶಕಗಳನ್ನೇ ಸಿಂಪಡಿಸಬೇಕು
ಬೆಳೆಗಳನ್ನು ಬಾಧಿಸುವ ಕೀಟಗಳು: ಸಸ್ಯ ಹೇನುಗಳು, ಹತ್ತಿಯ ಕಲೆ ತಿಗಣೆ, ಆಲೂಗಡ್ಡೆ ಹುಳ್ಳು, ಕಬ್ಬು ಸುಳಿ ಕೊರಕ, ಈರುಳ್ಳಿ ಥ್ರಿಪ್ಸ್, ದುಂಡುಹುಳು, ಅಮೆರಿಕನ್ ಹತ್ತಿ ಕಾಯಿಕೊರಕ, ಬಿಳಿನೊಣ, ಜೇಡರನುಸಿ, ಗಂಟುಬೇರಿನ ಜಂತುಹುಳು
ಸಂಗ್ರಹಿತ ಧಾನ್ಯ ಬಾಧಿಸುವ ಕೀಟಗಳು: ಖಾಪ್ರಾ ದುಂಬಿ, ಕಾಳು ಕೊರಕ ಇತ್ಯಾದಿ ಕೀಟಗಳು
ಸಸ್ಯರೋಗ ನಿಯಂತ್ರಣ: ಭತ್ತದ ಬೆಂಕಿರೋಗ, ಭತ್ತದ ಕಂದು ಎಲೆ ಚುಕ್ಕಿ ರೋಗ
ದಾಸ್ತಾನು ಬಾಧಿಸುವ ಕೀಟ ನಿಯಂತ್ರಣ
1.ಕಾಳುಕೊರಕ ದುಂಬಿ: ಈ ಕೀಟ ತೊಗರಿ, ಸೋಯಾಬೀನ್,ಕಡಲೆಕಾಳು ಹಾಗೂ ಇತರ ಸಂಗ್ರಹಿಸಿದ ಧಾನ್ಯಗಳನ್ನು ಬಾಧಿಸುತ್ತವೆ. ಕಾಳುಗಳನ್ನು ಕೊರೆದು ತಿರುಳನ್ನು ತಿನ್ನುತ್ತವೆ. ಇದರಿಂದ ಕಾಳು ಟೊಳ್ಳಾಗುತ್ತದೆ. ಇದರ ನಿಯಂತ್ರಣಕ್ಕಾಗಿ ಬೆಳ್ಳುಳ್ಳಿ ಎಲೆಗಳನ್ನು ಒಣಗಿಸಿ ಪುಡಿಮಾಡಿ ಧಾನ್ಯ-ಕಾಳುಗಳೊಡನೆ ಬೆರಸಬೇಕು.
2. ಖಾಪ್ರಾ ದುಂಬಿ: ಇದು ಕಡಲೇಕಾಯಿ ಬೀಜ ಮತ್ತು ಇತರ ಧಾನ್ಯಗಳನ್ನು ಭಕ್ಷಿಸುತ್ತವೆ. ಮರಿದುಂಬಿ ಹಂತದಲ್ಲಿರುವಾಗಲೇ ಕಾಳನ್ನು ಕೊರೆದು ಒಳಗಿರುವ ತಿರುಳು ತಿನ್ನುತ್ತವೆ. ಆಹಾರ ದೊರೆಯದಿದ್ದ ಸಂದರ್ಭದಲ್ಲಿಯೂ ಟೊಳ್ಳಿನ ಭಾಗದಲ್ಲಿಯೇ ಒಂದು ವರ್ಷಕ್ಕೂ ಹೆಚ್ಚುಕಾಲ ಜೀವಿಸಿರುತ್ತವೆ. ಇದರ ನಿಯಂತ್ರಣಕ್ಕೆ ಕಾಳುಕೊರಕ ದುಂಬಿ ನಿಯಂತ್ರಿಸಲು ಬಳಸುವ ವಿಧಾನವನ್ನೇ ಬಳಸಬಹುದು.
ಅಂತರ ಬೆಳೆ: ಎಲೆಕೋಸಿನ ಬೆಳೆಯೊಂದಿಗೆ ಬೆಳ್ಳುಳ್ಳಿ ಮತ್ತು ಟೊಮ್ಯಾಟೋವನ್ನು ಅಂತರಬೆಳೆಯಾಗಿ ಬೆಳೆಯಬೇಕು. ಇದರಿಂದ ಕೋಸು ಬಾಧಿಸುವ ವಜ್ರಬೆನ್ನಿನ ಪತಂಗದ ಬಾಧೆಯನ್ನು ನಿಯಂತ್ರಿಸಬಹುದು. ಎಲೆಕೋಸು ಬೆಳೆಯುವುದಕ್ಕೆ 2ರಿಂದ4 ವಾರಗಳ ಮುಂಚಿತವಾಗಿ ಬೆಳ್ಳುಳ್ಳಿ ಮತ್ತು ಟೊಮ್ಯಾಟೋ ಬೆಳೆಸಬೇಕು.
ಜೋಳದ ಸುಳಿ ನೊಣ ಹತೋಟಿಗಾಗಿ ಇದನ್ನೂ ಅಂತರಬೆಳೆಯಾಗಿ ಬೆಳೆಸಬಹುದು. ಇದರಿಂದ ಇಳುವರಿಯೂ ಅಧಿಕವಾಗುತ್ತದೆ. ಭತ್ತದ ಬೆಂಕಿರೋಗ ಮತ್ತು ಭತ್ತದ ಕಂದು ಎಲೆ ಚುಕ್ಕಿರೋಗ ನಿಯಂತ್ರಣಕ್ಕೂ ಬೆಳ್ಳುಳ್ಳಿ ಬಳಕೆ ಮಾಡಬಹುದು. 1.ಬೆಳ್ಳುಳ್ಳಿ ಗೆಡ್ಡೆರಸ 2 ಬೆಳ್ಳುಳ್ಳಿ ತೈಲ-ಸಾಬೂನು ದ್ರಾವಕ 3. ಹಸುವಿನ ಗಂಜಲ ಮತ್ತು ಬೆಳ್ಳುಳ್ಳಿ ಸಾರವನ್ನು ಸಿಂಪಡಿಸಬಹುದು
Super sir, pomegranate geed vanaakatha edde mathu hoovu settings bhagee, manee medicine bhgge mahiti needi