ರಾಷ್ಟ್ರೀಯ ವನ್ಯಪ್ರಾಣಿ ಹುಲಿಗಳ ಕಗ್ಗೊಲೆ ನಡೆದಿರುವ ಸ್ಥಳ ಚಾಮರಾಜ ನಗರ ಜಿಲ್ಲೆಯಲ್ಲಿದೆ. ನಿರ್ದಿಷ್ಟವಾಗಿ ಹನೂರು ತಾಲ್ಲೂಕು ಮಲೆ ಮಹದೇಶ್ವರ ವನ್ಯಜೀವಿ ವಿಬಾಗದ ಹೂಗ್ಯಂ ವಲಯದ ಮೀಣ್ಯಂ ಉಪ ವಲಯದಲ್ಲಿ ನಡೆದಿದೆ.
ಕಾಡಿನಲ್ಲಿ ತಮ್ಮ ಪಾಡಿಗೆ ಸಂಚರಿಸುತ್ತಿದ್ದ ತಾಯಿ ಹುಲಿ, ಐದು ಮರಿ ಹುಲಿಗಳ ಸಾವಿಗೆ ಕಾರಣಗಳೇನು ಎಂಬುದನ್ನು ನಿಖರವಾಗಿ ತಿಳಿಯಲು ಪರಿಸರ – ವನ್ಯಜೀವಿ ವಲಯದ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ತೊಡಗಿದ್ದಾರೆ. ಮುಖ್ಯವಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವನ್ಯಜೀವನ ತಜ್ಞರಾದ ಜೋಸೆಫ್ ಹೂವರ್, ವಿನೋದ್ ಕುಮಾರ್ ಬಿ. ನಾಯಕ್ ತಾವು ಸಂಗ್ರಹಿಸಿದ ಮಾಹಿತಿ ಹಂಚಿಕೊಂಡಿದ್ದಾರೆ.
ಜೋಸೆಫ್ ಹೂವರ್ ಅವರು “ಅರಣ್ಯ ಇಲಾಖೆಯ ಕೆಳಹಂತದ ನೌಕರರಿಗೆ ವೇತನ ಪಾವತಿಯಾಗಿಲ್ಲ. ಇವರೆಲ್ಲ ಸಣ್ಣ ಮೊತ್ತದ ದಿನಗೂಲಿ ಭತ್ಯೆ ಪಡೆಯುವವರು. ಸಂಬಳ ಕೊಡದೇ ಇದ್ದರೂ ಅರಣ್ಯ ಕಾವಲುಗಾರರಿಗೆ ಹೇಗೆ ಕೆಲಸ ಮಾಡಿ ಎಂದು ಹೇಳಲು ಸಾಧ್ಯ ? ಈ ರೀತಿ ವಾಚರ್ಸ್ ನೇಮಿಸಿಕೊಂಡು ಅವರಿಗೆ ಸಂಬಳ ಕೊಡುವುದಕ್ಕಾಗಿಯೇ ಗುತ್ತಿಗೆದಾರ ಇದ್ದಾರೆ. ಇವರಿಗೆಕೊಡಬೇಕಾದ ೨ ಕೋಟಿ ರೂಪಾಯಿಗಳನ್ನು ಅರಣ್ಯ ಇಲಾಖೆ ಬಾಕಿ ಉಳಿಸಿಕೊಂಡಿದೆ. ಸಹಜವಾಗಿಯೇ ತನ್ನ ಕೈಯಲ್ಲಿ ವೇತನ ಕೊಡುವುದು ಸಾಧ್ಯವಿಲ್ಲ ಎಂದು ಗುತ್ತಿಗೆದಾರ ಸುಮ್ಮನಾಗಿದ್ದಾರೆ” ಎಂದು ವಿವರಿಸಿದ್ದಾರೆ.
