ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಐದು ಹುಲಿಗಳ ಕಗ್ಗೊಲೆಯಾಗಿದೆ ಎಂಬ ಸುದ್ದಿ ಮಿಂಚಿನಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ತಲುಪಿತ್ತು. ಬಹುಶಃ ಅರಣ್ಯ ಇಲಾಖೆಯ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಗೊತ್ತಾಗಿದ್ದ ವಿಷಯವು ಸಚಿವರಿಗಿರುವ ವಿಶ್ವಾಸನೀಯ ಮೂಲಗಳಿಂದ ತಲುಪಿತ್ತು. ಕೂಡಲೇ ಸಚಿವರಿಂದ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿಗೆ ಸೂಚನೆ ಮುಟ್ಟಿತು. ಎಲ್ಲರೂ ಅಲರ್ಟ್ ಆದರು.
ಖುದ್ದು ಸಚಿವರು ದುರ್ಘಟನೆ ನಡೆದಿದ್ದ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದರು. ಇನ್ನಷ್ಟು ಮಾಹಿತಿ ಸಂಗ್ರಹಣೆ ಬಳಿಕ ಅಲ್ಲಿಯೇ ಅವರಿಗೆ ಅಭಯಾರಣ್ಯದ ಡಿ.ಸಿ.ಎಫ್. ಚಕ್ರಪಾಣಿ, ಹನೂರು ಸಬ್ ಡಿವಿಷನ್ ಎ.ಸಿ.ಎಫ್. ಗಜಾನನ ಹೆಗಡೆ ಹಾಗೂ ಹೂಗ್ಯಂ ರೇಂಜ್ ಫಾರೆಸ್ಟ್ ಆಫೀಸರ್ ಮಾದೇಶ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿರುವುದು ತಿಳಿಯಿತು.
ಈ ವಿಶೇಷ ವರದಿಯನ್ನೂ ಓದಿ: ಹುಲಿಗಳ ಕಗ್ಗೊಲೆಗಳ ದುಷ್ಪರಿಣಾಮವೇನು ಗೊತ್ತೆ ?
ಈ ಕೂಡಲೇ ಅವರು ಈ ಮೂವರು ಅಧಿಕಾರಿಗಳ ಅಮಾನತಿಗೆ ಆದೇಶ ನೀಡಬಹುದಾಗಿತ್ತು. ಒಂದು ವೇಳೆ ಹಾಗೆ ಮಾಡಿದ್ದರೆ ಐ.ಎಫ್.ಎಸ್. (ಇಂಡಿಯನ್ ಫಾರೆಸ್ಟ್ ಸರ್ವೀಸ್- ಭಾರತೀಯ ಅರಣ್ಯ ಸೇವೆ) ಅಧಿಕಾರಿ ವಲಯದಲ್ಲಿ ಮುನಿಸು ಉಂಟಾಗುವ ಸಾಧ್ಯತೆ ಇತ್ತು. ಈಗಾಗಲೇ ಗೋಕುಲ್ ಎಂಬ ಐ.ಎಫ್.ಎಸ್. ಹಿರಿಯ ಅಧಿಕಾರಿಯನ್ನು ಅರಣ್ಯ ಸಚಿವರು ಅಮಾನತು ಮಾಡಿರುವುದು ಈ ವಲಯದ ಹಲವರಿಗೆ ಅಸಮಾಧಾನ ಉಂಟು ಮಾಡಿದೆ ಎಂಬ ಮಾತುಗಳಿವೆ.
