ಜೂನ್ 29 , 2025. ಬೆಂಗಳೂರಿನಿಂದ ಬೆಳಗ್ಗೆಯೇ ಬೈಕಿನಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮದತ್ತ ಹೊರಟೆ. ಮಳವಳ್ಳಿಯಲ್ಲಿ ಸಿದ್ದಪ್ಪ ಮಳವಳ್ಳಿ ಜೊತೆಯಾದರು. ಇವರ ಮನೆಯಲ್ಲಿ ಬೈಕ್ ನಿಲ್ಲಿಸಿ ಇವರ ಕಾರಿನಲ್ಲಿ ಹೂಗ್ಯಂನತ್ತ ಹೊರಟೆವು. ಕೊಳ್ಳೇಗಾಲ ಬೈಪಾಸ್ ಹಾದು ಹನೂರು ರಸ್ತೆ ಸೇರಿದೆವು. ಅಲ್ಲಿಂದ ರಾಮಾಪುರ, ದಿನ್ನಳ್ಳಿ. ಇಕ್ಕೆಲ್ಲಗಳಲ್ಲಿಯೂ ಬೆಟ್ಟಗಳು, ಆವೃತ್ತವಾದ ಕಾಡು.
“ಒಂದು ತಾಯಿಹುಲಿ ಅದರ ನಾಲ್ಕು ಮರಿಗಳನ್ನು ಕೊಲ್ಲಲು ಪಾಪಿಗಳಿಗೆ ಹೇಗಾದರೂ ಮನಸು ಬಂತು ಸರ್, ನನ್ನ ಕೈಗೆ ಅವರೇನಾದ್ರೂ ಸಿಕ್ಕಿದ್ರೆ ಕೊಚ್ಚಿ ಹಾಕ್ತಿದೆ” ಎಂದು ಸಿದ್ದಪ್ಪ ಸಿಟ್ಟಿನಿಂದ ಹೇಳಿದರು. ಇದು ಇವರ ಮಾತಷ್ಟೇ ಅಲ್ಲ; ವನ್ಯಜೀವಿ ಪ್ರಿಯರ ಆಕ್ರೋಶವೂ ಆಗಿದೆ.
ದಿನ್ನಳ್ಳಿ ದಾಟುತ್ತಿದ್ದಂತೆ ಟಾರು ರಸ್ತೆ ಮುಗಿದು ಸಮತಟ್ಟಿರದ ಕಚ್ಚಾರಸ್ತೆ ಶುರುವಾಗುತ್ತದೆ. (ಡಾಂಬರು ಇತ್ತು ಎನ್ನುವುದರ ಕುರುಹು ಇಲ್ಲದಂತೆ ಸಂಪೂರ್ಣ ಕಿತ್ತು ಹೋಗಿದೆ) ಅದನ್ನು ನೋಡಿ “ಕಾಡಿನ ನಡುವೆ ಹಾದು ಹೋಗುವ ರಸ್ತೆ ಇದೇ ರೀತಿ ಇರಬೇಕು, ಇಲ್ದೇ ಇದ್ರೆ ಸ್ಪೀಡಾಗಿ ವೆಹಿಕಲ್ ಒಡ್ಸಿ ವನ್ಯಪ್ರಾಣಿಗಳನ್ನು ಸಾಯಿಸಿಬಿಡ್ತಾರೆ” ಎಂದು ಕಾರು ಚಲಾಯಿಸುತ್ತಿದ್ದ ಸಿದ್ದಪ್ಪ ಹೇಳಿದರು.
ತುಸು ದೂರದಲ್ಲಿ ಬಲಕ್ಕೆ ಪಿ.ಜಿ. ಪಾಳ್ಯ ಕಳ್ಳಬೇಟೆ ತಡೆ ಶಿಬಿರ ಇದೆ. ಮೂರ್ನಾಲ್ಕು ಕಿಲೋ ಮೀಟರ್ ಮುಂದೆ ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಪೊಲೀಸರ ಸ್ಮಾರಕವಿದೆ. ಅಲ್ಲಿ ಕಾರು ನಿಲ್ಲಿಸಿ, ಗೌರವ ಸಲ್ಲಿಸಿ ಮುಂದುವರಿದೆವು. ಕೆಲವೇ ಕಿಲೋ ಮೀಟರ್ ದೂರದಲ್ಲಿ ಕೊಪ್ಪ ಗ್ರಾಮವಿದೆ. ಇದರ ಸನಿಹದಲ್ಲಿಯೇ ಮೀಣ್ಯಂ, ಮಾರಳ್ಳಿ ಕಳ್ಳಬೇಟೆ ತಡೆ ಶಿಬಿರವಿದೆ. ಇಲ್ಲಿಂದ ಕೇವಲ ಸುಮಾರು 800 ಮೀಟರ್ (ಸುಮಾರು 2400 ಅಡಿಗಳು) ಅಂತರದಲ್ಲಿಯೇ ಹುಲಿಗಳ ಹತ್ಯೆ ಆಗಿದೆ.