“ವೇತನ ಬಾರದಿರುವುದರಿಂದ ಆಕ್ರೋಶಗೊಂಡ ವಾಚರ್ಸ್ ಮೂರು ತಿಂಗಳ ಹಿಂದೆ ಹೋಗಿ ಸ್ಥಳೀಯ ಅರಣ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಊಟ ಮಾಡಲು ಸಹ ಹಣವಿಲ್ಲವೆಂದು ಅಲವತ್ತುಕೊಂಡಿದ್ದಾರೆ. ಆದರೂ ಅರಣ್ಯ ಇಲಾಖೆ ಸಮಸ್ಯೆ ನಿವಾರಣೆಗೆ ಮುಂದಾಗಿಲ್ಲ. ಇದರ ನಡುವೆ ೨ ಕೋಟಿ ರೂ ಬಾಕಿ ಉಳಿಸಿಕೊಂಡಿದ್ದರೂ ಮತ್ತೊಬ್ಬ ಗುತ್ತಿಗೆದಾರನಿಗೆ ಗುತ್ತಿಗೆ ಕೊಡಲು ಅರಣ್ಯ ಇಲಾಖೆ ಮುಂದಾಗಿದೆ ಎನ್ನುವ ಮಾತೂ ಇದೆ. ಇದರಲ್ಲಿ ಹಿರಿಯ ಅಧಿಕಾರಿಗಳು ತಪ್ಪೆಸಗಿರುವುದು ಸ್ಪಷ್ಟವಾಗಿದೆ” ಎಂದಿದ್ದಾರೆ.
“ಸ್ಥಳೀಯ ಡಿಸಿಎಫ್ ಚಕ್ರಪಾಣಿ ಹಿಂದೊಮ್ಮೆ ಕರ್ತವ್ಯದಿಂದ ಸಸ್ಪೆಂಡ್ ಆಗಿದ್ದರು. ಇಂಥ ಅಧಿಕಾರಿಯನ್ನು ಸೂಕ್ಷ್ಮ ವಲಯದ ಕಾರ್ಯಕಾರಿ ಹುದ್ದೆಗೆ ನೇಮಿಸಿರುವುದರಲ್ಲಿ ರಾಜ್ಯ ಸರ್ಕಾರದ ತಪ್ಪು ಸಹ ಇದೆ. ಡಿಸಿಎಫ್ ಗಿಂತಲೂ ಸಿಸಿಎಫ್ ಹಿರಿಯ ಅಧಿಕಾರಿಯಾಗಿರುತ್ತಾರೆ. ಇವರ ಕಚೇರಿ ಚಾಮರಾಜನಗರದಲ್ಲಿದೆ. ಈ ಹುದ್ದೆಯಲ್ಲಿ ಹಿರೇಲಾಲ್ ಇದ್ದಾರೆ. ಇವರು ಈ ಪ್ರಕರಣದಲ್ಲಿ ಸಮಸ್ಯೆ ಪರಿಹಾರಕ್ಕೆ ಏನಾದರೂ ಮಾಡಬೇಕಿತ್ತು. ಇವರಿಗಿಂತಲೂ ಮೇಲಿನ ಅಧಿಕಾರಿಗಳು ಸಹ ಸಮಸ್ಯೆ ನಿವಾರಣೆಗೆ ಮುಂದಾಗಿಲ್ಲ. ಇವರು ಸಹ ಈ ದುರ್ಘಟನೆಯ ಜವಾಬ್ದಾರಿ ಹೊರಬೇಕಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
“ನಿಯಮಿತವಾಗಿ ನಿಗದಿತ ವೇತನ ದೊರೆಯದ ಕಾರಣ ಸಮಸ್ಯೆಗಳಿಗೆ ಸಿಲುಕಿದ ಸ್ಥಳೀಯ ವಾಚರ್ಸ್ ಎಂದಿನ ನಿಗಾ ವಹಿಸಲು ಸಾಧ್ಯವಾಗಿಲ್ಲ. ಇದರ ಲಾಭವನ್ನು ದುಷ್ಕರ್ಮಿಗಳು ಬಳಸಿಕೊಂಡಿದ್ದಾರೆ. ಹುಲಿಗಳ ಸಾವಿಗೆ ಬೇಜವಾಬ್ದಾರಿತನ ವಹಿಸಿದ ಎಲ್ಲ ಹಂತದ ಸಿಬ್ಬಂದಿ – ಅಧಿಕಾರಿಗಳೂ ಮತ್ತು ಸರ್ಕಾರದವರು ಸಹ ಕಾರಣರಾಗಿದ್ದಾರೆ. ರಾಷ್ಟ್ರೀಯ ವನ್ಯಪ್ರಾಣಿ ಎನಿಸಿದ ಹುಲಿಗಳು ಘೋರವಾಗಿ ಸಾವನ್ನಪ್ಪಿವೆ. ಆಡಳಿತ ಎನ್ನುವುದು ಈ ಪರಿ ಅದಕ್ಷವಾದರೆ ಕರ್ನಾಟಕದಲ್ಲಿ ವನ್ಯಜೀವನವೇ ಉಳಿಯುವುದಿಲ್ಲ” ಎಂಬ ಆತಂಕವನ್ನು ಜೋಸೆಫ್ ಹೂವರ್ ವ್ಯಕ್ತಪಡಿಸಿದ್ದಾರೆ.
ಸಗಣಿ ಮಾಫಿಯಾ ಮತ್ತು ಜನಪ್ರತಿನಿಧಿಗಳ ಹಸ್ತಕ್ಷೇಪ ಹುಲಿಗಳಿಗೆ ಕಂಟಕವಾಯಿತೇ ಎಂಬ ಅನುಮಾನವನ್ನು ವಿನೋದ್ ಕುಮಾರ್ ಬಿ ನಾಯಕ್ ವ್ಯಕ್ತಪಡಿಸಿದ್ದಾರೆ. ಅದರ ಬಗ್ಗೆ ಅವರು ನೀಡಿರುವ ವಿವರಣೆ ಮುಂದಿದೆ.
“ಮಲೈ ಮಹದೇಶ್ವರ ವನ್ಯಜೀವಿಧಾಮದಲ್ಲಿ 5 ಹುಲಿಗಳಿಗೆ ವಿಷ ಹಾಕಿ ಕೊಂದ ಘಟನೆಯನ್ನು ವಿಶ್ಲೇಷಣೆ ಮಾಡಿದರೆ ಹೊರಬರುತ್ತಿರುವ ವಿಚಾರ ಇದು. ಮಲೈ ಮಹದೇಶ್ವರ ಅರಣ್ಯದಲ್ಲಿ ನೂರಾರು ಹಳ್ಳಿಗಳಿವೆ. ಕಾಡಂಚಿನ ಕೆಲ ಹಳ್ಳಿಗಳಲ್ಲಿ ಬೃಹದಾಕಾರದ ಸಗಣಿ ಗುಡ್ಡಗಳು ಕಾಣಸಿಗುತ್ತವೆ. ಈ ಕಾಡಿನಲ್ಲಿ ಎಗ್ಗಿಲ್ಲದೇ ಸಾವಿರಾರು ದನಗಳು ಮೇಯುವುದರಿಂದ ಹಳ್ಳಿಗಳಲ್ಲಿ ರಾಶಿ ರಾಶಿ ಸಗಣಿ ಸಂಗ್ರಹವಾಗುತ್ತದೆ. ದುರಂತವೇನೆಂದರೆ, ಈ ದನಗಳು ಕರ್ನಾಟಕದ ದನಗಳಲ್ಲ. ಇವು ಪಕ್ಕದ ತಮಿಳುನಾಡು ರಾಜ್ಯದ ಬರಗೂರು ಎನ್ನುವ ಪ್ರದೇಶದ ತಳಿಗಳು. ಅಂದರೆ, ತಮಿಳುನಾಡಿನ ಜನರು ಸಾವಿರಾರು ಸಂಖ್ಯೆಯಲ್ಲಿ ಈ ಬರಗೂರು ದನಗಳನ್ನು ಕರ್ನಾಟಕಕ್ಕೆ ರವಾನೆ ಮಾಡುತ್ತಾರೆ. ಅವುಗಳನ್ನು ಮಲೈ ಮಹದೇಶ್ವರ ಅರಣ್ಯದ ಅಂಚಿನಲ್ಲಿರುವ ಹಳ್ಳಿಗಳ ಜನರು ಸಂಗೋಪನೆ ಮಾಡುವ ಗುತ್ತಿಗೆ ಪಡೆಯುತ್ತಾರೆ. ತಮಿಳುನಾಡಿನ ದನಗಳು ಕರ್ನಾಟಕದ ಕಾಡನ್ನು ಯಥೇಚ್ಛವಾಗಿ ಮೇಯುತ್ತವೆ. ಅವುಗಳ ಹಾಲು ಬಳಸಿಕೊಂಡು, ಲಾರಿಗಟ್ಟಲೇ ಸಂಗ್ರಹವಾಗುವ ಸಗಣಿಯನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರುವ ದಂಧೆ ಇಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿದೆ” ಎನ್ನುತ್ತಾರೆ.