ತಕ್ಷಣ ಡಿ.ಸಿ.ಎಫ್. ಅಮಾನತಿಗೆ ಆದೇಶಿಸಿದ್ದರೆ ಆ ಅಧಿಕಾರಿ ಸಿ.ಎ.ಟಿ. ಅಥವಾ ರೆಗ್ಯಲುರ್ ಕೋರ್ಟಿನ ಮೊರೆ ಹೋಗುವ ಸಾಧ್ಯತೆಗಳೂ ಇದ್ದವು. ಇದನ್ನೆಲ್ಲ ಗ್ರಹಿಸಿದ ಸಚಿವರು ಮೂವರು ಅಧಿಕಾರಿಗಳನ್ನು ತಕ್ಷಣದಿಂದಲೇ ಕಡ್ಡಾಯ ರಜೆ ಮೇಲೆ ಕಳಿಸುವಂತೆ ಹೇಳಿದರು. ಉನ್ನತ ಮಟ್ಟದ ತನಿಖಾ ಸಮಿತಿ ರಚನೆಗೆ ಆದೇಶಿಸಿದರು. ತ್ವರಿತವಾಗಿ ಪ್ರಾಥಮಿಕ ವರದಿ ನೀಡುವಂತೆಯೂ, ಜುಲೈ ೧೦ರೊಳಗೆ ಅಂತಿಮ ವರದಿ ನೀಡುವಂತೆಯೂ ಸೂಚಿಸಿದರು. ಈ ಹಿನ್ನೆಲೆಯಲ್ಲಿಯೇ ಈ ವರದಿಗೆ “ಅಂಗೈ ಹುಣ್ಣಿಗೆ ಕನ್ನಡಿ ಬೇಕೆ” ಎಂಬ ಶೀರ್ಷಿಕೆ ನೀಡಲಾಗಿದೆ. ಕೆಲವೊಮ್ಮೆ ಸತ್ಯ ಮೇಲ್ನೋಟಕ್ಕೆ ಗೊತ್ತಾದರೂ ಜಾಣತನದಿಂದ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ.
ಈ ವಿಶೇಷ ವರದಿಯನ್ನೂ ಓದಿ:ಹುಲಿ ಕಗ್ಗೊಲೆ ಹಿಂದಿನ ಕಾರಣ ಅನಾವರಣ !
ತನಿಖಾ ಸಮಿತಿಗೆ ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಶ್ಕರ್ ಮುಖ್ಯಸ್ಥರು. ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಶ್ರೀನಿವಾಸುಲು, ಚಾಮರಾಜನಗರ ಸಿಸಿಎಫ್ ಹೀರಾಲಾಲ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಎ.ಐ.ಜಿ ಹರಿಣಿ ವೇಣುಗೋಪಾಲ್, ಮೈಸೂರು ಮೃಗಾಲಯದ ಸಹಾಯಕ ನಿರ್ದೇಶಕ ಡಾ. ಶಶಿಧರ್ ಮತ್ತು ವನ್ಯಜೀವಿ ತಜ್ಞ ಡಾ. ಸಂಜಯ್ ಗುಬ್ಬಿ ಸದಸ್ಯರು.
ಇವರಲ್ಲಿ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಒಬ್ಬರೇ ಸರ್ಕಾರೇತರ ವ್ಯಕ್ತಿ. ಅರಣ್ಯ ಮತ್ತು ವನ್ಯಜೀವನದ ಬಗ್ಗೆ ಆಳವಾದ ತಿಳಿವಳಿಕೆ ಇರುವವರು. ಸಮಿತಿ ಕೂಡಲೇ ಕಾರ್ಯಾಚರಣೆಗಿಳಿಯಿತು. ಜುಲೈ ೦೪ರಂದು ಪ್ರಾಥಮಿಕ ವರದಿ ಸಲ್ಲಿಸಿತು.
ಪ್ರಾಥಮಿಕ ವರದಿ ಕೈ ಸೇರುತ್ತಿದ್ದಂತೆ ಅರಣ್ಯ ಸಚಿವರು ಡಿ.ಸಿ.ಎಫ್ ಚಕ್ರಪಾಣಿ ಸೇರಿದಂತೆ ಒಟ್ಟು ಮೂವರು ಅಧಿಕಾರಿಗಳನ್ನು ಸೇವೆಯಿಂದ ಸಸ್ಪೆಂಡ್ ಮಾಡಲು ಆದೇಶಿಸಿದ್ದಾರೆ. ಆರ್.ಎಫ್.ಒ. ಹುದ್ದೆ ರಾಜ್ಯ ಸರ್ಕಾರದ ಸಿ ವೃಂದಕ್ಕೆ ಸೇರಿರುವುದರಿಂದ ಸಿ.ಸಿ.ಎಫ್. ಹಂತದ ಅಧಿಕಾರಿಯೇ ಅಮಾನತು ಮಾಡುತ್ತಾರೆ. ಬಹುಶಃ ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆಯೊಳಗೆ ಈ ಅಧಿಕಾರಿ ಅಮಾನತು ಆದೇಶದ ಲಿಖಿತ ಪ್ರತಿ ಹೊರ ಬೀಳಬಹುದು. ಆದರೆ ಎ.ಸಿ.ಎಫ್., ಡಿ.ಸಿ.ಎಫ್. ಹುದ್ದೆಗಳು ಪತ್ರಾಂಕಿತ ಅಂದರೆ ಗೆಜೆಟೆಡ್ ಹುದ್ದೆಗಳಾದ್ದರಿಂದ ಸರ್ಕಾರದ ಡಿಪಿಆರ್ ಮೂಲಕವೇ ಅಮಾನತು ಆಗಬೇಕಾಗುತ್ತದೆ. ಬಹುಶಃ ಸೋಮವಾರದೊಳಗೆ ಇವರಿಬ್ಬರ ಅಮಾನತು ಆದೇಶದ ಪ್ರತಿ ಪ್ರಕಟವಾಗಬಹುದು.