ಮುಖ್ಯ ರಸ್ತೆಯಿಂದ ಸುಮಾರು 100 ಅಡಿ ಅಂತರದಲ್ಲಿಯೇ ಹುಲಿಗಳು ಸತ್ತು ಬಿದ್ದ ಸ್ಥಳವಿದೆ. ಅಲ್ಲಿಯೇ ಅವುಗಳ ಕಳೇಬರಗಳನ್ನು ಸುಡಲಾಗಿದೆ (ಮರಣೋತ್ತರ ಪರೀಕ್ಷೆಗಾಗಿ ಅವುಗಳ ಅಂಗಾಂಶ ಸಂಗ್ರಹಿಸಿದ ನಂತರ) ಈ ಸ್ಥಳಕ್ಕೆ ಹೋಗುವಾಗ ಗಸ್ತು ತಿರುಗುತ್ತಿದ್ದ ವಾಚರ್ಸ್ ಸಹ ಜೊತೆಯಾದರು. ಅಲ್ಲಿ ಪೋಟೋಗಳನ್ನು ತೆಗೆಯುತ್ತಿದ್ದಂತೆ ಗುಡ್ಡ ಏರಿ ಬಂದ ಕೆಲವು ವಾಚರ್ಸ್ ಹತ್ತಿರದಲ್ಲಿಯೇ ಆನೆಗಳ ಮಂದೆಯಿದೆ ಎಂದು ಎಚ್ಚರಿಸಿದರು. ಒಂದು ಮರಿಯಾನೆಯನ್ನು ಮೂರ್ನಾಲ್ಕು ಹೆಣ್ಣಾನೆಗಳು ಸುತ್ತುವರಿದು ಹೆಜ್ಜೆ ಹಾಕುತ್ತಿದ್ದವು. ಬಹುಶಃ ಅವು ನಾವು ನಿಂತಿದ್ದ ದಿಕ್ಕಿಗೆ ಬಂದು ರಸ್ತೆ ದಾಟಿ ಹೋಗಬಹುದು ಎಂದು ಅಂದಾಜನ್ನು ಮಾಡಿದರು. ಆದರೆ ಅವು ಹಾಗೆ ಮುಂದುವರಿದವು.
ಫಾರೆಸ್ಟ್ ವಾಚರ್ಸ್ ಅನ್ನು ಮಾತನಾಡಿಸಿದಾಗ “ ನಾಲ್ಕು ತಿಂಗಳಿನಿಂದ ಬಾಕಿ ಇರುವ ವೇತನ ಇನ್ನೂ ಬಂದಿಲ್ಲ. ನಮ್ಮದು ಖಾಯಂ ಹುದ್ದೆ ಅಲ್ಲ. ಪಿ.ಎಫ್. ಹಿಡಿದು 15,400 ರೂ. (ಹದಿನೈದು ಸಾವಿರದ ನಾಲ್ಕುನೂರು ರೂಪಾಯಿ) ಬರುತ್ತದೆ. ಕಳ್ಳಬೇಟೆ ತಡೆ ಶಿಬಿರದಲ್ಲಿ ಇರುವವರಿಗೆ ದಿನಸಿ ಸರಬರಾಜು ಮಾಡುತ್ತಾರೆ. ಅಡುಗೆ ಮಾಡಿಕೊಂಡು ಊಟ ಮಾಡುತ್ತೇವೆ” ಎಂದರು.