“ಕೇರಳ ತಮಿಳುನಾಡು ಮಾತ್ರವಲ್ಲ ಕರ್ನಾಟಕದ ಕೊಡಗು, ಸಕಲೇಶಪುರ ಮತ್ತು ಚಿಕ್ಕಮಗಳೂರಿನ ಕಾಫಿ ತೋಟಗಳಿಗೆ ಇಲ್ಲಿಂದ ಸಗಣಿ ಗೊಬ್ಬರ ರವಾನೆಯಾಗುತ್ತದೆ. ಅದನ್ನು ಮಾರಾಟ ಮಾಡುವ ನೂರಾರು ಬ್ರೋಕರುಗಳು ಇಲ್ಲಿದ್ದಾರೆ. ವನ್ಯಕೇವಿ ಸಂರಕ್ಷಣಾ ಕಾಯ್ದೆ ಪ್ರಕಾರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ದನಗಳನ್ನು ಮೇಯಲು ಬಿಡುವಂತಿಲ್ಲ. ಹಾಗಾಗಿ, ಇಲ್ಲಿ ಕಾಡಿಗೆ ದನಗಳನ್ನು ಬಿಡುವವರ ವಿರುದ್ಧ ಅರಣ್ಯ ಸಿಬ್ಬಂದಿ ಕೇಸು ದಾಖಲಿಸುತ್ತಾರೆ. ಅವರನ್ನು ಬಿಡಿಸಲು ಮತ್ತು ಕಾಡಿನಲ್ಲಿ ದನ ಮೇಯಿಸಲು ಅವಕಾಶ ಮಾಡಿಕೊಡಿ ಎಂದು ಒತ್ತಡ ಹಾಕಲು ಸ್ಥಳೀಯ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡುತ್ತಾರೆ. ಅಷ್ಟೇ ಅಲ್ಲ, ಇಂತಹ ಲಾಬಿಗಳೇ ಈ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವುದನ್ನು ತಡೆದು ನಿಲ್ಲಿಸಿವೆ. ಕಾನೂನಿದೆ, ಆದರೆ ಅದನ್ನು ಜಾರಿ ಮಾಡಲು ಅಡ್ಡ ಬರುವ ಅನೇಕ ಅನಿಷ್ಟಗಳು ಸಹ ಇಲ್ಲಿವೆ. ತಮಿಳುನಾಡಿನ ದನಗಳು, ನಾಶ ಮಾಡುವುದು ಕರ್ನಾಟಕದ ಕಾಡುಗಳನ್ನು, ಅವುಗಳನ್ನು ಮೇಯಿಸುವವರು ಕರ್ನಾಟಕದ ಬಡ ಕೂಲಿಗಳು, ಲಾಭ ಮಾಡಿಕೊಳ್ಳೋರು ಪಕ್ಕದ ರಾಜ್ಯದವರು..! ಅದಕ್ಕೆ ಅಡ್ಡಿಪಡಿಸಿದರೆ ಕಾಡಿಗೆ ಬೆಂಕಿ ಹಚ್ಚುವುದು, ಹುಲಿಗೆ ವಿಷ ಹಾಕುವ ಷಡ್ಯಂತ್ರ ಇಲ್ಲಿ ನಡೆದಿದೆ” ಎಂದು ವಿನೋದ್ ಕುಮಾರ್ ಬಿ ನಾಯಕ್ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.
