ಕೃಷಿಯ ಜೊತೆಜೊತೆಗೆ ಪೂರಕ ಉಪಕುಸುಬುಗಳು ಇರಬೇಕು. ಆಗಷ್ಟೆ ಸುಸ್ಥಿರ ಮಾದರಿ ಕೃಷಿಬದುಕು ನಡೆಸಲು ಸಾಧ್ಯವಾಗುತ್ತದೆ. ಕೃಷಿಯೊಂದನ್ನೇ ನೆಚ್ಚಿಕೊಂಡು ಬದುಕುವುದು ಕಷ್ಟಕರ. ಅದರಲ್ಲಿಯೂ ಸಣ್ಣ ಮತ್ತು ಅತಿಸಣ್ಣ ರೈತರು ಕೃಷಿಯೊಂದನ್ನೇ ನಂಬಿ ಬದುಕುವುದು ಸವಾಲಿನ ಸಂಗತಿ. ಆದ್ದರಿಂದ ಕೊಂಚ ಪರಿಣತಿ ಇರುವ, ಆಸಕ್ತಿ ಇರುವ ಉಪಕುಸುಬುಗಳನ್ನು ಸಹ ಮಾಡುವುದು ಅತ್ಯಗತ್ಯ. ಕ್ರಮೇಣ ಇಂಥ ಉಪ ಕಸುಬು ಪ್ರಧಾನ ವೃತ್ತಿಯೇ ಆಗಿ ಪರಿಣಮಿಸಬಹುದು.


ಕರ್ನಾಟಕ ರಾಜ್ಯದಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೃಷಿಕರ ಸಂಖ್ಯೆಯೇ ಹೆಚ್ಚು. ಚಿಕ್ಕಚಿಕ್ಕ ಹಿಡುವಳಿಗಳ ಕಾರಣ ಇವರು ಕೃಷಿಯನ್ನೇ ನೆಚ್ಚಿಕೊಂಡಿರುವುದು ಲಾಭಕಾರಿಯಲ್ಲ. ಅದರಲ್ಲಿಯೂ ಏಕಬೆಳೆ ಪದ್ಧತಿ ಅನುಸರಿಸುವುದು ಬಹಳ ಅಪಾಯಕಾರಿ. ಹವಾಮಾನದ ವೈಪರಿತ್ಯದಿಂದ ಹಾಕಿದ ಬೆಳೆ ಬಾರದಿರುವ ಸಾಧ್ಯತೆಗಳೂ ಇವೆ. ಆದ್ದರಿಂದ ಎಲ್ಲ ವಿಚಾರಗಳನ್ನು ಸಮಗ್ರವಾಗಿ ಯೋಚಸಿ ಸಮಗ್ರ ಕೃಷಿ ಮಾಡುವುದೇ ಸೂಕ್ತ. .
ರಾಜ್ಯದಲ್ಲಿ ಮಳೆಯಾಶ್ರಿತ ಪ್ರದೇಶವೇ ಹೆಚ್ಚು. ಇಲ್ಲಿ ಕೃಷಿಯೆನ್ನುವುದು ಮುಂಗಾರು ಮಳೆಯೊಂದಿಗಿನ ಜೂಜೇ ಆಗಿದೆ. ಆದ್ದರಿಂದ ಕೃಷಿಯನ್ನೇ ನಂಬಿ ಜೀವನ ನಡೆಸುವವರು ಸೂಕ್ತವಾದ ಯೋಜನೆಗಳನ್ನು ಹಮ್ಮಿಕೊಂಡು ಆಚರಣೆಗೆ ತರುವುದು ಸೂಕ್ತ. ಯೋಜನೆ ಎಂದ ಕೂಡಲೇ ಅದು ಬೃಹತ್ ಪ್ರಮಾಣದ್ದು ಆಗಿರಬೇಕಿಲ್ಲ ಇರುವ ಆರ್ಥಿಕ ಪರಿಸ್ಥಿತಿಯಲ್ಲಿಯೇ ಕೃಷಿಯ ಜೊತೆ ಪೂರಕ ಉಪ ಕಸುಬುಗಳನ್ನು ಮಾಡುವುದು ಅವಶ್ಯಕ.


