ರೂಪಕ ಬಳಸಿಕೊಂಡು ಮನುಷ್ಯರ ಒಳಗಿರುವ ವ್ಯಾಘ್ರತನವನ್ನು ಮಲೆಯಾಳಂ ಭಾಷೆಯ “ಪುಲಿಮಾಡ” (ಹುಲಿಯ ಗುಹೆ) ಹೇಳಿದೆ. ಇಲ್ಲಿ ಇದನ್ನು ಚಿತ್ರಕಥೆಗಾರ, ನಿರ್ದೇಶಕ ಎ.ಕೆ. ಸಾಜನ್ ನಿರೂಪಿಸಿರುವ ರೀತಿ ಬಹು ಸ್ವಾರಸ್ಯಕರ. ರೂಪಕದ ಕಥೆಗೆ ಥ್ರಿಲ್ಲರ್ ಸ್ವರೂಪ ಕೊಟ್ಟು ಬೆಳೆಸಿಕೊಂಡು ಹೋಗುವ ಮೂಲಕ ಪ್ರೇಕ್ಷಕರನ್ನು ಕೊನೆಯ ತನಕ ಹಿಡಿದಿಟ್ಟುಕೊಳ್ಳಲು ಯಶಸ್ವಿಯಾಗುತ್ತಾರೆ.
ವಿನ್ಸೆಂಟ್, ಓರ್ವ ಪೊಲೀಸ್ ಕಾನ್ಸಸ್ಟೇಬಲ್. ವಯನಾಡಿನ ಕಾಡು ಪ್ರದೇಶದ ವ್ಯಾಪ್ತಿಯಲ್ಲಿ ಕೆಲಸ. ದಟ್ಟಡವಿ ನಡುವೆಯೇ ಇರುವ ಮನೆಯಲ್ಲಿ ಹುಟ್ಟಿ ಬೆಳೆದವನು. ಬಾಲ್ಯದಿಂದಲೂ ಏಕಾಂಗಿತನ ಮನೋಭಾವ. ಈತನ ಬಾಲ್ಯದಲ್ಲಿಯೇ ತಂದೆ ಮೃತರಾಗಿದ್ದಾರೆ. ತಾಯಿ, ಮಾನಸಿಕ ಅಸ್ವಸ್ಥೆ. ಇದು ತನಗೂ ದಾಟಬಹುದು ಎಂಬ ದಿಗಿಲು. ಇದರಿಂದಲೇ ಮದುವೆ ದಿನಗಳನ್ನು ಮುಂದೂಡುತ್ತಾ ಬಂದಿದ್ದಾನೆ. “ನಿನಗೇನೂ ಆಗಿಲ್ಲ; ಮಾನಸಿಕವಾಗಿ ಆರೋಗ್ಯವಾಗಿದ್ದೀಯಾ, ಮದುವೆ ಆಗು ಎಂದು ವೈದ್ಯರು ನೀಡಿದ ಭರವಸೆ ಈತನಲ್ಲಿ ಆತ್ಮ ವಿಶ್ವಾಸ ತುಂಬುತ್ತದೆ.
ಅದೇ ಪ್ರದೇಶದ ಯುವತಿಯೊಂದಿಗೆ ಮದುವೆಯೂ ನಿಶ್ಚಯವಾಗುತ್ತದೆ. ಬಂಧುಗಳು ಆಗಮಿಸುತ್ತಾರೆ. ಮದುವೆ ನಿಶ್ಚಿತವಾಗಿದ್ದ ಚರ್ಚಿಗೆ ತೆರಳಿದರೆ ಆಘಾತ. ಮದು ಮಗಳು ಓಡಿ ಹೋಗಿರುತ್ತಾಳೆ. ವಿನ್ಸೆಂಟ್ ತಾಳ್ಮೆಗೆಡುತ್ತಾನೆ. ಇಲ್ಲಿಂದ ಕಥೆ ಮತ್ತೊಂದು ತಿರುವು ಪಡೆಯುತ್ತದೆ. ಆತನೊಳಗಿದ್ದ ವ್ಯಾಘ್ರತನ ಕೆರಳುತ್ತದೆ. ಇದರೊಂದಿಗೆ ಮುಖಾಮುಖಿಯಾಗುತ್ತಾ ಅದನ್ನು ಮಣಿಸಲು ಪ್ರಯತ್ನಿಸುತ್ತಾನೆ.
ಇದೇ ಹಾದಿಯಲ್ಲಿ ಆತನ ಬದುಕಿನೊಳಗೆ ಅಪರಿಚಿತೆಯ ಪ್ರವೇಶವಾಗುತ್ತದೆ. ಅವಳೊಂದಿಗೆ ಆತನ ವರ್ತನೆ, ಆಕೆಯ ಮನೋಭಾವ ಎಲ್ಲವೂ ಎಳೆಎಳೆಯಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ನಿರೀಕ್ಷೆ ಮಾಡಿರದವುಗಳು ಘಟಿಸತೊಡಗುತ್ತವೆ.
ಅತ್ತ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಹುಲಿಗಾಗಿ ಹುಡುಕಾಡುತ್ತಿರುತ್ತಾರೆ. ಆದರೆ ಅವರ್ಯಾರಿಗೂ ಹುಲಿ ಸಿಗುವುದಿಲ್ಲ. ಆದರೆ ವಿನ್ಸೆಂಟ್, ಹುಲಿಗೆ ಅನಿರೀಕ್ಷಿತವಾಗಿ ಮುಖಾಮುಖಿಯಾಗುತ್ತಾನೆ. ಮುಂದೇನು ? ಈ ಸಿನೆಮಾ ನೆಟ್ ಫ್ಲಿಕ್ಸ್ ನಲ್ಲಿದೆ.
ವಿನ್ಸೆಂಟ್ ಪಾತ್ರಧಾರಿ ಜೊಜೊ ಜಾರ್ಜ್ ಅಭಿನಯ ದೀರ್ಘ ಸಮಯ ನೆನಪಿನಲ್ಲಿ ಉಳಿಯುತ್ತದೆ. ಡೈಲಾಗ್ ಡೆಲಿವರಿ ಜೊತೆಗೆ ಬಾಡಿ ಲಾಂಗ್ವೇಜ್ ಸಹ ಆ ಪಾತ್ರಕ್ಕೆ ತಕ್ಕಂತಿದೆ. ಸಿನೆಮಾದಲ್ಲಿ ಸ್ವಪ್ನದಲ್ಲಿ ಕಂಡಂತೆ ಕಂಡು ಮರೆಯಾಗುವ ಮಹಿಷ್ಮತಿ ಎಮಿಲಿ ಜಯರಾಮ್ ಪಾತ್ರಧಾರಿ ಐಶ್ವರ್ಯ ರಾಜೇಶ್ ಅವರ ನಟನೆ ಅತ್ಯುತ್ತಮ. ನಟನೆ ಅವಧಿ ಕಿರಿದಾದರೂ ಲೀಲಾಜಾಲ ಅಭಿನಯದ ಮೂಲಕ ಮನ ಸೆಳೆಯುತ್ತಾರೆ. ನಿರ್ದೇಶಕರು ಆಯಾ ಪಾತ್ರಗಳಿಗೆ ಹೊಂದಿಕೊಳ್ಳುವ ಕಲಾವಿದರನ್ನೇ ಆಯ್ಕೆ ಮಾಡಿರುವುದು ಗಮನಾರ್ಹ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪಾತ್ರಧಾರಿ ಚೆಂಬರನ್ ವಿನೋದ್ ಜೋಸ್ ಅಭಿನಯ ಎಂದಿನಂತೆ ಸಹಜ.
ಎ.ಕೆ. ಸಾಜನ್ ಅವರು ಕಥೆ, ಚಿತ್ರಕಥೆ, ನಿರ್ದೇಶನದ ಜೊತೆಗೆ ಸಂಕಲನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಎಲ್ಲವುಗಳಿಗೂ ನ್ಯಾಯ ಒದಗಿಸಿದ್ದಾರೆ. ಛಾಯಾಗ್ರಹಣ ರಮ್ಯವಾಗಿ ಕಥೆಯನ್ನು ಮರೆಸುವ ಮಟ್ಟಿಗಿಲ್ಲ. ಚಿತ್ರಕಥೆ ಕೇಳುವುದನ್ನು ವೇಣು ಸೆರೆ ಹಿಡಿದಿದ್ದಾರೆ. ರಾಜೇಶ್ ದಾಮೋದರನ್, ಸಿಜು ವಡಕ್ಕನ್ ನಿರ್ಮಾಪಕರಾಗಿರುವ “ಪುಲಿಮಾಡ” ಅಕ್ಟೋಬರ್ 23, 2023ರಲ್ಲಿ ಥಿಯೇಟರ್ ಗಳಲ್ಲಿ ತೆರೆ ಕಂಡಿದೆ.