“ಈ ಘಟನೆಯಲ್ಲಿ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಸಹ ತೀವ್ರವಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಯಾವುದೇ ರೀತಿಯ ಜನಜಾಗೃತಿ ಕೆಲಸವನ್ನು ಅರಣ್ಯ ಸಿಬ್ಬಂದಿ ಮಾಡಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅರಣ್ಯ – ವನ್ಯಜೀವಿ ಸಂರಕ್ಷಣೆ ಸಾಧ್ಯವೇ ಇಲ್ಲ. ವಿಷ ಪ್ರಾಶನದಿಂದ ಮೃತಪಟ್ಟ 5 ಹುಲಿಗಳು ನಮ್ಮ ಅರಣ್ಯ ಇಲಾಖೆಗೆ, ಕಾಡಂಚಿನ ಜನರಿಗೆ ಮತ್ತು ನಮ್ಮನ್ನು ಆಳುವ ಜನಪ್ರತಿನಿಧಿಗಳಿಗೆ ಯಾವ ಪಾಠ ಕಳಿಸಿ ಹೋಗಿವೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ” ಎಂದು ಹೇಳುತ್ತಾರೆ.
ಹುಲಿ ಸಂರಕ್ಷಣೆ ಯೋಜನೆ ಜಾರಿಯಾದ ನಂತರ ಹುಲಿಗಳನ್ನು ಕೊಂದ ದುರ್ಘಟನೆಗಳಿವೆ. ಆದರೆ ಏಕಕಾಲದಲ್ಲಿ ಒಂದು ತಾಯಿ ಹುಲಿ ಮತ್ತು ಐದು ಮರಿ ಹುಲಿಗಳನ್ನು ಕೊಂದ ನಿದರ್ಶನಗಳಿಲ್ಲ. ಇದೇ ಮೊದಲಬಾರಿಗೆ ಇಂಥ ದುರಂತ ನಡೆದಿದೆ.
ಹುಲಿಗಳು ಸತ್ತು ಬಿದ್ದಿದ್ದ ಸ್ಥಳದಿಂದ ೧೫೦ ಅಡಿ ದೂರದಲ್ಲಿ ಜಾನುವಾರು ಕಳೇಬರವಿದೆ. ಇದಕ್ಕೆ ದುಷ್ಕರ್ಮಿಗಳು ವಿಷ ಸಿಂಪಡಿಸಿದ್ದು ಅದರ ಮಾಂಸವನ್ನು ಹುಲಿಗಳು ತಿಂದ ಕಾರಣ ಸಾವನ್ನಪಿರುವ ಶಂಕೆ ಇದೆ. ನಿಯಮಾವಳಿಯಂತೆ ಮರಣೋತ್ತರ ಪರೀಕ್ಷೆ ನಡೆದಿದೆ. ಅದರ ವರದಿ ಬರಬೇಕಾಗಿದೆ. ಮೇಲ್ನೋಟಕ್ಕೆ ವಿಷ ಪ್ರಾಶನದಿಂದಲೇ ಹುಲಿಗಳು ಸತ್ತಿರಬಹುದು ಎಂದು ತಿಳಿಯುತ್ತದೆ.
