ಎಂಎಂ ಹಿಲ್ಸ್ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಐದು ಹುಲಿಗಳ ಹತ್ಯೆ ಪ್ರಕರಣ ಬೆಳಕಿಗೆ ಬಂದ ನಂತರ ಸ್ಥಳಕ್ಕೆ ಭೇಟಿ ನೀಡಿದ್ದೆ. ಆಗ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಪ್ರಕರಣದ ಆರೋಪಿಗಳ ಕುರಿತು ಅನುಮಾನ ವ್ಯಕ್ತಪಡಿಸಿದ್ದೆ. ಪ್ರಸ್ತುತ ಬಂದಿರುವ ಹುಲಿಗಳ ಸಾವಿನ ಕುರಿತ ಅಂತಿಮ ಮರಣೋತ್ತರ ಪರೀಕ್ಷೆ ಫಲಿತಾಂಶ ಸಹ ಆ ಅನುಮಾನಕ್ಕೆ ಪುಷ್ಟಿ ನೀಡಿದೆ.
ಮಲೆ ಮಹದೇಶ್ವರ ಬೆಟ್ಟ ಶ್ರೇಣಿಯ ವನ್ಯಜೀವಿಧಾಮದ ಹೂಗ್ಯಂ ರೇಂಜ್ ನಲ್ಲಿ ಒಂದು ತಾಯಿ ಹುಲಿ ಮತ್ತದರ ಮೂರು ಹೆಣ್ಣು ಹುಲಿ ಮರಿಗಳು ಮತ್ತು ಒಂದು ಗಂಡು ಹುಲಿ ಮರಿಯನ್ನು ಕಗ್ಗೊಲೆ ಮಾಡಿದ ದುರ್ಘಟನೆ ಜೂನ್ 26, 2025ರಂದು ಬೆಳಕಿಗೆ ಬಂತು.
ಈ ನಂತರ ನಾನು ಮತ್ತು ಗೆಳೆಯರಾದ ಸಿದ್ದಪ್ಪ ಮಳವಳ್ಳಿ ಅವರು ದುರ್ಘಟನೆ ನಡೆದಿದ್ದ ಸ್ಥಳಕ್ಕೆ ಭೇಟಿ ನೀಡಿದ್ದೆವು. ಅಲ್ಲಿ ನಾನು ಸಂಗ್ರಹಿಸಿದ ಮಾಹಿತಿ ಅನುಸಾರ ಇದು ಸಾಕಣೆ ಮಾಡಿದ ಹಸು ಕೊಂದ ಸೇಡು ತೀರಿಸಿಕೊಳ್ಳಲು ಮಾಡಿದ ಕೃತ್ಯವಲ್ಲ. ಹುಲಿಗಳ ಬೇಡಿಕೆ ಇರುವ ಅಂಗಾಂಗಗಳನ್ನು ಕತ್ತರಿಸಿ ಮಾರಾಟ ಮಾಡುವ ಜಾಲ ಮಾಡಿದ ದುಷ್ಕೃತ್ಯ ಎನಿಸಿತು. ಹಾಗಾಗಿ ಮುಂದಿನಂತೆ ಬರೆದಿದ್ದೆ.
ಹಳೇಗೌಡನ ದೊಡ್ಡಿಯ ಕೊನಪ್ಪ “ ನಾನು ಸಾಕಿದ್ದ ಹಸುವನ್ನು ಹುಲಿ ಕೊಂದಿದ್ದರಿಂದ ಸಿಟ್ಟಾಗಿ ಪೊರೆಟ್ ಕ್ರಿಮಿನಾಶಕ ತಂದು ಹಸುವಿನ ದೇಹಕ್ಕೆ ಸಿಂಪಡಿಸಿದೆ” ಎಂದಿದ್ದಾನೆ. ಈ ಕೃತ್ಯಕ್ಕೆ ಕೊಪ್ಪ ಗ್ರಾಮದ ಮಾದುರಾಜು, ನಾಗರಾಜು ಸಹಕರಿಸಿದರು ಎಂದು ಒಪ್ಪಿಕೊಂಡಿದ್ದಾನೆ. ಇವನ ಹೇಳಿಕೆಯನ್ನಷ್ಟೇ ನಂಬಿ ಅರಣ್ಯ ಇಲಾಖೆ ಎಫ್.ಐ.ಆರ್ ದಾಖಲಿಸಿದೆ. ಮೂವರು ಆರೋಪಿಗಳು ಸದ್ಯ ಕೊಳ್ಳೇಗಾಲ ಸಬ್ ಜೈಲಿನಲ್ಲಿ ಇದ್ದಾರೆ.
ಹೆಣ್ಣುಹುಲಿ ಮತ್ತದರ ನಾಲ್ಕು ಮರಿಗಳನ್ನು ಕೊಂದ ಆರೋಪಿಗಳಾದ ಕೋನಪ್ಪ,ಮಾದುರಾಜು ಮತ್ತು ನಾಗರಾಜು
ಈ ಆರೋಪಿಗಳ ಹೇಳಿಕೆಯನ್ನಷ್ಟೇ ನಂಬಿ ಸುಮ್ಮನಾಗಬೇಕೇ ? ಖಂಡಿತ ಇಲ್ಲ. ಮೇಲ್ನೋಟಕ್ಕೆ ಇವರು ಸಂಪೂರ್ಣ ಸತ್ಯ ಹೇಳುತ್ತಿಲ್ಲ ಎಂದು ಗೊತ್ತಾಗುತ್ತದೆ. ಏಕೆಂದರೆ ಹೆಣ್ಣು ಹುಲಿ ತನ್ನ ಮರಿಗಳೊಂದಿಗೆ ಇದ್ದಾಗ ಬೇಟೆಯಾಡಿ ಮಾಂಸ ತಿಂದಿದ್ದರೆ ( ಸಂಪೂರ್ಣವಾಗಿ ಒಮ್ಮೆಯೇ ತಿಂದಿರುವುದಿಲ್ಲ) ಅದನ್ನು ಬಿಟ್ಟು ದೂರ ಹೋಗಿರುವುದಿಲ್ಲ. ಮೊದಲನೇಯದಾಗಿ ಮರಿಗಳ ಸುರಕ್ಷತೆ, ಬೇಟೆಯಾಡಿದ ಪ್ರಾಣಿಯನ್ನು ಮತ್ತೊಂದು ಬೇಟೆ ಪ್ರಾಣಿ ಕೊಂಡೊಯ್ಯಬಹುದು ಎಂಬ ಆತಂಕದಿಂದ ಹತ್ತಿರದಲ್ಲಿಯೇ ಇರುತ್ತದೆ. ಇದರ ಕಣ್ಣು ತಪ್ಪಿಸಿ ಮೃತ ಹಸುವಿನ ಕಳೇಬರಕ್ಕೆ ವಿಷ ಸಿಂಪಡಿಸುವುದು ಅಸಾಧ್ಯದ ಮಾತು.
ಮರಿಗಳೊಂದಿಗೆ ಇರುವ ಹುಲಿ ಎಂದಿಗಿಂತಲೂ ಹೆಚ್ಚು ಜಾಗೃತವಾಗಿರುತ್ತದೆ. ತುಂಬ ಸನಿಹದಲ್ಲಿ ಇತರ ಪ್ರಾಣಿಗಳಾಗಲಿ, ಮನುಷ್ಯರಾಗಲಿ ಸುಳಿದರೆ ದಾಳಿ ಮಾಡುವ ಸಾಧ್ಯತೆ ಹೆಚ್ಚು. ಹೀಗಿರುವಾಗ ಹುಲಿ ಸನಿಹದಲ್ಲಿಯೇ ಇದೆ ಎಂದು ಗೊತ್ತಿದ್ದೂ ನಿರಾಯುಧರಾದ ಮೂವರು ಹೋಗಿ ವಿಷ ಸಿಂಪಡಿಸಿದರು ಎನ್ನುವುದು ನಂಬಲು ಸಾಧ್ಯವಿಲ್ಲ. ಈ ಮೂವರ ಜೊತೆ ಆಯುಧಗಳಿರುವ ಇನ್ನಿತರರು ಇದ್ದಿರಬಹುದು. ಹುಲಿಯ ಗಮನ ಬೇರೆಡೆ ಸೆಳೆದು ಹಸುವಿನ ಕಳೇಬರಕ್ಕೆ ವಿಷ ಸಿಂಪಡಿಸಿರಬಹುದು. ಮರಿಗಳು ಜೊತೆಯಲ್ಲಿರುವುದರಿಂದ ಹೆಣ್ಣು ಹುಲಿ ಹೆಚ್ಚು ಅನುಮಾನಿಸದೇ ಮಾಂಸ ತಿಂದು ಸಾವನ್ನಪ್ಪಿದೆ. ಇದಕ್ಕೂ ಮುನ್ನ ಇದರ ಕಣ್ಣೇದುರಿಗೆ ಮರಿಗಳು ಒದ್ದಾಡಿ ಸಾವನ್ನಪ್ಪಿವೆ.