ರಾಜ್ಯದಲ್ಲಿ ಸಣ್ಣಸಣ್ಣ ಭೂ ಹಿಡುವಳಿಗಳನ್ನು ಹೊಂದಿ ಕೃಷಿ ಮಾಡುತ್ತಿರುವ ಸಣ್ಣ ಪ್ರಮಾಣದ ಕೃಷಿಕರ ಸಂಖ್ಯೆಯೇ ಅತ್ಯಧಿಕ. ಇವರಿಗೆ ಸೂಕ್ತವಾದ ಮಾದರಿಗಳನ್ನು ಹೇಳುವುದು ಅಗತ್ಯ. ಇಂಥ ಮಾದರಿಗಳನ್ನು ಅನುಸರಿಸಿ ಯಶಸ್ವಿ ಕೃಷಿಜೀವನ ನಡೆಸುತ್ತಿರುವವರ ಬಗ್ಗೆ ತಿಳಿದಾಗ ಅವರಿಗೂ ಆತ್ಮವಿಶ್ವಾಸ ಉಂಟಾಗುತ್ತದೆ. ನಾವು ಸಹ ಅದೇ ಯಶಸ್ಸಿನ ಹಾದಿಯಲ್ಲಿ ನಡೆಯಬಹುದು ಎಂಬ ನಂಬಿಕೆ ಬರುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲ್ಲೂಕಿನ ಚಿಕ್ಕತಮ್ಮನಹಳ್ಳಿಯ ನಿವಾಸಿ ಶಾರದಮ್ಮ. ಇವರು ಸಣ್ಣ ರೈತರು. ಇವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮಾದರಿ ಕೃಷಿ ಸಾಧಕರು ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ತಮ್ಮ ಕುಟುಂಬ ಸದಸ್ಯರ ಸಹಕಾರದೊಂದಿಗೆ ಪ್ರತಿಯೊಂದನ್ನು ಯೋಚಿಸಿ, ಯೋಜಿಸಿ ಸಮಗ್ರ ಕೃಷಿ ಮಾಡುತ್ತಿದ್ದಾರೆ. ಇರುವ ಸಣ್ಣ ಭೂ ಹಿಡುವಳಿಯಲ್ಲಿಯೇ ಲಾಭದಾಯಕವಾದ ಸಮಗ್ರ ಕೃಷಿ ಮಾಡುತ್ತಿದ್ದಾರೆ.


ಮಳೆ ಕೈ ಕೊಟ್ಟರೆ ಬೆಳೆ ಇಲ್ಲ ಎನ್ನುವಂಥ ಸ್ಥಿತಿ ಅನೇಕ ಸಣ್ಣ ರೈತರದು. ಮಳೆ ತಡವಾದರೂ ಕಷ್ಟ. ಏನು ಬಿತ್ತಿ, ಏನು ಬೆಳೆಯಬೇಕು ಎಂದು ಯೋಚಿಸಬೇಕು. ಆದ್ದರಿಂದ ಇಂಥ ರೈತರ ಬದುಕು ತಂತಿ ಮೇಲಿನ ನಡಿಗೆಯ ಹಾಗೆ. ವ್ಯವಸಾಯದಲ್ಲಿ ಸದಾ ಸಮತೋಲನ ಕಾಯ್ದುಕೊಂಡು ಹೋಗಬೇಕು. ಇಂಥ ಪರಿಸ್ಥಿತಿಯಲ್ಲಿ ಶಾರದಮ್ಮ ಅವರು ಬಹು ಯೋಜನಾಬದ್ಧವಾಗಿ ಕೃಷಿಕಾರ್ಯ ಮಾಡುತ್ತಿರುವುದು ಸಹ ಒಂದು ಯಶಸ್ವಿ ಮಾದರಿಯೇ ಆಗಿದೆ.
ಶಾರದಮ್ಮ ಅವರು ವಾಸಿಸುತ್ತಿರುವ ಚಿಕ್ಕತಮ್ಮನಹಳ್ಳಿ ಪುಟ್ಟ ಗ್ರಾಮ. ಇಲ್ಲಿನ ರೈತರು ಮಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಕೊರೆಯಿಸಿದ ಕೊಳವೆಬಾವಿಗಳನೇಕ ವಿಫಲವಾಗಿವೆ. ಕೆಲವೇ ಕೊಳವೆಬಾವಿಗಳಲ್ಲಿ ಅಲ್ಪಸ್ವಲ್ಪ ಪ್ರಮಾಣದ ನೀರಿದೆ. ಇದನ್ನು ಜತನದಿಂದ ಬಳಸಬೇಕಿದೆ. ಇದನ್ನೆಲ್ಲ ಆಲೋಚಿಸಿದ ಶಾರದಮ್ಮ ಅವರು ಕೃಷಿ ಬದುಕಿನ ಸಂಕಷ್ಟಗಳಿಗೆಲ್ಲ ಸಮಗ್ರ ಕೃಷಿಯೇ ಮದ್ದು ಎಂಬುದು ಇವರ ಅರಿವಿಗೆ ಬಂತು.