ದುರ್ಘಟನೆ ಬೆಳಕಿಗೆ ಬರುತ್ತಿದ್ದಂತೆ ಅರಣ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಅದಕ್ಕಾಗಿ ವಿಶೇಷ ತಂಡವೂ ರಚನೆಯಾಗಿದೆ. ಆದರೆ ಜೋಸೆಫ್ ಹೂವರ್ ಮತ್ತು ವಿನೋದ್ ಹೇಳುವಂತೆ ಮೂಲಭೂತ ಸಮಸ್ಯೆಗಳನ್ನು ಸರಿಪಡಿಸದೇ ಇದ್ದರೆ ಸಮಸ್ಯೆಗಳು ಹೇಗೆ ನಿವಾರಣೆಯಾಗಲು ಸಾಧ್ಯ !
ಕಾಡಿನಲ್ಲಿ ನಿರಂತರವಾಗಿ ಗಸ್ತು ತಿರುಗುವವರು ವಾಚರ್ಸ್. ಇವರಿಗೆ ನಿಗದಿತವಾಗಿ ನಿರ್ದಿಷ್ಟ ಸಮಯಕ್ಕೆ ಸಂಬಳ ಪಾವತಿಯಾಗುವುದು ಅವಶ್ಯಕ. ಅದಾಗದೇ ಹೋದರೆ ಇವರು ಕಷ್ಟಗಳಿಗೆ ಸಿಲುಕಿಕೊಳ್ಳುತ್ತಾರೆ. ಆಗ ಕರ್ತವ್ಯ ನರ್ವಹಣೆಯಲ್ಲಿ ಯಾಮಾರುವ ಸಾಧ್ಯತೆ ಹೆಚ್ಚು. ಇದೆಲ್ಲ ಪ್ರಾಥಮಿಕ ತಿಳಿವಳಿಕೆ. ಹಿರಿಯ ಅಧಿಕಾರಿಗಳು ಏಕೆ ಈ ಸಮಸ್ಯೆಯನ್ನು ಪರಿಹರಿಸಿಲ್ಲ ?
ಈ ದುರಂತದಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಲಯದಲ್ಲಿ ಕರ್ನಾಟಕ ಸರ್ಕಾರ ಮುಜುಗರಕ್ಕೆ ಸಿಲುಕಿದೆ. ದುಷ್ಕರ್ಮಿಗಳ ಬಂಧನವಾಗುತ್ತದೆಯೇ ? ಸಮಸ್ಯೆಗಳ ಪರಿಹಾರವಾಗಿ ಹುಲಿಯೂ ಸೇರಿದಂತೆ ಇತರ ವನ್ಯಪ್ರಾಣಿಗಳ ಸುರಕ್ಷತೆಗೆ ಕಾತರಿ ಸಿಗುತ್ತದೆಯೇ ಎಂದು ಪರಿಸರವಾದಿಗಳು, ವನ್ಯಜೀವನ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವವರು ಗಮನ ಹರಿಸಿದ್ದಾರೆ.
Thanks to the conservationist journalists for giving us a brief background. We are sharing this sin.But who are in power and have abused it are the greatest sinners.Govt.which is literally spending like water on items which garner votes and powers, govt.which is willing to spend rs 50 crores per constituency has not paid the dedicated watchers for months togethar, wages,govt which has posted tainted officers, and the persons who facilitated such postings should accept their lapses and publicly apologize. M M hills must be declared a Tiger reserve forthwithand all the rules and regulation must be implemented with in 200 days. To get such progress and results efficient officers like B P Ravi must be posted as pccf wild life. If it is not enacted ” wrong rules the land and crushed society bleeds. Oh mighty Godess Bhagavathy will punish the culprits.
Lakshmana A.C.