“ಕಾಡಿನಲ್ಲಿ ಹುಲಿ, ಚಿರತೆ, ಕರಡಿ, ಜಿಂಕೆ, ಕಡವೆ, ಮೊಲ ಇತ್ಯಾದಿ ಇವೆ. ಎಂಟು ವರ್ಷದ ಹಿಂದೆ ಮೊದಲ ಬಾರಿಗೆ ಹೆಣ್ಣು ಹುಲಿ ತನ್ನ ಮೂರು ಮರಿಗಳೊಂದಿಗೆ ಇದ್ದಿದ್ದನ್ನು ನೋಡಿದ್ದೆವು. ಆಗ ರೇಂಜರ್ ಆಗಿದ್ದ ಸುಂದರ್ ಸಹ ಜೊತೆಯಲ್ಲಿ ಇದ್ದರು. ಅವರ ಜೊತೆ ಜೀಪಿನಲ್ಲಿ ಗಸ್ತು ತಿರುಗುವಾಗ ಕಡವೆ ಬೇಟೆಯಾಡಿದ ಹುಲಿ ತನ್ನ ಮರಿಗಳೊಂದಿಗೆ ತಿನ್ನುತ್ತಿತ್ತು” ಎಂದು 15 ವರ್ಷಗಳಿಂದ ವಾಚರ್ಸ್ ಆಗಿ ಕೆಲಸ ಮಾಡುತ್ತಿರುವ ಒಬ್ಬರು ಹೇಳಿದರು.
“ಹುಲಿಗಳಿಗೆ ವಿಷ ಹಾಕಿದ್ದ ಸ್ಥಳ ಮಾರಳ್ಳಿ ಕ್ಯಾಂಪ್ ವ್ಯಾಪ್ತಿಗೆ ಬರುತ್ತದೆ. ವೇತನ ಕೊಟ್ಟಿಲ್ಲ ಎಂದು ನಾವು ವಾಚರ್ಸ್ ಗಳು ಕೊಳ್ಳೇಗಾಲ ಡಿಸಿಎಫ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಒಂದು ವಾರದ ನಂತರ ಈ ಘಟನೆ ನಡೆದಿದೆ. (ಮಾಧ್ಯಮಗಳಲ್ಲಿ ವಾಚರ್ಸ್ ಗಳು ಪ್ರತಿಭಟನೆ ಮಾಡಿದ ದಿನವೇ ಹುಲಿ ಬೇಟೆಯಾಡಿ ಕೊಂದಿದ್ದ ಹಸುವಿನ ಶವಕ್ಕೆ ವಿಷ ಹಾಕಿ ಹುಲಿಗಳನ್ನು ಕೊಲ್ಲಲಾಗಿದೆ ಎಂದು ತಪ್ಪು ವರದಿಯಾಗಿದೆ) ಎಂದು ವಾಚರ್ಸ್ ಹೇಳಿದರು.
ರಸ್ತೆಗೆ ಕೇವಲ ಸುಮಾರು 100 ಅಡಿ ಇರುವುದರಿಂದ ಹಸುವಿನ ಕಳೇಬರದ ವಾಸನೆ ಬಂದ ನಂತರವೇ ಹೋಗಿ ನೋಡಿದಾಗ ಹುಲಿಗಳು ಸತ್ತು ಬಿದ್ದಿರುವುದು ಗಮನಕ್ಕೆ ಬಂದಿದೆ. ಆ ನಂತರವೇ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಯಿಂದ ಹಸುವಿನ ದೇಹಕ್ಕೆ ಹಾಕಿದ್ದ ರಾಸಾಯನಿಕ ದ್ರಾವಣದಿಂದಾಗಿ ಅದರ ಮಾಂಸ ತಿಂದ ಹುಲಿಗಳ ಸಾವು ಉಂಟಾಗಿದೆ ಎಂದೂ ಗೊತ್ತಾಗಿದೆ.
