ಚಾಮರಾಜ ನಗರ ಜಿಲ್ಲೆ, ಹನೂರು ತಾಲ್ಲೂಕಿನ ಮಲೈ ಮಹದೇಶ್ವರ ವನ್ಯಜೀವಿಧಾಮದ ಹೂಗ್ಯಂ ವಲಯದಲ್ಲಿ ತಾಯಿ ಹುಲಿಯೂ ಸೇರಿ ನಾಲ್ಕು ಮರಿಗಳ ಕಗ್ಗೊಲೆ ನಡೆದಿದೆ. ಈ ಹೃದಯ ವಿದ್ರಾವಕ ದಾರುಣ ಘಟನೆ ಜೂನ್ ೨೬, ೨೦೨೫ರಂದು ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ವಿಷ ಹಾಕಿರುವುದೇ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರದ ವರದಿಯಿಂದ ನಿಜಾಂಶ ಗೊತ್ತಲಿದೆ. ಆದರೆ ಹುಲಿಗಳ ಸಾವು ಸಹಜವಾಗಿ ಆಗಿರುವುದಲ್ಲ, ಅದು ಕಗ್ಗೊಲೆಗಳು ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ !

ದುರ್ಘಟನೆ ಬೆಳಕಿಗೆ ಬರುತ್ತಿದಂತೆಯೇ ವನ್ಯಜೀವಿ ಸಂರಕ್ಷಣೆಯಲ್ಲಿ ಆಸಕ್ತಿ ಇರುವವರು, ಪರಿಸರವಾದಿಗಳು ಅಪಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಎಕ್ಸ್, ಫೇಸ್ಬುಕ್, ಇನ್ಸ್ಸ್ಟಾಗ್ರಾಮ್ ಸೇರಿದಂತೆ ಅನೇಕ ತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕರ್ನಾಟಕದ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ವಲಯದಲ್ಲಿ ಕೆಲಸ ಮಾಡುತ್ತಿರುವ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. “ಕರ್ನಾಟಕ ಸರ್ಕಾರ ಹುಲಿಗಳ ಸಂರಕ್ಷಣೆಯಲ್ಲಿ ವಿಫಲವಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯವನ್ನು ಕರ್ನಾಟಕದ ಆರನೇ ಹುಲಿ ಮೀಸಲು ಪ್ರದೇಶವೆಂದು ಗೊತ್ತುಪಡಿಸಲು ಶಿಫಾರಸು ಮಾಡಿತ್ತು. ಆದರೆ ರಾಜಕೀಯ ಕಾರಣಗಳಿಗಾಗಿ (ಮತಬ್ಯಾಂಕ್) ಆಗಿನ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಎನ್ಟಿಸಿಎ ಶಿಫಾರಸನ್ನು ಸ್ವೀಕರಿಸದಂತೆ ಮನವೊಲಿಸಿದರು. ಎಂಎಂ ಹಿಲ್ಸ್ ಅನ್ನು ಹುಲಿ ಮೀಸಲು ಪ್ರದೇಶವೆಂದು ಘೋಷಿಸಿದ್ದರೆ ಈ ಹುಲಿಗಳು ಉತ್ತಮ ರಕ್ಷಣೆಯಲ್ಲಿ ಬದುಕುಳಿಯುತ್ತಿದ್ದವು” ಎಂದು ಜೋಸೆಫ್ ಹೂವರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡು, ವನ್ಯಜೀವಿ ಸಂರಕ್ಷಣೆ ವಿಷಯಗಳಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳನ್ನು ಎಚ್ಚರಿಸುವಲ್ಲಿ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವ ವಿನೋದ್ ಕುಮಾರ್ ಬಿ ನಾಯಕ್ ಅವರು ದುರ್ಘಟನೆ ಬಗ್ಗೆ ಅಪಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ ಇದು ಘೋರ ದುರಂತ. ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀನ್ಯಂ ಅರಣ್ಯದಲ್ಲಿ ದುಷ್ಕರ್ಮಿಗಳ ವಿಷ ಪ್ರಾಶನಕ್ಕೆ 5 ಹುಲಿಗಳು ಮೃತಪಟ್ಟಿವೆ. ಇದು ರಾಜ್ಯದ ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ನಡೆದಿರುವ ಅತಿ ದೊಡ್ಡ ದುರಂತ. ಸ್ಥಳೀಯ ಅಧಿಕಾರಿಗಳ ಬೇಜವಾಬ್ದಾರಿ, ಕಾಡಂಚಿನ ಗ್ರಾಮಗಳ ಜನರ ದ್ವೇಷಕ್ಕೆ ಅತಿ ಅಪರೂಪದ ಹುಲಿ ಕುಟುಂಬವೇ ಸರ್ವನಾಶವಾಗಿದೆ. ಮಲೈ ಮಹದೇಶ್ವರ ಕಾಡು ಹುಲಿ ಸಂತತಿ ಹೆಚ್ಚಳಕ್ಕೆ ಬೇಕಾದ ಎಲ್ಲ ಅಗತ್ಯ ವಾತಾವರಣವನ್ನು ಹೊಂದಿದೆ. ಇಲ್ಲಿ ತಾಯಿ ಮತ್ತು 4 ಹುಲಿಗಳು ಮೃತಪಟ್ಟಿರುವುದು, ಇಡಿ ವನ್ಯಜೀವಿ ಸಂರಕ್ಷಣಾ ಯೋಜನೆಗೇ ದೊಡ್ಡ ಹೊಡೆತ ಕೊಟ್ಟಂತಾಗಿದೆ. ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳು ಗುತ್ತಿಗೆದಾರರಾಗಿಬಿಟ್ಟಿದ್ದಾರೆ. ಕಾಡು ಕಾಯುವ ಕೆಲಸ ಬಿಟ್ಟು ಉಳಿದೆಲ್ಲವನ್ನೂ ಮಾಡುತ್ತಿದ್ದಾರೆ. ಭ್ರಷ್ಟರು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ವರ್ಗ ಮಾಡಿಸಿಕೊಂಡು ಹೋಗಿ ಕಾಡನ್ನು ಹಾಳು ಮಾಡುತ್ತಿದ್ದಾರೆ. ಸರ್ಕಾರವು ಅರಣ್ಯ ಇಲಾಖೆಯಲ್ಲಿ ಬಿಗಿ ಆಡಳಿತ ತರದಿದ್ದರೆ ಇಡಿ ಅರಣ್ಯವನ್ನೇ ಭ್ರಷ್ಟರು ನುಂಗಿ ನೀರು ಕುಡಿಯುವ ಅಪಾಯವಿದೆ” ಎಂದಿದ್ದಾರೆ.

ವನ್ಯಜೀವಿ ಛಾಯಾಗ್ರಹಕ, ವನ್ಯಜೀವಿಗಳ ಮಹತ್ವದ ಬಗ್ಗೆ ಮುಖ್ಯ ವಾಹಿನಿಯ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅರಿವು ಮೂಡಿಸಲು ಶ್ರಮಿಸುತ್ತಿರುವ ಕೆ.ಎಸ್.‌ ಸಿದ್ದರಾಜ್‌ ಅವರು ದುರ್ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. “ಐದು ಹುಲಿಗಳ ಸಾವು, ಇಲಾಖೆಯ ವೈಫಲ್ಯಕ್ಕೆ ಸಾಕ್ಷಿ. ಅಧಿಕಾರಿಗಳು ಮತ್ತು ಸಿಬ್ಬಂದಿ ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಈ ದುರಂತವೇ ನಿದರ್ಶನ” ಎಂದಿದ್ದಾರೆ.

“ತುಂಬಾ ದುಃಖಕರ, ಹುಲಿಗಳಂಥ ಭವ್ಯ ಪ್ರಾಣಿಗಳ ಜೀವನವನ್ನು ತುಂಬ ದುಃಖಕರವಾಗಿ ಅಂತ್ಯಗೊಳಿಸಲಾಗಿದೆ. ಇದರಿಂದ ರಾಜಕಾರಣಿಗಳು ನರಕಕ್ಕೆ ಹೋಗುತ್ತಾರೆ. ಅವುಗಳಿಗೆ ಕೇಂದ್ರ ಸರ್ಕಾರದಿಂದ ಉತ್ತಮ ರಕ್ಷಣೆ ಬೇಕು”
– ಎಲ್ ಜಯದೇವ

ಛೇ…. ಎಂತಹ ದುರಂತ ಇದು
-ಶ್ರೀದೇವಿ ಕೆರೆಮನೆ, ಖ್ಯಾತ ಸಾಹಿತಿ

ಎಂಥ ಸುಂದರ ವನ್ಯಜೀವಿ. ಅದೂ‌ ಹುಲಿಗಳ ಹೀಗೆ ಸಾಮೂಹಿಕ ಸಾವು ರಾಜ್ಯಕ್ಕೆ, ರಾಜ್ಯದ ಅರಣ್ಯ ಸಂಪತ್ತು, ಸೊಬಗಿಗೆ ಮಾರಕವೂ ಹೌದು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
-ಗಿರಿಧರ್‌ ಗಾಡಿಕೊಪ್ಪ

ಇದು ನಿಜಕ್ಕೂ ಬೇಸರದ ಸಂಗತಿ… ತಪ್ಪಿತಸ್ಥರನ್ನು ಹಿಡಿದು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ರಾಷ್ಟ್ರೀಯ ಪ್ರಾಣಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ. ಅಂತಹ ರಾಷ್ಟ್ರೀಯ ಪ್ರಾಣಿಯನ್ನು ಕೊಂದಿರುವ ಪಾಪಿಗಳು ತಕ್ಕ ಬೆಲೆ ತೆರಲೇಬೇಕು
-ಶ್ರೀವತ್ಸ್ ಎಂ.ಸುಬೋಧ್

ಮಾದಪ್ಪನ ಕಾಡಿನಲ್ಲಿ ಎಂಥ ದುರ್ಗಟನೆ. ಮಾದಪ್ಪನ ವಾಹನವನ್ನು ವಿಷ ಪ್ರಾಷಣ ಮಾಡಿ ಕೊಂದಿರುವ ಇವರಿಗೆ ಮನುಷ್ಯರಾಗಲಿಕ್ಕೆ ಯೋಗ್ಯರಲ್ಲ……ಈ ವಿಷಯದಿಂದ ದುಃಖ, ರೋಷ ಒಮ್ಮೆಲೇ ಬರುತಿದೆ. ಕರ್ನಾಟಕ ರಾಜ್ಯ ವನ್ಯ ಸಂಪತಿನ ಇತಿಹಾಸದಲ್ಲೇ  ಕರಾಳ ದಿನ. 5 ಹುಲಿಗಳನ್ನು ವಿಷ ಹಾಕಿ ಕೊಂದ್ದಾರೆ. ಇದು ರಾಷ್ಟ್ರೀಯ ದುರಂತ.
-ಶ್ರೀನಿವಾಸ್

ಅಮಾನವೀಯ ಮತ್ತು ಅತ್ಯಂತ ದುಷ್ಟತನದ ಕೃತ್ಯ. ಮನುಷ್ಯ ಪ್ರಾಣಿಯೇ ಈ ಜಗತ್ತಿಗೆ ಅತಿ ಅಪಾಯಕರ –ವ್ಯೋಮ್ ಎಂ.

ಕಾಡು ಪ್ರಾಣಿಗಳ ದುರಂತ ಸಾವಿಗೆ ಕಾರಣಯಾರು ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕು. ವನ್ಯ ಜೀವಿ ಸಂರಕ್ಷಣೆ ಮಾಡಬೇಕಾದವರೇ ವನ್ಯ ಜೀವಿಗಳ ದುಸ್ಥಿತಿಗೆ ಕಾರಣವಾಗಿದ್ದರೇ ಇದೊಂದು ದೊಡ್ಡ ದುರಂತ.
-ಶಿವಣ್ಣ ನಾಯ್ಕ್