ಈ ವಿಶೇಷ ವರದಿಯನ್ನೂ ಓದಿ:ಹುಲಿಗಳನ್ನು ಹತ್ಯೆ ಮಾಡಿದವರು ಹೇಳಿದನಷ್ಟೇ ನಂಬಿ ಸುಮ್ಮನಾಗಬೇಕೇ ?
ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಕಂಡುಬಂದಿದೆ. ಹೊರಗುತ್ತಿಗೆ ಸಿಬ್ಬಂದಿಗೆ ಅಂದರೆ ವಾಚರ್ಸ್ ಗಳಿಗೆ ವೇತನ ಪಾವತಿ ಮಾಡಲು ಏಪ್ರಿಲ್ ತಿಂಗಳಾಂತ್ಯದಲ್ಲಿಯೇ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಆದರೂ ಜೂನ್ ತಿಂಗಳವರೆಗೆ ವೇತನ ಪಾವತಿಸಿಲ್ಲ. ಇದು ಡಿಸಿಎಫ್ ಚಕ್ರಪಾಣಿ ಅವರ ಮೂಲಭೂತ ಕರ್ತವ್ಯ ಲೋಪ. ಇದು ಕಾಡಿನಲ್ಲಿ ವಾಚರ್ಸ್ ಗಳ ಗಸ್ತು ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಅಧಿಕಾರಿ ವಿರುದ್ಧ ಇಲಾಖಾ ವಿಚಾರಣೆಗೂ ಸಚಿವರು ಸೂಚನೆ ನೀಡಿದ್ದಾರೆ. ಇದರ ಜೊತೆ ರೇಂಜ್ ಫಾರೆಸ್ಟ್ ಆಫೀಸರ್, ಅಸಿಸ್ಟೆಂಟ್ ಕನ್ಸರ್ವೇಟಿವ್ ಆಫ್ ಫಾರೆಸ್ಟ್ ಅಧಿಕಾರಿಗಳ ವಿರುದ್ಧವೂ ಇಲಾಖಾ ತನಿಖೆ ನಡೆಯಲಿದೆ. ಇದು ಅಮಾನಾತ್ತಾದ ಸಂದರ್ಭದಲ್ಲಿ ಸರ್ಕಾರಿ ಇಲಾಖೆಗಳಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ !
ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆಯು ವಾಚರ್ಸ್ ಗಳನ್ನು ಹೊರ ಗುತ್ತಿಗೆ ಮುಖಾಂತರ ನೇಮಿಸಿಕೊಳ್ಳುತ್ತಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ಎಲ್ಲ ರೇಂಜ್ ಗಳ ವಾಚರ್ಸ್ ಗಳು ತಮಗೆ ಮೂರು ತಿಂಗಳಿನಿಂದ ವೇತನ ಬಾಕಿಯಿದೆ. ಪಾವತಿ ಮಾಡಿ ಎಂದು ಜೂನ್ ೨೩, ೨೦೨೫ರಂದು ಕೊಳ್ಳೇಗಾಲದಲ್ಲಿರುವ ಡಿ.ಸಿ.ಎಫ್. ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಹಣ ಬಂದಿದ್ದರೂ ಡಿ.ಸಿ.ಎಫ್. ಚಕ್ರಪಾಣಿ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿರಲಿಲ್ಲ. ಇದು ಏಕೆ ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ !
ವಾಚರ್ಸ್ ಗಳಿಗೆ ವೇತನ ಬಾರದ ದಿನಗಳಲ್ಲಿಯೇ ಕಾಡಿನಲ್ಲಿ ಐದು ಹುಲಿಗಳ ಸಾವು ಸಂಭವಿಸಿರುವ ಮಾರಳ್ಳಿ ಕ್ಯಾಂಪಿನಲ್ಲಿ ಗಸ್ತು ಆಗಿಲ್ಲ. ಆಗ ಹಸುವಿನ ಕಳೇಬರಕ್ಕೆ ಮೂವರು ದುಷ್ಕರ್ಮಿಗಳು ವಿಷ ಸಿಂಪಡಿಸಿದ್ದಾರೆ. ವಿಷಪೂರಿತ ಮಾಂಸ ತಿಂದ ಹುಲಿಗಳು ದಾರುಣವಾಗಿ ಸಾವನ್ನಪ್ಪಿವೆ.