ವಾಚರ್ಸ್ ಮತ್ತು ಗ್ರಾಮಸ್ಥರ ಜೊತೆ ಮಾತನಾಡಿದಾಗ ಅನೇಕ ವಿಷಯಗಳು ಬೆಳಕಿಗೆ ಬಂದವು. ಕಾಡಿನಲ್ಲಿ ಮೇಯಲು ಹೋದ ದನಗಳನ್ನು ಹುಲಿ, ಚಿರತೆ ಹಿಡಿಯವುದು ಹೊಸದೇನಲ್ಲ. ಆದರೆ ಈ ಕಾರಣಕ್ಕಾಗಿಯೇ ಸತ್ತ ದನಗಳಿಗೆ ವಿಷ ಹಾಕಿ ಹುಲಿ, ಚಿರತೆ ಕೊಲ್ಲುವ ಕಾರ್ಯವನ್ನು ದನ ಸಾಕಣೆ ಮಾಡುವವರು ಮಾಡುವುದಿಲ್ಲ. ಹುಲಿ, ಚಿರತೆಗಳ ಚಲನವಲನ ಮೊದಲು ಗೊತ್ತಾಗುವುದೇ ದನಗಾಹಿಗಳಿಗೆ. ಇವರಿಗೆ ಕಾಡಿನ ಮೂಲೆಮೂಲೆಯೂ ಗೊತ್ತು. ಇವರು ಹೋಗುವ ಸ್ಥಳಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹೋಗುವುದು ಅನುಮಾನ.
ಹುಲಿ, ಚಿರತೆ ಕಾಣಿಸಿಕೊಂಡರೆ ದನಗಾಹಿಗಳು ಮೊದಲು ತಮ್ಮ ಮಾಲಿಕರಿಗೆ ತಿಳಿಸುತ್ತಾರೆ. ಇವರಲ್ಲಿ ಯಾರಿಗಾದರೂ ಹುಲಿ, ಚಿರತೆ ಬೇಟೆಯಾಡಿ ಅವುಗಳ ಬಹುಬೇಡಿಕೆಯಿರುವ ಭಾಗಗಳನ್ನು ಕತ್ತರಿಸುವ ಮಾಫಿಯಾ ಜೊತೆ ಸಂಪರ್ಕವಿದ್ದರೆ ಅವರಿಗೂ ತಿಳಿಯುತ್ತದೆ. ಈ ಮಾಹಿತಿಗೆಲ್ಲ ಧಾರಾಳವಾಗಿ ಹಣ ನೀಡಲಾಗುತ್ತದೆ. ಈ ಪ್ರಕರಣದಲ್ಲಿ ಆರೋಪಿಗಳಾಗಿರುವವರಿಗೂ ಅಕ್ರಮ ಬೇಟೆಗಾರರಿಗೂ ಸಂಪರ್ಕವಿರುವ ಸಾಧ್ಯತೆ ಅಪಾರ !
ಹಳೇಗೌಡನ ದೊಡ್ಡಿಯ ಕೊನಪ್ಪ “ ನಾನು ಸಾಕಿದ್ದ ಹಸುವನ್ನು ಹುಲಿ ಕೊಂದಿದ್ದರಿಂದ ಸಿಟ್ಟಾಗಿ ಪೊರೆಟ್ ಕ್ರಿಮಿನಾಶಕ ತಂದು ಹಸುವಿನ ದೇಹಕ್ಕೆ ಸಿಂಪಡಿಸಿದೆ” ಎಂದಿದ್ದಾನೆ. ಈ ಕೃತ್ಯಕ್ಕೆ ಕೊಪ್ಪ ಗ್ರಾಮದ ಮಾದುರಾಜು, ನಾಗರಾಜು ಸಹಕರಿಸಿದರು ಎಂದು ಒಪ್ಪಿಕೊಂಡಿದ್ದಾನೆ. ಇವನ ಹೇಳಿಕೆಯನ್ನಷ್ಟೇ ನಂಬಿ ಅರಣ್ಯ ಇಲಾಖೆ ಎಫ್.ಐ.ಆರ್ ದಾಖಲಿಸಿದೆ. ಮೂವರು ಆರೋಪಿಗಳು ಸದ್ಯ ಕೊಳ್ಳೇಗಾಲ ಸಬ್ ಜೈಲಿನಲ್ಲಿ ಇದ್ದಾರೆ.