ಅಯ್ಯೋ! ಛೇ! ಎಂತಾ ಕಗ್ಗೊಲೆ! ಹೀಗೆ ವಿಷವಿಕ್ಕಿದವರನ್ನು ಹುಲಿಗಳಿಗೆ ಬಲಿ ಕೊಟ್ಟು ಅವರ ಅಂತ್ಯದ ಫೋಟೋ ಎಲ್ಲೆಡೆ ಹಂಚಬೇಕು. -ದಯಾನಂದ ಗುರುಸಿದ್ದಯ್ಯ

ಅಧಿಕಾರಿಗಳು ನಾಯಕರ ರೆಸಾರ್ಟ್ ಗಳಲ್ಲಿ ಕಾವಲು ಕಾಯುವವರಾದರೆ ಇನ್ನೇನಾಗುತ್ತದೆ.‌ ಮಲೆ ಮಹದೇಶ್ವರ ವನ್ಯಧಾಮ ನಾಗರಹೊಳೆ, ಬಂಡೀಪುರಕ್ಕಿಂತ ಹೆಚ್ಚು ಸುರಕ್ಷಿತ ಎಂಬ ಮಾತು ಸುಳ್ಳಾಯಿತು.
-ಲೋಕೇಶ್‌ ಕಾರ್ಯಗ

ಚೆಲುವ ಚಾಮರಾಜನಗರ ವನ್ನು ಭ್ರಷ್ಟರಿಂದ ಉಳಿಸಲು ಅಗತ್ಯ ಕ್ರಮಗಳು ಜರುಗಬೇಕು. ಮಾದೇಶ್ವರನ ಸನ್ನಿದಿಯಲ್ಲಿ ಇದೆಂತ ದುರ್ಗಟನೆ.
– ಜನಪದ ಸಿರಿ ಕನ್ನಡ

ನಿಜಕ್ಕೂ ಘೋರ ದುರಂತ. ಕಟ್ಟು ನಿಟ್ಟಿನ ಕ್ರಮ ಆಗಬೇಕು
-ಬಸವರಾಜು ಎಂ. ಶ್ರೇಷ್ಠ

ಭ್ರಷ್ಟರ ನಡಿಗೆ. ನಾಡಿನಿಂದ ಕಾಡಿಗೆ !
ಇದು‌ ನಿಜ ಆದರೆ  ಕಾಡು ಬಂಜರು ಭೂಮಿ ಅಗುವುದು ದೂರವೇನಿಲ್ಲ !!
ದುರಂತ.
-ಮಲ್ಲಿಕಾರ್ಜುನ ನಿಡಗುಂದಿ

ಅಯ್ಯೋ, 5 ಹುಲಿಯ ಪರಿಸರ ಬೆಲೆ ಇವರಿಗೆ ಗೊತ್ತೇ ?
-ರಮೇಶ್‌ ಕಿಕ್ಕೇರಿ

ಈಗಾಗಲೇ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಹುಲಿಗಳ ಕಗ್ಗೊಲೆ ಭಾರಿ ಸುದ್ದಿಯಾಗಿದೆ. ಅಪಾರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ದುರ್ಘಟನೆಯಿಂದ ವನ್ಯಜೀವಿ ಸಂರಕ್ಷಣೆ ವಿಷಯದಲ್ಲಿ ಕರ್ನಾಟಕ ಸರ್ಕಾರದ ವರ್ಚಸ್ಸು ಕುಗ್ಗಿದೆ. ವಿಶೇಷವಾಗಿ ಅರಣ್ಯ ಇಲಾಖೆಯ ದಕ್ಷತೆ ಕುರಿತು ಬೇಸರ ವ್ಯಕ್ತವಾಗುತ್ತಿದೆ. ಅರಣ್ಯ ಇಲಾಖೆಗೆ ಹೊಸ ವರ್ಚಸ್ಸು ತಂದು ಕೊಡಲು ಶ್ರಮಿಸುತ್ತಿರುವ ಸಚಿವ ಈಶ್ವರ್ ಖಂಡ್ರೆ ಅವರು ತನಿಖೆಗೆ ಆದೇಶಿಸಿದ್ದಾರೆ. ಆದರೆ ದುರ್ಘಟನೆ ನಡೆದು ಹೋಗಿದೆ.

Similar Posts

Leave a Reply

Your email address will not be published. Required fields are marked *