ಸಂಕ್ಷಿಪ್ತ ಹಿನ್ನೆಲೆಯನ್ನು ನಮಗೆ ನೀಡಿದ್ದಕ್ಕಾಗಿ ವನ್ಯ ಸಂರಕ್ಷಣಾವಾದಿ ಪತ್ರಕರ್ತರಿಗೆ ಧನ್ಯವಾದಗಳು. ನಾವು ಈ ಪಾಪವನ್ನು ಹಂಚಿಕೊಳ್ಳುತ್ತಿದ್ದೇವೆ. ಆದರೆ ಅಧಿಕಾರದಲ್ಲಿರುವವರು ಮತ್ತು ಅದನ್ನು ದುರುಪಯೋಗಪಡಿಸಿಕೊಂಡವರು ಅತ್ಯಂತ ದೊಡ್ಡ ಪಾಪಿಗಳು. ಮತಗಳು ಮತ್ತು ಅಧಿಕಾರಗಳನ್ನು ಗಳಿಸುವ ವಸ್ತುಗಳಿಗೆ ಅಕ್ಷರಶಃ ನೀರಿನಂತೆ ಖರ್ಚು ಮಾಡುತ್ತಿರುವ ಸರ್ಕಾರ, ಪ್ರತಿ ಕ್ಷೇತ್ರಕ್ಕೆ 50 ಕೋಟಿ ರೂ.ಗಳನ್ನು ಖರ್ಚು ಮಾಡಲು ಸಿದ್ಧರಿರುವ ಸರ್ಕಾರವು ತಿಂಗಳುಗಳಿಂದ ಸಮರ್ಪಿತ ವೀಕ್ಷಕರಿಗೆ (ವಾಚರ್ಸ್) ಒಟ್ಟುಗೂಡಿ, ವೇತನವನ್ನು ಪಾವತಿಸಿಲ್ಲ, ಕಳಂಕಿತ ಅಧಿಕಾರಿಗಳನ್ನು ನೇಮಿಸಿರುವ ಸರ್ಕಾರ ಮತ್ತು ಅಂತಹ ನೇಮಕಾತಿಗಳನ್ನು ಸುಗಮಗೊಳಿಸಿದ ವ್ಯಕ್ತಿಗಳು ತಮ್ಮ ಲೋಪಗಳನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಎಂ ಎಂ ಬೆಟ್ಟಗಳನ್ನು ತಕ್ಷಣ ಹುಲಿ ಮೀಸಲು ಪ್ರದೇಶವೆಂದು ಘೋಷಿಸಬೇಕು ಮತ್ತು ಎಲ್ಲಾ ನಿಯಮಗಳು ಮತ್ತು ನಿಯಮಗಳನ್ನು 200 ದಿನಗಳಲ್ಲಿ ಜಾರಿಗೆ ತರಬೇಕು. ಅಂತಹ ಪ್ರಗತಿ ಮತ್ತು ಫಲಿತಾಂಶಗಳನ್ನು ಪಡೆಯಲು ಬಿ ಪಿ ರವಿಯಂತಹ ದಕ್ಷ ಅಧಿಕಾರಿಗಳನ್ನು ಪಿಸಿಎಫ್ಎಫ್ ವನ್ಯಜೀವಿಗಳಾಗಿ ನೇಮಿಸಬೇಕು. ಅದನ್ನು ಜಾರಿಗೆ ತರದಿದ್ದರೆ “ತಪ್ಪು ಭೂಮಿಯನ್ನು ಆಳುತ್ತದೆ ಮತ್ತು ಪುಡಿಪುಡಿಯಾದ ಸಮಾಜವು ರಕ್ತಸಿಕ್ತವಾಗುತ್ತದೆ. ಓ ಮಹಾ ದೇವತೆ ಭಗವತಿ ಅಪರಾಧಿಗಳನ್ನು ಶಿಕ್ಷಿಸುತ್ತಾಳೆ.
ಎ.ಸಿ. ಲಕ್ಷ್ಮಣ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ (ವಿಶ್ರಾಂತ), ಕಾರ್ಯದರ್ಶಿ(ವಿಶ್ರಾಂತ) ಅರಣ್ಯ ಸಚಿವಾಲಯ, ಕರ್ನಾಟಕ ಸರ್ಕಾರ