ಈ ಆರೋಪಿಗಳ ಹೇಳಿಕೆಯನ್ನಷ್ಟೇ ನಂಬಿ ಸುಮ್ಮನಾಗಬೇಕೇ ? ಖಂಡಿತ ಇಲ್ಲ. ಮೇಲ್ನೋಟಕ್ಕೆ ಇವರು ಸಂಪೂರ್ಣ ಸತ್ಯ ಹೇಳುತ್ತಿಲ್ಲ ಎಂದು ಗೊತ್ತಾಗುತ್ತದೆ. ಏಕೆಂದರೆ ಹೆಣ್ಣು ಹುಲಿ ತನ್ನ ಮರಿಗಳೊಂದಿಗೆ ಇದ್ದಾಗ ಬೇಟೆಯಾಡಿ ಮಾಂಸ ತಿಂದಿದ್ದರೆ ( ಸಂಪೂರ್ಣವಾಗಿ ಒಮ್ಮೆಯೇ ತಿಂದಿರುವುದಿಲ್ಲ) ಅದನ್ನು ಬಿಟ್ಟು ದೂರ ಹೋಗಿರುವುದಿಲ್ಲ. ಮೊದಲನೇಯದಾಗಿ ಮರಿಗಳ ಸುರಕ್ಷತೆ, ಬೇಟೆಯಾಡಿದ ಪ್ರಾಣಿಯನ್ನು ಮತ್ತೊಂದು ಬೇಟೆ ಪ್ರಾಣಿ ಕೊಂಡೊಯ್ಯಬಹುದು ಎಂಬ ಆತಂಕದಿಂದ ಹತ್ತಿರದಲ್ಲಿಯೇ ಇರುತ್ತದೆ. ಇದರ ಕಣ್ಣು ತಪ್ಪಿಸಿ ಮೃತ ಹಸುವಿನ ಕಳೇಬರಕ್ಕೆ ವಿಷ ಸಿಂಪಡಿಸುವುದು ಅಸಾಧ್ಯದ ಮಾತು.
ಮರಿಗಳೊಂದಿಗೆ ಇರುವ ಹುಲಿ ಎಂದಿಗಿಂತಲೂ ಹೆಚ್ಚು ಜಾಗೃತವಾಗಿರುತ್ತದೆ. ತುಂಬ ಸನಿಹದಲ್ಲಿ ಇತರ ಪ್ರಾಣಿಗಳಾಗಲಿ, ಮನುಷ್ಯರಾಗಲಿ ಸುಳಿದರೆ ದಾಳಿ ಮಾಡುವ ಸಾಧ್ಯತೆ ಹೆಚ್ಚು. ಹೀಗಿರುವಾಗ ಹುಲಿ ಸನಿಹದಲ್ಲಿಯೇ ಇದೆ ಎಂದು ಗೊತ್ತಿದ್ದೂ ನಿರಾಯುಧರಾದ ಮೂವರು ಹೋಗಿ ವಿಷ ಸಿಂಪಡಿಸಿದರು ಎನ್ನುವುದು ನಂಬಲು ಸಾಧ್ಯವಿಲ್ಲ. ಈ ಮೂವರ ಜೊತೆ ಆಯುಧಗಳಿರುವ ಇನ್ನಿತರರು ಇದ್ದಿರಬಹುದು. ಹುಲಿಯ ಗಮನ ಬೇರೆಡೆ ಸೆಳೆದು ಹಸುವಿನ ಕಳೇಬರಕ್ಕೆ ವಿಷ ಸಿಂಪಡಿಸಿರಬಹುದು. ಮರಿಗಳು ಜೊತೆಯಲ್ಲಿರುವುದರಿಂದ ಹೆಣ್ಣು ಹುಲಿ ಹೆಚ್ಚು ಅನುಮಾನಿಸದೇ ಮಾಂಸ ತಿಂದು ಸಾವನ್ನಪ್ಪಿದೆ. ಇದಕ್ಕೂ ಮುನ್ನ ಇದರ ಕಣ್ಣೇದುರಿಗೆ ಮರಿಗಳು ಒದ್ದಾಡಿ ಸಾವನ್ನಪ್ಪಿವೆ.