ಮುಖ್ಯವಾಗಿ ವಾಚರ್ಸ್ ಗಳು ಪ್ರತಿಭಟನೆ ಮಾಡ್ತಿದ್ರು. ಆಗ ಈ ದುರ್ಘಟನೆ ನಡೆಯಿತು ಎನ್ನುವುದೇ ತರ್ಕರಹಿತ. ಗಾರ್ಡುಗಳು ಸೇರಿದಂತೆ ಡೆಪ್ಯೂಟಿ ರೇಂಜ್ ಫಾರೆಸ್ಟ್ ಆಫೀಸರ್, ರೇಂಜ್ ಫಾರೆಸ್ಟ್ ಆಫೀಸರ್ ಗಳು, ಎಸಿಎಫ್ ಗಳು ಮತ್ತು ಡಿ.ಸಿ.ಎಫ್. ಏನು ಮಾಡುತ್ತಿದ್ದರು ? ಇದರ ಬಗ್ಗೆ ಕುಮಾರ ರೈತ ಡಾಟ್ ಕಾಮ್ ನಲ್ಲಿ ಪ್ರಕಟವಾಗಿರುವ ಈ ವರದಿ ಗಮನಿಸಿ
ವಿಶೇಷ ವರದಿ:ಹುಲಿಗಳ ಆಗಮನ ಸಂಭ್ರಮದ ಸಂಗತಿಯಾಗಲಿಲ್ಲವೇ ?
ಗಸ್ತು ಸಿಬ್ಬಂದಿಯ ಕಾರ್ಯಕ್ಷಮತೆಯ ಮೇಲೆ ಸಂಬಂಧಿತ ವಲಯದ ಎ.ಸಿ.ಎಫ್, ಆರ್.ಎಫ್.ಓ. ಮತ್ತು ಡಿ.ಆರ್.ಎಫ್.ಓ. ನಿಗಾ ಇಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಅರಣ್ಯ ರಕ್ಷಣೆಯ ತಮ್ಮ ಮೂಲಭೂತ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುತ್ತಾರೆ ಎಂಬ ಅಭಿಪ್ರಾಯವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಸಹ ಪಟ್ಟಿದ್ದಾರೆ.
ಈ ವಿಶೇಷ ವರದಿಯನ್ನೂ ಓದಿ:ತಮಿಳುನಾಡು ಅರಣ್ಯ ಇಲಾಖೆ ಬದ್ಧತೆ ಕರ್ನಾಟಕದವರಿಗೇಕಿಲ್ಲ ?
ಉನ್ನತ ಮಟ್ಟದ ತನಿಖಾ ಸಮಿತಿ ಇದೇ ಜುಲೈ ೧೦ಕ್ಕೆ ಅಂತಿಮ ವರದಿ ನೀಡಲಿದೆ. ಆದರೆ ವನ್ಯಜೀವಿಧಾಮದ ಸಂಬಂಧಿಸಿದ ಅಧಿಕಾರಿಗಳು ತಪ್ಪೆಸಗಿದ್ದಾರೆ ಎಂಬುದು ನಿರ್ವಿವಾದ. ಐದು ಹುಲಿಗಳ ಕಗ್ಗೊಲೆಯಾಗಿದೆ. ಇದು ಕರ್ನಾಟಕ ರಾಜ್ಯ ಸರ್ಕಾರಕ್ಕೆ, ಅರಣ್ಯ ಇಲಾಖೆಗೆ ತೀವ್ರ ಮುಜುಗರದ ಸಂಗತಿ ! ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತಷ್ಟೇ ಮಾಡದೇ ಸೂಕ್ತ ವಿಚಾರಣೆ ನಂತರ ಉದ್ಯೋಗಗಳಿಂದಲೇ ವಜಾಗೊಳಿಸಿದರೆ ಮಾತ್ರ ಮೃತ ಹುಲಿಗಳ ಸಾವಿಗೆ ನ್ಯಾಯ ಸಿಗಬಹುದು.