ಶಾರದಮ್ಮ ಅವರು ಕೃಷಿಯ ಜೊತೆಗೆ ಅದಕ್ಕೆ ಪೂರಕವಾದ ಕಾರ್ಯಗಳನ್ನು ಮಾಡುತ್ತಿರುವುದರಿಂದ ಎಂಥಾ ಪರಿಸ್ಥಿತಿಯಲ್ಲಿಯೂ ಧೃತಿಗೆಡುವ ಅವಶ್ಯಕತೆ ಇಲ್ಲ. ಮಳೆಯಾಶ್ರಿತ ಕೃಷಿ ಮಾಡುವುದರ ಜೊತೆಜೊತೆಗೆ ಹಸು, ಕುರಿ, ಮೇಕೆ, ಕೋಳಿ ಮತ್ತು ಹಂದಿ ಸಾಕಣೆ ಮಾಡುತ್ತಿದ್ದಾರೆ. ಇವೆಲ್ಲ ಕಾರ್ಯಗಳು ಪರಸ್ಪರ ಪೂರಕವಾಗಿವೆ.
ಶಾರದಮ್ಮ ಅವರ ಕುಟುಂಬ ಸದಸ್ಯರು ಮೀನು ಸಾಕಣೆಯನ್ನು ಕೂಡ ಮಾಡುತ್ತಿದ್ದಾರೆ. ಈ ಕಾರ್ಯಕ್ಕಾಗಿ ಅವರು ಹೆಚ್ಚುವರಿ ವೆಚ್ಚವನ್ನೇನೂ ಮಾಡುತ್ತಿಲ್ಲ. ಈಗಾಗಲೇ ಮಾಡುತ್ತಿರುವ ಕಾರ್ಯಗಳೊಟ್ಟಿಗೆ ಇದು ಸಹ ನಡೆಯುತ್ತಿದೆ. ಕೃಷಿಕಾರ್ಯಕ್ಕಾಗಿ ನೀರು ಸಂಗ್ರಹಣೆಗೆಂದು ನಿರ್ಮಿಸಿದ ಕೃಷಿಹೊಂಡವೇ ಮೀನು ಸಾಕಣೆಯ ತೊಟ್ಟಿಯಾಗಿದೆ.


ಹಸು, ಮೇಕೆ, ಕೋಳಿ, ಹಂದಿ ಮತ್ತು ಮೀನು ಸಾಕಣೆ ಮಾಡುತ್ತಿರುವುದರಿಂದ ಬೆಳೆಗಳಿಗೆ ಅತ್ಯಗತ್ಯವಾದ ಅತ್ಯುತ್ತಮ ಪೋಷಕಾಂಶ ಹೆಚ್ಚುವರಿ ಖರ್ಚಿಲ್ಲದೇ ಲಭ್ಯವಾಗುತ್ತಿದೆ. ಮೀನು ಸಾಕಣೆ ಮಾಡುತ್ತಿರುವ ಹೊಂಡದ ನೀರನ್ನೇ ಬೆಳೆಗಳಿಗೆ ಪೂರೈಸುತ್ತಾರೆ. ಇನ್ನು ಹಸು, ಮೇಕೆ, ಕೋಳಿ ಮತ್ತು ಹಂದಿ ತ್ಯಾಜ್ಯಗಳನ್ನು ಕಾಂಪೋಸ್ಟ್ ಮಾಡಿ ಭೂಮಿಗೆ ಹಾಕುತ್ತಿರುವುದರಿಂದ ಮಣ್ಣಿನ ಫಲವತ್ತತೆಯೂ ಹೆಚ್ಚಾಗಿದೆ.

Similar Posts

2 Comments

  1. I started a small sheep form , how maintenence

  2. I atend that function.that very nice

Leave a Reply

Your email address will not be published. Required fields are marked *