ಈ ಎಲ್ಲ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಮೂವರ ಪಾತ್ರವಷ್ಟೇ ಅಲ್ಲದೇ ಇದರ ಹಿಂದೆ ಬಹು ದೊಡ್ಡ ವ್ಯವಸ್ಥಿತ ಗುಂಪಿದೆ. ವಿಷ ಹಾಕಿದ ಮಾಂಸ ತಿಂದ ನಂತರ ಹುಲಿಗಳು ಅಲ್ಲಿಯೇ ಸಾಯಲಾರವು. ಒಂದಷ್ಟು ದೂರ ಹೋದ ನಂತರ ಸಾಯಬಹುದು ಎಂದು ಆರೋಪಿಗಳು ಅಂದಾಜಿರಬಹುದು. ಆದರೆ ಇವರು ಹಾಕಿದ್ದ ವಿಷದ ಪ್ರಮಾಣ ಹೆಚ್ಚಾಗಿದ್ದರಿಂದ ಹುಲಿಗಳು ಸ್ಥಳದಲ್ಲಿಯೇ ಮರಣ ಹೊಂದಿವೆ. ಅಕ್ರಮ ಬೇಟೆಗಾರರು ಬಂದು ಅವುಗಳ ಉಗುರು, ಹಲ್ಲುಗಳನ್ನು ಕೀಳುವ ಮುನ್ನವೇ ಕೃತ್ಯ ಬೆಳಕಿಗೆ ಬಂದಿದೆ.
ಇದಕ್ಕೆ ಹಿನ್ನೆಲೆಯೇನೆಂದರೆ ಈ ಕೃತ್ಯ ನಡೆಯುವ ಕೆಲವೇ ದಿನಗಳ ಮುಂಚೆ ಜೂನ್ 5, 2025ರಂದು ಇದೇ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ತಿಮ್ಮರಾಯನಕೊಂಚಲು ಅರಣ್ಯ ವ್ಯಾಪ್ತಿಯ ಬೀದರಳ್ಳಿ ಬೀಟ್ (CPT No. 98), ಕೌದಳ್ಳಿ ವಲಯದಲ್ಲಿ ಚಿರತೆಯನ್ನು ಕೊಂದು ಅದರ ನಾಲ್ಕು ಕಾಲುಗಳನ್ನು ಕಳ್ಳ ಬೇಟೆಗಾರರು ಕತ್ತರಿಸಿಕೊಂಡು ಹೋಗಿದ್ದಾರೆ. ಇದು ಮಲೈ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಕಳ್ಳಬೇಟೆಗಾರರು ಸಕ್ರಿಯವಾಗಿರುವ ಉದಾಹರಣೆ.
ಇದೇ ಗ್ಯಾಂಗ್ ಅಥವಾ ಬೇರೊಂದು ಗ್ಯಾಂಗ್ ಹೂಗ್ಯಂ ವಲಯದ ಮಾರಳ್ಳಿ ಕ್ಯಾಂಪ್ ವ್ಯಾಪ್ತಿಯ ಹುಲಿಗಳ ಹತ್ಯೆ ಪ್ರಕರಣದಲ್ಲಿಯೂ ಭಾಗಿಯಾಗಿರುವ ಹಾಗೂ ಮೂವರು ಬಂಧಿತ ಆರೋಪಿಗಳು ಆ ಗ್ಯಾಂಗಿನ ಸದಸ್ಯರಾಗಿರುವ ಸಾಧ್ಯತೆ ಹೆಚ್ಚಿದೆ.
ಇವುಗಳ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಅರಣ್ಯ ಇಲಾಖೆ ತನಿಖೆ ಮಾಡಿದರಷ್ಟೇ ಸಾಲದು. ಸಿಐಡಿ ವಿಭಾಗದವರು ತನಿಖೆ ಮಾಡಿದರೆ ಇನ್ನೂ ಹೆಚ್ಚಿನ ಅಂಶಗಳು ಖಂಡಿತವಾಗಿಯೂ ಬೆಳಕಿಗೆ ಬರುತ್ತವೆ. ಆದ್ದರಿಂದ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಬೇಕು.
ಈ ತನಿಖಾ ವರದಿ ಸಿದ್ದಪಡಿಸುವಾಗ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಚಕ್ರಪಾಣಿ ವೈ, ಎಸಿಎಫ್ ಗಜಾನನ ಹೆಗಡೆ, ಹೂಗ್ಯಂ ರೇಂಜಿನ ಫಾರೆಸ್ಟರ್ ಮಾದೇಶ ಅವರನ್ನು ಅರಣ್ಯ ಇಲಾಖೆಯ ಕೇಂದ್ರ ಕಚೇರಿ ಕಡ್ಡಾಯ ರಜೆ ಮೇಲೆ ಕಳಿಸಿದೆ. ಈ ಹುದ್ದೆಗಳಿಗೆ ಬೇರೆ ಅಧಿಕಾರಿಗಳನ್ನು ನೇಮಿಸಿದೆ.