ಮೃತ ಹುಲಿಗಳ ದೇಹದ ಅಂಗಾಂಶಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿತ್ತು. ವಿಷ ಸಿಂಪಡಣೆಯಾಗಿದ್ದ ಹಸುವಿನ ಮಾಂಸ ತಿಂದಿದ್ದರಿಂದ ಹುಲಿಗಳ ಸಾವು ಉಂಟಾಗಿದೆ ಎಂದು ಗೊತ್ತಾಗಿತ್ತು. ಆದರೆ ಪೂರ್ಣ ಮಾಹಿತಿಗೆ ಸಂಗ್ರಹಿಸಿದ್ದ ಅಂಗಾಂಶಗಳ ಸಂಪೂರ್ಣ ವಿಶ್ಲೇಷಣೆಗೆ ಕಾಯಬೇಕಿತ್ತು. ಪ್ರಸ್ತುತ ಅಂತಿಮ ವರದಿ ಬಂದಿದೆ.
ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ಅಭಯಾರಣ್ಯದಲ್ಲಿ ಐದು ಹುಲಿಗಳ ಸಾವಿನ ಕುರಿತಾದ ತನ್ನ ಅಂತಿಮ ವರದಿಯಲ್ಲಿ, ತನಿಖಾ ತಂಡವು ತಾಯಿ ಮತ್ತು ನಾಲ್ಕು ಮರಿಗಳ ಸಾವಿಗೆ ಕಾರ್ಬೋಫ್ಯೂರಾನ್ ಬಳಕೆಯೇ ಕಾರಣ ಎಂದು ಹೇಳಿದೆ. ಭಾರತದಾದ್ಯಂತ ಕಳ್ಳ ಬೇಟೆಗಾರರು ಹುಲಿಗಳು ಮತ್ತು ಚಿರತೆಗಳನ್ನು ಕೊಲ್ಲಲು ಈ ಅತ್ಯಂತ ವಿಷಕಾರಿ ಕೀಟನಾಶಕವನ್ನು ಸಾಮಾನ್ಯವಾಗಿ ಬಳಸುತ್ತಾರೆ.
ಹಸುವಿನ ಶವಕ್ಕೆ ಕಾರ್ಬೋಫ್ಯೂರಾನ್ ಹಾಕಿರುವ ಅಪರಾಧಿಗಳು ತಾವು ಏನು ಮಾಡುತ್ತಿದ್ದಾರೆಂದು ಚೆನ್ನಾಗಿ ತಿಳಿದಿದ್ದರು ಎಂದು ಹೇಳಬಹುದು. ಬಿಆರ್ಟಿ ಹುಲಿ ಮೀಸಲು ಪ್ರದೇಶಗಳಲ್ಲಿ ಒಂದು ವರ್ಷದೊಳಗೆ ಅನೇಕ ಹುಲಿಗಳು ಕಣ್ಮರೆಯಾಗಿವೆ. ಎಂಎಂ ಬೆಟ್ಟಗಳು ಮತ್ತು ಕಾವೇರಿ ವನ್ಯಜೀವಿ ಅಭಯಾರಣ್ಯಗಳಲ್ಲಿ ಬೇಟೆಯಾಡುವುದು ಸಾಕಷ್ಟು ವ್ಯಾಪಕವಾಗಿದೆ ಎಂದು ಹೇಳಬಹುದು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಜೋಸೆಫ್ ಹೂವರ್ ಅಭಿಪ್ರಾಯಪಡುತ್ತಾರೆ.
ರಾಜ್ಯ ಸರ್ಕಾರವು ಸಮರ್ಥ ಅರಣ್ಯ ವೀಕ್ಷಕರು ಮತ್ತು ಕಾವಲುಗಾರರನ್ನು ನೇಮಿಸಿದರೆ ಮಾತ್ರ ಈ ಹುಲಿ ಸಂರಕ್ಷಿತಾಣ್ಯ, ಅಭಯಾರಣ್ಯಗಳಲ್ಲಿ ಹುಲಿ ಸಂರಕ್ಷಣೆ ಕಾರ್ಯ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಹಿಂದಿನ ವಿಶೇಷ ವರದಿ ಸಿದ್ದಪಡಿಸುವ ಸಂದರ್ಭದಲ್ಲಿ ಈ ಪ್ರಕರಣವನ್ನು ಅರಣ್ಯ ಇಲಾಖೆ ತನಿಖೆ ಮಾಡಿದರಷ್ಟೇ ಸಾಲದು, ಸಿಐಡಿ ತನಿಖೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದೆ. ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಹೇಳಿರುವ ಸತ್ಯ ಸಹ ಇನ್ನೂ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಹೇಳುತ್ತಿದೆ. ಈ ದಿಶೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕು.