ಬೆಳೆಗಳಿಗೆ ಉಪಕಾರಿಯಾದ ಕೀಟಗಳು ಇರುವಂತೆ ಬಾಧೆ ನೀಡುವ ಕೀಟಗಳೂ ಇವೆ. ಈ ಕೀಟಗಳು ಆಹಾರ ಅರಸುವುದು ಅತ್ಯಂತ ಸಹಜ ಕ್ರಿಯೆ. ಬಾಧೆ ನೀಡುವ ಕೀಟಗಳಿಗೆ ಬದಲಿ ಆಹಾರದ ಬೆಳೆ ನೀಡಿದಾಗ ಸಮಸ್ಯೆ ಇರುವುದಿಲ್ಲ. ಇಂಥ ಸರಳ ಅಂಶವನ್ನು ಅರ್ಥಮಾಡಿಕೊಳ್ಳದೇ ರಾಸಾಯನಿಕ ಕೀಟನಾಶಕ ಬಳಸಿದಾಗ ಆಗುವ ಅನಾಹುತ ಅಪಾರ. ಇದರಿಂದ ಬೆಳೆಗಳಿಗೆ ಉಪಕಾರಿಯಾದ ಕೀಟಗಳೂ ಸಾವನ್ನಪ್ಪುತ್ತವೆ. ಫಸಲು ಮತ್ತು ಅಂತರ್ಜಲ ಕಲುಷಿತವಾಗುತ್ತದೆ. ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳೂ ಇಲ್ಲವಾಗುತ್ತವೆ. ಇದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಇಂಥ ತೊಂದರೆಗಳನ್ನು ಅತ್ಯಂತ ಸರಳ ಕ್ರಮ ಅನುಸರಿಸುವುದರಿಂದ ನಿವಾರಿಸಿಕೊಳ್ಳಬಹುದು.
ಹಾನಿಕಾರಕ ಕೀಟಗಳು: ಬೆಳೆಯನ್ನು ತೀವ್ರವಾಗಿ ಬಾಧಿಸುವ ಕೀಟಗಳಲ್ಲಿ ದುಂಡುಹುಳು ಸಹ ಸೇರಿದೆ. ಈ ಮಾರಕ ಕೀಟಗಳು ರಾಸಾಯನಿಕ ಕೀಟನಾಶಕಗಳಿಗೂ ಬಗ್ಗುವುದಿಲ್ಲ. ಇದನ್ನು ನಿಯಂತ್ರಿಸಲು ಖರ್ಚು ಮಾಡುವ ಹಣ, ತೊಡಗಿಸುವ ಶ್ರಮ ಕೂಡ ವ್ಯರ್ಥವಾಗುತ್ತದೆ. ದುಂಡುಹುಳುಗಳು ಜಮೀನಿನ ಮಣ್ಣಿನಲ್ಲಿ ವೃದ್ದಿಯಾಗುತ್ತವೆ. ಇವುಗಳನ್ನು ನಿಯಂತ್ರಿಸಲು ಕೆಲವು ಕ್ರಮಗಳಿವೆ. ಕೆಲ ಅವಧಿ ಜಮೀನು ಬೇಸಾಯ ಮಾಡದೇ ಹಾಗೆ ಬಿಡುವುದು, ಜಮೀನಿನಲ್ಲಿ ಹುಲ್ಲು-ಸತ್ತೆ-ಸದೆ ಹರಡಿ ಬೆಂಕಿ ಹಾಕಿ ಹುಳುಗಳನ್ನು ನಾಶಮಾಡುವುದು, ದುಂಡುಹುಳು ಬಾಧೆ ನಿರೋಧಕ ತಳಿ ಬೆಳೆಸುವುದು, ದುಂಡುಹುಳು ಆಕರ್ಷಿಸದ ಬೆಳೆ ಬೆಳೆಯುವುದು ಇತ್ಯಾದಿ ಕ್ರಮಗಳು. ಆದರೆ ಇವ್ಯಾವುವೂ ಪರಿಣಾಮಕಾರಿಯಲ್ಲ.
ಚೆಂಡು ಹೂ ಇರುವ ಜಮೀನುಗಳಲ್ಲಿ ದುಂಡುಹುಳು ನಿಯಂತ್ರಣದಲ್ಲಿರುವುದು ಕಂಡು ಬಂದಿದೆ. ಈ ಕೀಟಗಳನ್ನು ಹೆಚ್ಚಾಗಿ ಆಕರ್ಷಿಸುವ ಆಲೂಗೆಡ್ಡೆ, ಟೊಮ್ಯಾಟೋ, ಸ್ಟ್ರಾಬೆರಿ, ಗುಲಾಬಿ ಇತ್ಯಾದಿ ಬೆಳೆಗಳಲ್ಲಿ ಚೆಂಡು ಹೂ ಅನ್ನು ಬಲೆ ಬೆಳೆಯಾಗಿ ಬೆಳೆಯುವುದು ಪರಿಣಾಮಕಾರಿ. ಈ ಹೂ ಬೆಳೆಯತೊಡಗಿದಂತೆ ಇದರ ಬೇರು, ವಿಶಿಷ್ಟ ಬಗೆಯ ದ್ರವ ಒಸರಿಸುತ್ತದೆ. ಇದು ಮಣ್ಣಿನಲ್ಲಿ ವೃದ್ದಿಯಾದ ದುಂಡುಹುಳು ನಾಶಪಡಿಸಲು ಸಹಕಾರಿ.
ಕಪ್ಪುಮಣ್ಣಿನಲ್ಲಿ ನೀರಾವರಿಯಲ್ಲಿ ಹತ್ತಿ ಬೆಳೆದಾಗ ಕಂದುಕಾಯಿಕೊರಕ, ಅಮೆರಿಕನ್ ಕಾಯಿಕೊರಕ ಬಾಧೆ ಸಾಮಾನ್ಯವೆನ್ನಿಸಿದೆ. ಇವುಗಳನ್ನು ನಿಯಂತ್ರಿಸಲು ಚೆಂಡುಹೂ ಬೆಳೆಯನ್ನು ಪೂರಕವಾಗಿ ಬೆಳೆಯಬೇಕು. ಹತ್ತಿಗಿಡಗಳ ನಡುವೆ ಚದುರಿದಂತೆ ಚೆಂಡುಹೂ ಸಸಿಗಳನ್ನು ನೆಡಬೇಕು. ಆಗ ಕಾಯಿಕೊರಕಗಳು ಚೆಂಡುಹೂವಿನತ್ತ ಆಕರ್ಷಿತವಾಗುತ್ತವೆ. ಅಲ್ಲೇ ಮೊಟ್ಟೆಗಳನ್ನು ಇಡುತ್ತವೆ. ಇದರಿಂದ ಹತ್ತಿಗೆ ಇವುಗಳ ಬಾಧೆ ಗಣನೀಯವಾಗಿ ಕಡಿಮೆಯಾಗುತ್ತದೆ.
Interested in all AGRI matters